ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತ್ತಲಿನಿಂದ ಮಾರುಕಟ್ಟೆವರೆಗೆ...

Last Updated 28 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇನ್‌ಸ್ಟಂಟ್‌ ಯುಗದಲ್ಲಿಯೂ ಆರೋಗ್ಯವೇ ಸೌಂದರ್ಯ ಎಂಬ ತತ್ವವನ್ನು ಸಾರುತ್ತಿದ್ದಾರೆ ಸಿ.ವಿ. ಶೋಭಾ. ಇದೀಗ ಅವರ ಹರ್ಬಲ್‌ ಹೇರ್‌ ಡೈ ಅನ್ನು ಎಲ್ಲ ಅವಶ್ಯಕ ಪ್ರಮಾಣಪತ್ರಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದಾರೆ. ಕಟ್ಟೆಯ ಮೇಲೆ ಹೂ, ಮದರಂಗಿಯನ್ನು ಅರೆಯುವುದರಿಂದ ಒಂದು ಉತ್ಪನ್ನವನ್ನು ಸಿನಿಮಾ ನಟನಿಂದ ಬಿಡುಗಡೆ ಮಾಡುವವರೆಗಿನ ಕಥನ ಇಲ್ಲಿದೆ.

*ಸಾಂಪ್ರದಾಯಿಕ ವೈದ್ಯಕೀಯದೆಡೆಗೆ ಆಕರ್ಷಿತರಾದದ್ದು ಹೇಗೆ?
ಅಪ್ಪ, ಜನಪದ ವೈದ್ಯ ಆಗಿದ್ರು. ಕೆಮ್ಮು, ದಮ್ಮು, ತುರಿಕೆ, ಗಾಯ, ಸುಟ್ಟ ಗಾಯ, ಬಾಲನೆರೆ, ಬೋಳು ತಲೆ ಎಲ್ಲಕ್ಕೂ ಮದ್ದು ನೀಡುತ್ತಿದ್ದರು. ಅವರೊಟ್ಟಿಗೆ ಸೊಪ್ಪು ಅರಿಯಲು, ಪುಡಿ ಮಾಡಲು, ತೈಲ ಸಿದ್ಧಪಡಿಸಲು ನೆರವಾಗುತ್ತಿದ್ದೆ. ಹಾಗೆಯೇ ಅದೇ ವಿಷಯದಲ್ಲಿ ಆಸಕ್ತಿ ಬೆಳೆಯಿತು. ಅಪ್ಪನಿಗೆ ಎಲೆ, ಸೊಪ್ಪು,ಬೇರು,ನಾರು ಗೊತ್ತಿದ್ದವು. ಸಮಸ್ಯೆಗೆ ಪರಿಹಾರಗಳು ಸಿಕ್ಕಾಗ ಖುಷಿಯಾಗುತ್ತಿತ್ತು. ಹೀಗೆ ಸಾಂಪ್ರದಾಯಿಕ ವೈದ್ಯಕೀಯದೆಡೆಗೆ ನಾನು ಸಾಗಿದೆ.


*ಆಧುನಿಕ ಜೀವನದಲ್ಲಿ ಇದನ್ನು ನಂಬುವವರು ಇದ್ದಾರೆಯೇ?
ನಂಬಿಕೆಯನ್ನು ಪ್ರಶ್ನಾರ್ಹವಾಗಿಸಿಕೊಂಡೇ ನಾನು ವಿಜ್ಞಾನವನ್ನು ಆಯ್ಕೆ ಮಾಡಿಕೊಂಡೆ. ಒಂದು ಸೊಪ್ಪಿನ ಯಾವ ಗುಣ ಔಷಧೀಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಓದತೊಡಗಿದೆ. ಅರಿತಿದ್ದನ್ನು ಪ್ರಯೋಗಕ್ಕೆ ಒಳಪಡಿಸಿದೆ. ಇದು ನನ್ನ ವಿಷಯವಾಯಿತು. ಜನರು ಈಗಲೂ ತಮ್ಮ ಸಮಸ್ಯೆಗಳಿಗೆ ಸಾಧ್ಯವಿರುವ ಎಲ್ಲ ಅವಕಾಶಗಳನ್ನೂ ಪರಿಶೀಲಿಸುತ್ತಾರೆ. ಅಪ್ಪ ಹೆಸರು ಮಾಡಿದ್ದರು. ಅವರ ಹೆಸರಿನ ಮೂಲಕವೇ ಅನೇಕರು ನನ್ನನ್ನು ಅರಸಿಕೊಂಡು ಬಂದರು.

*ಹರ್ಬಲ್‌ ಉತ್ಪನ್ನಗಳೆಷ್ಟು ಸುರಕ್ಷಿತ? ಇವಕ್ಕೆ ಅಡ್ಡ ಪರಿಣಾಮಗಳಿಲ್ಲವೇ?
ಯಾವುದು ನೈಸರ್ಗಿಕವಾಗಿರುತ್ತದೆಯೋ, ಪ್ರಕೃತಿದತ್ತವಾಗಿದೆಯೋ ಅವುಗಳಿಗೆ ಖಂಡಿತವಾಗಿಯೂ ಅಡ್ಡ ಪರಿಣಾಮಗಳಿರುವುದಿಲ್ಲ. ಅವುಗಳೊಂದಿಗೆ ರಾಸಾಯನಿಕಗಳನ್ನು ಬೆರೆಸಿದಾಗ ಸೂಕ್ಷ್ಮ ಪ್ರಕೃತಿಯುಳ್ಳವರಿಗೆ ಒಗ್ಗದಿರುವ ಸಮಸ್ಯೆಯಾಗಬಹುದು. ನಾನು ಆದಷ್ಟೂ ಪ್ರಾಕೃತಿಕ ಪರಿಹಾರಗಳನ್ನು ಕಂಡುಕೊಳ್ಳುವುದಕ್ಕೆ ಮೊದಲು ಮಾಡಿದೆ.

*ನಿಮ್ಮ ಆರಂಭ ಹೇಗಿತ್ತು?
ಆಸ್ತಮಾ, ಮೈಗ್ರೇನ್‌, ಕೀಲುನೋವು ಮುಂತಾದವುಗಳಿಗೆ ಔಷಧಿಕೊಡಲು ಆರಂಭಿಸಿದೆ. ಅವು ಬಾಯಿಂದ ಬಾಯಿಗೆ ಹರಡಿ ಜನಪ್ರಿಯಳಾದೆ. ಇದು ಉಳಿದ ಔಷಧಿಗಳಿಗೆ ಪರ್ಯಾಯವಲ್ಲ. ಆದರೆ, ಫಲಿತಾಂಶವಂತೂ ಚೆನ್ನಾಗಿತ್ತು. ಅದಾದ ನಂತರ ಜನರು ಹೆಚ್ಚು ಹೆಚ್ಚು ಇನ್‌ಸ್ಟಂಟ್‌ ಪರಿಹಾರಗಳಿಗೆ ಮಾರುಹೋಗುತ್ತಿರುವುದು ನೋಡಿದೆ. ಇದನ್ನು ತಪ್ಪಿಸಲು ನಮ್ಮ ಆಹಾರವೇ ಔಷಧ ಎಂಬ ಪರಿಕಲ್ಪನೆಯನ್ನು ಹಂಚಲು ಆರಂಭಿಸಿದೆ.

*ಆಹಾರವೇ ಔಷಧ ಎಂದರೆ?
ಅಡುಗೆ ಮನೆಯಲ್ಲಿರುವ ಔಷಧಿಗಳ ಬಗೆಗೆ ಹೆಚ್ಚು ಮಾಹಿತಿ ನೀಡಿದೆ. ಕೆಲವೆಡೆ ಕಾರ್ಯಾಗಾರವನ್ನು ಮಾಡಿ, ಔಷಧೀಯ ಆಹಾರ, ಆಹಾರದಲ್ಲಿನ ಔಷಧೀಯ ಗುಣಗಳನ್ನು ಹೇಳತೊಡಗಿದೆ. ಬೆಳ್ಳುಳ್ಳಿಯ ಗುಣಗಳು, ಇಂಗಿನ ಬಳಕೆ, ಮೊಳಕೆ ಕಾಳಿನ ಉಪಯೋಗ ಹೀಗೆ ಎಲ್ಲರ ಕೈಗೆಟುಕುವ ಪರಿಹಾರಗಳನ್ನೇ ಚರ್ಚಿಸಿದೆ.

*ಜನರ ಪ್ರತಿಕ್ರಿಯೆ ಹೇಗಿತ್ತು?
ಮೊದಲೆಲ್ಲ ಪ್ರಯೋಗಗಳನ್ನು ಕೈಗೊಳ್ಳುತ್ತಿದ್ದರು. ಆಹಾರ ಪಥ್ಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದರು. ಕೊನೆಕೊನೆಗೆ ಸೌಂದರ್ಯವರ್ಧಕಗಳ ಬಗ್ಗೆ ಪ್ರಶ್ನೆಗಳು ಬಂದವು. ಬಹಳಷ್ಟು ಜನರು ಬಾಲನೆರೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಆಗ ಬ್ರಾಹ್ಮಿ, ನೆಲ್ಲಿ, ನೀಲಿ ಮುಂತಾದವುಗಳನ್ನು ಬಳಸಿ ನಮ್ಮದೇ ಡೈ ತಯಾರಿ ಮಾಡಿದೆ.

*ಡೈ ವಿಶೇಷವೇನು?
ಇದು ಆರೋಗ್ಯಕರ ಮತ್ತು ಸೌಂದರ್ಯ ವರ್ಧಕ. ಆದರೆ ಸಮಯವನ್ನು ಬೇಡುತ್ತದೆ. ಮೊದಲು ಮದರಂಗಿಯನ್ನು ಹಚ್ಚಿಕೊಳ್ಳಬೇಕು. ತಲೆತೊಳೆದುಕೊಳ್ಳಬೇಕು. ನಂತರ ಈ ವಿಶೇಷ ಡೈ ಹಚ್ಚಿಕೊಳ್ಳಬೇಕು. ಕೆಂಪು ಬಣ್ಣದ ಮೇಲೆ ನೀಲಿ ಬೆರೆತಾಗ ಬರುವ ನೈಸರ್ಗಿಕ ಕಂದುಕಪ್ಪು ಬಣ್ಣ ಬರುತ್ತದೆ. ಬರಬರುತ್ತ ಕೂದಲ ಬುಡ ದೃಢವಾಗುತ್ತದೆ. ಇದರೊಳಗಿರುವ ಬ್ರಾಹ್ಮಿ ಮತ್ತು ನೆಲ್ಲಿ ಕೂದಲಿನ ಆರೋಗ್ಯವನ್ನು ಹೆಚ್ಚಿಸುವಂತೆ ಮಾಡುತ್ತವೆ.

*ಮಾರುಕಟ್ಟೆಗೆ ಬಿಡುಗಡೆ ಮಾಡಲು ಇಷ್ಟು ದಿನ ತೆಗೆದುಕೊಳ್ಳಲು ಕಾರಣ?
ಸುರಕ್ಷೆಗೆ ಸಂಬಂಧಿಸಿದ ಎಲ್ಲ ಬಗೆಯ ಪ್ರಯೋಗಗಳನ್ನೂ ಕೈಗೊಳ್ಳಬೇಕಿತ್ತು. ಅದಕ್ಕೆ ಅಗತ್ಯದ ಪ್ರಮಾಣಪತ್ರಗಳನ್ನು ಪಡೆಯಲಾಯಿತು. ಈ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಂಡಿತು. ಆದರೆ, ಅಷ್ಟರಲ್ಲಾಗಲೇ ನಮ್ಮ ಗ್ರಾಹಕರ ಸಂಖ್ಯೆ ನಂಬಿಕೆಯ ಮೇಲೆಯೇ ಬೆಳೆಯತೊಡಗಿತ್ತು.

*ಮನೆಯವರ ಬೆಂಬಲ ಹೇಗಿದೆ?
ನನ್ನ ಮಗ ಶಾಶ್ವತ್‌, ನ್ಯೂಟ್ರಿಷಿಯನಿಸ್ಟ್‌ ಹಾಗೂ ದೇಹದಾರ್ಢ್ಯ ಇನ್‌ಸ್ಟ್ರಕ್ಟರ್‌. ಅವನೂ ಯಾವುದನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬ ಸಲಹೆಯನ್ನೆಲ್ಲ ಕೊಡುತ್ತಾನೆ. ಒಟ್ಟಿನಲ್ಲಿ ಸೌಂದರ್ಯವೆನ್ನುವುದು ಆರೋಗ್ಯಕರ ಲುಕ್‌ ಎನ್ನುವುದಕ್ಕೇ ಹೆಚ್ಚಿನ ಬೆಂಬಲ ನೀಡುತ್ತೇವೆ. ನನ್ನ ಸಂಗಾತಿ ಶಶಿಕಿರಣ್‌ ಸಹ ಎಲ್ಲ ಪ್ರಯೋಗಗಳಲ್ಲಿಯೂ ಕೈ ಜೋಡಿಸಿ ನಿಂತರು.

ಇನ್ನೊಬ್ಬ ಮಗ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದಾನೆ. ಅವನದ್ದೂ ಒಂದೇ ಗುರಿ ಸಾಧ್ಯವಿದ್ದಷ್ಟು ರಾಸಾಯನಿಕ ರಹಿತ ಲೋಕಕ್ಕೆ ಸೇವೆ ಮಾಡುವುದು. ಔಷಧಿ ರಹಿತ ಜೀವನವಾಗಬೇಕು. ಸ್ವಾಸ್ಥ್ಯವೇ ಸೌಂದರ್ಯವಾಗಬೇಕು.

*ಮಾರುಕಟ್ಟೆ ಪ್ರವೇಶಿಸುವ ಮುನ್ನ ಎದುರಿಸಿದ ಸಮಸ್ಯೆಗಳೇನು?
ಮೊದಲೆಲ್ಲ ಇದು ಬಾಯಿಂದ ಬಾಯಿಗೆ ಪ್ರಚಾರ ಹರಡುತ್ತಿತ್ತು. ನಾನೂ ಇದನ್ನು ಉದ್ಯಮವಾಗಿ ಆರಂಭಿಸಿರಲಿಲ್ಲ. ಸಾಂಪ್ರದಾಯಿಕ ಪದ್ಧತಿಯನ್ನು ಹಾಗೆಯೇ ಮುಂದುವರಿಸಿದ್ದೆ. ಆದರೆ, ಕೆಲವರು ಬಂದು ಜೋರು ಮಾಡಿದರು. ಏನಿದೆ ನಿಮ್ಮ ಬಳಿ ಪ್ರಮಾಣ ಪತ್ರಗಳಿವೆಯೇ? ಜನರಿಗೆ ಸಾಂಪ್ರದಾಯಿಕ ಹೆಸರಿನಲ್ಲಿ ಸುರಕ್ಷಿತವಲ್ಲದ ಉತ್ಪನ್ನಗಳನ್ನು ನೀಡುತ್ತಿರುವಿರಿ ಎಂದೆಲ್ಲ ಜಗಳ ಮಾಡಿದರು. ನಮಗೆ ನಮ್ಮ ಉತ್ಪನ್ನದ ಬಗ್ಗೆ ನಂಬಿಕೆ ಇತ್ತು. ಅಂದೇ ನಿರ್ಧರಿಸಿದೆ.

ಸುರಕ್ಷೆಯ ಎಲ್ಲ ಪ್ರಮಾಣಪತ್ರಗಳನ್ನೂ ಪಡೆಯಬೇಕು ಎಂದು. ವೈದ್ಯಕೀಯ ಪರೀಕ್ಷೆ, ಪ್ರಯೋಗಗಳಿಗೆ ಒಳಪಟ್ಟಂತೆಲ್ಲ ನನ್ನ ಆತ್ಮವಿಶ್ವಾಸ ಹೆಚ್ಚುತ್ತಿತ್ತು. ಪ್ರಾಕೃತಿಕ ಉತ್ಪನ್ನಗಳಿಗೆ ಯಾವ ಅನುಮಾನವೂ ಇಲ್ಲದೆ ಬಳಸಬಹುದು ಎಂದು ಹೇಳುವಂತಾಯಿತು. ಜನರ ನಂಬಿಕೆ ಬೆಳೆಸಿಕೊಳ್ಳಲೂ ಈ ಪ್ರಮಾಣ ಪತ್ರಗಳು ಸಹಾಯಕವಾದವು.

ಉತ್ಪನ್ನಗಳನ್ನು ಬಳಸಿದವರಿಗೆ ಈ ಪ್ರಮಾಣಪತ್ರಗಳ ಅಗತ್ಯವಿಲ್ಲ. ಅವರೇ ಪ್ರಮಾಣ ನೀಡಿದ್ದಾರೆ. ಅಂಥ ಹಲವಾರು ಉದಾಹರಣೆಗಳು ನನ್ನ ಬಳಿ ಇವೆ. ಇದೀಗ ಸಂಪೂರ್ಣ ವೈಜ್ಞಾನಿಕ ರೀತಿಯಲ್ಲಿ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇನೆ. ಚಿತ್ರನಟ ರಘುನಂದನ್‌ ಇದನ್ನು ಮಾರುಕಟ್ಟೆಗೆ ಸಮರ್ಪಿಸಿದರು. ಇದೀಗ ಉದ್ಯಮಿಯಾಗಿ ಬದಲಾಗಿದ್ದೇನೆ.
ಮಾಹಿತಿಗೆ: siriherba*products@gmai*.com / siriherba*products.com ಸಂಪರ್ಕಕ್ಕೆ: 9448315578

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT