ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಮುಂದಿನ ಎರಡು ವರ್ಷಗಳಲ್ಲಿ ತನ್ನ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಲಿದೆ.
‘ಆರು ಬ್ಯಾಂಕ್ಗಳ ವಿಲೀನ, ಹೊಸ ನೇಮಕಾತಿಗೆ ಕಡಿವಾಣ, ಬ್ಯಾಂಕ್ ವೃತ್ತಿ ತೊರೆಯುವ ಪ್ರವೃತ್ತಿ ಮತ್ತು ಡಿಜಿಟಲೀಕರಣ ಕಾರಣಗಳಿಗೆ 2019ರಷ್ಟೊತ್ತಿಗೆ ಶೇ 10ರಷ್ಟು ಸಿಬ್ಬಂದಿ ಕಡಿತವಾಗಲಿದೆ’ ಎಂದು ಎಸ್ಬಿಐ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಕುಮಾರ್ ಹೇಳಿದ್ದಾರೆ.
‘ನಾವು ನಮ್ಮ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್ಎಸ್್) ಕೊಡುಗೆ ನೀಡಲಿದ್ದೇವೆ. ಅದು ಕಡ್ಡಾಯವಲ್ಲ. ಕೆಲವರು ಸಹಜವಾಗಿಯೇ ವೃತ್ತಿ ತೊರೆಯುತ್ತಾರೆ. ನಿವೃತ್ತಿಯಾದವರ ಸಂಖ್ಯೆಯಷ್ಟೆ ಹೊಸಬರನ್ನು ನೇಮಿಸಿಕೊಳ್ಳದಿರುವುದು, ಡಿಜಿಟಲೀಕರಣದಿಂದ ಮಾನವ ಸಂಪನ್ಮೂಲದ ಬಳಕೆ ಕಡಿಮೆಯಾಗಲಿದೆ. ಈ ಒಟ್ಟು ಪರಿಣಾಮದಿಂದ ಉದ್ಯೋಗ ಅವಕಾಶ ಕಡಿಮೆಯಾಗಲಿವೆ’ ಎಂದು ಹೇಳಿದ್ದಾರೆ. ‘ಹೊಸ ನೇಮಕಾತಿ ಮುಂದುವರೆಯುತ್ತದೆ.
ಆದರೆ,ಹೊಸ ಉದ್ಯೋಗ ಅವಕಾಶ ಶೇ 50ರಷ್ಟು ಕಡಿಮೆಯಾಗಲಿದೆ. 7ರಿಂದ 8 ಸಾವಿರ ಮಾತ್ರ ಹೊಸಬರನ್ನು ನೇಮಿಸಿಕೊಳ್ಳಲಾಗುವುದು ಎಂದರು.