ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫತ್ವಾ’ ಎಂದರೆ ‘ಅಭಿಪ್ರಾಯ’ ಎಂದಷ್ಟೇ ಅರ್ಥ

Last Updated 31 ಮಾರ್ಚ್ 2017, 18:46 IST
ಅಕ್ಷರ ಗಾತ್ರ

ಅನೇಕ ಸಲ ಮೌಢ್ಯ ಬೆಳೆಯುವುದೇ ಅರೆಸತ್ಯವನ್ನು ಮತ್ತೆ ಮತ್ತೆ ಹೇಳುವುದರಿಂದ. ಇನ್ನು ಸತ್ವಯುತವಾದ ಮಾಧ್ಯಮಗಳು ಈ ಕೆಲಸದಲ್ಲಿ ಕೈಜೋಡಿಸಿದವು ಎಂದರೆ ಮುಗಿಯಿತು ಕತೆ. ಇತ್ತೀಚೆಗೆ ಕರ್ನಾಟಕ ಮತ್ತು ದೂರದ ಅಸ್ಸಾಂ ರಾಜ್ಯದ ಇಬ್ಬರು ಬಾಲಕಿಯರು ಹಾಡಿದ್ದನ್ನು ನೆಪವಾಗಿಟ್ಟುಕೊಂಡು ಮುಖ್ಯವಾಗಿ ಟಿ.ವಿ. ವಾಹಿನಿಗಳಲ್ಲಿ ಮೌಢ್ಯವನ್ನು ವ್ಯಾಪಕವಾಗಿ ಬಿತ್ತರಿಸಲಾಗುತ್ತಿದೆ. ಮಾಧ್ಯಮದವರಿಗಷ್ಟೇ ಅಲ್ಲ, ‘ಫತ್ವಾ’ಗಳನ್ನು ‘ಹೊರಡಿಸುವ’ ಸಂಸ್ಥೆಗಳಿಗೆ, ಅವುಗಳಿಂದ ಆತಂಕಕ್ಕೆ ಒಳಗಾಗುವ ವ್ಯಕ್ತಿಗಳಿಗೆ ತಮ್ಮ ತಮ್ಮ ವ್ಯಾಪ್ತಿ ಅರ್ಥವಾಗಲಿ ಎಂದು ಈ ಕೆಳಗಿನ ಸಂಗತಿಗಳನ್ನು ಬರೆಯಲಾಗಿದೆ.

‘ಫತ್ವಾ’ ಎಂಬುದು ಅರೇಬಿಕ್ ಭಾಷೆಯ ಪದ. ಇದರ ಅರ್ಥ ‘ಅಭಿಪ್ರಾಯ’ ಅಂತ. ‘ಅಫ್ತಾ’ ಎಂದರೆ ‘ಅಭಿಪ್ರಾಯವನ್ನು ನೀಡುವುದು’ ಎಂದರ್ಥ.  ಸಾಮಾನ್ಯವಾಗಿ ಈ ಪದವನ್ನು ಧಾರ್ಮಿಕ ಅಭಿಪ್ರಾಯಗಳ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಇದರಲ್ಲಿ ಅಸಹನೀಯವಾದದ್ದಾಗಲೀ, ಭಯ ಹುಟ್ಟಿಸುವಂಥಾದ್ದಾಗಲೀ ಏನೂ ಇಲ್ಲ.

ಸಾಂವಿಧಾನಿಕ ಕಾನೂನಿನ ಬಗ್ಗೆ ಸರ್ಕಾರಕ್ಕೆ ಅನುಮಾನ ಬಂದಾಗ ಹೆಸರಾಂತ ಸಂವಿಧಾನ ತಜ್ಞರ ಅಭಿಪ್ರಾಯವನ್ನು ಪಡೆಯುವುದಿಲ್ಲವೇ? ಅದು ಲೀಗಲ್ ಒಪಿನಿಯನ್, ಇದು ರಿಲಿಜಿಯಸ್ ಒಪಿನಿಯನ್. ಯಾವುದಾದರೂ ಆಚರಣೆ, ನಂಬಿಕೆ ಇತ್ಯಾದಿಗಳ ಕುರಿತು ಮುಸ್ಲಿಂ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಅನುಮಾನ ಉಂಟಾದಾಗ ಅದರ ಕುರಿತು ಇಸ್ಲಾಮಿನ ಧಾರ್ಮಿಕ ವಿದ್ವಾಂಸರಿಂದ ‘ಫತ್ವಾ’ವನ್ನು ಕೇಳಲಾಗುತ್ತದೆ. ಅವರು ಹೇಳುವ ಅಭಿಪ್ರಾಯಕ್ಕೆ ಮನ್ನಣೆ ಇರುತ್ತದೆ. ಏಕೆಂದರೆ ಅವರು ಅದನ್ನು ತಮ್ಮ ಸ್ವಂತ ಮನಸ್ಸಿಗೆ ಬಂದ ಹಾಗೆ ಹೇಳುವುದಿಲ್ಲ; ಬದಲಿಗೆ ಇಸ್ಲಾಮಿನ ಮೂಲ (ಸಂಹಿತೆ) ಆಕರಗಳಾದ ಪವಿತ್ರ ಕುರಾನ್, ಪ್ರವಾದಿ ಮುಹಮ್ಮದರ ವಿಚಾರ, ಆಚಾರ, ವಚನ ಇತ್ಯಾದಿಗಳನ್ನು ಒಳಗೊಂಡ ಸುನ್ನಾ ಮತ್ತು ಹದೀಸ್ ಮತ್ತು ನಿಗದಿತ ಸಂಗತಿಯ ಕುರಿತು ಹಿಂದಿನ ಪೀಳಿಗೆಯ ವಿದ್ವಾಂಸರ ಒಮ್ಮತ ಇವುಗಳನ್ನು ಆಧರಿಸಿಯೇ ಹೇಳುತ್ತಾರೆ.  ಈ ಮೂರೂ ಆಕರಗಳಿಂದ ಉತ್ತರ ದೊರಕದೇ ಇದ್ದರೆ ಆ ಕುರಿತು ಇಸ್ಲಾಂ ವಿದ್ವಾಂಸರು ‘ಇಜ್ತಿಹಾದ್’ ನಡೆಸುತ್ತಾರೆ; ಎಂದರೆ ತಮ್ಮ ಧಾರ್ಮಿಕ ಅರಿವನ್ನು ಪ್ರಾಮಾಣಿಕವಾಗಿ ಆಧರಿಸಿ ತಮ್ಮ ಅತ್ಯುತ್ತಮ ವಿವೇಚನೆಯ ಮೂಲಕ ಉತ್ತರವನ್ನು ಕಂಡುಕೊಳ್ಳುತ್ತಾರೆ.

ಎಷ್ಟೋ ಸಲ ಯಾವುದಾದರೂ ಒಂದು ಸಂಗತಿಯ ಕುರಿತು ವಿದ್ವಾಂಸರಲ್ಲಿಯೇ ಭಿನ್ನಾಭಿಪ್ರಾಯವೂ ಇದ್ದು ಒಂದೇ ಪ್ರಶ್ನೆಯ ಕುರಿತು ವಿಭಿನ್ನ ‘ಫತ್ವಾ’ಗಳು ಇರುವುದೂ ನಿಜ. ವಿದ್ವಾಂಸರು ತಾವು ತಮ್ಮ ಅಭಿಪ್ರಾಯಕ್ಕೆ ಪೂರಕವಾದ ಪುರಾವೆಗಳನ್ನು ಮೂಲ ಆಕರಗಳಿಂದ ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದರಲ್ಲಿಯೂ ಹಲವು ವಿಧಾನಗಳು ಪ್ರಚಲಿತ ಇವೆ. ಅಲ್ಲದೇ ಇಸ್ಲಾಮಿನಲ್ಲಿ ನಾಲ್ಕು ‘ಸ್ಕೂಲ್ಸ್ ಆಫ್ ಥಾಟ್ಸ್’ (ಪಂಥಗಳು) ಇವೆ. ಇವುಗಳಲ್ಲಿ ಕೆಲವು ವಿಚಾರಗಳ ಕುರಿತು ಸೂಕ್ಷ್ಮವಾದ ವ್ಯತ್ಯಾಸಗಳು ಇವೆ. ಇಷ್ಟೆಲ್ಲಾ ವಿಧಿವಿಧಾನಗಳಿರುವುದರಿಂದ ಯಾರು ಯಾರೋ ‘ಫತ್ವಾ’ (ಹೊರಡಿಸುವುದಲ್ಲ) ನೀಡಲು ಸಾಧ್ಯವಿಲ್ಲ.

ಇನ್ನು ಇಂಥ ಫತ್ವಾ ಎಷ್ಟರಮಟ್ಟಿಗೆ ಕಾನೂನುಬದ್ಧ ಎಂಬ ಪ್ರಶ್ನೆ. ಸಂಸ್ಥೆಗಳು ನೀಡುವ ಫತ್ವಾಗಳು ಒಂದು ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯಲ್ಲಿ ವ್ಯಾಪಕ ಹಾನಿಯನ್ನು ಉಂಟುಮಾಡದಂತೆ ತಡೆಯಲು ಮುಸ್ಲಿಂ ರಾಷ್ಟ್ರಗಳಲ್ಲಿ ಈ ಕುರಿತು ಒಂದು ಒಮ್ಮತದ ಒಪ್ಪಂದವಿದೆ. ಅದರ ಪ್ರಕಾರ ಫತ್ವಾ, ಅದನ್ನು ನೀಡಿದ ವ್ಯಕ್ತಿಗಷ್ಟೇ ಬೈಂಡಿಂಗ್ (ಅನ್ವಯ). ಸೌದಿ ಅರೇಬಿಯಾದ ನ್ಯಾಯಾಂಗ ಇಲಾಖೆಯ ಉಪಸಚಿವ ಶೇಖ್ ಅಬ್ದುಲ್ ಮೊಹ್ಸೆನ್ ಅಲ್-ಒಬೆಯ್ಕನ್ ಅವರು 2006ರಲ್ಲಿ ‘ಆಷರ್ಕ್ ಅಲ್-ಅವ್ಸತ್’ ಎಂಬ ಅರೇಬಿಕ್ ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ಇದನ್ನು ಒತ್ತಿ ಹೇಳಿದ್ದಾರೆ. ಆ ವರ್ಷ ಏಪ್ರಿಲ್ ತಿಂಗಳಲ್ಲಿ ‘ನಿಕಾಹ್ ಅಲ್-ಮಿಸಿಯಾರ್’ ಎಂಬ ಒಂದು ಬಗೆಯ ವಿವಾಹದ ಕುರಿತು ಇಸ್ಲಾಮಿಕ್ ಫಿಖ್ ಅಕಾಡೆಮಿ ಎನ್ನುವಂಥ ಧಾರ್ಮಿಕ ಸಂಸ್ಥೆಯೊಂದು ನೀಡಿದ ಫತ್ವಾದ (ಅಭಿಪ್ರಾಯ) ಕಾನೂನು ಸಿಂಧುತ್ವದ ಬಗ್ಗೆ ನಡೆದ ಚರ್ಚೆಯಲ್ಲಿ ಅವರು ಈ ಮಾತನ್ನು ಹೇಳಿದ್ದರು.

ಇದರ ಹೊರತಾಗಿಯೂ ಕೆಲವು ಧಾರ್ಮಿಕ ಸಂಸ್ಥೆಗಳು ತಾವು ನೀಡಿದ ಫತ್ವಾಗಳು ಕಡ್ಡಾಯ ಅಥವಾ ಹೆಚ್ಚೂಕಡಿಮೆ ಕಡ್ಡಾಯ ಎನ್ನುವ ನಿಲುವನ್ನು ಪ್ರತಿಪಾದಿಸಲು ನೋಡುತ್ತವೆ. ಇದು ತಪ್ಪು. ಭಾರತದ ಸುಪ್ರೀಂ ಕೋರ್ಟ್‌ 2014ರ ಜುಲೈನಲ್ಲಿ, ‘ಶರಿಯಾ ನ್ಯಾಯಾಲಯಗಳು ಅಥವಾ ಮಫ್ತಿ (ಇಸ್ಲಾಮಿ ವಿದ್ವಾಂಸರು) ನೀಡಿದ ಫತ್ವಾಗಳಿಗೆ ಯಾವುದೇ ಕಾನೂನಾತ್ಮಕ ಮಾನ್ಯತೆ ಇಲ್ಲ; ಫತ್ವಾದ ಉಲ್ಲಂಘನೆ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಅಪರಾಧವಾಗುವುದಿಲ್ಲ’ ಎಂದು ತೀರ್ಪು ನೀಡಿದೆ. ಚಂದ್ರಮೌಳಿ ಕೆ. ಪ್ರಸಾದ್ ಮತ್ತು ಪಿನಾಕಿ ಸಿ. ಘೋಸೆ ಅವರ ನ್ಯಾಯಪೀಠವು, ‘ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿ ವೈಯಕ್ತಿಕ ಸಂಗತಿಗಳ ಕುರಿತು ಇಂಥ ಧಾರ್ಮಿಕ ಆಧಾರದ ಅಭಿಪ್ರಾಯಗಳನ್ನು ಹೇರುವುದು ಕಾನೂನುಬಾಹಿರ. ಮೊಗಲ್ ಅಥವಾ ಬ್ರಿಟಿಷ್ ಆಳ್ವಿಕೆಯಲ್ಲಿ ಫತ್ವಾದ ಸ್ಥಾನಮಾನ ಏನೇ ಇದ್ದರೂ ಸ್ವತಂತ್ರ ಭಾರತದಲ್ಲಿ ಅದಕ್ಕೆ ಯಾವುದೇ ಮನ್ನಣೆ ಇಲ್ಲ’ ಎಂದು ತೀರ್ಪಿತ್ತಿದೆ.

ಫತ್ವಾದ ಕುರಿತು ಸರಿಯಾದ ಅರಿವು ಇಲ್ಲದಿರುವುದೇ ಇವತ್ತು ಅದರ ದುರುಪಯೋಗಕ್ಕೆ ಕಾರಣ. ವಿವಿಧ ವೃತ್ತಿ, ಕಲೆ, ಕಸುಬುಗಳನ್ನು ಅನುಸರಿಸುತ್ತಿರುವ ಭಾರತೀಯ ಮುಸ್ಲಿಮರ ದೈನಂದಿನ ಬದುಕಿನ ವೈಯಕ್ತಿಕ ವಿಚಾರಗಳ ಕುರಿತು ತಾವು ನೀಡುವ ಫತ್ವಾಗಳಿಗೆ ಯಾವುದೇ ದೇಶದಲ್ಲಿ ಕಾನೂನಾತ್ಮಕ ಸಿಂಧುತ್ವ ಇಲ್ಲ ಎಂದು ಗೊತ್ತಾದರೆ ಇಂಥ ಸಂಸ್ಥೆಗಳು ತಮ್ಮ ಮಿತಿಯಲ್ಲಿಯೇ ತಮ್ಮ ಅಭಿಪ್ರಾಯಗಳನ್ನು ಸೂಚಿಸುವ ಹಕ್ಕನ್ನೂ ಉಳಿಸಿಕೊಳ್ಳುತ್ತವೆ. ಯಾವುದೇ ಧರ್ಮವನ್ನು ಪ್ರತಿಪಾದಿಸುವ, ಅನುಸರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಅನುಚ್ಛೇದ 25ರಲ್ಲಿ ಭಾರತೀಯ ಸಂವಿಧಾನ ನೀಡಿದೆ. ಆದರೆ, ‘ಇದರಿಂದ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯ ಹಾಗೂ ಇತರರ ಯಾವುದೇ ಬಗೆಯ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬರುವಂತಿಲ್ಲ’ ಎಂಬ ಪ್ರತಿಬಂಧವನ್ನೂ ಹೇರುತ್ತದೆ.

ಈ ಪ್ರಶ್ನೆ ಈಗ ಬಂದಿದ್ದು ಅಸ್ಸಾಮಿನ ನಾಹೀದ್ ಅಫ್ರಿನ್ ಮತ್ತು ಕರ್ನಾಟಕದ ಸುಹಾನಾ ಸಯದ್ ಎಂಬ ಇಬ್ಬರು ಬಾಲೆಯರು ರಂಗದ ಮೇಲೆ ಹಾಡಿದ್ದು ವಿವಾದಕ್ಕೆ ಒಳಗಾದ ಸಂದರ್ಭದಲ್ಲಿ. ಇಬ್ಬರೂ ಮುಸ್ಲಿಂ ಹುಡುಗಿಯರಾದರೂ ಇವೆರಡೂ ಪ್ರಕರಣಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ.  ನಾಹೀದ್ ಎಲ್ಲರೂ ಧರಿಸುವ ರೀತಿಯ ಉಡುಪನ್ನು ತೊಟ್ಟು ಸಿನಿಮಾ ಹಾಡುಗಳನ್ನು ಹಾಡಿದಳು. ಆದರೆ ಸುಹಾನಾ, ಮುಸ್ಲಿಂ ಮತದ ದ್ಯೋತಕವೇ ಆಗಿರುವ ಬುರ್ಖಾ ಮತ್ತು ಹಿಜಾಬನ್ನು ತೊಟ್ಟು ಶ್ರೀನಿವಾಸನ ಆರಾಧನೆಯ ಭಕ್ತಿಗೀತೆಯನ್ನು ಹಾಡಿದಳು. ಇದು ಕೆಲವು ಧರ್ಮನಿಷ್ಠ ಮುಸ್ಲಿಮರಿಗೆ ಕಿರಿಕಿರಿ ಉಂಟುಮಾಡಿತು. ಸುಹಾನಾಗೆ ತಾನು ಶ್ರದ್ಧಾವಂತ ಮುಸ್ಲಿಂ ಮಹಿಳೆಯೆಂದು ಗುರುತಿಸಿಕೊಳ್ಳುವುದು ಬೇಕಿದ್ದರೆ ಅದಕ್ಕೆ ಸಂಬಂಧವಾದ ಭಾವನೆಗಳನ್ನೂ ಅನುಸರಿಸಬೇಕಿತ್ತು. ‘ಮುಸ್ಲಿಮರು ಕೇವಲ ಅಲ್ಲಾಹನ ಆರಾಧನೆಯನ್ನು ಮಾಡಬೇಕು, ಇನ್ಯಾವುದೇ ದೇವರನ್ನು ಅಲ್ಲ’ ಎಂಬುದು ಇಸ್ಲಾಂ ಅನುಸರಿಸುವ ಪಂಚ ಸೂತ್ರಗಳಲ್ಲಿ ಮೊದಲನೆಯದು ಮತ್ತು ಬಹಳ ಮಹತ್ವದ್ದು. ಈಕೆ ಅದನ್ನು ಧಿಕ್ಕರಿಸಿದ್ದಲ್ಲದೇ ಕೊನೆಯಲ್ಲಿ ತನ್ನನ್ನು ನೋಡಿ ಇತರ ಹುಡುಗಿಯರೂ ಹೀಗೆ ಮಾಡುವ ಧೈರ್ಯವನ್ನು ತಾಳಬೇಕು ಎಂದು ಬಂಡಾಯಕ್ಕೆ ಕರೆಯನ್ನೂ ಕೊಟ್ಟರು.

ಅನೇಕ ಜನ ಸಾಮಾಜಿಕ ಜಾಲತಾಣಗಳಲ್ಲಿ ಸುಹಾನಾ ಪರ ಮತ್ತು ವಿರುದ್ಧವಾಗಿ ವಾದಗಳನ್ನು ಮಂಡಿಸಿದರು, ಕೆಲವರು ಬೆದರಿಕೆಯನ್ನೂ ಒಡ್ಡಿದರು. ಆದರೆ ಯಾವ ಟಿ.ವಿ. ವಾಹಿನಿಯು ಈ ಎಲ್ಲಾ ಹಗರಣಕ್ಕೆ ಕಾರಣವಾಯಿತೋ ಅದೇ ವಾಹಿನಿಯಲ್ಲಿ ಸಂಜೆ ನಡೆದ ಚರ್ಚೆಯಲ್ಲಿ ಒಬ್ಬ ಮೌಲ್ವಿಯವರು ಹೇಳಿದ ಮಾತು ನನಗೆ ಅನುಸರಣೀಯ ಎನ್ನಿಸಿತು. ಅವರೆಂದರು, ‘ಸುಹಾನಾ ಹಾಡುವುದು ಬಿಡುವುದು ಆಕೆಗೆ ಬಿಟ್ಟಿದ್ದು, ಆಕೆಗೆ ಆ ಸ್ವಾತಂತ್ರ್ಯವಿದೆ. ಆದರೆ ಇಸ್ಲಾಮಿನಲ್ಲಿ ಅನ್ಯ ದೇವಾರಾಧನೆಗೆ ಅವಕಾಶವಿಲ್ಲ ಎಂಬುದನ್ನಷ್ಟೇ ಇಲ್ಲಿ ಹೇಳಬಯಸುತ್ತೇನೆ. ಆದರೂ ಆಕೆ ತಪ್ಪು ಮಾಡಿದಳೇ ಇಲ್ಲವೇ ಎಂಬ ನಿರ್ಧಾರವು ಅಲ್ಲಾಹಗೆ ಬಿಟ್ಟಿದ್ದು’ ಎಂದು. ಇದು ನಿಜವಾದ ಇಸ್ಲಾಮಿನ ನಿಲುವು.

ಇಂಥ ವಿಚಾರಗಳನ್ನು ವೈಭವೀಕರಿಸಿ ಇಸ್ಲಾಂ ಅನುಯಾಯಿಗಳನ್ನು ಸಾರಾಸಗಟು ‘ಮೂಲಭೂತವಾದಿಗಳು’ ಎಂಬಂತೆ ಚಿತ್ರಿಸುವುದು ಅವಿವೇಕ. ಮಾಧ್ಯಮಗಳು ತಮ್ಮ ಹೊಣೆಗೇಡಿತನದಿಂದ ಜನರಲ್ಲಿ ಒಂದಷ್ಟು ಭಾವೋದ್ವೇಗವನ್ನು ಕೆದಕಿ ಅದರ ಲಾಭವನ್ನು ತಾತ್ಕಾಲಿಕವಾಗಿ ಪಡೆಯಬಹುದು. ಆದರೆ ಇದು ಸಮುದಾಯಗಳ ಮನಸ್ಸುಗಳ ಮೇಲೆ ಮಾಯಲಾರದ ಗಾಯಗಳನ್ನು ಮಾಡುತ್ತದೆ ಎಂಬುದನ್ನು ಅರಿತರೆ ಒಳ್ಳೆಯದು.

ಇದು ನನ್ನ ‘ಫ಼ತ್ವಾ’. ಮೇಲೆ ಹೇಳಿದ ಹಾಗೆ ನಾನಷ್ಟೇ ಇದಕ್ಕೆ ಬಾಧ್ಯಸ್ಥ, ನೀವು ಒಪ್ಪದೇನೂ ಇರಬಹುದು, ಅಲ್ವಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT