ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯಾಂಗ್ಸ್‌’ನ ಚೀನಾ ಖಾದ್ಯ...

Last Updated 31 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಫ್ರೇಜರ್‌ಟೌನ್‌ನ ‘ವ್ಯಾಂಗ್ಸ್‌ ಕಿಚನ್’ ರೆಸ್ಟೊರೆಂಟ್  ಚೈನೀಸ್‌ ತಿನಿಸುಗಳನ್ನು ಭಾರತೀಯ ಸ್ವಾದದೊಂದಿಗೆ ಗ್ರಾಹಕರಿಗೆ ಉಣಬಡಿಸುತ್ತಿದೆ. ಇಲ್ಲಿ ಸಿಗುವುದು ಬಹುತೇಕ ಸಸ್ಯಾಹಾರಿ ಖಾದ್ಯಗಳು. ಆದರೆ ಅವುಗಳನ್ನು ಮಾಂಸಾಹಾರಿ ಹಾಗೂ ಸೀಫುಡ್‌ ಕಾಂಬಿನೇಷನ್‌ನಲ್ಲಿ ಆರ್ಡರ್‌ ಮಾಡಬಹುದು. ಉದಾಹರಣೆಗೆ, ‘ಹನಿ ಗಾರ್ಲಿಕ್‌’ ಚಿಕನ್‌, ಕುರಿಮಾಂಸ, ಮೀನು ಹಾಗೂ ಸಿಗಡಿಯಲ್ಲೂ ಮಾಡಿಕೊಡುತ್ತಾರೆ. 

ಅದೇ ರೀತಿ ಥಾಯ್‌ ರೋಸ್ಟೆಡ್‌ ಚಿಲ್ಲಿ, ರೆಡ್‌ ಅಂಡ್‌ ಗ್ರೀನ್‌ ಪೆಪ್ಪರ್‌, ಮಂಚೂರಿಯನ್‌ಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು. ಗ್ರಾಹಕರಿಗೆ ಯಾವುದು ಇಷ್ಟವೋ ಆ ವಿಧಾನದಲ್ಲಿ ಸಿದ್ಧಪಡಿಸಿ ಸರ್ವ್ ಮಾಡುವುದು ಇಲ್ಲಿನ ವಿಶೇಷ. ಉಪ್ಪು, ಹುಳಿ, ಕಾರ ಎಷ್ಟು ಬೇಕೆಂದು ನಾವೇ ತಿಳಿಸಿದರೆ ಅದಕ್ಕೆ ಅನುಗುಣವಾಗಿ ಚೈನೀಸ್‌ ತಿನಿಸುಗಳನ್ನು ತಯಾರಿಸಿ ಬಡಿಸುತ್ತಾರೆ.

ವ್ಯಾಂಗ್ಸ್ ರೆಸ್ಟೊರೆಂಟ್‌ನಲ್ಲಿ 15 ಬಗೆಯ  ಸಸ್ಯಾಹಾರಿ ಹಾಗೂ ಮಾಂಸಾಹಾರಿ ಸೂಪ್‌ಗಳು ಲಭ್ಯ. ಸಾಮಾನ್ಯ ಟೊಮೆಟೊ ಸೂಪ್‌ಗಿಂತಲೂ ಭಿನ್ನ ರುಚಿಯ ಈ ಸೂಪ್‌ಗಳು ಆರೋಗ್ಯಕರವೂ ಹೌದು.

ಸೂಪ್‌ನೊಳಗಿನ ಗರಿಗರಿ ನೂಡಲ್ಸ್‌  ರುಚಿ ಇಮ್ಮಡಿಯಾಗುವಂತೆ ಮಾಡುತ್ತವೆ. ಹಾಟ್ ಅಂಡ್ ಸೋರ್ ಸೂಪ್, ಸ್ವೀಟ್ ಕಾರ್ನ್ ಸೂಪ್, ಮ್ಯಾನ್‌ಶಾವ್ ಸೂಪ್, ಡ್ರ್ಯಾಗನ್ ಸೂಪ್, ವ್ಯಾಂಟನ್ ನೂಡಲ್ ಸೂಪ್, ಚಿಕನ್ ಹಾಂಗ್‌ಕಾಂಗ್ ನೂಡಲ್ಸ್‌ ಪ್ರಮುಖ ಸೂಪ್‌ಗಳು.

ಸೂಪ್‌ನ ನಂತರ ಸ್ಟಾರ್ಟರ್‌ಗಳ ಸರದಿ. ಮೊಮೊ, ವೆಜ್‌ ಸ್ಪ್ರಿಂಗ್ ರೋಲ್, ಫ್ರೆಂಚ್‌ ಫ್ರೈಗಳ ಜೊತೆಗೆ ವ್ಯಾಂಗ್‌ನ ವಿಶೇಷ ಥಾಯ್ ರೋಸ್ಟೆಡ್ ಚಿಲ್ಲಿ, ಹೂಕೋಸು ಸಿಹಿ ಸಾಸ್, ಮೆಣಸಿನ ಕಾರ ಬಳಸಿ ಮಾಡಿದ ಥಾಯ್ ಪಾಯ್ ಆಹಾರಪ್ರಿಯರಿಗೆ ಇಷ್ಟವಾಗಲಿವೆ.

ಸಿಗಡಿಯನ್ನು ಹಿಟ್ಟಿನಲ್ಲಿ ಅದ್ದಿ ಕರಿದ  ‘ಗೋಲ್ಡನ್ ಫ್ರೈ’ ಸ್ಟಾರ್ಟರ್‌ನಲ್ಲಿ   ಹೆಚ್ಚು ರುಚಿಯಾದ ತಿನಿಸಾಗಿದೆ. ‘ಸಿಂಗಪುರ್ ಚಿಲ್ಲಿ’ ಗ್ರಾಹಕರ ಮೆಚ್ಚಿನ ಸ್ಟಾರ್ಟರ್‌ ಎನ್ನುವುದು ವ್ಯಾಂಗ್ಸ್‌ ಕಿಚನ್‌ ಸಿಬ್ಬಂದಿಯ ಮಾತು. ಸಸ್ಯಾಹಾರಿ, ಪನೀರ್, ಮೀನು, ಸಿಗಡಿ, ಕುರಿ ಮಾಂಸ ಸೇರಿದಂತೆ 20 ಬಗೆಯ ಸ್ಟಾರ್ಟರ್‌ಗಳಿವೆ.

ಚೈನೀಸ್ ರೆಸ್ಟೊರೆಂಟ್ ಆದ ಕಾರಣ ನೂಡಲ್ಸ್‌ ವ್ಯಾಂಗ್ಸ್‌ನ ಬಹು ಮುಖ್ಯ ಖಾದ್ಯ. ಹಕ್ಕಾ ನೂಡಲ್ಸ್‌, ಶೇಜ್ವಾನ್ ನೂಡಲ್ಸ್‌, ಹಸಿ ಮೆಣಸಿನಲ್ಲಿ ನೆನಸಿದ ನೂಡಲ್ಸ್‌ ಅನ್ನು ಶುಂಠಿ ಪೇಸ್ಟ್‌ನೊಂದಿಗೆ ವಿವಿಧ ತರಕಾರಿಗಳೊಂದಿಗೆ ಅಥವಾ ಮಾಂಸಾಹಾರಿಗಳಾಗಿದ್ದರೆ ಅವರಿಷ್ಟದ ಮಾಂಸದೊಂದಿಗೆ ಫ್ರೈ ಮಾಡಿ ‘ಚಿಲ್ಲಿ ಗಾರ್ಲಿಕ್ ನೂಡಲ್ಸ್‌’ ಕೊಡುತ್ತಾರೆ.

‘ವ್ಯಾಂಗ್ಸ್‌ ಕಿಚನ್‌ನ ಮೇನ್‌ ಕೋರ್ಸ್‌ನಲ್ಲಿ ಚೈನೀಸ್ ತಿನಿಸುಗಳದ್ದೇ ಪಾರುಪತ್ಯ. ‘ಚಿಲ್ಲಿ ಓಯ್‌ಸ್ಟರ್’, ‘ಕುಂಗ್‌ಫೂ ಸ್ಟೈಲ್’, ‘ಹಾಂಕಾಂಗ್ ಸ್ಟೈಲ್’, ‘ಎಕ್ಸೋಟಿಕ್ ಪೆಕಿಂಗ್ ಸ್ಟೈಲ್‘, ‘ಶೇಜ್ವಾನ್ ಹುನನ್ ಸ್ಟೈಲ್’ ಇನ್ನೂ ಹಲವು ಚೀನಾ ಶೈಲಿಯ ಖಾದ್ಯಗಳು ರುಚಿ ಮೊಗ್ಗುಗಳನ್ನು ಅರಳಿಸುತ್ತವೆ. ರೈಸ್‌ ನೂಡಲ್ಸ್‌ ಇಲ್ಲಿನ ಸಿಗ್ನೇಚರ್ ತಿನಿಸು’ ಎನ್ನುತ್ತಾರೆ ರೆಸ್ಟೊರೆಂಟ್‌ ವ್ಯವಸ್ಥಾಪಕ ಅರುಣ್‌ ಟಿ.

ಮರಾಠಿ ಮೊಗ್ಗು,  ಸಿಹಿ–ಕಾರ ಸಾಸ್ ಬಳಸಿ ಮಂಗೋಲಿಯನ್ ಶೈಲಿಯಲ್ಲಿ ತಯಾರಿಸಿದ ಕುರಿಮರಿ ಮಾಂಸದ ಖಾದ್ಯ, ಲ್ಯಾಂಬ್ ಸ್ಪ್ರಿಂಗ್ ಆನಿಯನ್, ಕ್ರಿಸ್ಪಿ ಚಿಲ್ಲಿ ಲ್ಯಾಂಬ್, ಶ್ರೆಡ್ಡೆಡ್ ಲ್ಯಾಂಬ್‌ಗಳು   ಮಾಂಸದ ಮೆನುವಿನ ಪ್ರಮುಖ ಖಾದ್ಯಗಳು.

ಸೀ ಫುಡ್ ಪ್ರಿಯರಿಗೆ, ಮ್ಯಾಂಡರಿನ್ ಫಿಶ್‌, ಫಿಶ್‌ ವಿತ್ ಬಟರ್ ಪೆಪ್ಪರ್, ವೋಲ್ಕ್ಯಾನೊ ಪ್ರಾನ್, ಫುಕೆಟ್ ಫಿಶ್‌ ಇಲ್ಲಿ ಲಭ್ಯ. ಖಾದ್ಯಗಳ ಜತೆಗೆ ರುಚಿಕರ ಪೇಯಗಳು ವ್ಯಾಂಗ್‌ನಲ್ಲಿ ದೊರೆಯುತ್ತವೆ. ಬ್ಲೂ ಲಗೂನ್, ಲೆಮೊನೇಡ್, ಜಿಂಜರ್ ಕೋಲಾ, ಮಸಾಲಾ ಲೆಮೊನೇಡ್, ಲೈಮ್ ಸೋಡಾಗಳು ಊಟದ ಜತೆಗೆ ಹೊಟ್ಟೆ ತಣಿಸುತ್ತವೆ.

ಎಂಟು ವರ್ಷಗಳ ಅನುಭವ
ನೇಪಾಳದ ಕಿರಣ್‌ ವ್ಯಾಂಗ್ಸ್‌ ಕಿಚನ್‌ನ ಪ್ರಮುಖ ಬಾಣಸಿಗ.  ಇವರು 8 ವರ್ಷಗಳಿಂದ ಇಲ್ಲಿ ಬಾಣಸಿಗರಾಗಿದ್ದಾರೆ. ಈ ಮುಂಚೆ ಚೆನ್ನೈ, ಗೋವಾ ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ.

‘ಅಡುಗೆ ಕಲೆ ನೋಡಿ ಕಲಿತದ್ದು, ಇಷ್ಟು ವರ್ಷಗಳ ಅನುಭವದಲ್ಲಿ ವಿಭಿನ್ನ ಶೈಲಿಯ ಅಡುಗೆ  ಮಾಡುಡುವುದನ್ನು ಕಲಿತಿದ್ದೇನೆ. ಕೆಲವು ಹೊಸ ರುಚಿಗಳ ಅನ್ವೇಷಣೆಯನ್ನೂ ಮಾಡಿದ್ದೇನೆ’ ಎನ್ನುತ್ತಾರೆ ಕಿರಣ್.

ರೆಸ್ಟೊರೆಂಟ್‌: ‘ವ್ಯಾಂಗ್ಸ್‌ ಕಿಚನ್’
ವಿಶೇಷ: ಚೀನಾ ಆಹಾರ
ಸಮಯ: ಬೆಳಿಗ್ಗೆ 11.30 ರಿಂದ ರಾತ್ರಿ 10.30
ಒಬ್ಬರಿಗೆ: ₹600
ಸ್ಥಳ: ಕ್ಲಾರ್ಕ್ಸ್‌ ರಸ್ತೆ, ಕ್ಲಾರೆನ್ಸ್ ಶಾಲೆ ಹತ್ತಿರ, ಫ್ರೇಜರ್‌ಟೌನ್
ಸ್ಥಳ ಕಾಯ್ದಿರಿಸಲು: 080–39253925

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT