ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಕೊಲೆ, ಹತ್ತತ್ತಡಿ ಜಾಗ...

Last Updated 1 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದಾಗ ತುರ್ತು ಪರಿಸ್ಥಿತಿ ಘೋಷಿಸುವ ಕಾಲದವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ಮತ್ತು ನೆಲಮಂಗಲ ತಾಲ್ಲೂಕು ಸೇರುವ ಪ್ರದೇಶದಲ್ಲಿರುವ ಗುಲಗಂಜಿ ಕೆರೆ ಬತ್ತಿರಲಿಲ್ಲ. ಆ ಕೆರೆ ತುಂಬಿ ಕೋಡಿ ಬಿದ್ದರೆ ನೀರು ಹೋಗಲು ಕೆರೆ ಏರಿಯ ಎರಡೂ ಕಡೆ ಅವಕಾಶ ಕಲ್ಪಿಸಲಾಗಿತ್ತು. ಕೆರೆಯ ಒಂದು ಬದಿ ಸನ್ಯಾಸಿಪುರ ಗ್ರಾಮ ಇದ್ದರೆ ಇನ್ನೊಂದು ಕಡೆ ಇರುವುದು ಸವತಿಪುರ ಗ್ರಾಮ. ಸವತಿಪುರ ಗ್ರಾಮದಿಂದಾಚೆಗೆ ಇರುವುದೇ ಜಿಂಕೆಮಾಳ ಗ್ರಾಮ.

ಒಂದು ದಿನ ಸವತಿಪುರದ ಇಬ್ಬರು ವಿದ್ಯಾವಂತ ಯುವಕರು ಗುಲಗಂಜಿ ಕೆರೆ ಏರಿಯ ಮೇಲೆ ಅಮಾನುಷವಾಗಿ ಕೊಲೆಗೀಡಾದರು. ಕೊಲೆ ಆರೋಪಕ್ಕೆ ಗುರಿಯಾದ ಸನ್ಯಾಸಿಪುರದ ಆರು ಮಂದಿ ಬಂಧಿತರಾಗಿ ಜೈಲಿಗೆ ಹೋದ ಎರಡೇ ತಿಂಗಳಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದು ಬೀಗುತ್ತಾ ಊರಿಗೆ ವಾಪಸಾದರು. ಇದರಿಂದ ಸವತಿಪುರದ ಜನರಿಗೆ ಕೆಂಡ ನುಂಗಿದಂತಾಯಿತು. ಪ್ರತೀಕಾರಕ್ಕಾಗಿ ಹವಣಿಸತೊಡಗಿದರು.

ಆರೋಪಿಗಳನ್ನು ಮುಗಿಸುವ ಸಂಚು ರೂಪಿಸತೊಡಗಿದರು ಗ್ರಾಮಸ್ಥರು. ಆರೋಪಿಗಳು ಇವರ ಗ್ರಾಮದ ಕಡೆ ಅಪ್ಪಿತಪ್ಪಿಯೂ ಬರುವುದಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಇನ್ನು, ಸನ್ಯಾಸಿಪುರದ ಹೊರಗೆ ಆ ಆರೂ ಮಂದಿ ಒಟ್ಟಾಗಿ ಸಿಗುವ ಸಾಧ್ಯತೆಯೂ ಇರಲಿಲ್ಲ. ಆರೋಪಿಗಳ ಚಲನವಲನಗಳ ಕುರಿತು ಮಾಹಿತಿ ಪಡೆಯಲು ಆರೋಪಿಗಳ ಗ್ರಾಮದವರನ್ನೇ ಯಾರನ್ನಾದರೂ ನೇಮಿಸಿಕೊಳ್ಳಬೇಕು ಎಂದು ಚಿಂತಿಸಿದರು. ಆದರೆ ವಿಷಯ ಬಹಿರಂಗಗೊಂಡರೆ ತಮ್ಮ ಕಥೆ ಮುಗಿದಂತೆ ಎಂದು ಸುಮ್ಮನಾದರು.

ಇಂತಿರಲು, ಜಿಂಕೆಮಾಳ ‘ಕೀಚಕ ವಧೆ’ ಎಂಬ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಸಜ್ಜಾಗುತ್ತಿತ್ತು. ನಾಟಕ ಪ್ರದರ್ಶನಕ್ಕೆ ಜಿಂಕೆಮಾಳ ಆ ಪ್ರದೇಶದಲ್ಲೇ ದೊಡ್ಡ ಹೆಸರು ಮಾಡಿತ್ತು. ಪ್ರದರ್ಶನದ ದಿನದಂದು ಸುತ್ತಮುತ್ತಲ ಗ್ರಾಮದ ಜನರು ದಂಡುದಂಡಾಗಿ ಬಂದು ಸೇರುತ್ತಿದ್ದರು. ಆರೋಪಿಗಳನ್ನು ಮುಗಿಸಲು ಇದೇ ಸುಸಮಯ ಎಂದುಕೊಂಡ ಸವತಿಪುರದ ಜನರು ನಾಟಕ ಪ್ರದರ್ಶನದ ದಿನಕ್ಕಾಗಿ ಜಿಂಕೆಮಾಳದ ಜನರಿಗಿಂತ ಹೆಚ್ಚು ಉತ್ಸುಕರಾಗಿ ಕಾದರು.

ಸವತಿಪುರದಿಂದ ಜಿಂಕೆಮಾಳಕ್ಕೆ ಇದ್ದ ರಸ್ತೆಯ ಒಂದು ಕಡೆ ಹೊಲ–ಗದ್ದೆ ಇದ್ದರೆ ಇನ್ನೊಂದು ಬದಿಗೆ ಜಾಲಿಮರಗಳ ದಿಣ್ಣೆ. ಹಾಗಾಗಿ ಜನ ಓಡಾಡಲು ಯಾವ ಕಾಲುದಾರಿಗಳೂ ಇರಲಿಲ್ಲ. ಮುಖ್ಯರಸ್ತೆಯ ಮುಖಾಂತರವೇ ಓಡಾಡಬೇಕಿತ್ತು. ಇದರಿಂದಾಗಿ ಸನ್ಯಾಸಿಪುರದ ಜನ ಜಿಂಕೆಮಾಳಕ್ಕೆ ಹೋಗಬೇಕಾದರೆ ಸವತಿಪುರದ ಮುಖಾಂತರವೇ ಹಾದು ಹೋಗಬೇಕಾದ ಅನಿವಾರ್ಯ ಇತ್ತು.

***
ನಾಟಕ ಪ್ರದರ್ಶನದ ರಾತ್ರಿ ಸುಮಾರು ಎಂಟು ಗಂಟೆ ವೇಳೆಗೆ ಜಿಂಕೆಮಾಳದ ಸುತ್ತಲಿನ ಗ್ರಾಮಗಳ ಜನ ಜಮಾಯಿಸಿದರು. ಇಡೀ ಸನ್ಯಾಸಿಪುರವೇ ಅಲ್ಲಿದ್ದುದು ಅವತ್ತಿನ ವಿಶೇಷ. ಸವತಿಪುರದಿಂದ ಹೋದವರು ಮಾತ್ರ ಅಲ್ಲಿ ಸೇರಿದ್ದ ಜನಸಮೂಹದ ಹೊರಪದರದಲ್ಲಿ ನಿಂತುಕೊಂಡು ಹದ್ದುಗಣ್ಣಿನಿಂದ ಕೊಲೆಪಾತಕರಿಗಾಗಿ ಹುಡುಕಾಡುತ್ತಿದ್ದರು. ಅವರು ಅಲ್ಲಿ ಇದ್ದುದು ಕಂಡುಬರುತ್ತಿದ್ದಂತೆ ಸವತಿಪುರದ ಜನರಲ್ಲಿ ಮಡುಗಟ್ಟಿದ್ದ ಸಿಟ್ಟು ಸ್ಫೋಟಿಸತೊಡಗಿತು.

ಆದರೆ ಅವರು ಹಾಕಿಕೊಂಡಿದ್ದ ಲೆಕ್ಕಾಚಾರ ತಲೆಕೆಳಗಾಯಿತು. ಬಿರುಗಾಳಿ ಎದ್ದು ಆಲಿಕಲ್ಲು ಮಳೆ ಧೋ ಎಂದು ಸುರಿಯಲಾರಂಭಿಸಿತು. ಜನರು ಜಮಾಯಿಸಿದ್ದ ಜಾಗದಲ್ಲಿ ಮಳೆ ನೀರು ತುಂಬಿ ಹರಿಯಲಾರಂಭಿಸಿತು. ಇದರಿಂದ ನಾಟಕ ಪ್ರದರ್ಶನ ರದ್ದಾಯಿತು. ಸವತಿಪುರದ ಜನ ಬೇಗನೆ ಅಲ್ಲಿಂದ ಕಾಲುಕಿತ್ತು ಬಿರುಗಾಳಿ ಮಳೆಯಲ್ಲೇ ತೋಯುತ್ತಾ ಊರು ತಲುಪಿ ರಸ್ತೆ ಬದಿಯ ಮನೆಗಳಲ್ಲಿ ದೊಣ್ಣೆಗಳನ್ನು ಹಿಡಿದು ಅವಿತು ಕುಳಿತರು.

ರಾತ್ರಿ 11 ಗಂಟೆ ಸುಮಾರಿಗೆ ಮಳೆ ನಿಂತಿತು. ಆ ರಸ್ತೆಯಲ್ಲಿ ಸನ್ಯಾಸಿಪುರದ ಜನರು ಒಬ್ಬೊಬ್ಬರಾಗಿ ಹೋಗತೊಡಗಿದರು. ಆಗ ಇಬ್ಬರು ಆರೋಪಿಗಳು, ಹೊಂಚುಹಾಕುತ್ತಿದ್ದ ಸವತಿಪುರದ ಜನರ ಕಣ್ಣಿಗೆ ಬಿದ್ದರು. ತಡಮಾಡದೇ  ಅವರ ಮೇಲೆ ಎರಗಿ ಹಿಗ್ಗಾಮುಗ್ಗ ಥಳಿಸಿ ಸ್ಥಳದಿಂದ ಕಾಲ್ಕಿತ್ತರು.

ಅದೇ ರಸ್ತೆಯಲ್ಲಿ ಬರುತ್ತಿದ್ದ ಸನ್ಯಾಸಿಪುರದ ಜನರು, ರಸ್ತೆಯಲ್ಲಿ ನರಳುತ್ತಿದ್ದ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರು. ಆದರೆ ಅದಾಗಲೇ ಇಬ್ಬರೂ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಇದರಿಂದ ಗಾಬರಿಗೊಂಡ ಸನ್ಯಾಸಿಪುರದ ಜನ ತಮ್ಮ ಊರ ಕಡೆ ಓಡುತ್ತಾ ಊರು ತಲುಪುತ್ತಿದ್ದಂತೆ, ‘ಸವತಿಪುರದೋರು ನಮ್ ಉಡುಗ್ರನ್ನ ಸಾಯಿಸಿಬುಟ್ರಪ್ಪೋ, ಹಯ್ಯೋ... ದ್ಯಾವರೇ...’ ಎಂದೆಲ್ಲ ಬಾಯಿಬಡಿದುಕೊಂಡು ಅರಚತೊಡಗಿದರು. ಊರಿನಲ್ಲಿ ಉಳಿದುಕೊಂಡಿದ್ದ ಜನ ನಿದ್ದೆಗಣ್ಣಿನಲ್ಲೇ ಎದ್ದುಬಂದರು. ಎಲ್ಲರೂ ಪಟೇಲ್ ಗಾಳಿಸ್ವಾಮಿ ಅವರ ಮನೆಗೆ ಹೋಗಿ ತಮಗೆ ಕಂಡಂತೆ, ಅನಿಸಿದಂತೆ ಒಂದೇ ಉಸಿರಿನಲ್ಲಿ ವಿಷಯ ತಿಳಿಸಿದರು.

ಅದಾಗಲೇ ಮಧ್ಯರಾತ್ರಿ ಮೀರಿತ್ತು. ನಿದ್ದೆಗಣ್ಣಿನಲ್ಲಿದ್ದ ಪಟೇಲರು ತಮಗೆ ತಿಳಿದುಬಂದ ಮುಖ್ಯಾಂಶಗಳನ್ನೆಲ್ಲ ಒಟ್ಟುಗೂಡಿಸಿ ಅವಸರದಲ್ಲೇ ದೂರೊಂದನ್ನು ತಯಾರಿಸಿಕೊಂಡು ಹಲವರನ್ನು ಜೊತೆಗೂಡಿಸಿ ಮಾಗಡಿ ಪೊಲೀಸ್‌ ಠಾಣೆ ಮುಟ್ಟಿದರು. ಅವೇಳೆಯಲ್ಲಿ ದೂರನ್ನು ಪಡೆದುಕೊಂಡ ಹೆಡ್‌ಕಾನ್‌ಸ್ಟೆಬಲ್‌ ದಾನಪ್ಪ ಕೂಡಲೇ ತಮ್ಮ ಮೇಲಧಿಕಾರಿಗಳನ್ನು ಸಂಪರ್ಕಿಸಿದರು. ಮೇಲಧಿಕಾರಿಗಳು ಪ್ರಕರಣವನ್ನು ದಾಖಲು ಮಾಡಿಕೊಂಡು ಸಮಯ ವ್ಯರ್ಥ ಮಾಡದೆ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್‌) ಕೋರ್ಟಿಗೆ ಮುಟ್ಟಿಸಲು ಏರ್ಪಾಟು ಮಾಡುವಂತೆಯೂ, ತಾವು ಕೂಡಲೇ ಬರುವುದಾಗಿಯೂ ತಿಳಿಸಿದರು.

ಮಾರನೆಯ ದಿನ ಸೂರ್ಯೋದಯಕ್ಕೆ ಮುಂಚೆಯೇ ಸರ್ಕಲ್ ಇನ್‌ಸ್ಪೆಕ್ಟರ್ ಅಂಬುಶೆಟ್ಟಿ ಆಸ್ಪತ್ರೆಗೆ ಧಾವಿಸಿ ಶವ ಪಂಚನಾಮೆ ಪ್ರಾರಂಭಿಸಿದರು. ಎರಡು ಶವಗಳ ಪಂಚನಾಮೆ ಕಾರ್ಯ ಮುಗಿಸಲಾಯಿತು. ಈ ಮಧ್ಯೆ ಸಬ್‌ ಇನ್‌ಸ್ಪೆಕ್ಟರ್‌ ಉದಯರಾಮ್ ಅವರಿಗೆ ಘಟನೆ ನಡೆದ ಸ್ಥಳಕ್ಕೆ ಹೋಗಿ ಸ್ಥಳ ಪಂಚನಾಮೆ ಮಾಡಲು ಮೇಲಧಿಕಾರಿಗಳಿಂದ ಆದೇಶ ಬಂತು. ಆಗ ಉದಯರಾಮ್‌ ಅವರು ಕರ್ತವ್ಯಪ್ರಜ್ಞೆ ಮರೆತು, ಶಿವಮಾದ ಎಂಬ ಕಾನ್‌ಸ್ಟೆಬಲ್‌ ಅವರನ್ನು ಕಳುಹಿಸಿದರು. ಶಿವಮಾದ ಅವರು ಅಲ್ಲಿ ಇಲ್ಲಿ ಕೇಳಿ–ನೋಡಿ ಸ್ಥಳ ಪಂಚನಾಮೆ ಸಿದ್ಧಮಾಡಿದರು. ಇನ್‌ಸ್ಪೆಕ್ಟರ್‌ ಉದಯರಾಮ್, ಕೂತಲ್ಲಿಯೇ ಪಂಚನಾಮೆಯನ್ನು ತರಿಸಿಕೊಂಡರು. ಪಂಚನಾಮೆಯನ್ನು ಅವರು ನೋಡುವ ಗೋಜಿಗೂ ಹೋಗದೆ ಅದನ್ನು ತಾವೇ ತಯಾರು ಮಾಡಿಸಿದಂತೆ ಸಹಿ ಹಾಕಿ ಕೋರ್ಟಿಗೆ ಕಣ್ಮುಚ್ಚಿ ಕಳುಹಿಸಿಕೊಟ್ಟು ‘ನಿರಾಳ’ ಆದರು!

ಕೊಲೆಗೆ ಸಂಬಂಧಿಸಿದಂತೆ ಪಟೇಲ್ ಗಾಳಿಸ್ವಾಮಿ ಅವರು ನೀಡಿದ್ದ ದೂರು, ಸ್ಥಳ ಪಂಚನಾಮೆ ಸೇರಿದಂತೆ ಎಲ್ಲಾ ದಾಖಲೆಗಳು ಕೋರ್ಟ್ ಸೇರಿದವು. ಮುಂದಿನ ತನಿಖೆಯನ್ನು ಮಾಡಿ ಮುಗಿಸಿದ ತನಿಖಾಧಿಕಾರಿ, ಸವತಿಪುರದ 20 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದರು. ಅಷ್ಟೂ ಜನರ ಪರ ನಾನು ವಕಾಲತ್ತು ವಹಿಸಿದೆ.

ಯುವಕರ ಕೊಲೆ ಹಾಗೂ ಈ ಆರೋಪಿಗಳ ಕೊಲೆ... ಎರಡೂ ಘಟನೆಗಳಿಂದಾಗಿ ಎರಡೂ ಊರಿನವರು ಸೇಡನ್ನೇ ಉಸಿರಾಡುತ್ತಿರುವಂಥ ವಾತಾವರಣ ಇತ್ತು. ಎರಡೂ ಕಡೆಗಳಿಂದ ಪೊಲೀಸ್‌ ತನಿಖಾಧಿಕಾರಿಗಳ ಮೇಲೆ ಸಾಕಷ್ಟು ಒತ್ತಡವೂ ಇತ್ತು.

***
ಈ ಮಧ್ಯೆಯೇ, ಆರಂಭದಲ್ಲಿ ಕೊಲೆಯಾದ ಸವತಿಪುರದ ಇಬ್ಬರು ಯುವಕರ ಪ್ರಕರಣದ ವಿಚಾರಣೆ ಮುಗಿದು ಸನ್ಯಾಸಿಪುರದ ಆರೋಪಿಗಳು ಬಿಡುಗಡೆಯಾದರು. ಈ ಫಲಿತಾಂಶ ಸವತಿಪುರದ ಜನರ ಆಕ್ರೋಶವನ್ನು ಇನ್ನಷ್ಟು ಕೆರಳಿಸಿತು.

ಸನ್ಯಾಸಿಪುರದ ಆರೋಪಿಗಳ ಕೊಲೆ ಪ್ರಕರಣದ ವಿಚಾರಣೆ ಸೆಷನ್ಸ್ ಕೋರ್ಟ್‌ನಲ್ಲಿ ಶುರುವಾಗಿ ಎಲ್ಲಾ ಸಾಕ್ಷಿದಾರರ ವಿಚಾರಣೆ ಮುಗಿಯುವ ಹಂತಕ್ಕೆ ಬಂತು. ಅಲ್ಲಿಯವರೆಗಿನ ವಿದ್ಯಮಾನಗಳನ್ನು ಗಮನಿಸಿದ ಯಾರಿಗಾದರೂ ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಿಯೇ ಬಿಡುತ್ತದೆ ಎಂದೇ ಅನಿಸುವಂತಿತ್ತು.

ನಂತರ ಕಟಕಟೆಗೆ ಸಬ್‌ಇನ್‌ಸ್ಪೆಕ್ಟರ್ ಉದಯರಾಮ್ ಸಾಕ್ಷಿದಾರರಾಗಿ ಬಂದರು. ಅವರು ಹೇಳಿಕೆ ಕೊಡುವಾಗ ಕೃತ್ಯ ನಡೆದ ಸ್ಥಳದ ಪಂಚನಾಮೆಯನ್ನು ಉಲ್ಲೇಖಿಸಿದರು. ‘ಕೃತ್ಯವು ಸವತಿಪುರದ ರಸ್ತೆ ಬದಿಯ 10X10 ಅಡಿ ಅಳತೆಯ ಕೊಠಡಿಯಲ್ಲಿ ನಡೆದಿದೆ’ ಎಂದು ಹೇಳಿದರು. ಕೊಲೆಯ ಕುರಿತಾಗಿ ಆರಂಭದಲ್ಲಿ ದೂರು ನೀಡಿದ್ದ ಪಟೇಲ್ ಗಾಳಿಸ್ವಾಮಿ ಅವರೂ ಕೊಠಡಿಯ ಅಳತೆ 10X10 ಅಡಿಯದ್ದೇ ಎಂದು ವಿವರಿಸಿದ್ದರು. ಅಂದರೆ ಅಲ್ಲಿಗೆ ಸಬ್‌ಇನ್‌ಸ್ಪೆಕ್ಟರ್ ಹಾಗೂ ಪಟೇಲ್ ಗಾಳಿಸ್ವಾಮಿ ಅವರು ನೀಡಿರುವ ಹೇಳಿಕೆಗಳು ಒಂದೇ ತೆರನಾಗಿರುವುದು ಸಾಬೀತಾಯಿತು. ನಾನು ಪಾಟಿಸವಾಲು ಮಾಡುವಾಗಲೂ ಇವರಿಬ್ಬರೂ ನೀಡಿರುವ ಮಾಹಿತಿಗಳಲ್ಲಿ ಸಾಮ್ಯತೆ ಇರುವುದನ್ನು ನ್ಯಾಯಾಧೀಶರ ಮುಂದೆ ಒತ್ತಿಒತ್ತಿ ಹೇಳಿದೆ.

ನನ್ನ ವಾದವನ್ನು ನ್ಯಾಯಾಧೀಶರು ಒಪ್ಪಿಕೊಂಡಿರುವುದನ್ನು ಖಚಿತ ಮಾಡಿಕೊಂಡ ನಂತರ, ಕೊಲೆ ನಡೆದ ಸ್ಥಳದ ಪರಿಶೀಲನೆಗೆ ಅನುಮತಿ ನೀಡಬೇಕೆಂದು ಕೋರಿ ಅರ್ಜಿಯೊಂದನ್ನು ಕೊಟ್ಟೆ. ಈ ಅರ್ಜಿಗೆ ಸರ್ಕಾರ ಪರ ವಕೀಲರು (ಪಬ್ಲಿಕ್ ಪ್ರಾಸಿಕ್ಯೂಟರ್) ಆಕ್ಷೇಪ ವ್ಯಕ್ತಪಡಿಸಿದರು. ಆದರೆ  ನ್ಯಾಯಾಧೀಶರು ಸ್ಥಳ ಪರಿಶೀಲನೆಗೆ ಅನುಮತಿ ನೀಡಿ, ದಿನ ಮತ್ತು ಸಮಯವನ್ನು ನಿಗದಿ ಮಾಡಿದರು.

ನಿಗದಿಯಾದ ದಿನ ನ್ಯಾಯಾಧೀಶರು, ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ನಾನು ಸ್ಥಳ ಪರಿಶೀಲನೆಗೆಂದು ಘಟನೆ ನಡೆದ ಸವತಿಪುರ ಗ್ರಾಮಕ್ಕೆ ಹೋದೆವು. ಕೊಲೆ ನಡೆದಿತ್ತು ಎಂದು ದಾಖಲೆಯಲ್ಲಿ ತೋರಿಸಲಾಗಿದ್ದ ಜಾಗವು ಸಬ್‌ಇನ್‌ಸ್ಪೆಕ್ಟರ್ ಉದಯರಾಮ್ ಅವರು ತಯಾರಿಸಿದ್ದ  (ಅವರ ಸೂಚನೆ ಮೇರೆಗೆ ಕಾನ್‌ಸ್ಟೆಬಲ್‌ ತಯಾರಿಸಿದ್ದ) ಪಂಚನಾಮೆಯಲ್ಲಿ ಕಂಡು ಬಂದಂತೆ  10X10 ಅಡಿ ವಿಸ್ತೀರ್ಣದ ಒಂದು ಕೊಠಡಿಯಾಗಿತ್ತು.  ಕೊಠಡಿಯ ಸಂಪೂರ್ಣ ಮಾಹಿತಿಯನ್ನು ಸೆಷನ್ಸ್ ನ್ಯಾಯಾಧೀಶರು ತಮ್ಮ ಗುಮಾಸ್ತರ ಮೂಲಕ ದಾಖಲಿಸಿಕೊಂಡರು. ಅಲ್ಲಿಗೆ ಸಬ್‌ಇನ್‌ಸ್ಪೆಕ್ಟರ್ ಹಾಗೂ ಪಟೇಲ್ ಗಾಳಿಸ್ವಾಮಿ ಅವರು ನೀಡಿರುವ ಹೇಳಿಕೆಗಳಿಗೂ, ಈ ಕೊಠಡಿಯ ಅಳತೆಗೂ ಸಾಮ್ಯತೆ ಇರುವುದು ಪುನಃ ಸಾಬೀತಾಯಿತು.

***

ಪ್ರಕರಣದ ವಿಚಾರಣೆ ಮತ್ತೆ ಪ್ರಾರಂಭವಾಯಿತು. ಘಟನೆ ನಡೆದಿದೆ ಎನ್ನಲಾದ ಸ್ಥಳವನ್ನು ಖುದ್ದು ನ್ಯಾಯಾಧೀಶರೇ ನೋಡಿದ್ದನ್ನು ಮುಂದುಮಾಡಿಕೊಂಡ ನಾನು, ‘ಇಷ್ಟು ಚಿಕ್ಕ ಕೊಠಡಿಯಲ್ಲಿ 20 ಮಂದಿ ನಿಲ್ಲುವುದು ಸಾಧ್ಯವೇ ಇಲ್ಲ. ಅಂಥದ್ದರಲ್ಲಿ ದೊಣ್ಣೆಗಳನ್ನು ಬೀಸಿ ಹೊಡೆಯುವುದು ಅಸಾಧ್ಯವಾದುದು. ಒಂದು ವೇಳೆ ಹಾಗೂಹೀಗೂ ದೊಣ್ಣೆ ಬೀಸಿದ್ದರೂ ಆ ದೊಣ್ಣೆಯ ರಭಸಕ್ಕೆ 20 ಮಂದಿ ಆರೋಪಿಗಳ ಪೈಕಿ ಕೆಲವರಿಗಾದರೂ ಗಂಭೀರವಾದ ಗಾಯಗಳು ಆಗಿರಬೇಕಿತ್ತು. ಆದರೆ ಇಲ್ಲಿ ಇಬ್ಬರಿಗೆ ಮಾತ್ರ ಮಾರಣಾಂತಿಕ ಗಾಯವಾಗಿದೆ. ಇದನ್ನು ನೋಡಿದರೆ ನನ್ನ ಕಕ್ಷಿದಾರರ ವಿರುದ್ಧ  ವೃಥಾ ಆರೋಪ ಮಾಡಿರುವುದು ಸಾಬೀತಾಗುತ್ತದೆ’ ಎಂದೆ.

ನ್ಯಾಯಾಧೀಶರೇ ಖುದ್ದು ಸ್ಥಳ ಪರಿಶೀಲಿಸಿದ್ದರಿಂದ ಅವರು ನನ್ನ ವಾದವನ್ನು ಮಾನ್ಯ ಮಾಡಿದರು. ಇನ್ನೊಂದೆಡೆ, ಪಬ್ಲಿಕ್ ಪ್ರಾಸಿಕ್ಯೂಟರ್ ಸಮರ್ಥಿಸಿಕೊಳ್ಳಲಾಗದೇ ಅಸಹಾಯಕರಾದರು! ‘ಅಷ್ಟು ಚಿಕ್ಕ ಕೊಠಡಿಯಲ್ಲಿ ಹಲ್ಲೆ ನಡೆದಿರಲು ಸಾಧ್ಯವಿಲ್ಲ. ಆರೋಪಿಗಳೇ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ. ಅನುಮಾನದ ಲಾಭದ (ಬೆನಿಫಿಟ್ ಆಫ್ ಡೌಟ್‌) ಆಧಾರದ ಮೇಲೆ ಎಲ್ಲಾ ಆರೋಪಿಗಳನ್ನೂ ಖುಲಾಸೆಗೊಳಿಸಲಾಗಿದೆ’ ಎಂದು ನ್ಯಾಯಾಧೀಶರು ಆದೇಶ ಹೊರಡಿಸಿದರು.

***

ಇಲ್ಲಿ ಕೊಲೆ ಮಾಡಿದ್ದು ಯಾರು, ಕೊಲೆ ಹೇಗೆ ಆಯಿತು ಎನ್ನುವುದು ಮುಖ್ಯವಲ್ಲ. ಕೊಲೆಗಾರರನ್ನು ಶಿಕ್ಷೆಗೆ ಒಳಪಡಿಸಬಹುದಾದ ಮಹತ್ವದ ಘಟ್ಟ ಎಂದರೆ ಅದು ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿ ತನಿಖೆ ನಡೆಸುವುದು. ಆದರೆ ಈ ಪ್ರಕರಣದಲ್ಲಿ ಮೊದಲು ಮೇಲಧಿಕಾರಿ ತಮ್ಮ ಅಧೀನ ಇನ್‌ಸ್ಪೆಕ್ಟರ್‌ ಅವರಿಗೆ ಈ ಕೆಲಸ ವಹಿಸಿದರೆ, ‘ಬುದ್ಧಿವಂತ’ ಇನ್‌ಸ್ಪೆಕ್ಟರ್‌ ಅದನ್ನು ಕಾನ್‌ಸ್ಟೆಬಲ್‌ ಅವರಿಗೆ ವಹಿಸಿ ಜಾರಿಕೊಂಡರು. ಸಾಲದು ಎಂಬುದಕ್ಕೆ ಸ್ಥಳ ಪಂಚನಾಮೆಯ ವರದಿಯನ್ನು ತಾವೇ ತಯಾರಿಸಿದಂತೆ ಬಿಂಬಿಸಿದರು! ಆರಂಭದಲ್ಲಿ ದೂರು ದಾಖಲು ಮಾಡಿದ ಪಟೇಲ್‌ ಅವರು, ತರಾತುರಿಯಲ್ಲಿ ಏನೋ ಮನಸ್ಸಿಗೆ ತೋಚಿದಂತೆ ಬರೆದದ್ದನ್ನೇ ನಂಬಿ ಕಾನ್‌ಸ್ಟೆಬಲ್‌ ಅದನ್ನೇ ತಮ್ಮ ಪಂಚನಾಮೆಯಲ್ಲೂ ಉಲ್ಲೇಖಿಸಿದರು. ಈ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೂ ಇನ್‌ಸ್ಪೆಕ್ಟರ್‌ ಹೋಗಲಿಲ್ಲ.
ಒಂದು ಅಪರಾಧದ ತನಿಖೆಯಲ್ಲಿ ತನಿಖಾಧಿಕಾರಿ ವಹಿಸಬೇಕಾದ ಮುತುವರ್ಜಿ, ಮರುಪರಿಶೀಲಿಸುವ ವೃತ್ತಿಪರತೆ ತೋರದಿದ್ದರೆ ಏನಾಗಬಹುದೋ ಇಲ್ಲಿಯೂ ಹಾಗೆಯೇ ಆಯಿತು. ಪೊಲೀಸ್‌ ಅಧಿಕಾರಿಗಳು ಮಾಡುವ ಎಡವಟ್ಟು, ಆರೋಪಿಗಳ ಬಿಡುಗಡೆಗೆ ವರದಾನವಾಗಿರುವ ಹಾಗೂ ಆಗುತ್ತಲಿರುವ ಘಟನೆಗಳಿಗೆ ಇದು ಇನ್ನೊಂದು ಉದಾಹರಣೆ.
(ಹೆಸರುಗಳನ್ನು ಬದಲಾಯಿಸಲಾಗಿದೆ)

***

(ಸಿ.ಎಚ್‌.ಹನುಮಂತರಾಯ) ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT