ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ ಅಧ್ಯಕ್ಷರಿಗೆ ಆಹ್ವಾನ

ಸಾಹಿತಿ ಪ್ರೊ. ಶಂಭುಲಿಂಗ ಕಾಮಣ್ಣಾ ಅಧ್ಯಕ್ಷರಾಗಿ ಆಯ್ಕೆ
Last Updated 28 ಮಾರ್ಚ್ 2017, 5:34 IST
ಅಕ್ಷರ ಗಾತ್ರ
ಭಾಲ್ಕಿ:  ಸಾಹಿತಿ ಪ್ರೊ. ಶಂಭುಲಿಂಗ ಕಾಮಣ್ಣಾ ಅವರಿಗೆ 3ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಗೌರವ ದೊರೆತಿದ್ದು, ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಸೋಮವಾರ  ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಿದರು.
 
ಬಸವಕಲ್ಯಾಣ ತಾಲ್ಲೂಕಿನ ತೊಗಲೂರ ಗ್ರಾಮದವರಾದ ಇವರು  ನಾಲ್ಕು ದಶಕಗಳಿಂದ ಪಟ್ಟಣದಲ್ಲಿಯೇ ವಾಸಿಸುತ್ತಿದ್ದಾರೆ. ವೃತ್ತಿಯಿಂದ ಉಪನ್ಯಾಸಕರಾಗಿರುವ ಇವರದು  ಕನ್ನಡ ಸಾಹಿತ್ಯ ಪ್ರವೃತ್ತಿಯಿಂದ ಕ್ಷೇತ್ರ.
 
ವಿದ್ಯಾರ್ಥಿ ದಿಸೆಯಿಂದಲೇ ಸಾಹಿತ್ಯ ಅಧ್ಯಯನ, ಬರಹದ ಹವ್ಯಾಸ ಬೆಳೆಸಿಕೊಂಡಿದ್ದ ಇವರದು ಬಹುಮುಖ ವ್ಯಕ್ತಿತ್ವ. ಪ್ರಾಧ್ಯಾಪಕ, ಕವಿ, ಪ್ರಬಂಧಕಾರ, ಗ್ರಂಥ ಸಂಪಾದಕ, ಸಂಘಟಕ. ಇವರ ಸಾಹಿತ್ಯಿಕ, ಸಾಮಾಜಿಕ ಸೇವೆ ಹಲವು ಕವಲುಗಳಲ್ಲಿ ವಿಸ್ತಾರವಾಗಿ ಬೆಳೆದಿದೆ ಎನ್ನುತ್ತಾರೆ ಸಾಹಿತಿ ಸಿ.ಎಸ್‌ ಆನಂದ.
 
ಚಿಂತನ ಚಿಗುರು, ಬಾಂದಳದ ಬೆಳಗು ಪ್ರಮುಖ ಪ್ರಬಂಧ ಸಂಕಲನ. ಈ ಕೃತಿಗಳಲ್ಲಿಯ ಎಲ್ಲ ಲೇಖನಗಳು ಕಲಬುರ್ಗಿ ಆಕಾಶವಾಣಿ ಕೇಂದ್ರದಿಂದ ಪ್ರಸಾರಗೊಂಡಿವೆ. ಶರಣ ಸೌರಭ, ಶರಣ ದೀಪ್ತಿ ಕೃತಿಗಳು ಜಿಲ್ಲಾ ಮಟ್ಟದ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ಹೊರತಂದ ಬೃಹತ್ ಸಂಪಾದನೆ ಗ್ರಂಥಗಳಾಗಿವೆ  ಎಂದು ಉಪನ್ಯಾಸಕ ಪರಶುರಾಂ ಕರ್ಣಂ ತಿಳಿಸುತ್ತಾರೆ.
 
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಗೌರವ ಕಾರ್ಯದರ್ಶಿ, ಡಾ.ಚನ್ನಬಸವ ಪಟ್ಟದ್ದೇವರ ಕನ್ನಡ ಸಂಘ, ಕರ್ನಾಟಕ ಬರಹಗಾರ, ಕಲಾವಿದರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು–ಬೆಳ್ಳಿ ಸಾಕ್ಷಿ ಬೀದರ್‌ ಜಿಲ್ಲಾ ಶಾಖೆಯ ಭಾಲ್ಕಿ ತಾಲ್ಲೂಕಿನ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
 
ಕನ್ನಡ ಸಾಹಿತ್ಯ, ಪ್ರಸಾರ ಸೇವೆ ಪರಿಗಣಿಸಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಮಿತಿ ಆಯ್ಕೆ ಮಾಡಿದೆ ಎನ್ನುತ್ತಾರೆ ತಾಲ್ಲೂಕು ಕಸಾಪ ಅಧ್ಯಕ್ಷ ವಸಂತ ಹುಣಸನಾಳೆ.
 
ಶಂಭುಲಿಂಗ ಕಾಮಣ್ಣ ಅವರದು ಬಹುಮುಖ ವ್ಯಕ್ತಿತ್ವ. ಚಿಂತನ ಚಿಗುರು, ಬಾಂದಳದ ಬೆಳಗು, ಶರಣ ಸೌರಭ, ಶರಣ ದೀಪ್ತಿ ಪ್ರಮುಖ ಕೃತಿಗಳಾಗಿವೆ.
ಸಿ.ಎಸ್‌.ಆನಂದ, ಸಾಹಿತಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT