ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರು ನೀರುಂಡರೆ ಬೇಗೆ ಎಲ್ಲಿಯದು?

Last Updated 28 ಮಾರ್ಚ್ 2017, 20:30 IST
ಅಕ್ಷರ ಗಾತ್ರ

ಚಿತ್ರದುರ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬದಿಯ ಚನ್ನಯ್ಯನ ಹಟ್ಟಿ ಎಂಬ ಊರಿನ ರೈತ ಮಹಿಳೆ ಜಯಮ್ಮ ಎಂಬುವರು ತಾವು ಎಂಟು ವರ್ಷಗಳ ಕಾಲ ಬೆಳೆಸಿದ ಅಡಿಕೆ ಮರಗಳನ್ನು ಕತ್ತರಿಸಿ ಸುಟ್ಟು ಹಾಕಿರುವ ಸುದ್ದಿ ಮತ್ತು ಚಿತ್ರ ಪ್ರಕಟವಾಗಿದೆ (ಪ್ರ.ವಾ., ಮಾರ್ಚ್‌ 27). ಜಯಮ್ಮ ಅವರ ಕುಟುಂಬ ಕೊರೆಸಿದ್ದ ಮೂರು ಕೊಳವೆ ಬಾವಿಗಳೂ ಬತ್ತಿಹೋಗಿ, ಅಡಿಕೆ ಮರಗಳು ನೀರಿಲ್ಲದೆ ಒಣಗಿ ಹೋಗುತ್ತಿದ್ದುದನ್ನು ಸಹಿಸಲಾರದೆ ಅವರು ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆ. ಇದು ಕೇವಲ ನಾಂದಿ. ಇನ್ನು ಅಡಿಕೆ ತೋಟಗಾರರೆಲ್ಲರೂ ಕೊಡಲಿ ಎತ್ತಬೇಕಷ್ಟೆ. ನಾವು ಯಾವ ಊರು, ಯಾವ ರಸ್ತೆಯಲ್ಲಿ ಹೋದರೂ ಅಡಿಕೆ ಮರಗಳು ಬೆಂಕಿ ಬಿದ್ದ ಹಾಗೆ ಒಣಗಿ ನಿಂತಿರುವ  ದೃಶ್ಯ ಕಾಣುತ್ತಿದೆ. ಕೇವಲ ಅಡಿಕೆ ಮರ, ತೆಂಗಿನ ಮರಗಳಷ್ಟೇ ಅಲ್ಲ, ತಲೆತಲಾಂತರದ ಹುಣಿಸೆ ಮರಗಳು ಸಹ ಈ ಸಲದ ಬೇಗೆಗೆ ಕೆಲವೆಡೆ ಒಣಗಿ ಹೋಗುತ್ತಿರುವುದನ್ನು ಕಾಣಬಹುದು. ಇದೆಲ್ಲಾ ಮನುಷ್ಯನ ಸ್ವಯಂಕೃತಾಪರಾಧ!

ಕೊಳವೆ ಬಾವಿಗಳನ್ನು ಕೊರೆದೂ ಕೊರೆದೂ ಭೂಮಂಡಲವೇ ಬರಡಾಗುತ್ತಿದೆ.  ಮಳೆ ಬಂದರೂ ನೀರು ಕುಡಿಯಲು ನೆಲದಲ್ಲಿ ಜಾಗವೆಲ್ಲಿಯದು? ಇದಕ್ಕಾಗಿ ಯಾರನ್ನು ದೂರುವುದು? ಯಾರಿಗೆ ಕೇಳುವುದು? ಇಡೀ ಮನುಕುಲವೇ ಈ ಅಪರಾಧದಲ್ಲಿ ಭಾಗಿಯಾಗಿದೆ.  ಭೂಮಿಯ ಸಂಪನ್ಮೂಲಗಳಾದ ಖನಿಜ, ಮರಳು, ಕಲ್ಲು, ಮರಗಳನ್ನು ದೋಚಿ; ಇಟ್ಟಿಗೆ, ಸಿಮೆಂಟ್, ಕಬ್ಬಿಣ, ಕಾಂಕ್ರೀಟ್ ಸುರಿದು ಸಾಲುಸಾಲು ಸೌಧಗಳು, ಅಂತಸ್ತಿನ ಅರಮನೆಗಳು, ನಗರಗಳಿರಲಿ ಊರು ಕೇರಿಗಳಲ್ಲೂ ನಿರ್ಮಾಣವಾಗುತ್ತಿವೆ.

ಮಲೆನಾಡಿನಲ್ಲಿ ನೀರಾವರಿ ಯೋಜನೆಗಳಿಗೆ, ರೈಲು ಸಂಪರ್ಕ ರಸ್ತೆಗಳನ್ನು ಕೂಡಿಸಲು ಹಾಗೂ ರಸ್ತೆ ವಿಸ್ತರಣೆಗೂ ಕಾಡು ನೆಲಸಮವಾಗುತ್ತಿದೆ.  ನಗರ ಕೇಂದ್ರಗಳಲ್ಲಿರುವ ಮರಗಿಡಗಳ ಎಲೆ ಹೂವು ತರಗು ಉದುರಿ ಬಿದ್ದರೂ ಕಾರ್ಪೊರೇಷನ್, ಮುನಿಸಿಪಾಲಿಟಿಯವರು ಗುಡಿಸಿ ಬೆಂಕಿ ಕೊಡುತ್ತಾರೆ. ಪ್ಲಾಸ್ಟಿಕ್ ಪೇಪರ್, ನೀರಿನ ಬಾಟಲಿ, ಪ್ಲಾಸ್ಟಿಕ್‌ ಲೋಟದಂತಹ ವಸ್ತುಗಳು ಎಲ್ಲೆಂದರಲ್ಲಿ ಚೆಲ್ಲಾಡುತ್ತಿರುತ್ತವೆ.

ಮಳೆ ಬಂದರೂ ನೆಲ ನೀರುಣ್ಣಲು ಅವಕಾಶವೆಲ್ಲಿ? ನಗರಗಳ ಫುಟ್‌ಪಾತ್‌ಗಳಿಗೂ ಸಿಮೆಂಟ್ ಚಪ್ಪಡಿಗಳನ್ನು ಹಾಸಿ, ಬದಿಯ ಗಿಡಮರಗಳಿಗೆ ಒಂದು ಹನಿ ನೀರೂ ಇಂಗದಂತೆ ಮಾಡಲಾಗುತ್ತಿದೆ. ಎಲ್ಲಿ ನೋಡಿದರೂ ಕಾಂಕ್ರೀಟ್‌ಮಯ.  ಇಂತಲ್ಲಿ ಹುಲ್ಲು ಗರಿಕೆಯೂ ಮೊಳೆಯುವುದಿಲ್ಲ.  ಇನ್ನು ಮರಗಿಡಗಳಾದರೂ ಹೇಗೆ ಬದುಕಿ ಉಳಿದಾವು? ಹೆದ್ದಾರಿ ಉದ್ದಕ್ಕೂ ಹಿಂದೆ ಪುಣ್ಯಾತ್ಮರು ಹಾಕಿ ಬೆಳೆಸಿದ್ದ ಬೃಹತ್ ಗಾತ್ರದ ಮಾವು, ಬೇವು, ಆಲ, ಅರಳಿ, ಹಿಪ್ಪೆ, ಅತ್ತಿ, ಹುಣಿಸೆ, ಹಲಸು, ನೇರಳೆ, ಬೇಲ ಮುಂತಾದ ಸ್ಥಳೀಯ ಜಾತಿಯ ವೃಕ್ಷಗಳು ಬೆಳೆದು ಮುಗಿಲು ಮುಟ್ಟುವಂತಿದ್ದವು. ಈಗ ರಸ್ತೆ ವಿಸ್ತರಣೆಗಾಗಿ  ಅವೆಲ್ಲ ನೆಲಸಮವಾಗಿವೆ.  ಪರಿಣಾಮ ಏನು?  ಮಳೆ ಇಲ್ಲ, ನೀರಿಲ್ಲ, ಬೇಗೆ ತಪ್ಪಲಿಲ್ಲ.

ಇಂಥದ್ದರಲ್ಲಿ ಮಲೆನಾಡಿನ ಶೃಂಗೇರಿಗೆ ತನ್ನ ಜೆಸಿಬಿ ಯಂತ್ರ ಹಾಗೂ ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ಹೋಗಿರುವ ಶಿರಾ ಸೀಮೆಯ ನಮ್ಮ ವ್ಯಕ್ತಿಯೊಬ್ಬರು ಹೇಳುತ್ತಿರುವ ಸುದ್ದಿ ಕೇಳಿದರೆ ಯಾರಿಗಾದರೂ  ನಿದ್ದೆ ಹತ್ತಲಾರದು. ತುಂಗಾ ತೀರದ ನೀರಿನ ತಗ್ಗುಗಳಿಂದ 10- 20 ಕಿ.ಮೀ. ದೂರವಿರುವ ಅಡಿಕೆ ತೋಟಗಳಿಗೆ ಪ್ಲಾಸ್ಟಿಕ್ ಪೈಪ್ ಹಾಕಿ ಏರ್‌ಔಟ್ ಮಾಡಿ ನೀರು ಹಾಯಿಸುತ್ತಿದ್ದಾರಂತೆ ಅಲ್ಲಿ. ಅದಕ್ಕೆ ಗುಂಡಿ ತೋಡಿಕೊಡಲು ಕಳೆದ ಮೂರು ತಿಂಗಳಿನಿಂದ ಅಲ್ಲೇ ತಂಗಿರುವರಂತೆ ಇವರು.

ಮಲೆನಾಡಿನ ಅಡಿಕೆ ತೋಟಗಳಿಗೇ ಈ ಗತಿ ಬಂದಿರುವಾಗ ಇನ್ನು ಬಯಲುಸೀಮೆ ತೋಟಗಳಿಗೆ ಬೆಂಕಿ ಹಾಕದೆ ಇನ್ನೇನು ಮಾಡಲು ಸಾಧ್ಯ? ಕವಿ ಕುಮಾರವ್ಯಾಸ ‘ಬೇರು ನೀರುಂಡಾಗ ಭೂರುಹದ ಶಾಖೋಪಶಾಖೆಗಳು ತಣಿಯವೆ?’ ಎನ್ನುತ್ತಾನೆ.  ಆದರೆ ನಮ್ಮವರ ದೂರದೃಷ್ಟಿ ಇಲ್ಲದ ಯೋಜನೆಗಳಿಂದ ಈಗ ಬೇರಿಗೇ ಬೆಂಕಿ ಬಿದ್ದು ಮಳೆಯನ್ನು ಹಿಡಿದಿಡುವ ಸಸ್ಯವರ್ಗವೇ ಇಲ್ಲವಾಗುತ್ತಿದೆ.  ಒಂದು ಸುದ್ದಿಯ ಪ್ರಕಾರ, ವೆನಿಸ್ ನಗರ ಇನ್ನೇನು ಇಪ್ಪತ್ತು ವರ್ಷಗಳಲ್ಲಿ ಮುಳುಗಿ ಹೋಗುತ್ತದೆಂದು ತಿಳಿದ ಆ ಜನ  ಊರಿನ ಸುತ್ತ 60 ಅಡಿ ಎತ್ತರದ ಗೋಡೆ ಕಟ್ಟಲು ಉಪಕ್ರಮಿಸಿದ್ದಾರಂತೆ.  ಪ್ರವಾಹಗಳನ್ನು ನಿಯಂತ್ರಿಸುವ ಹಸಿರು ಕಾಡು ಇಲ್ಲವಾದರೆ ವೆನಿಸ್ ಮಾತ್ರವಲ್ಲ, ಸಮುದ್ರ ತೀರದ ಅನೇಕ ನಗರಗಳು ಇನ್ನು ಹತ್ತಿಪ್ಪತ್ತು ವರ್ಷಗಳಲ್ಲಿ ಮುಳುಗಿ ಬಿಡುವುದರಲ್ಲಿ ಯಾವ ಅನುಮಾನವೂ ಇಲ್ಲ.

ಇದಕ್ಕೆ ಪೂರಕವಾಗಿ ಇನ್ನೊಂದು ಸುದ್ದಿ ಇದೆ.  ಅದೆಂದರೆ, ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು, ಅಲಾಸ್ಕಾ ಹಿಮವಲಯದಲ್ಲಿ ತೈಲ ತೆಗೆಯಲು ಅನುಮತಿ ಕೊಟ್ಟಿದ್ದಾರಂತೆ. ಇದರಿಂದ ನೈಸರ್ಗಿಕ ಏರುಪೇರು ಉಂಟಾಗಲಿದೆ.  ಇನ್ನು ಓಜೋನ್ ಪದರ ಬಿರುಕು ಬಿಟ್ಟು ಬಿಸಿಲ ಧಗೆ ಜೀವಕೋಟಿಯನ್ನು  ಸುಟ್ಟು ಹಾಕುತ್ತಿದೆ. ಅಂತೂ ಅತ್ತ ಜಲಪ್ರಳಯ; ಇತ್ತ ಅಗ್ನಿ ಪ್ರಳಯ. ಆದರೆ ಇರುವುದೊಂದೇ ಭೂಮಿ, ಅಡಗಲು ಸ್ಥಳವೆಲ್ಲಿ? ನಿಸರ್ಗದ ಬಗೆಗಿನ ನಮ್ಮ ಅಜ್ಞಾನಕ್ಕೆ ಕ್ಷಮೆಯೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT