ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳ್ಗಿಚ್ಚು ನಿಯಂತ್ರಣಕ್ಕೆ ವಿಶೇಷ ಕಾರ್ಯಪಡೆ

Last Updated 27 ಮಾರ್ಚ್ 2017, 19:46 IST
ಅಕ್ಷರ ಗಾತ್ರ

ಬೆಂಗಳೂರು: ಕಾಳ್ಗಿಚ್ಚು ನಿಯಂತ್ರಣಕ್ಕೆ ವಿಶೇಷ ಕಾರ್ಯಪಡೆ ರಚಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ರಾಜ್ಯದ ಅರಣ್ಯಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಬೆಂಕಿಯಿಂದ ಪ್ರಾಣಿ, ವನ್ಯ ಹಾಗೂ ಪ್ರಕೃತಿ ಸಂಪತ್ತು ನಾಶವಾಗುತ್ತಿರುವ ಕುರಿತು ವಿಧಾನ ಪರಿಷತ್ತಿನಲ್ಲಿ ಸೋಮವಾರ ನಡೆದ ಚರ್ಚೆಗೆ ಅರಣ್ಯ ಸಚಿವರ ಪರವಾಗಿ ಕೃಷಿ ಸಚಿವರು ಉತ್ತರ ನೀಡಿದರು.

‘ಅರಣ್ಯಕ್ಕೆ ಬೆಂಕಿ ಬೀಳುವ ಪ್ರಕರಣಗಳನ್ನು ತಡೆಗಟ್ಟುವುದು ಸವಾಲಿನ ಕೆಲಸ. ಮುಂದಿನ ಎರಡು ತಿಂಗಳು ಬೆಂಕಿ ಪ್ರಕರಣಗಳನ್ನು ತಡೆಗಟ್ಟುವ ಜವಾಬ್ದಾರಿಯೂ ಇದೆ. ಈ ಸಂಬಂಧ ಅಗ್ನಿಶಾಮಕ ದಳದ ಸಿಬ್ಬಂದಿಯೂ ಒಳಗೊಂಡಂತೆ ವಿಶೇಷ ಕಾರ್ಯಪಡೆ ರಚಿಸಲಾಗುವುದು. ಅರಣ್ಯ ಸಚಿವ ರಮಾನಾಥ್ ರೈ ಅವರು ಆಸ್ಪತ್ರೆಯಿಂದ ಮರಳಿದ ನಂತರ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ಅರಣ್ಯ ರಕ್ಷಣೆಗಾಗಿ ಕೆಳಹಂತದ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಮುಂದಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ 2,147 ಸಿಬ್ಬಂದಿ ನೇಮಕ ಆಗಿದ್ದರು. ಕಳೆದ ಮೂರು ವರ್ಷದಲ್ಲಿ 2,668 ಸಿಬ್ಬಂದಿ ನೇಮಕ ಮಾಡಲಾಗಿದೆ. ಇದಲ್ಲದೆ ಇನ್ನೂ 646 ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿವರಿಸಿದರು.

ಕಾಡಿನಲ್ಲಿ ನೀರಿನ ಅಭಾವ ತೀವ್ರವಾಗಿದೆ. ಈಗಾಗಲೇ ಇರುವ ಹಳೆಯ ಕೆರೆಗಳ ಪುನಶ್ಚೇತನ ಮಾಡುವುದರ ಜೊತೆಗೆ ಹೊಸ ಕೆರೆಗಳನ್ನೂ ತೋಡಲಾಗುತ್ತಿದೆ. ಅಲ್ಲಿ ಕೊಳವೆಬಾವಿ ಕೊರೆದು, ಸೋಲಾರ್‌ ಪಂಪಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

45 ಲಕ್ಷ ಹೆಕ್ಟೇರ್‌ ಕಾಡು: ರಾಜ್ಯದಲ್ಲಿ 45 ಲಕ್ಷ ಹೆಕ್ಟೇರ್‌ ಕಾಡು ಇದೆ. ಇತ್ತೀಚಿನ ಬೆಂಕಿ ಪ್ರಕರಣಗಳಿಂದ 6 ಸಾವಿರ ಹೆಕ್ಟೇರ್‌ ನಾಶಹೊಂದಿದೆ. ಮಳೆ ಇಲ್ಲದೆ ಕಾಡು ಒಣಗಿರುವುದು ಬೆಂಕಿ ತೀವ್ರವಾಗಲು ಕಾರಣ. ಕಾಡಿನ ಅಂಚಿನಲ್ಲಿ ವಾಸಿಸುವ ಕೆಲವರಿಂದ ಉದ್ದೇಶಪೂರ್ವವಾಗಿ ಬೆಂಕಿ ಹಾಕುವ ಪ್ರಕರಣಗಳೂ ನಡೆದಿವೆ ಎಂದು ಅವರು ವಿವರಿಸಿದರು.

ಕೃಷ್ಣ ಬೈರೇಗೌಡ– ಜಯಮಾಲಾ ಮಧ್ಯೆ ಜಟಾಪಟಿ

ಕಾಡ್ಗಿಚ್ಚಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯ ಸಮಯದಲ್ಲಿ ಕೃಷ್ಣ ಬೈರೇಗೌಡ, ಕಾಂಗ್ರೆಸ್‌ನ ಜಯಮಾಲಾ ಅವರ ಮಧ್ಯೆ ಮಾತಿನ ಜಟಾಪಟಿ ನಡೆಯಿತು.
‘ಜಯಮಾಲಾ ಅವರು ಮಾತನಾಡುತ್ತಾ ಇಡೀ ಕಾಡು ನಾಶವಾಗಿದೆ, ಕರ್ನಾಟಕ ಬರಡಾಗಿದೆ ಎಂದು ವಿಡಂಬನಾತ್ಮಕವಾಗಿ, ಕಾವ್ಯಾತ್ಮಕವಾಗಿ ಹೇಳಿದ್ದಾರೆ. ಅವರು ಅರಣ್ಯ ನೋಡಿಲ್ಲ ಎಂದು ಕಾಣುತ್ತದೆ. ಭದ್ರಾ, ಕಾಳಿ ಅರಣ್ಯದ ಸೊಬಗು ನೋಡಬೇಕು. ಅವರನ್ನು ನಾನು ಅರಣ್ಯ ನೋಡುವಂತೆ ಆಹ್ವಾನಿಸುತ್ತೇನೆ’ ಎಂದರು.
ಸಚಿವರ ಉತ್ತರದ ನಂತರ ಪ್ರತಿಕ್ರಿಯಿಸಿದ ಜಯಮಾಲಾ, ‘ನಾನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ್ದರೂ ಬೆಳೆದಿದ್ದು ಚಿಕ್ಕಮಗಳೂರಿನಲ್ಲಿ. ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಅನೇಕ ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ನನ್ನ ಪತಿಯ ಊರು ಶಿವಮೊಗ್ಗದ ಅರಣ್ಯದಂಚಿನಲ್ಲಿಯೇ ಇದೆ. ಅರಣ್ಯ ನೋಡದೆ ಮಾತನಾಡುತ್ತೇನೆ ಎಂದು ಹೇಳುವುದು ಸರಿಯಲ್ಲ’ ಎಂದರು.
‘ನಿಮ್ಮನ್ನು ನೋಯಿಸಬೇಕು ಎಂಬ ಉದ್ದೇಶ ಇಲ್ಲ. ಇಡೀ ಕರ್ನಾಟಕದ ಕಾಡು ನಾಶ ಆಗಿದೆ ಎಂದು ಹೇಳಿದರೆ ತಪ್ಪು ಸಂದೇಶ ಹೋಗುತ್ತದೆ. ಇದರಿಂದ ಒಬ್ಬ ಕನ್ನಡಿಗನಾಗಿ ನನಗೆ ನೋವಾಗಿದೆ. ನನ್ನ ಮಾತಿನಿಂದ ನಿಮಗೆ ಬೇಸರ ಆಗಿದ್ದರೆ ಕ್ಷಮೆ ಕೋರುತ್ತೇನೆ’ಎಂದು ಕೃಷ್ಣ ಬೈರೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT