ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 28 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹೆಸರು– ಊರು ಬೇಡ
*ವಿದೇಶದಿಂದ ₹ 14 ಕೋಟಿ ಹಣ ನೋಂದಾಯಿಸಿದ ಸಂಸ್ಥೆಗೆ ದಾನವಾಗಿ (Donation) ಬರಲಿದೆ. ಈ ಹಣ ಇಡಲು ಬೇರೆ ಬೇರೆ ಉತ್ತಮ ಯೋಜನೆಗಳನ್ನು ತಿಳಿಸಿರಿ. ತೆರಿಗೆ ಉಳಿಸಲು ಕೂಡಾ ಮಾರ್ಗದರ್ಶನ ಮಾಡಿ.

ಉತ್ತರ:
ಇತ್ತೀಚಿನ ದಿವಸಗಳಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮೊಬೈಲಿಗೂ, ವಿದೇಶದಿಂದ ದೊಡ್ಡ ಮೊತ್ತದ ಹಣ ಕಳಿಸುತ್ತಿದ್ದೇವೆ, ನಿಮ್ಮ ಅಕೌಂಟ್ ಸಂಖ್ಯೆ, ಪ್ಯಾನ್‌ಕಾರ್ಡ್, ಪಾಸ್‌ವರ್ಡ್ ಕೊಡಿ, ತಕ್ಷಣ ಕಳಿಸುತ್ತೇವೆ ಎಂಬುದಾಗಿ ಸಂದೇಶ ಬರತೊಡಗಿದೆ. ಪ್ರಾಯಶಃ ನೀವು ಕೂಡಾ ಇಂತಹ ಸಂದೇಶ ಪಡೆದಿರಬೇಕು ಎಂತ ಭಾವಿಸುವೆ. ₹14 ಕೋಟಿ ಹಣ, ಯಾವುದೇ ನೋಂದಾಯಿಸಿದ ಸಂಸ್ಥೆಗೆ ಬರುತ್ತದೆ ಎಂದರೆ ಇದನ್ನು ಎಂದಿಗೂ ನಂಬಲಾಗದು. ನಿಜವಾಗಿ ಇದು ಒಂದು ಸುಳ್ಳು  ಸಂದೇಶ. ಇದಕ್ಕೆ ಅನುಮಾನವೇ ಬೇಡ, ಖಾತೆ ನಂಬರ್, ಪಾಸ್‌ವರ್ಡ್ ತಿಳಿದು ನಿಮ್ಮ ಖಾತೆಯಿಂದ ಹಣ ಲಪಟಾಯಿಸಲು ಇಂತಹ ಜನ ಕಾದಿರುತ್ತಾರೆ. ದಯಮಾಡಿ ನಿಮ್ಮ ಯಾವ ವಿವರವನ್ನು ಬೇರೆಯವರಲ್ಲಿ ಹಂಚಿಕೊಳ್ಳಬೇಡಿ.

ವಾಸೀಮ್ ಅಕ್ರಮ್–  ಹುಬ್ಬಳ್ಳಿ
*ನಾನು ಬಿ.ಕಾಂ. ಓದುತ್ತಿದ್ದೇನೆ. ನನ್ನ ಹತ್ತಿರ ₹1 ಲಕ್ಷ ಹಣವಿದೆ. ಅಂಚೆ ಕಚೇರಿಯಲ್ಲಿ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ಬರುವುದರಿಂದ ಅಲ್ಲಿಯೇ ಅವಧಿ ಠೇವಣಿ ಮಾಡಬೇಕೆಂದಿರುವೆ. ಇದನ್ನು ಎಷ್ಟು ಅವಧಿಗೆ ಇರಿಸಲಿ.  ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗಲು ನಿಮ್ಮ ಮಾರ್ಗದರ್ಶನ ನನಗೆ ಬೇಕಾಗಿದೆ.

ಉತ್ತರ:
ಅಂಚೆ ಕಚೇರಿ– ಬ್ಯಾಂಕ್ ಠೇವಣಿಗಳ ಬಡ್ಡಿ ದರಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿಲ್ಲ. ಅಂಚೆ ಕಚೇರಿ ಠೇವಣಿಯ ಬಡ್ಡಿ ದರ, 1 ವರ್ಷದ ಠೇವಣಿ ಶೇ 7.1, ಎರಡು ವರ್ಷದ ಠೇವಣಿ ಶೇ 7.2, 3 ವರ್ಷದ ಠೇವಣಿ ಶೇ 7.4, 5 ವರ್ಷಗಳ ಠೇವಣಿ ಶೇ 7.9 . ಈ ಬಡ್ಡಿ ದರಕ್ಕೆ ಅನುಗುಣವಾಗಿ, ನಿಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗಲು ಎರಡು ವರ್ಷಗಳ ಠೇವಣಿ ಮಾಡಿರಿ. ನಗದು ದೃಷ್ಟಿಯಿಂದ ಬ್ಯಾಂಕ್ ಠೇವಣಿ ಉತ್ತಮವಾಗಿದೆ. ಅಲ್ಲಿ ಯಾವುದೇ ಠೇವಣಿಗೆ ಅವಧಿಗೆ ಮುನ್ನ ಕೂಡಾ ವಾಪಸ್ ಪಡೆಯಬಹುದು.

ಪ್ರಕಾಶ್, ಬೆಂಕಿಕೆರೆ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ
*ನಾನು ವೃತ್ತಿಯಲ್ಲಿ ಶಿಕ್ಷಕ. ತಿಂಗಳ ಸಂಬಳ ₹30,000 ಹಳ್ಳಿಯಲ್ಲಿ ನನ್ನ ಅಜ್ಜಿ ಹೆಸರಿನಲ್ಲಿ ಎರಡು ಎಕರೆ ಮಾವಿನತೋಟ ಹಾಗೂ ಹಂಚಿನ ಮನೆ ಇದೆ. ನನಗೆ ವೈಯಕ್ತಿಕ ಸಾಲ ₹15 ಲಕ್ಷವಿದೆ. ಅಜ್ಜಿಯ ಆಸ್ತಿಯ ಮೇಲೆ ಅಡಮಾನ ಸಾಲ ದೊರೆಯಬಹುದೇ ತಿಳಿಸಿ.
ಉತ್ತರ:
ಬ್ಯಾಂಕುಗಳಲ್ಲಿ ಯಾವುದೇ ಸಾಲ ಪಡೆಯುವುದಾದರೂ, ಸಾಲದ ಉದ್ದೇಶ ಹಾಗೂ ಮರುಪಾವತಿಸುವ ಸಾಮರ್ಥ್ಯ ನೋಡುತ್ತಾರೆ.  ನಿಮ್ಮ ಪ್ರಶ್ನೆಯಲ್ಲಿ ಉದ್ದೇಶ ತಿಳಿಸಿಲ್ಲ. ಈಗಾಗಲೇ ಇರುವ ₹15 ಲಕ್ಷ ವೈಯಕ್ತಿಕ ಸಾಲದ ಬಡ್ಡಿ ಕೂಡಾ ನಿಮಗೆ ತೆರುವ ಸಾಮರ್ಥ್ಯವಿದ್ದಂತೆ ಕಾಣುತ್ತಿಲ್ಲ. ಒಟ್ಟಿನಲ್ಲಿ ಅಡಮಾನ ಅಥವಾ ಇನ್ನಿತರ ಸಾಲ ಬ್ಯಾಂಕಿನಲ್ಲಿ ದೊರೆಯಲಾರದು.

ಎಲ್ಲದಕ್ಕೂ ಮುಖ್ಯವಾಗಿ ಹಳ್ಳಿ ಜಮೀನಿನ ಮೇಲೆ ಬೆಳೆಸಾಲ, ಅಭಿವೃದ್ಧಿ ಸಾಲ ಹೊರತುಪಡಿಸಿ ಬೇರಾವ ಸಾಲ ದೊರಕಲಾರದು. ನೀವು ನಿಜವಾಗಿ ಸಾಲದ ಬಾಧೆಯಿಂದ ಹೊರ ಬರಲು ಪ್ರಯತ್ನಿಸುತ್ತಿರುವಲ್ಲಿ, ಹಳ್ಳಿಯಲ್ಲಿರುವ ಎರಡು ಎಕರೆ  ಜಮೀನಿನಲ್ಲಿ ಒಂದು ಎಕರೆ ಜಮೀನು ಮಾರಾಟ ಮಾಡಿ ತಕ್ಷಣ ಸಾಲ ತೀರಿಸಿರಿ, ಒಟ್ಟಿನಲ್ಲಿ ಸಾಲರಹಿತ ಜೀವನ ಮಾಡಲು ಅಭ್ಯಾಸ ಮಾಡಿರಿ.

ಶೋಭಾ, ಮೈಸೂರು
*ನನ್ನ ಮಗ ಪಿಯುಸಿ ಯಲ್ಲಿ ಶೇ 87ರಷ್ಟು ಅಂಕ ಗಳಿಸಿ ಉತ್ತೀರ್ಣನಾಗಿದ್ದಾನೆ. ಬಿ.ಇ ಸೇರುವುದಾದರೆ ₹ 4 ಲಕ್ಷ ಸಾಲ ದೊರೆಯಬಹುದೇ? ಬಡ್ಡಿ ರಹಿತ ಸಾಲವಾದಲ್ಲಿ ಎಷ್ಟು ವರ್ಷ ಬಡ್ಡಿ ವಿನಾಯಿತಿ ಇದೆ. ಸಾಲ ಒಮ್ಮೆಲೇ ವಿತರಿಸುವರೆ? ಮರುಪಾವತಿಸುವ ಬಗೆ ಹೇಗೆ? ತಿಳಿಸಿ.
ಉತ್ತರ:
ಹೆತ್ತವರ ಆದಾಯ ವಾರ್ಷಿಕ ₹4.50 ಲಕ್ಷದ ಒಳಗಿರುವಲ್ಲಿ ಬಡ್ಡಿ ಅನುದಾನಿತ ಸಾಲ, ವೃತ್ತಿ ಪರ ಶಿಕ್ಷಣ ಪಡೆಯುವಲ್ಲಿ ಗರಿಷ್ಠ ₹10 ಲಕ್ಷಗಳ ತನಕ ಬ್ಯಾಂಕಿನಿಂದ ಪಡೆಯಬಹುದು.

ಅನುದಾನಿತ ಶಿಕ್ಷಣ ಸಾಲದ ಬಡ್ಡಿ ಅವಧಿ ವಿದ್ಯಾರ್ಥಿಯ ಅಧ್ಯಯನ ಕೋರ್ಸಿನ ಅವಧಿ ಹಾಗೂ ಒಂದು ವರ್ಷ ಅಥವಾ ಕೆಲಸಕ್ಕೆ ಸೇರಿದ ಆರು ತಿಂಗಳು (ಇವುಗಳಲ್ಲಿ ಯಾವುದು ಮೊದಲು ಅದನ್ನು ಅನುಸರಿಸಬೇಕು) ಸಾಲ ಒಮ್ಮೆಲೇ ವಿತರಿಸುವುದಿಲ್ಲ. ಪುಸ್ತಕಕೊಳ್ಳಲು, ಕಾಲೇಜು ಫೀ ತುಂಬಲು, ಹಾಸ್ಟೆಲ್ ಬಿಲ್ಲು ತುಂಬಲು, ಬೇಕಾದ ಉಪಕರಣಗಳನ್ನು ಕೊಳ್ಳಲು, ಪುರಾವೆ ತೋರಿಸಿ ಹಂತ ಹಂತವಾಗಿ ಪಡೆಯಬೇಕು.

ಸಾಲ ಮರುಪಾವತಿಸಲು ಮೇಲೆ ತಿಳಿಸಿದಂತೆ, ಮರುಪಾವತಿ ಪ್ರಾರಂಭಿಸುವ ತಾರೀಕಿನಿಂದ 80–100 ತಿಂಗಳ ಸಾಮಾನ ಕಂತು (ಇಎಂಐ) ದೊರೆಯುತ್ತದೆ. ಬಡ್ಡಿದರ ಬ್ಯಾಂಕಿನಿಂದ ಬ್ಯಾಂಕಿಗೆ ಸ್ವಲ್ಪ ವ್ಯತ್ಯಾಸವಿರುತ್ತದೆ. ಆದರೆ ಬೇರೆ ಸಾಲಗಳಿಗಿಂತ ಬಡ್ಡಿದರ ಕಡಿಮೆ ಇರುತ್ತದೆ. ಅನುದಾನಿತ ಬಡ್ಡಿ ಸಾಲದ ಹೊರತುಪಡಿಸಿ ಕೂಡಾ ಶಿಕ್ಷಣ ಸಾಲ ಪಡೆಯಬಹುದು.

ಬಿ.ಎನ್. ಸಂಪಗಾಂವ, ವಿಜಯಪುರ
*ನಾನು ರಾಜ್ಯ ಸರ್ಕಾರದ ನೌಕರ. ಹೆಂಡತಿಗೆ ಕೆಲಸವಿಲ್ಲ. ನನ್ನ ಸಂಬಳ, ಉಳಿತಾಯ ಹೀಗಿದೆ. ಸಂಬಳ 45,552, ಕಡಿತ ಇಜಿಐಎಸ್+ಪಿಟಿ–440, ಕೆಜಿಐಡಿ 3000, ಎನ್‌ಪಿಎಸ್ 4,243, ಎಲ್‌ಐಸಿ 1556, ಮನೆ ಬಾಡಿಗೆ ₹5000 ಕಳೆದು ₹31,313 ಕೈಗೆ ಸಿಗುತ್ತದೆ. ಇವುಗಳ ಹೊರತುಪಡಿಸಿ ಎಲ್ಐಸಿ ಮೂರು ಪಾಲಿಸಿಗಳಿಂದ ₹23,544 ಅರ್ಧವಾರ್ಷಿಕ ಕಟ್ಟುತ್ತೇನೆ. ನಾನು ಹುಬ್ಬಳ್ಳಿ–ಧಾರವಾಡದಲ್ಲಿ ನಿವೇಶನ ಪಡೆದು ಮನೆ ಕಟ್ಟುವ ಇಚ್ಛೆ ಹೊಂದಿದ್ದೇನೆ. ನನಗೆ 2 ವರ್ಷದ ಮಗನಿದ್ದು, ಅವನಿಗೆ ಉತ್ತಮ ವಿದ್ಯಾಭ್ಯಾಸ ಕೊಡಬೇಕಾಗಿದೆ. ನಿಮ್ಮ ಅಮೂಲ್ಯ ಸಲಹೆ ಬೇಕಾಗಿದೆ.
ಉತ್ತರ:
ನೀವು ಹುಬ್ಬಳ್ಳಿ– ಧಾರವಾಡದಲ್ಲಿ ನಿವೇಶನ ಕೊಂಡು ಮನೆ ಕಟ್ಟುವುದಾದರೆ ಶೇ  8.5 ಬಡ್ಡಿ ದರದಲ್ಲಿ ಎಲ್ಐಸಿ ಹೌಸಿಂಗ್ ಫೈನಾನ್ಸ್‌ನಲ್ಲಿ ನಿಮಗೆ ₹25 ಲಕ್ಷ ಸಾಲ ದೊರೆಯಬಹುದು, ವಿಚಾರಿಸಿರಿ. ಮಗುವಿನ ಭವಿಷ್ಯಕ್ಕೆ ಸಾಧ್ಯವಾದರೆ ₹2000–5000, 10 ವರ್ಷಗಳ ಆರ್.ಡಿ. ಮಾಡಿರಿ.

10 ವರ್ಷ ಮುಗಿದ ನಂತರ ಬರುವ ಹಣ ಅವಧಿ ಠೇವಣಿ ಇರಿಸಿರಿ ಹಾಗೂ ಪುನಃ 6 ವರ್ಷಗಳ ಅವಧಿಗೆ ಆರ್.ಡಿ. ಮಾಡಿರಿ. ಈ ಪ್ರಕ್ರಿಯೆಯಲ್ಲಿ ಮಗುವಿನ ವಿದ್ಯಾಭ್ಯಾಸ ಸುಗುಮವಾಗುತ್ತದೆ.

ಎಂ. ಆನಂದರಾವ್, ಮೈಸೂರು
*ನಾನೊಬ್ಬ ನಿವೃತ್ತ ಶಿಕ್ಷಕ. ಪ್ರತೀ ವರ್ಷ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುತ್ತಾ ಬಂದಿದ್ದೇವೆ. ಹಿರಿಯ ನಾಗರಿಕ. ನಮ್ಮ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿ ಬಂದಿರುವ ಹಣ ₹18.80 ಲಕ್ಷ. ಸಾಲ ತೀರಿಸಿ ₹15 ಲಕ್ಷ ಉಳಿಯುತ್ತದೆ. ಎಲ್ಲಿ ಠೇವಣಿ ಮಾಡಲಿ, ಆದಾಯ ತೆರಿಗೆ ಹೇಗೆ ಉಳಿಸಲಿ, ದಯವಿಟ್ಟು ಸಲಹೆ ನೀಡಿ.
ಉತ್ತರ:
₹15 ಲಕ್ಷವನ್ನು ವಿಂಗಡಿಸಿ ₹7.50 ಲಕ್ಷದಂತೆ ನಿಮ್ಮ ಮತ್ತು ನಿಮ್ಮ ಹೆಂಡತಿಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಮಾಡಿ. ನಿಮ್ಮ ಪಿಂಚಣಿ ಹಾಗೂ ಮುಂದೆ ಬರುವ ಠೇವಣಿ ಮೇಲಿನ ಬಡ್ಡಿ ವಾರ್ಷಿಕವಾಗಿ ₹3 ಲಕ್ಷ  (31–3–2017 ತನಕ) ದಾಟಿದಲ್ಲಿ, ಹಾಗೆ ಮಿಕ್ಕಿದ್ದ ಹಣಕ್ಕೆ ಮಾತ್ರ ತೆರಿಗೆ ಸಲ್ಲಿಸಬೇಕು. ನಿಮ್ಮ ಹೆಂಡತಿಗೆ ಆ ಪ್ರಮೇಯವಿರುವುದಿಲ್ಲ. ಪಿತ್ರಾರ್ಜಿತ ಆಸ್ತಿಯಿಂದ ಬಂದ ಹಣ, ಹೆಂಡತಿಗೂ ಹಕ್ಕು ಇರುವುದರಿಂದ ಇಲ್ಲಿ ತಿಳಿಸಿದಂತೆ ₹7.50 ಲಕ್ಷ ಅವರ ಹೆಸರಿಗೆ ಠೇವಣಿ  ಮಾಡಿ.

ಶಿವಣ್ಣ, ಬೆಂಗಳೂರು
*ನಾನು ನನ್ನ ಹೆಂಡತಿ ಹಿರಿಯ ನಾಗರಿಕರು. ಆದಾಯ ತೆರಿಗೆ ಪಾವತಿಸುವವರಿದ್ದೇವೆ. ಬ್ಯಾಂಕಿನ ಟ್ಯಾಕ್ಸ್ ಸೇವಿಂಗ್ಸ್ ಸ್ಕೀಮಿಗೆ ಬಡ್ಡಿ ಕಡಿಮೆ ಇರುವುದರಿಂದ, ಮ್ಯೂಚುವಲ್ ಫಂಡ್‌ಗೆ ತೊಡಗಿಸಬೇಕೆಂದಿದ್ದೇನೆ. ಉತ್ತಮ ಇಳುವರಿ ಮ್ಯೂಚುವಲ್ ಫಂಡ್‌ಗಳ ಬಗ್ಗೆ ತಿಳಿಸಿರಿ. ನನ್ನ ಹೆಂಡತಿಗೆ ತವರಿನಿಂದ ಒಂದು ನಿವೇಶನ ಬಂದಿದೆ. ಅದನ್ನು  ಮಾರಾಟ ಮಾಡಿದರೆ  ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಬರುತ್ತದೆಯೋ ತಿಳಿಸಿ.
ಉತ್ತರ:
ಸೆಕ್ಷನ್ 80 ಸಿ ಆಧಾರದ ಮೇಲೆ ಎಸ್‌ಬಿಐ ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸಬಹುದು. ಯಾವುದೇ ಮ್ಯೂಚ್ಯುವಲ್ ಫಂಡ್ ನಿಖರವಾದ ಆದಾಯ ತರುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಯಾದ್ದರಿಂದ ಸ್ವಲ್ಪ ಆಲೋಚಿಸುವುದು ಉತ್ತಮ.

ನಿಮ್ಮ ಹೆಂಡತಿಗೆ ಬರುವ ನಿವೇಶನ ಇನಾಮ (Gift)ಆಗಿರುವುದರಿಂದ ಈ ಆಸ್ತಿ ಅಥವಾ ನಿವೇಶನ ಮಾರಿದರೆ ಮಾರಾಟ ಮಾಡಿದರೆ ಬಂಡವಾಳ ವೃದ್ಧಿ (Capita* Gain) ಪ್ರಶ್ನೆ ಬರಲಾರದು. ಕೊಂಡು ಕೊಂಡ ಸ್ಥಿರ ಆಸ್ತಿ ಮಾರಾಟ ಮಾಡಿದಾಗ ಬರುವ ಲಾಭವನ್ನು ಕ್ಯಾಪಿಟಲ್‌ಗೇನ್ ಎಂದು ಕರೆಯುತ್ತಾರೆ. ನೀವು ಇನಾಮಾಗಿ ಪಡೆದಿರುವುದರಿಂದ ಈ ಪ್ರಶ್ನೆಗೆ ಇಲ್ಲಿ ಎಡೆ ಇಲ್ಲ.

ನೀವು ಜೀವನದಲ್ಲಿ ಈ ನಿವೇಶನ ಆಪದ್ಧನವಾಗಿ ಇರಿಸಿಕೊಳ್ಳಿ ಮಾರಾಟ ಮಾಡಬೇಡಿ. ಹಣ ಬಂದಾಗ ಬಹಳ ಬೇಗ ಖರ್ಚಾಗಬಹುದು. ತೆರಿಗೆ ವಿಚಾರದಲ್ಲಿ ನೀವು ರಿಟರ್ನ್ ತುಂಬುವವರಿಂದಲೂ ಸಲಹೆ ಪಡೆಯಿರಿ.

ಮುರಳಿ, ಬೆಂಗಳೂರು
*ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಯಲ್ಲಿ ಕೆಲಸ. ಮುಂದಿನ ವರ್ಷ ನಿವೃತ್ತನಾಗುತ್ತಿದ್ದೇನೆ. ನಿವೃತಿಯಿಂದ ₹50 ಲಕ್ಷ ಸಿಗುತ್ತದೆ. ನನಗೆ ಯಾವುದೇ ಸಾಲ ಇಲ್ಲ. ಮಡದಿ ಗೃಹಿಣಿ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ ದೊಡ್ಡವಳು ದುಡಿಯುತ್ತಾಳೆ. ಸಣ್ಣವಳು ಎಂಜಿನಿಯರಿಂಗ್‌ ಓದುತ್ತಾಳೆ. ₹50 ಲಕ್ಷ ಹೇಗೆ ವಿನಿಯೋಗಿಸಲಿ ತಿಳಿಸಿ. ಹಳ್ಳಿಯಲ್ಲಿ ಸ್ವಂತ ಮನೆ ಇದೆ.
ಉತ್ತರ:
ನಿಮಗೆ ಪಿಂಚಣಿ ಸೌವಲತ್ತು ಇರಲಾರದು ಎಂದು ಭಾವಿಸುವೆ. ₹50 ಲಕ್ಷ ವಿಂಗಡಿಸಿ ₹10 ಲಕ್ಷದಂತೆ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಇರಿಸಿ. ಉಳಿದ ₹30 ಲಕ್ಷ ನಿಮ್ಮ ಹಾಗೂ ಹೆಂಡತಿ ಹೆಸರಿನಲ್ಲಿ ₹15 ಲಕ್ಷದಂತೆ ಎರಡು ಬಾಂಡ್‌ ಮಾಡಿಸಿ.

ಈ ಠೇವಣಿಗೆ ಪ್ರತ್ಯೇಕವಾಗಿ ಹೆಣ್ಣು ಮಕ್ಕಳ ಹೆಸರಿನಲ್ಲಿ ನಾಮ ನಿರ್ದೇಶನ ಮಾಡಿ. ಈ ವಯಸ್ಸಿನಲ್ಲಿ ನಿವೇಶನ ಅಥವಾ ಬೇರಾವ ಹೂಡಿಕೆ ನಿಮಗೆ ಸೂಕ್ತವಲ್ಲ. ₹30 ಲಕ್ಷ ದಿಂದ ಪ್ರತಿ ತಿಂಗಳು ಬಡ್ಡಿ ಪಡೆಯಿರಿ. ಬ್ಯಾಂಕ್‌ ಠೇವಣಿ ಹೊರತುಪಡಿಸಿ ಬೇರಾವ ಹೂಡಿಕೆ ಮಾಡಬೇಡಿ ಅಥವಾ ಬಂಧು ಮಿತ್ರರಿಗೆ ಸಾಲಕೊಟ್ಟು ಹಣ ಕಳೆದುಕೊಳ್ಳಬೇಡಿ.

ಮುರಳೀಧರ ಕುಲಕರ್ಣಿ
*ತೆರಿಗೆಗೋಸ್ಕರ ಇರಿಸುವ ₹1.50 ಲಕ್ಷ ಠೇವಣಿಯಿಂದ ಪ್ರಥಮ ವರ್ಷಕ್ಕೆ ಮಾತ್ರ ತೆರಿಗೆ ವಿನಾಯಿತಿ ಇದೆಯೇ ಅಥವಾ 4 ವರ್ಷಗಳೂ ಪಡೆಯಬಹುದೇ? ಹಿರಿಯ ನಾಗರಿಕರ ಗರಿಷ್ಠ ಠೇವಣಿ ಮೊತ್ತ ಎಷ್ಟಿರುತ್ತದೆ. 5 ವರ್ಷಗಳ ಸಾಮಾನ್ಯ ಠೇವಣಿಗೂ ಹಿರಿಯ ನಾಗರೀಕರಿಗಾಗಿ ಮೀಸಲಿರುವ ಠೇವಣಿಗೂ ಇರುವ ವ್ಯತ್ಯಾಸವೇನು?
ಉತ್ತರ:
 ಯಾವುದೇ ಹೂಡಿಕೆ ಅಥವಾ ಠೇವಣಿ ಸೆಕ್ಷನ್‌ 80 ಸಿ ಆಧಾರ ಮೇಲೆ ಮಾಡಿದಲ್ಲಿ, ವಿನಾಯಿತಿ ಅವಧಿ ಮೊದಲ ವರ್ಷಕ್ಕೆ ಮಾತ್ರ ಮೀಸಲಾಗಿರುತ್ತದೆ. ನೀವು ಅಂಚೆ ಕಚೇರಿ ಹಿರಿಯ ನಾಗರಿಕರ 5 ವರ್ಷ ಠೇವಣಿಯ  ಮಿತಿ ಕೇಳಿರಬೇಕೆಂದು ಭಾವಿಸುತ್ತೇನೆ. ಇಲ್ಲಿ ಗರಿಷ್ಠ ₹15 ಲಕ್ಷ ಇರಿಸಬಹುದು.

ಆದರೆ ಸೆಕ್ಷನ್‌ 80 ಸಿ ಅಡಿಯಲ್ಲಿ 31.3.2017ಕ್ಕೆ ಇದ್ದಂತೆ ₹1.50 ಲಕ್ಷಕ್ಕಿಂತ ಹೆಚ್ಚಿನ ಠೇವಣಿಗೆ ವಿನಾಯಿತಿ ಇರುವುದಿಲ್ಲ. ಸಾಮಾನ್ಯ ಠೇವಣಿ ಮೊತ್ತ ಬ್ಯಾಂಕ್‌ನಲ್ಲಿ ಇರಿಸಿದಾಗ ಠೇವಣಿ ಮೇಲೆ ಸಾಲ ಪಡೆಯಬಹುದು. ಅವಧಿಗೆ ಮುನ್ನ ಹಣ ಪಡೆಯಬಹುದು. ಇವೆರಡೂ ಸೌವಲತ್ತು ತೆರಿಗೆ ಉಳಿಸುವ ಠೇವಣಿಗೆ ಬರುವುದಿಲ್ಲ. ನಿಮ್ಮ ಪ್ರಶ್ನೆಯಿಂದ ಹಲವರಿಗೆ ಉತ್ತರ ಸಿಕ್ಕಿದಂತಾಗಿದೆ.

ಬಿ.ವಿ. ಪ್ರದೀಪ್‌ ಕುಮಾರ್‌, ಚಿಕ್ಕಮಗಳೂರು
*ನಾನು 4 ಎಲ್‌.ಐ.ಸಿ. ಪಾಲಿಸಿ ಹೊಂದಿದ್ದು, ಎಲ್ಲವನ್ನೂ ಮಧ್ಯದಲ್ಲಿ ನಿಲ್ಲಿಸಿದ್ದೇನೆ. ನನಗೆ ಮುಂದುವರಿಸಲು ಸಾಮರ್ಥ್ಯವಿಲ್ಲ. ಈ ಪಾಲಿಸಿ ಹಣ ವಾಪಸು ಪಡೆಯಲು ಮಾರ್ಗದರ್ಶನ ನೀಡಿ. ಏಜೆಂಟರನ್ನು ಕೇಳಿದರೆ ನನಗೆ ಸರಿಯಾದ ಮಾಹಿತಿ ಸಿಗುವುದಿಲ್ಲ.
ಉತ್ತರ:
ಚಿಕ್ಕಮಗಳೂರಿನಲ್ಲಿ ಎಲ್‌.ಐ.ಸಿ. ಯವರ ಬ್ರ್ಯಾಂಚ್‌ ಆಫೀಸ್‌ ಇರುತ್ತದೆ. ನೀವು ನಿಮ್ಮೊಡನಿರುವ 4 ಪಾಲಿಸಿಗಳು, ಪಾವತಿಗಳು ಹಾಗೂ ಬೇರಾವ ಪುರಾವೆಗಳಿದ್ದರೆ ನೇರವಾಗಿ ಎಲ್‌.ಐ.ಸಿ ಆಫೀಸ್‌ಗೆ ಹೋಗಿ. ಬ್ರ್ಯಾಂಚ್ ಮ್ಯಾನೇಜರ್‌ ಅವರನ್ನು ನೋಡಿ.

ಇರುವ ವಿಚಾರ ಸ್ಪಷ್ಟವಾಗಿ ತಿಳಿಸಿ. ನೀವು ಕಟ್ಟಿದ ಹಣ ಎಂದಿಗೂ ವಾಪಸ್‌ ಬರುವುದಿಲ್ಲ. ಆದರೆ ಕಟ್ಟಿದ ಹಣದ ಸ್ವಲ್ಪ ಭಾಗ ‘ಸೆಕೆಂಡರಿ ವ್ಯಾಲ್ಯೂ’ ವಾಪಸ್‌ ಬರಬಹುದು. ಪ್ರಯತ್ನ ಮಾಡಿ.  ವಿಮೆ ಇಳಿಸುವ ಮುನ್ನ ನೀವು ಆಲೋಚಿಸಬೇಕಿತ್ತು. ಬೇರೆಯವರ ಒತ್ತಾಯಕ್ಕೆ ಮಣಿಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT