ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ಕಲಾವಿದರ ತವರೂರು ‘ಮರಿಯಮ್ಮನಹಳ್ಳಿ’

ವಿಶ್ವ ರಂಗಭೂಮಿ ದಿನಾಚರಣೆ ಇಂದು
Last Updated 27 ಮಾರ್ಚ್ 2017, 9:05 IST
ಅಕ್ಷರ ಗಾತ್ರ
ಮರಿಯಮ್ಮನಹಳ್ಳಿ: 1953ರಲ್ಲಿ ತುಂಗಭದ್ರಾ ಜಲಾಶಯಕ್ಕೆ ಸರ್ವಸ್ವವನ್ನು ತ್ಯಾಗ ಮಾಡಿದ ಗ್ರಾಮಗಳಲ್ಲಿ ಒಂದಾದ ನಾರಾಯಣದೇವರಕೆರೆ ರಂಗಕಲೆಗೆ ಹೆಸರಾಗಿತ್ತು. ಪಟ್ಟಣಕ್ಕೆ ಸ್ಥಳಾಂತರ ಗೊಂಡ ಅಲ್ಲಿನ ಜನರು ರಂಗಕಲೆಯನ್ನು ಇಲ್ಲಿಯೂ ಮುಂದುವರಿಸಿದ್ದು, ರಂಗ ಭೂಮಿ ಸೇರಿದಂತೆ ವಿವಿಧ ರೀತಿಯ ಕಲಾವಿದರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. 
 
 ಹಲವಾರು ಕಲಾವಿದರನ್ನು ರಂಗಭೂಮಿಗೆ ಕೊಡುಗೆಯಾಗಿ ನೀಡಿದ ಪಟ್ಟಣವು ನಾಟಕ ಕಲೆಗಳ ತವರೂರೆಂದು ಹೆಸರುಗಳಿಸಿದೆ. ಇಲ್ಲಿನ ಕಲಾವಿದರು, ಹಲವು ಸಂಘಸಂಸ್ಥೆಗಳು ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಯುವ ಪ್ರತಿಭೆಗಳು ಕಿರುತೆರೆ ಹಾಗೂ ಬೆಳ್ಳಿತೆರೆಯ ಮೇಲೆ ಮಿಂಚುತ್ತಿದ್ದಾರೆ.
 
ಕಳೆದ ಆರೂವರೆ ದಶಕಗಳಲ್ಲಿ ರಂಗಭೂಮಿಗೆ ಹಲವಾರು ಕಲಾವಿದರು, ಸಂಘಸಂಸ್ಥೆಗಳು, ನಾಟಕ ಕಂಪನಿಗಳು ದುಡಿದಿವೆ. ಡಾಕ್ಟರೇಟ್‌ ಪದವಿ ಸೇರಿದಂತೆ ರಾಜ್ಯೋತ್ಸವ ಪ್ರಶಸ್ತಿ, ನಾಟಕ, ಜಾನಪದ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.
 
ದಿ.ತಳವಾರ ಹನುಮಂತಮ್ಮ, ಬಾರಿಕರ ನಿಂಗಮ್ಮ, ಸುವರ್ಣಮ್ಮ, ಯಲ್ಲಮ್ಮ, ಗಂಗಮ್ಮ, ಶಾಂತಮ್ಮ, ಶ್ಯಾಮಲ, ತಿಮ್ಮವ್ವ ಸೇರಿದಂತೆ ದಿ.ದುರ್ಗಾದಾಸ್‌, ಜಿ.ಮೈಲಾರಪ್ಪ, ವೆಂಕಟರಮಣಶೆಟ್ಟಿ, ನರಸಿಂಹಾಚಾರ್, ಉಪೇಂದ್ರಾಚಾರ್‌, ಗುರುಬಸಪ್ಪ, ಲಕ್ಷ್ಮಣಗೌಡ್ರು, ಡಾ.ಅಂಬಣ್ಣ ಸೇರಿದಂತೆ ಇಂದಿನ ಹಿರಿಯ ಹಾಗೂ ಯುವ ಕಲಾವಿದರು, ರಂಗಾಸಕ್ತರು, ಸಂಗೀತ ಕಲಾವಿದರು ಮೂಲ ಪರಂಪರೆಯನ್ನು ವಿಸ್ತರಿಸಿದ್ದಾರೆ. 
 
ಕಲಾವಿದರಾದ ದಿ.ದುರ್ಗಾದಾಸ್‌, ದಿ.ಕಾಳವ್ವ ಜೋಗುತಿ ರಾಜ್ಯೋತ್ಸವ ಪ್ರಶಸ್ತಿ ಪಡೆದರೆ, ಕೆ.ನಾಗರತ್ನಮ್ಮ ಅವರು ಡಾಕ್ಟರೇಟ್‌ ಪದವಿಯ ಜೊತೆಗೆ ರಾಜ್ಯೋತ್ಸವ, ಅಕಾಡೆಮಿ ಹಾಗೂ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಂಜಮ್ಮ ಜೋಗುತಿಯು ಸಹ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ದಿ.ಪತ್ತಾರ್‌ ಖಾದರ್‌ ಸಾಬ್‌, ಸಂಗೀತ ನಿರ್ದೇಶಕ ಡಿ.ಎಂ.ತೋಟಯ್ಯಸ್ವಾಮಿ, ಎಸ್‌.ರೇಣುಕಾ, ರಾಮವ್ವ ಜೋಗುತಿ ಅವರು ಅಕಾಡೆಮಿ ಪ್ರಶಸ್ತಿ ಪಡೆದಿದ್ದರೆ, ರಂಗಕರ್ಮಿ ದಿ.ಜಿ.ಮೈಲಾರಪ್ಪ ಪದ್ದಣ್ಣ ಪ್ರಶಸ್ತಿ ಪಡೆದಿದ್ದಾರೆ.
 
ಯುವ ಪ್ರತಿಭೆ ಬಂಗಾರು ಹನುಮಂತ ಬೆಳ್ಳಿತೆರೆಯ ಮೇಲೆ ನಾಯಕ ನಟನಾಗಿ ಕಾಣಿಸಿಕೊಂಡಿದ್ದರೆ, ಹನುಮಕ್ಕ, ಜಹಾಂಗೀರ್‌, ಸರ್ದಾರ ಕಿರುತೆರೆಯಲ್ಲಿದ್ದಾರೆ. ಯುವ ಕಲಾವಿದರಾದ ಯೋಗೇಶ್‌, ಲೆಕ್ಕಿಮರದ ಕೊಟ್ರೇಶ್‌, ಟಿ.ನವೀನ್‌ ಕುಮಾರ್, ಹ್ಯಾಟಿ ಮಂಜುನಾಥ, ಪ್ರಶಾಂತ್‌ ಕುಮಾರ್‌, ರವಿಕುಮಾರ್, ಬಿ.ಎಂ.ಎಸ್‌.ಪ್ರಭು ರಂಗ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ.

ಲಲಿತ ಕಲಾರಂಗ, ಮಹಿಳಾ ವೃತ್ತಿರಂಗ ಕಲಾವಿದರ ಸಂಘ, ನಾಟ್ಯ ಕಲಾರಂಗ, ಸೃಷ್ಟಿ ಕಲಾಬಳಗ, ಮಾರುತಿ ಕಲಾರಂಗ, ರೇಣುಕಾದೇವಿ ಕಲಾಸಂಘದ ಹಿರಿಯ, ಕಿರಿಯ ಕಲಾವಿದರು ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ರಂಗಭೂಮಿಗೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ.
ಎಚ್‌.ಎಸ್‌.ಶ್ರೀಹರಪ್ರಸಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT