ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಬಿಕ್ಕಟ್ಟು ನಿರ್ವಹಣೆಗೆ ಬೇಕು ಹೊಸ ವ್ಯವಸ್ಥೆ

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ ಮತ್ತೆ ಮತ್ತೆ ಎದುರಿಸುತ್ತಿರುವ ಬರ ಪರಿಸ್ಥಿತಿಯು ಸರ್ಕಾರದ ಮಧ್ಯಪ್ರವೇಶದ ಅಗತ್ಯವನ್ನು ಮುನ್ನೆಲೆಗೆ ತಂದಿದೆ. ಮಳೆ ಕೊರತೆ ಎದುರಿಸುತ್ತಿರುವ ಪ್ರದೇಶಗಳು ಹೆಚ್ಚುತ್ತಿರುವುದರಿಂದ, ತೊಂದರೆ ಎದುರಿಸುತ್ತಿರುವ ಪ್ರಜೆಗಳಿಗೆ ತಕ್ಷಣದ ಪರಿಹಾರ ಒದಗಿಸುವುದು ಅನಿವಾರ್ಯವಾಗಿದೆ. ಆದರೆ ರಾಜ್ಯದ ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟು ಮಳೆ ಕೊರತೆಯದ್ದೊಂದೇ ಅಲ್ಲ. ಆಳವಾದ, ರಾಚನಿಕ ಅಸಮತೋಲನದ ಕಾರಣ ರಾಜ್ಯದ ಕೃಷಿ ಕ್ಷೇತ್ರ ಮಳೆ ಕೊರತೆ ಎದುರಾದ ತಕ್ಷಣ ತೊಂದರೆಗೆ ಸಿಲುಕುತ್ತಿದೆ.

ರಾಜ್ಯದ ಜನಸಂಖ್ಯೆ ಹೆಚ್ಚಾಗಿರುವಂತೆಯೇ, ಪ್ರತಿ ಹೆಕ್ಟೇರ್‌ ಕೃಷಿ ಯೋಗ್ಯ ಜಮೀನು ನಂಬಿಕೊಂಡು ಜೀವನ ನಡೆಸುವವರ ಸಂಖ್ಯೆಯೂ ಹೆಚ್ಚಾಗಿದೆ. ರಾಚನಿಕ ಅಸಮತೋಲನದ ಕೇಂದ್ರದಲ್ಲಿರುವ ಸಂಗತಿ ಇದು. ಏಕಕಾಲದಲ್ಲಿ ಎರಡು ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಮೊದಲನೆಯದು: ತಂತ್ರಜ್ಞಾನ ಬಳಸಿ ಬೆಳೆ ಪ್ರಮಾಣ ಹೆಚ್ಚಿಸುವ ಮೂಲಕ ರೈತರ ಆದಾಯ ವೃದ್ಧಿಸಬೇಕು. ಎರಡನೆಯದು: ನಗರೀಕರಣವು ಕೃಷಿಕರನ್ನು ಹಾಗೂ ಕೃಷಿ ಕೂಲಿಕಾರ್ಮಿಕರನ್ನು ಬೇರೆ ಕ್ಷೇತ್ರಗಳತ್ತ ಸೆಳೆಯಬೇಕು. ಆಗ, ಕೃಷಿಯನ್ನೇ ನೆಚ್ಚಿಕೊಂಡವರ ಸಂಖ್ಯೆ ಇಳಿಯುತ್ತದೆ.

ಕರ್ನಾಟಕದಲ್ಲಿ ಹಾಗೂ ದೇಶದ ಇತರ ಪ್ರದೇಶಗಳಲ್ಲಿ ಈ ಬದಲಾವಣೆಗಳು ದೊಡ್ಡ ಮಟ್ಟದಲ್ಲಿ ಆಗಿಲ್ಲ. ಬೆಳೆ ಹೆಚ್ಚಿಸಲು ಜಮೀನಿನಲ್ಲಿ ನಡೆಸುವ ಯತ್ನಗಳು, ಅಂದರೆ ಹೆಚ್ಚುವರಿ ರಸಗೊಬ್ಬರ ಬಳಸುವುದು, ಮಣ್ಣಿನ ಗುಣ ಕೆಡಿಸಿರುವ ನಿದರ್ಶನಗಳೂ ಇವೆ. ಒಂದಿಷ್ಟು ರೈತರಿಗೆ ನೆರವಾಗುವ ಗ್ರಾಮದ ಕೆರೆಗಳ ಅಭಿವೃದ್ಧಿ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ವೈಯಕ್ತಿಕ ನೆಲೆಯಲ್ಲಿ ಹೊರುವುದು ರೈತರಿಗೆ ಸಾಧ್ಯವಿಲ್ಲ. ಒಣ ಭೂಮಿ ಇರುವ ಪ್ರದೇಶಗಳಲ್ಲಿ ಬೆಳೆ ಹೆಚ್ಚಿಸಲು ನೀರು ನಿಲ್ಲಿಸುವ ದಂಡೆಯಂತಹ ಮೂಲಸೌಕರ್ಯ ಬೇಕು. ಆದರೆ ಇದನ್ನು ಒಬ್ಬ ರೈತನ ಜಮೀನಿನಲ್ಲಿ ಮಾಡಿದರೆ ಸಾಕಾಗುವುದಿಲ್ಲ. ಸಂಪನ್ಮೂಲ ಒಗ್ಗೂಡಿಸಲು ರೈತರಿಗೆ ಅನುಕೂಲಗಳು ಇಲ್ಲದಿದ್ದಾಗ ಅವರು ಸರ್ಕಾರದ ಅನುದಾನ ನೆಚ್ಚಿಕೊಳ್ಳಬೇಕಾಗುತ್ತದೆ. ಆದರೆ ಸರ್ಕಾರದಿಂದ ಸಿಗುವ ಹಣ ಅಗತ್ಯಗಳಿಗೆ ಸಾಕಾಗುವಷ್ಟಿಲ್ಲ.
ಇವೆಲ್ಲವುಗಳ ಜೊತೆ, ಬೆಳೆ ಹಾಗೂ ಬೆಲೆಯಲ್ಲಿ ಸ್ಥಿರತೆ ಇಲ್ಲ. ಬೆಳೆ ಪ್ರಮಾಣದ ಮೇಲೆ ಕೆಟ್ಟ ಪರಿಣಾಮ ಬೀರುವ ಬರ, ಕೃಷಿಯನ್ನು ಆರ್ಥಿಕ ನಷ್ಟದ ಕೆಲಸವನ್ನಾಗಿಸುತ್ತದೆ.

ಭಾರತದಲ್ಲಿ ಸಕ್ಕರೆಯಂತಹ ಉತ್ಪನ್ನಗಳ ಬೆಲೆಯ ಏರಿಳಿತದಲ್ಲಿಯೂ ಒಂದು ನಿರ್ದಿಷ್ಟ ಕ್ರಮ ಇರುತ್ತದೆ. ಬೆಳೆ ಕಡಿಮೆಯಿದ್ದಾಗ ಸಕ್ಕರೆ ಬೆಲೆ ಹೆಚ್ಚಿರುತ್ತದೆ. ಇದನ್ನು ಗಮನಿಸಿ ರೈತರು ಮಾರನೆಯ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಾರೆ. ಇದರಿಂದ ಸಕ್ಕರೆ ಉತ್ಪಾದನೆ ಹೆಚ್ಚಾಗಿ ಬೆಲೆ ಕುಸಿಯುತ್ತದೆ. ಆಗ ರೈತರಿಗೆ ಹಣ ಪಾವತಿಸುವ ಸಕ್ಕರೆ ಕಾರ್ಖಾನೆಗಳ ಸಾಮರ್ಥ್ಯ ಕುಗ್ಗುತ್ತದೆ. ಆಗ ರೈತರು ಕಬ್ಬು ಬೆಳೆಯಿಂದ ವಿಮುಖರಾಗುತ್ತಾರೆ. ಮಾರನೆಯ ವರ್ಷ ಸಕ್ಕರೆ ಬೆಲೆ ಪುನಃ ಹೆಚ್ಚಾಗುತ್ತದೆ.

ರೈತನ ಅಗತ್ಯಗಳಿಗಿಂತ ಕಡಿಮೆ ಪ್ರಮಾಣದ ಬೆಳೆ ಸಿಗುವ ಸಮಸ್ಯೆಯ ಜೊತೆ ಕೃಷಿ ಜಮೀನಿನ ಪ್ರಮಾಣ ತಲೆಮಾರಿನಿಂದ ತಲೆಮಾರಿಗೆ ಕಡಿಮೆ ಆಗುತ್ತಿರುವುದೂ  ಸೇರಿಕೊಂಡಿದೆ. ಕುಟುಂಬಗಳು ವಿಘಟನೆ ಆದಂತೆ ಅವುಗಳ ಒಡೆತನದ ಜಮೀನು ಕುಟುಂಬದ ಸದಸ್ಯರ ನಡುವೆ ಹಂಚಿಕೆ ಆಗುತ್ತದೆ. ಪಾಲಿಗೆ ಬಂದ ಜಮೀನನ್ನು ನೆಚ್ಚಿಕೊಂಡು ಬದುಕು ಸಾಗಿಸುವುದು ಅಸಾಧ್ಯವೆನಿಸಿದಾಗ ರೈತ ಇನ್ನೊಂದೆಡೆ ಕೂಲಿ ಮಾಡಲು ಆರಂಭಿಸುತ್ತಾನೆ ಅಥವಾ ನಗರಗಳತ್ತ ಮುಖ ಮಾಡುತ್ತಾನೆ.

ಕಾರ್ಮಿಕರನ್ನು ಕೃಷಿಯಿಂದ ಬೇರೆ ಕ್ಷೇತ್ರಗಳತ್ತ ಕರೆಸಬೇಕು ಎನ್ನುವ ನಗರೀಕರಣ ಪ್ರಕ್ರಿಯೆಯ ಮಿತಿಗಳ ಜೊತೆ ರೈತ ಆಗ ಮುಖಾಮುಖಿಯಾಗುತ್ತಾನೆ. ನಗರಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಕೃಷಿಕನನ್ನು, ಕೃಷಿ ಕಾರ್ಮಿಕನನ್ನು ಎಲ್ಲ ಸಂದರ್ಭಗಳಲ್ಲೂ ಸೆಳೆದುಕೊಳ್ಳುವಂತೆ ಇರುವುದಿಲ್ಲ. ಜಾಗತೀಕರಣಕ್ಕೆ ತೆರೆದುಕೊಂಡಿರುವ ಕೈಗಾರಿಕೆಗಳಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಬೇಕಿರುವ ಸಾಂಸ್ಕೃತಿಕ ಕೌಶಲಗಳನ್ನು ತಾವು ತಮ್ಮ ಮಕ್ಕಳಿಗೆ ನೀಡಿಲ್ಲ ಎಂಬುದು ರೈತರಿಗೆ ಅರಿವಾಗುತ್ತದೆ.

ಕಟ್ಟಡ ನಿರ್ಮಾಣ ಕಾರ್ಮಿಕರಂತಹ ಉದ್ಯೋಗ ಮಾರುಕಟ್ಟೆಯ ಕೆಳಗಿನ ಸ್ತರಗಳಲ್ಲಿ ಇರುವವರು ಬೇರೆಯದೇ ಆದ ಸಮಸ್ಯೆ ಎದುರಿಸುತ್ತಾರೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಅನುಸರಿಸುತ್ತ ಬಂದಿರುವ ನಗರೀಕರಣದ ಮಾದರಿಗಳು ವೆಚ್ಚದ ಬಗ್ಗೆ ಸಂವೇದನೆಯನ್ನೇ ಹೊಂದಿಲ್ಲ. ವಿಶ್ವದರ್ಜೆಯ ನಗರಗಳನ್ನು ನಿರ್ಮಿಸುವ ಯತ್ನದಲ್ಲಿರುವವರು ವೆಚ್ಚಗಳ ಬಗ್ಗೆ ಗಮನ ನೀಡಿಲ್ಲ. ಕೃಷಿ ಕ್ಷೇತ್ರದಿಂದ ಬೇರೊಂದು ಕ್ಷೇತ್ರಕ್ಕೆ ವಲಸೆ ಹೋಗುವ ಕಾರ್ಮಿಕರ ಮೇಲೆ ಇದು ಬಹುಬಗೆಯ ಪರಿಣಾಮಗಳನ್ನು ಬೀರಿದೆ. ದುಬಾರಿ ವೆಚ್ಚದ ಮೂಲಸೌಕರ್ಯ ಯೋಜನೆಗಳು ಸರ್ಕಾರಗಳ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳುತ್ತಿವೆ ಎಂದರೆ, ಕೃಷಿಯಿಂದ ನಗರಗಳತ್ತ ಬರಲು ಬಯಸುವವರಿಗೆ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರಗಳ ಬಳಿ ಹಣವಿಲ್ಲದಂತೆ ಆಗಿದೆ. ಸಬ್ಸಿಡಿಗಳ ವಿರುದ್ಧ ವ್ಯಕ್ತವಾಗುತ್ತಿರುವ ಜನಾಭಿಪ್ರಾಯದ ಕಾರಣ, ಬಡವರು ನೆಚ್ಚಿಕೊಂಡಿರುವ ಸಾರ್ವಜನಿಕ ಸಾರಿಗೆ ಪ್ರಯಾಣ ದರಗಳನ್ನೂ ಹೆಚ್ಚಿಸಬೇಕಾದ ಸ್ಥಿತಿ ಇದೆ.

ನಗರಗಳಿಗೆ ಸ್ಥಳಾಂತರಗೊಂಡು ಶಾಶ್ವತವಾಗಿ ಅಲ್ಲೇ ನೆಲೆಸಲು ಸಾಧ್ಯವಾಗದವರು, ಜೀವನೋಪಾಯಕ್ಕೆ ನಗರಗಳಲ್ಲಿ ಉಳಿದುಕೊಂಡು ಹಳ್ಳಿಯಲ್ಲಿರುವ ತಮ್ಮ ಮನೆ ಉಳಿಸಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುವ ರಾಯಚೂರು ಜಿಲ್ಲೆಯ ಕೆಲವರು ಅಸಹನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ– ದುಡಿಮೆಯಲ್ಲಿ ಚೂರುಪಾರು ಉಳಿತಾಯ ಮಾಡಿ ಹಳ್ಳಿಗಳಿಗೆ ಕಳುಹಿಸಬಹುದು ಎಂಬ ಆಸೆಯಿಂದ. ಅವರು ನಗರಗಳಲ್ಲಿ ಹೊಂದಿರುವ ಉದ್ಯೋಗ ಕಾಯಂ ಅಲ್ಲವಾದ ಕಾರಣ, ಊರಿನಲ್ಲಿರುವ ಜಮೀನಿನಲ್ಲಿ ಬೆಳೆ ಬೆಳೆಯಲು ಆಗದಿದ್ದರೂ ಆ ಜಮೀನನ್ನು ಉಳಿಸಿಕೊಳ್ಳುತ್ತಿದ್ದಾರೆ.

ರೈತರನ್ನು ಕೃಷಿಯಿಂದ ಒತ್ತಾಯವಾಗಿ ಹೊರಹಾಕುತ್ತಿರುವುದು, ನಗರಗಳಲ್ಲಿ ಅವರಿಗೆ ಶಾಶ್ವತ ನೆಲೆ ಒದಗಿಸದೆ ಇರುವುದು ಇಂದಿನ ಒಟ್ಟಾರೆ ಚಿತ್ರಣ. ಈ ಪ್ರಕ್ರಿಯೆಯ ಪರಿಣಾಮವಾಗಿ ಜಮೀನು ಹಾಳು ಬೀಳುತ್ತಿದೆ. ಬೆಲೆ ಮತ್ತು ಬೆಳೆಯಲ್ಲಿನ ಅಲ್ಪಾವಧಿಯ ಅಸ್ಥಿರತೆಗಳು ಜಮೀನನ್ನು ಕೆಲವು ಕಾಲ ಹಾಳುಬಿಡುವಂತೆ ಮಾಡಬಲ್ಲವು. ಆದರೆ, ನಗರಕ್ಕೆ ವಲಸೆ ಹೋದವರು ಹಳ್ಳಿಗಳಲ್ಲಿನ ಜಮೀನನ್ನು ತಮ್ಮ ಮಾಲೀಕತ್ವದಲ್ಲೇ ಉಳಿಸಿಕೊಂಡರೆ ಅದು ಶಾಶ್ವತವಾಗಿ ಪಾಳುಬೀಳುತ್ತದೆ.
ಈ ಸಮಸ್ಯೆಗೆ ಆಲೋಚಿಸದೆ ಪ್ರತಿಕ್ರಿಯೆ ನೀಡಿ, ಭೂಸುಧಾರಣೆಗೆ ಮೊದಲಿನ ಸ್ಥಿತಿಯಾದ ಕಾನೂನುಬದ್ಧ ಗೇಣಿ ವ್ಯವಸ್ಥೆಗೆ ಆಗ್ರಹಿಸಬಹುದು. ಆದರೆ ಗೇಣಿದಾರರಿಗೆ ಒಮ್ಮೆ ಜಮೀನು ನೀಡಿಯಾಗಿರುವ ಪರಿಸ್ಥಿತಿಯಲ್ಲಿ, ಅನೌಪಚಾರಿಕವಾಗಿ ಜಮೀನು ಗೇಣಿಗೆ ಮುಂದಾಗುತ್ತಿರುವವರು ಕೂಡ, ಈ ಪದ್ಧತಿಯನ್ನು ಕಾನೂನಿನ ವ್ಯಾಪ್ತಿಗೆ ತಂದರೆ ಗೇಣಿಗೆ ಕೊಡಲು ಮುಂದಾಗಲಿಕ್ಕಿಲ್ಲ. ಇದರಿಂದಾಗಿ ಜಮೀನು ಬೀಳು ಬಿಡುವುದು ಹೆಚ್ಚುತ್ತದೆ.

ಗೇಣಿ ವ್ಯವಸ್ಥೆಯನ್ನು ಕಾನೂನುಬದ್ಧ ಮಾಡಿದ ನಂತರವೂ ಜಮೀನು ಬೀಳು ಬಿಡುವುದು ಕಡಿಮೆ ಆಗದಿದ್ದರೆ ರಾಜ್ಯದ ಕೃಷಿ ಕ್ಷೇತ್ರ ಎದುರಿಸುತ್ತಿರುವ ಮೂಲ ಸಮಸ್ಯೆಗಳು ಇತ್ಯರ್ಥವಾಗುವುದಿಲ್ಲ. ಈಗಾಗಲೇ ಒಂಚೂರು ಜಮೀನು ಹೊಂದಿರುವವ, ಗೇಣಿ ವ್ಯವಸ್ಥೆ ಮೂಲಕ ಇನ್ನೊಂದಿಷ್ಟು ಜಮೀನು ಪಡೆದುಕೊಂಡರೂ ಕೃಷಿಯ ಬಿಕ್ಕಟ್ಟುಗಳನ್ನು ಎದುರಿಸಲು ಸಾಕಾಗುವಷ್ಟು ಜಮೀನು ಹೊಂದಿದಂತೆ ಆಗುವುದಿಲ್ಲ. ಗ್ರಾಮೀಣ ಕರ್ನಾಟಕದ ಬಿಕ್ಕಟ್ಟು ಮುಂದುವರಿಯುತ್ತದೆ.

ರಾಜ್ಯದ ಕೃಷಿ ಕ್ಷೇತ್ರದಲ್ಲಿ ಉದ್ಭವಿಸಿರುವ ಮೂರು ಪ್ರಮುಖ ರಾಚನಿಕ ತೊಡಕುಗಳನ್ನು ನಿವಾರಿಸುವುದು ಸರ್ಕಾರದ ಮುಂದಿರುವ ಮುಖ್ಯ ಸವಾಲು. ಬೆಳೆ, ಬೆಲೆಯ ಅಸ್ಥಿರತೆ, ಹಳ್ಳಿಯಲ್ಲಿ ಇದ್ದುಕೊಂಡು ಸಾಗುವಳಿ ಮಾಡಲು ಸಾಧ್ಯವಿಲ್ಲದಿದ್ದರೂ ಜಮೀನನ್ನು ಹಾಗೇ ಇಟ್ಟುಕೊಳ್ಳಬೇಕಾದ ಕೃಷಿಕರ ಅನಿವಾರ್ಯ ಆ ಮೂರು ತೊಡಕುಗಳು. ಬೆಳೆ ಪ್ರಮಾಣ ಹೆಚ್ಚಿಸಲು ದೊಡ್ಡ ಮಟ್ಟದ ಹೂಡಿಕೆ ಬೇಕು. ಗ್ರಾಮದ ಕೆರೆಗಳನ್ನು ಪುನಃ ಸುಸ್ಥಿತಿಗೆ ತರುವ, ತೇವಾಂಶ  ಹಿಡಿದಿಟ್ಟುಕೊಳ್ಳುವಂತೆ ಮಣ್ಣಿನ ಸಾಮರ್ಥ್ಯ ವೃದ್ಧಿಸುವ ಕೆಲಸಗಳನ್ನು ರೈತನೊಬ್ಬ ವೈಯಕ್ತಿಕವಾಗಿ ಮಾಡಲು ಸಾಧ್ಯವಿಲ್ಲ. ಕೃಷಿ ಪದ್ಧತಿಯಲ್ಲಿ ಬದಲಾವಣೆ ತಂದು ಬೆಳೆ ಪ್ರಮಾಣ ಹೆಚ್ಚಿಸುವ ಜ್ಞಾನ, ಕೌಶಲ, ಸಂಪನ್ಮೂಲ ಇರುವ ಸಂಸ್ಥೆಯೊಂದರ ಮಧ್ಯಪ್ರವೇಶ ಇಲ್ಲಿ ಬೇಕು.

ಬೆಲೆ ನಿಯಂತ್ರಿಸಲು ಮುಂದಾಗುವುದು ವ್ಯರ್ಥ. ಸ್ಥಳೀಯ, ಪ್ರಾದೇಶಿಕ ಹಾಗೂ ಜಾಗತಿಕ ಪರಿಸ್ಥಿತಿಗಳು ಬೆಲೆಯ ಮೇಲೆ ಪರಿಣಾಮ ಬೀರುತ್ತವೆ. ಇವು ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಹಾಗಾಗಿ ಬೆಲೆ ಅಸ್ಥಿರತೆಯು ರೈತರ ಮೇಲೆ ಉಂಟುಮಾಡುವ ಪರಿಣಾಮವನ್ನು ಕಡಿಮೆ ಮಾಡುವುದು ಉತ್ತಮ ಮಾರ್ಗ. ಈ ನಿಟ್ಟಿನಲ್ಲಿ ಈಗ ಮಾಡುತ್ತಿರುವ ಪ್ರಯತ್ನಗಳು ಬೆಳೆಯು ಮಾರುಕಟ್ಟೆಗೆ ಬಂದ ನಂತರದ ಹಂತವನ್ನು ಕೇಂದ್ರೀಕರಿಸಿಕೊಂಡಿವೆ. ಕೃಷಿ ಉತ್ಪನ್ನಗಳ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಆದಾಗ, ಮಾರುಕಟ್ಟೆ ಮಧ್ಯಪ್ರವೇಶದ ಮೂಲಕ ಬೆಲೆ ನಿಯಂತ್ರಿಸಲು ಸರ್ಕಾರ ಮುಂದಾಗುತ್ತದೆ. ಆದರೆ ಜಾಗತಿಕ ವಿದ್ಯಮಾನಗಳ ಪ್ರಭಾವ ಇರುವ ಉತ್ಪನ್ನಗಳ ಬೆಲೆ ನಿಯಂತ್ರಣ ದುಬಾರಿಯ ಕೆಲಸ, ಪರಿಣಾಮಕಾರಿಯೂ ಅಲ್ಲ.

ಹಾಗಾಗಿ, ರೈತ ಬೀಜ ಬಿತ್ತನೆ ನಡೆಸುವ ಮುನ್ನವೇ ಮಧ್ಯಪ್ರವೇಶ ಮಾಡುವುದು ಹೆಚ್ಚು ಪರಿಣಾಮಕಾರಿ. ಬೀಜ ಬಿತ್ತನೆಗೆ ಮುನ್ನವೇ, ಆ ಬೆಳೆಗೆ ಎಷ್ಟು ಬೆಲೆ ಸಿಗುತ್ತದೆ ಎಂಬ ಖಚಿತ ಮಾಹಿತಿಯನ್ನು ರೈತನಿಗೆ ನೀಡಿದರೆ, ಅದನ್ನು ಬೆಳೆಯಬೇಕೇ ಬೇಡವೇ ಎಂಬ ತೀರ್ಮಾನವನ್ನು ಆತ ಕೈಗೊಳ್ಳುತ್ತಾನೆ.

ಸಾಗುವಳಿ ಮಾಡಲು ಆಗದಿದ್ದಾಗಲೂ ಜಮೀನಿನ ಮಾಲೀಕತ್ವ ಹೊಂದಿರುವುದರ ಸಾಧ್ಯಾಸಾಧ್ಯತೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವುದು ತೀರಾ ಕಷ್ಟದ ಕೆಲಸವಲ್ಲ. ರೈತರ ಬದಲಿಗೆ, ಏಜೆನ್ಸಿಯೊಂದು ಶುಲ್ಕ ಪಡೆದು ಜಮೀನನ್ನು ಸಾಗುವಳಿ ಮಾಡುವಂತಹ ವ್ಯವಸ್ಥೆ ಇದ್ದರೆ, ರೈತ ಜಮೀನಿನ ಬಳಿ ಇರಲೇಬೇಕಾದ ಅನಿವಾರ್ಯ ನಿವಾರಣೆ ಆಗುತ್ತದೆ. ಜಮೀನನ್ನು ಗುತ್ತಿಗೆಗೆ ನೀಡುವುದಕ್ಕಿಂತ ಇಂಥ ಏಜೆನ್ಸಿಯೊಂದನ್ನು ರೂಪಿಸುವುದು ಹೆಚ್ಚು ಅನುಕೂಲಕರ. ಇಂಥದ್ದೊಂದು ಏಜೆನ್ಸಿ ಇದ್ದರೆ, ತನ್ನ ಜಮೀನಿನಲ್ಲಿ ಏನು ಬೆಳೆಯಬೇಕು ಎಂಬ ತೀರ್ಮಾನವನ್ನು ರೈತನೇ ಕೈಗೊಳ್ಳಬಹುದು. ಇಂಥ ಏಜೆನ್ಸಿಗಳು ದೊಡ್ಡ ಪ್ರಮಾಣದಲ್ಲಿ ಸೇವೆ ನೀಡುವ ಕಾರಣ, ಕೃಷಿ ಚಟುವಟಿಕೆ ಹೆಚ್ಚು ದಕ್ಷವಾಗುತ್ತದೆ. ಕೃಷಿಗೆ ಬೇಕಿರುವ ಸಾಮಗ್ರಿಗಳನ್ನು ಒಟ್ಟಿಗೇ ಖರೀದಿಸುವ, ತನ್ನದೇ ಆದ ಮೂಲಸೌಕರ್ಯ ವ್ಯವಸ್ಥೆ ಹೊಂದುವ ಶಕ್ತಿ ಏಜೆನ್ಸಿಗೆ ಇರುತ್ತದೆ. ಏಜೆನ್ಸಿಗಳು ಸಣ್ಣ ಹಿಡುವಳಿದಾರರ ಹಕ್ಕುಗಳನ್ನು ಸಂರಕ್ಷಿಸುವಂತೆಯೂ ಮಾಡಬಹುದು. ಈ ಮೂರು ಸವಾಲುಗಳನ್ನು ಎದುರಿಸಲು ಎರಡು ಕೆಲಸಗಳು ಆಗಬೇಕು. ಮೊದಲನೆಯದು: ರೈತಸ್ನೇಹಿ ವಾಯಿದಾ ವಹಿವಾಟು ಮಾರುಕಟ್ಟೆ ರೂಪಿಸಬೇಕು. ಈ ಮಾರುಕಟ್ಟೆಯು ಬೆಳೆಗಳ ಬೆಲೆಯನ್ನು ಊಹಿಸುವುದು ಮಾತ್ರವಲ್ಲದೆ, ಬಿತ್ತನೆಗೆ ಮೊದಲು ರೈತನಿಗೆ ನೀಡಿದ ಭರವಸೆಯಂತೆ ಬೆಳೆ ಖರೀದಿಸುವ ಮೂಲಸೌಕರ್ಯವನ್ನೂ ಹೊಂದಿರಬೇಕು.
ಎರಡನೆಯ ಕೆಲಸ: ರೈತರಿಂದ ಶುಲ್ಕ ಪಡೆದು, ರೈತರ ಜಮೀನಿನಲ್ಲಿ ಸಾಗುವಳಿ ನಡೆಸುವ ಏಜೆನ್ಸಿ ರಚನೆಯಾಗಬೇಕು. ಇಂಥ ಏಜೆನ್ಸಿಗಳು ದೊಡ್ಡ ಪ್ರಮಾಣದಲ್ಲಿ ಸೇವೆ ಒದಗಿಸುವ ಸಾಮರ್ಥ್ಯ ಗಳಿಸಿಕೊಳ್ಳಬೇಕು. ಇವುಗಳು ಸರ್ಕಾರದ ಮಾಲೀಕತ್ವದಲ್ಲಿ ಇರಬಾರದು. ಸರ್ಕಾರದ ಮಾಲೀಕತ್ವದಲ್ಲಿ ಇರುವ ಏಜೆನ್ಸಿಗಳು ರೈತರ ಬೆಳೆಗೆ ಇಂತಿಷ್ಟು ಬೆಲೆ ಕೊಡುವ ಭರವಸೆ ಕೊಡಬೇಕಾಗುತ್ತದೆ. ಅವು ಬಹುಕಾಲ ಉಳಿಯುವುದಿಲ್ಲ. ಹಾಗಂತ, ಕಾರ್ಪೊರೇಟ್‌ ವ್ಯವಸ್ಥೆಯ  ರೀತಿಯಲ್ಲೂ ಕೆಲಸ ಮಾಡಬಾರದು.

ರೈತರ ಸಣ್ಣ ಗುಂಪು ಹಾಗೂ ಕೃಷಿ ಕೆಲಸ ಮಾಡುವ ಆಸಕ್ತಿ ಇರುವವರ ಸಣ್ಣ ಗುಂಪು ಒಟ್ಟಾಗಿ ಇಂಥ ಏಜೆನ್ಸಿ ರಚನೆಯಾಗಬೇಕು. ಈ ಗುಂಪುಗಳಿಗೆ ತರಬೇತಿ ಬೇಕಾಗಬಹುದು. ಯಶಸ್ಸು ಕಾಣುವ ಗುಂಪುಗಳಿಗೆ ಪ್ರೋತ್ಸಾಹಧನ ನೀಡಬಹುದು. ಇಂಥ ಏಜೆನ್ಸಿಗಳು ಕಾರ್ಯ ನಿರ್ವಹಿಸಲು ನಿಯಮಗಳ ಚೌಕಟ್ಟನ್ನು ರೂಪಿಸಬಹುದು.

ಸ್ಥಿತ್ಯಂತರ ಕಾಣುತ್ತಿರುವ ಕೃಷಿ ಕ್ಷೇತ್ರದ ಬಿಕ್ಕಟ್ಟುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಲು ಹೊಸ ಸಾಂಸ್ಥಿಕ ವ್ಯವಸ್ಥೆಗಳ ಅಗತ್ಯ ಇದೆ. ಅಂಥ ವ್ಯವಸ್ಥೆಗಳನ್ನು ರೂಪಿಸಲು ರಾಜ್ಯ ಸರ್ಕಾರ ಸಹಾಯ ಮಾಡಲೇಬೇಕು.

ಲೇಖಕ: ಪ್ರಾಧ್ಯಾಪಕ, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್ ಸ್ಟಡೀಸ್‌ (ನಿಯಾಸ್‌), ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT