ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ವಿಶ್ವಕಪ್‌ ಕಾಯುವಿಕೆಗೆ ಕೊನೆ ಯಾವಾಗ?

Last Updated 2 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಎರಡು ವರ್ಷಗಳ ಹಿಂದೆ ನವದೆಹಲಿಯಲ್ಲಿ ಅರ್ಥಪೂರ್ಣ ಕಾರ್ಯಕ್ರಮವೊಂದು ನಡೆದಿತ್ತು. ಹಾಕಿ ದಿಗ್ಗಜರಾದ ಅಶೋಕ್‌ ಕುಮಾರ್‌, ಅಸ್ಲಾಮ್‌ ಶೇರ್‌ಖಾನ್‌, ನಿವೃತ್ತ ಬ್ರಿಗೇಡಿಯರ್‌ ಹರಚರಣ್‌ ಸಿಂಗ್, ಲೆಸ್ಲೆ ಫೆರ್ನಾಂಡೀಸ್‌, ವೀರೇಂದರ್ ಸಿಂಗ್, ಅಶೋಕ್ ದಿವಾನ್, ಮೈಕಲ್‌ ಕಿಂಡೊ, ಬಿ.ಪಿ. ಗೋವಿಂದ್‌, ಅಜಿತ್‌ಪಾಲ್ ಸಿಂಗ್‌ ಹೀಗೆ 1975ರ ಹಾಕಿ ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದ ಆಟಗಾರರು ಒಂದೆಡೆ ಸೇರಿದ್ದರು. ಚೊಚ್ಚಲ ವಿಶ್ವಕಪ್‌ ಜಯಿಸಿ 40 ವರ್ಷಗಳು ಸಂದ ಸವಿ ನೆನಪಿಗಾಗಿ ಹಾಕಿ ಇಂಡಿಯಾ ಸನ್ಮಾನ ಸಮಾರಂಭ ಹಮ್ಮಿಕೊಂಡಿತ್ತು.
 
ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯರಲ್ಲಿ ಇದ್ದದ್ದು ಒಂದೇ ಆಸೆ. ನಮ್ಮಂತೆಯೇ ಈಗಿನ ಆಟಗಾರರೂ ವಿಶ್ವಕಪ್‌ ಗೆಲ್ಲಲಿ. ಒಲಿಂಪಿಕ್ಸ್‌ನಲ್ಲಿ ಎಂಟು ಸಲ ಚಿನ್ನ ಗೆದ್ದ ಸಾಧನೆ ಮತ್ತು ಹಾಕಿ ವೈಭವದ ದಿನಗಳು ನಮ್ಮ ಆಟಗಾರರಿಗೆ ಸ್ಫೂರ್ತಿಯ ಕಥನವಾಗಲಿ ಎಂಬುದು ಅವರೆಲ್ಲರ ಬಯಕೆಯಾಗಿತ್ತು.
 
ಭಾರತ ವಿಶ್ವಕಪ್‌ ಗೆದ್ದಾಗ ತಂಡದ ನಾಯಕರಾಗಿದ್ದ ಅಜಿತ್‌ಪಾಲ್‌ ಸಿಂಗ್‌ ‘ಈಗಿನ ತಂಡದ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆಯಿದೆ. ಬಲಿಷ್ಠ ತಂಡಗಳ ಜೊತೆ ಹೆಚ್ಚು ಪಂದ್ಯ ಗಳನ್ನು ಆಡುತ್ತಿರುವ ಕಾರಣ ವಿಶ್ವಕಪ್ ಗೆಲ್ಲುವ ಭರವಸೆಯಿದೆ’ ಎಂದಿದ್ದರು.
 
ಅಜಿತ್ ಪಾಲ್ ಅವರ ಮಾತುಗಳಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ಕೇವಲ ಅದು ಅವರೊಬ್ಬರ ಮಾತಷ್ಟೇ ಆಗಿರ ಲಿಲ್ಲ. ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಪ್ರೀತಿಸುವ, ಹಿಂಬಾಲಿಸುವ ಕೋಟ್ಯಂತರ ಅಭಿಮಾನಿಗಳ ಕನಸು ಹೌದು. ಅವರ ದ್ದೆಲ್ಲಾ ‘ನಮಗೆ ಮತ್ತೊಂದು ವಿಶ್ವಕಪ್ ಯಾವಾಗ’ ಎನ್ನುವುದೊಂದೇ ಪ್ರಶ್ನೆ.
 
 
ನಿರೀಕ್ಷೆ ಹುಸಿ
ಈ ಬಾರಿ ಭಾರತ ಪುರುಷರ ಹಾಕಿ ತಂಡದವರು ವಿಶ್ವಕಪ್‌ ಗೆಲ್ಲುವುದು ಖಚಿತ ಎನ್ನುವ ಭರವಸೆಯ ಮಾತುಗಳು ಪ್ರತಿಸಲದ ಟೂರ್ನಿಯ ಆರಂಭದಲ್ಲಿ ಕೇಳಿ ಬರುತ್ತವೆ. ನಮ್ಮವರು ಬಲಿಷ್ಠ ಎಂದು ನಾವೇ ಬೀಗುತ್ತೇವೆ. ಹೀಗೆ ಒಂದು ಟ್ರೋಫಿಗಾಗಿ ಕಾದು ಕಾದು ಈಗ 41 ವರ್ಷಗಳು ಉರುಳಿವೆ. ಆದರೆ ಪ್ರಶಸ್ತಿಯ ಆಸೆ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.
 
ವಿಶ್ವಕಪ್‌ ಆರಂಭದ ವರ್ಷಗಳಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿತ್ತು. 1971ರಲ್ಲಿ ಬಾರ್ಸಿಲೋನಾದಲ್ಲಿ ಮೊದಲ ಬಾರಿಗೆ ಟೂರ್ನಿ ನಡೆದಾಗ ಮೂರನೇ ಸ್ಥಾನ ಪಡೆದಿತ್ತು. ನಂತರ   ರನ್ನರ್ಸ್‌ ಅಪ್‌ ಸ್ಥಾನ ಪಡೆದಿದ್ದ ತಂಡ ಮುಂದಿನ ಎರಡು ವರ್ಷಗಳ ಬಳಿಕ ಟ್ರೋಫಿ ಎತ್ತಿ ಹಿಡಿದಿತ್ತು.
 
ಕ್ವಾಲಾಲಂಪುರದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 2–1ಗೋಲುಗಳಿಂದ ಮಣಿಸಿ ಭಾರತ ತಂಡ ಚಾಂಪಿಯನ್‌ ಆಗಿತ್ತು. ಆ ಸಂಭ್ರಮದ ದಿನಗಳೆಲ್ಲಾ ಈಗ ಸವಿ ನೆನಪುಗಳಷ್ಟೇ. ಈ ಟೂರ್ನಿಯ ಬಳಿಕ ಭಾರತ ಒಮ್ಮೆಯೂ ಪ್ರಶಸ್ತಿಯ ಸನಿಹ ಬಂದಿಲ್ಲ. ಮುಂಬೈ (1982) ಮತ್ತು ನವದೆಹಲಿ (2010) ಎರಡು ಸಲ ತವರಿನಲ್ಲಿ ವಿಶ್ವಕಪ್ ನಡೆದಾಗ ಭಾರತ ಕ್ರಮವಾಗಿ ಐದು ಹಾಗೂ ಎಂಟನೇ ಸ್ಥಾನಗಳನ್ನು ಪಡೆದಿತ್ತು.  
 
ಏಳು ಬೀಳುಗಳ ನಡುವೆ
ಭಾರತ ಹಾಕಿ ತಂಡವೆಂದರೆ ಬಲಿಷ್ಠ ರಾಷ್ಟ್ರಗಳೆಲ್ಲವೂ ಬೆಚ್ಚಿ ಬೀಳುತ್ತಿದ್ದ ದಿನಗಳೆಲ್ಲವೂ ಮುಗಿದು ಹೋದ ಕಾಲವಿದು. ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ತಂಡ ಎಂಟು ವರ್ಷಗಳ ಹಿಂದೆ ಬೀಜಿಂಗ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಾಗದೆ ಅವಮಾನಕ್ಕೆ ಗುರಿಯಾಗಿತ್ತು. ‘ಇನ್ನೇನು ಭಾರತದ ಹಾಕಿ ಕಥೆ ಮುಗಿದೇ ಹೋಯಿತು’ ಎನ್ನುವ ನಿರಾಶ ಭಾವದಲ್ಲಿದ್ದವರೇ ಹೆಚ್ಚು. ಆದರೆ ಇತ್ತೀಚಿನ ಆರೇಳು ವರ್ಷಗಳಿಂದ ಹೊಸ ಹುಡುಗರು ಭಾರತದ ಹಾಕಿ ಪರಂಪರೆಯನ್ನು ಮರಳಿ ತರಲು ಪ್ರಯತ್ನಿಸುತ್ತಿದ್ದಾರೆ.
 
 ವಿಶ್ವ ಹಾಕಿ ಲೀಗ್‌ನಲ್ಲಿ ಭಾರತ 2014–15ರಲ್ಲಿ ಕಂಚಿನ ಪದಕ ಜಯಿಸಿತ್ತು. 34 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಯಲ್ಲಿ ಪದಕದ ಸಾಧನೆ ಮಾಡಿದೆ. 1982ರಲ್ಲಿ ನೆದರ್ಲೆಂಡ್ಸ್‌ನಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಕಂಚು ಜಯಿಸಿತ್ತು. ಆ ಬಳಿಕ 12 ಬಾರಿ ಟೂರ್ನಿಗಳನ್ನು ಆಡಿದ್ದರೂ ಒಮ್ಮೆಯೂ ಪದಕದ ಆಸೆ ಈಡೇರಿರಲಿಲ್ಲ. ಆದರೆ ಹೋದ ವರ್ಷ ಲಂಡನ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿತ್ತು.  
 
2010ರ ನವದೆಹಲಿ ಮತ್ತು 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಬೆಳ್ಳಿ ಪಡೆಯಿತು.  ಇತ್ತೀಚಿನ ವರ್ಷಗಳಲ್ಲಿ ವಿಶ್ವದ ಬಲಿಷ್ಠ ತಂಡಗಳಿಗೆ ಸಡ್ಡು ಹೊಡೆದು ಭಾರತ ಮುನ್ನುಗ್ಗುತ್ತಿರುವುದಕ್ಕೆ ಈ ಎಲ್ಲಾ ಸಾಧನೆಗಳೇ ಸಾಕ್ಷಿ.
 
 
ಸಜ್ಜಾಗುತ್ತಿದೆ ಭಾರತ ತಂಡ
ವಿಶ್ವಕಪ್‌ನಂಥ ಪ್ರತಿಷ್ಠಿತ ಟೂರ್ನಿಗೆ ಸಜ್ಜಾಗಲು ಭಾರತ ತಂಡ ಒಂದು ವರ್ಷ ಮೊದಲೇ ಅಭ್ಯಾಸ ಆರಂಭಿಸಿದೆ. ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಫಿಟ್‌ನೆಸ್‌, ಕೌಶಲಾಭಿವೃದ್ಧಿ, ತಂಡದಲ್ಲಿ ಸಮತೋಲನ ಸಾಧಿಸುವ ಬಗೆ ಹೀಗೆ ಅನೇಕ ವಿಷಯಗಳತ್ತ ಗಮನ ಹರಿಸುತ್ತಿದೆ.
 
ಪಿ.ಆರ್‌. ಶ್ರೀಜೇಶ್‌ ನಾಯಕತ್ವದ ಭಾರತ ತಂಡ ವಿಶ್ವಕಪ್‌ಗೂ ಮೊದಲು ಹಲವು ಟೂರ್ನಿಗಳಲ್ಲಿ ಆಡಲಿದೆ. ಇದೇ ತಿಂಗಳು ಅಜ್ಲನ್ ಷಾ ಕಪ್‌ ಟೂರ್ನಿ ನಡೆಯಲಿದೆ. ಜೂನ್ 1ರಿಂದ ಆರು ದಿನ ವಿಶ್ವ ಹಾಕಿ ಲೀಗ್ ಸೆಮಿಫೈನಲ್ಸ್ ಆಯೋಜನೆ ಯಾಗಿದೆ. ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್‌, ವಿಶ್ವ ಹಾಕಿ ಲೀಗ್ ಫೈನಲ್ಸ್  ಜರುಗಲಿವೆ.
 
ಹೋದ ವರ್ಷ ಭಾರತ ಜೂನಿಯರ್ ಹಾಕಿ ತಂಡ ವಿಶ್ವಕಪ್‌ ಜಯಿಸಿದೆ. ಆಗ ತಂಡದಲ್ಲಿದ್ದ ಹರ್ಮನಪ್ರೀತ್ ಸಿಂಗ್ ಅವರಂಥ ಪ್ರತಿಭಾನ್ವಿತ ಆಟಗಾರರು ಈಗ ಸೀನಿಯರ್‌ ತಂಡದ ಶಿಬಿರದಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿರುವ 16 ವರ್ಷದ ಒಳಗಿನವರ ಏಷ್ಯಾ ಕಪ್‌ ಹೊಸ ಪ್ರತಿಭೆಗಳ ಅನ್ವೇಷಣೆಗೆ ವೇದಿಕೆಯಾಗಲಿದೆ. 
 
ಗೋಲ್‌ಕೀಪರ್ ಶ್ರೀಜೇಶ್‌, ಫಾರ್ವರ್ಡ್‌ ಆಟಗಾರರಾದ ಸುನಿಲ್, ಆಕಾಶದೀಪ್‌ ಸಿಂಗ್,  ರಮಣದೀಪ್ ಸಿಂಗ್‌, ನಿಕಿನ್ ತಿಮ್ಮಯ್ಯ,  ಸರ್ದಾರ್ ಸಿಂಗ್, ಎಸ್‌.ಕೆ. ಉತ್ತಪ್ಪ, ದಾನಿಶ್ ಮಜ್ತಬಾ, ಡಿಫೆಂಡರ್ಸ್‌ ಕೊತಾಜಿತ್‌ ಸಿಂಗ್, ರೂಪಿಂದರ್‌ಪಾಲ್‌ ಸಿಂಗ್‌  ಇರುವ ಈಗಿನ ತಂಡ ಬಲಿಷ್ಠವಾಗಿದೆ. ಆದರೆ ಪ್ರಮುಖ ಟೂರ್ನಿಗಳಲ್ಲಿ ಮಹತ್ವದ ಘಟ್ಟದಲ್ಲಿ ಫಾರ್ವರ್ಡ್‌ ಲೈನ್‌ನಲ್ಲಿ ಮಾಡುತ್ತಿರುವ ಸಣ್ಣ ಸಣ್ಣ ತಪ್ಪುಗಳಿಗೆ ಭಾರತ ತಂಡ ದೊಡ್ಡ ಬೆಲೆ ಕಟ್ಟುತ್ತಿದೆ.
 
ಭಾರತದ ಆಟಗಾರರು ಕೆಲ ಪಂದ್ಯಗಳಲ್ಲಿ ರಕ್ಷಣಾ ವಿಭಾಗದಲ್ಲಿ ಉತ್ತಮ ಸಾಮರ್ಥ್ಯ ನೀಡಿ, ಫಾರ್ವರ್ಡ್‌ ವಿಭಾಗದಲ್ಲಿ ವಿಫಲರಾಗುತ್ತಿದ್ದಾರೆ. ಉತ್ತಮ ಫಾರ್ವರ್ಡ್‌ ವಿಭಾಗ ಇದ್ದಾಗ ರಕ್ಷಣಾ ವಿಭಾಗ ದುರ್ಬಲವಾಗಿರುತ್ತದೆ. ಹೀಗೆ ಎಲ್ಲಾ ವಿಭಾಗಗಳಲ್ಲಿ ಸಮತೋಲನ ಸಾಧಿಸದ ಕಾರಣ ನಮ್ಮವರು ಪದೇ ಪದೇ ಪ್ರಶಸ್ತಿ ಕೈಚೆಲ್ಲುತ್ತಿದ್ದಾರೆ.  ಇದಕ್ಕೆಲ್ಲಾ ಅಜ್ಲನ್ ಷಾ ಕಪ್ ಟೂರ್ನಿ ಪ್ರಮುಖ ಉದಾಹರಣೆ.
 
2009ರ ಅಜ್ಲನ್ ಷಾ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಭಾರತ ತಂಡ ನಂತರದ ವರ್ಷ ದಕ್ಷಿಣ ಕೊರಿಯಾ ಜೊತೆ ಜಂಟಿಯಾಗಿ ಪ್ರಶಸ್ತಿ ಹಂಚಿಕೊಂಡಿತು. ಹೋದ ವರ್ಷ ಆಸ್ಟ್ರೇಲಿಯಾ ಎದುರು ಒಂದು ಗೋಲಿನ ಅಂತರದಿಂದಷ್ಟೇ ಚಿನ್ನ ಜಯಿಸುವ ಅವಕಾಶ ಕೈಚೆಲ್ಲಿತು. 2015ರ ಸೆಮಿಫೈನಲ್‌ನಲ್ಲಿ ಇವೇ ತಪ್ಪುಗಳಿಂದ ಕಂಚಿಗೆ ಸಮಾಧಾನ ಪಟ್ಟಕೊಂಡಿತ್ತು.
 
ಪ್ರತಿ ಸೋಲಿನಿಂದಲೂ ಪಾಠ ಕಲಿತು ಹೊಸ ವಿಷಯಗಳನ್ನು ಅರಿತುಕೊಳ್ಳಲು ಭಾರತ ತಂಡ ಈಗ ಹೆಚ್ಚು ಒತ್ತು ನೀಡುತ್ತಿದೆ. ಅದಕ್ಕಾಗಿ ವಿಡಿಯೊ ವಿಶ್ಲೇಷಣೆ, ತಪ್ಪುಗಳ ಕುರಿತ ಫೀಲ್ಡ್‌ನಲ್ಲಿಯೇ ಪಾಠ, ಸರಿಪಡಿಸಿಕೊಳ್ಳುವ ವಿಧಾನ ನೀಡಿ ಕಠಿಣ ಅಭ್ಯಾಸ ಮಾಡುತ್ತಿದೆ. ವಿಶ್ವಕಪ್‌ ಆರಂಭವಾಗಲು ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಅಭ್ಯಾಸ ಆರಂಭಿಸಿರುವ ತಂಡ ದೇಶಕ್ಕೆ ಎರಡನೇ ಟ್ರೋಫಿ ತಂದುಕೊಡಲಿ. ಹಾಕಿ ದಿಗ್ಗಜರ ಆಸೆಯೂ ಈಡೇರಲಿ.  
 
2018ರ ನವೆಂಬರ್‌ನಲ್ಲಿ ವಿಶ್ವಕಪ್‌
ಮುಂದಿನ ವರ್ಷದ ನವೆಂಬರ್‌ 28ರಿಂದ ಡಿಸೆಂಬರ್ 16ರ ವರೆಗೆ ಭುವನೇಶ್ವರದಲ್ಲಿ ಹಾಕಿ ವಿಶ್ವಕಪ್‌ ನಡೆಯಲಿದೆ. ಆತಿಥೇಯ ರಾಷ್ಟ್ರವಾಗಿರುವ ಕಾರಣ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಈಗಾಗಲೇ ಅರ್ಹತೆ ಲಭಿಸಿದೆ.

ವಿಶ್ವ ಹಾಕಿ ಲೀಗ್‌ ಸೆಮಿಫೈನಲ್ಸ್‌ನಲ್ಲಿ ಹೆಚ್ಚು ರ್‍ಯಾಂಕ್‌ ಹೊಂದಿರುವ 10 ಅಥವಾ 11 ತಂಡಗಳು ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿವೆ. ಒಟ್ಟು 16 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು ರ್‍ಯಾಂಕಿಂಗ್ ಮೇಲೆ ಉಳಿದ ತಂಡಗಳನ್ನು ನಿರ್ಧರಿಸಲಾಗುತ್ತದೆ.

ವಿಶ್ವಕಪ್‌ಗೂ ಮೊದಲು 2 ಹೆಜ್ಜೆಗಳು
-ಅಜ್ಲನ್‌ ಷಾ ಕಪ್‌ : ಏಪ್ರಿಲ್‌ 27ರಿಂದ ಮೇ 6ವರೆಗೆ ಮಲೇಷ್ಯಾದ ಇಫೋದಲ್ಲಿ ಅಜ್ಲನ್‌ ಷಾ ಕಪ್‌ ಟೂರ್ನಿ ಆಯೋಜನೆಯಾಗಿದೆ. ಭಾರತ, ಆಸ್ಟ್ರೇಲಿಯಾ, ಜಪಾನ್‌, ಮಲೇಷ್ಯಾ, ನ್ಯೂಜಿಲೆಂಡ್‌ ಮತ್ತು ಬ್ರಿಟನ್ ತಂಡಗಳು ಪಾಲ್ಗೊಳ್ಳಲಿವೆ. ಹೋದ ವರ್ಷ ಆಡಿದ್ದ ಪಾಕಿಸ್ತಾನ ಮತ್ತು ಕೆನಡಾ ತಂಡಗಳು ಈ ಬಾರಿ ಪಾಲ್ಗೊಳ್ಳುತ್ತಿಲ್ಲ. 

-ವಿಶ್ವ ಲೀಗ್ ಸೆಮಿಫೈನಲ್ಸ್‌: ಇದೇ ವರ್ಷದ ಜೂನ್‌ ಮತ್ತು ಜುಲೈನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಪಾಲ್ಗೊಳ್ಳಲಿವೆ. ಇದರಲ್ಲಿ ಉತ್ತಮ ಸಾಮರ್ಥ್ಯ ನೀಡಿದ ಏಳು ತಂಡಗಳು ಫೈನಲ್ಸ್ ಪ್ರವೇಶಿಸಲಿವೆ. ಡಿಸೆಂಬರ್‌ 2ರಿಂದ 10ರ ತನಕ ಭಾರತದಲ್ಲಿ ಫೈನಲ್ಸ್‌ ಜರುಗಲಿದ್ದು ಅಲ್ಲಿ ಚೆನ್ನಾಗಿ ಆಡಿದ ತಂಡಗಳಿಗೆ ವಿಶ್ವಕಪ್‌ಗೆ ನೇರ ಅರ್ಹತೆ ಲಭಿಸಲಿದೆ.
 
‘ಸಮತೋಲನ ಸಾಧಿಸುವ ತರಬೇತಿಗೆ ಒತ್ತು’
ಹಿಂದಿನ ಐದಾರು ವರ್ಷಗಳಲ್ಲಿ ಹಲವಾರು ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಜಯಿಸಿದ್ದರೂ ವಿಶ್ವಕಪ್ ಗೆಲ್ಲಲು ಆಗಿಲ್ಲ ಎನ್ನುವ ಬೇಸರ ನನ್ನನ್ನೂ ಕಾಡುತ್ತಿದೆ. ಹಾಕಿ ತಂಡ ಕ್ರೀಡೆಯಾದ ಕಾರಣ ಒಬ್ಬನಿಂದಲೇ ಎಲ್ಲವೂ ಸಾಧ್ಯವಿಲ್ಲ. ಸಂಘಟಿತ ಹೋರಾಟ ಮತ್ತು ಅರ್ಪಣಾ ಮನೋಭಾವದ ಜೊತೆ ತಂಡ ಎಲ್ಲಾ ವಿಭಾಗಗಳು ಸಮತೋಲನದಿಂದ ಕೂಡಿರುವಂತೆ ನೋಡಿಕೊಳ್ಳಬೇಕಾದ ಸವಾಲು ನಮ್ಮ ಮುಂದಿದೆ.

ಹಲವು ಟೂರ್ನಿಗಳಲ್ಲಿ ನಮ್ಮ ತಂಡ ಉತ್ತಮ ಸಾಮರ್ಥ್ಯ ನೀಡಿದೆ. ಮಹತ್ವದ ಹಂತದಲ್ಲಿ ಆದ ಸಣ್ಣ ಸಣ್ಣ ತಪ್ಪುಗಳಿಂದ ಕೆಲ ಬಾರಿ ಪ್ರಶಸ್ತಿ ಕೈ ತಪ್ಪಿದೆ. ಆದ್ದರಿಂದ ಈ ಬಾರಿಯ ಶಿಬಿರದಲ್ಲಿ ಹಿಂದಿನ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಅಭ್ಯಾಸ ಮಾಡುತ್ತಿದ್ದೇವೆ.

ರೋಲಂಟ್‌ ಓಲ್ಟಮಸ್‌ ಅವರು ಕೋಚ್‌ ಆಗಿ ಬಂದ ಬಳಿಕವಂತೂ ತಂಡದಲ್ಲಿನ ಪ್ರತಿ ಸಿಬ್ಬಂದಿ, ಹಾಕಿ ಆಡಳಿತದ ಅಧಿಕಾರಿಗಳು ಎಲ್ಲರೂ ವೃತ್ತಿಪರರಾಗಿ ಯೋಚಿಸಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇದರಿಂದ ಆಟಗಾರರಲ್ಲಿಯೂ ವೃತ್ತಿಪರತೆ ಹೆಚ್ಚಿದೆ.

ದೈಹಿಕವಾಗಿ ಹೆಚ್ಚು ಶ್ರಮ ಬೇಡುವ ಕ್ರೀಡೆಯಾದ ಕಾರಣ ಗಾಯದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕಾದ ಸವಾಲಿದೆ. ಅಜ್ಲನ್‌ ಷಾ ಕಪ್ ಟೂರ್ನಿಯ ಬಳಿಕ ಆಸ್ಟ್ರೇಲಿಯಾ, ಜರ್ಮನಿ ಹೀಗೆ ಹಲವು ಬಲಿಷ್ಠ ತಂಡಗಳ ಜೊತೆ ಹಾಕಿ ಸರಣಿ ಆಡುವ ಅವಕಾಶ ಲಭಿಸಿದೆ.

ವಿಶ್ವಕಪ್ ಆರಂಭಕ್ಕೆ ಒಂದು ವರ್ಷ ಬಾಕಿ ಇರುವ ಕಾರಣ ಅಭ್ಯಾಸಕ್ಕೆ ಸಾಕಷ್ಟು ಸಮಯವಿದೆ. ಪ್ರತಿನಿತ್ಯವೂ ನಡೆಯುವ ಅಭ್ಯಾಸವನ್ನು ವಿಡಿಯೊ ರೆಕಾರ್ಡಿಂಗ್ ಮಾಡಿಕೊಳ್ಳಲಾಗುತ್ತಿದೆ. ಅಭ್ಯಾಸದ ಬಳಿಕ ನಡೆಯುವ ತಂಡದ ಸಭೆಯಲ್ಲಿ ಪ್ರತ್ಯೇಕವಾಗಿ ಒಬ್ಬೊಬ್ಬರನ್ನೇ ಕರೆದು ನಮ್ಮಿಂದ ಆಗುತ್ತಿರುವ ತಪ್ಪುಗಳು, ತಿದ್ದಿಕೊಳ್ಳಬೇಕಾದ ವಿಧಾನಗಳ ಬಗ್ಗೆ ಓಲ್ಟಮಸ್‌ ತಿಳಿಸಿಕೊಡುತ್ತಾರೆ.

ಇಂದು ಮಾಡಿದ ತಪ್ಪು ಒಂದರೆಡು ದಿನಗಳಲ್ಲಿ ಮರೆತು ಹೋಗುತ್ತದೆ. ಮತ್ತೆ ಹಿಂದಿನ ತಪ್ಪೇ ಮರುಕಳಿಸುತ್ತದೆ. ಹೀಗೆಲ್ಲಾ ಆಗಬಾರದು ಎನ್ನುವ ಕಾರಣಕ್ಕೆ ಅಭ್ಯಾಸದಲ್ಲಿಯೂ ವಿಡಿಯೊ ಬಳಕೆ ಆರಂಭಿಸಲಾಗಿದೆ. ನಾನು ಭಾರತ ತಂಡಕ್ಕೆ ಬಂದು ಕೆಲ ವರ್ಷಗಳಷ್ಟೇ ಉರುಳಿವೆ.

ಹಿಂದಿನ 40 ವರ್ಷಗಳಿಂದ ವಿಶ್ವಕಪ್‌ನಲ್ಲಿ ಟ್ರೋಫಿ ಗೆಲ್ಲಲು ಏಕೆ ಸಾಧ್ಯವಾಗಿಲ್ಲ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಒಂದು ಮಾತಂತೂ ಸತ್ಯ. ಈ ಬಾರಿಯ ನಮ್ಮ ತಂಡದ ಸಾಮರ್ಥ್ಯ ಹೇಗಿರುತ್ತದೆ ಎಂಬುದನ್ನು ನೀವೇ ನೋಡಿ. ಈ ಬಾರಿಯ ವಿಶ್ವಕಪ್‌ ತವರಿನಲ್ಲಿಯೇ ನಡೆಯಲಿರುವುದರಿಂದ ಅಭಿಮಾನಿಗಳ ಬೆಂಬಲ ಲಭಿಸುತ್ತದೆ. ಇದರಿಂದ ಉತ್ತಮ ಆಟವಾಡಲೂ ಸಾಧ್ಯವಾಗುತ್ತದೆ. ಭಾರತದ ಹಾಕಿ ವೈಭವದ ದಿನಗಳು ಮುಂದಿನ ಕೆಲವೇ ವರ್ಷಗಳಲ್ಲಿ ಮರಳಿ ಬರಲಿವೆ.

ಈಗಿನ ತಂಡದಲ್ಲಿರುವ ಪ್ರಮುಖ ಆಟಗಾರರು ಆರೇಳು ವರ್ಷಗಳಿಂದ ತಂಡದಲ್ಲಿದ್ದವರು. 16 ವರ್ಷಗಳ ಬಳಿಕ ಏಷ್ಯನ್‌ ಕ್ರೀಡಾಕೂಟ ಮತ್ತು ಮೂರು ದಶಕಗಳ ನಂತರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪದಕ ಗೆದ್ದುಕೊಂಡಿದ್ದೇವೆ. ಹಂತ ಹಂತವಾಗಿ ನಾವೂ ಬದಲಾಗುತ್ತಿದ್ದೇವೆ. ವಿಶ್ವಕಪ್‌ ಹಾಗೂ ಒಲಿಂಪಿಕ್ಸ್‌ನಂಥ ಪ್ರತಿಷ್ಠಿತ ಕೂಟಗಳಲ್ಲಿ ಪದಕ ಗೆಲ್ಲುವ ಕಾಲ ಸಮೀಪವಾಗುತ್ತಿದೆ.
– ಎಸ್‌.ವಿ. ಸುನಿಲ್‌, ಭಾರತ ಹಾಕಿ ತಂಡದ ಉಪನಾಯಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT