ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕನನ್ನು ಕೊಂದು ಮೋರಿಗೆ ಎಸೆದಿದ್ದರು!

Last Updated 2 ಏಪ್ರಿಲ್ 2017, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ನಿನ್ನ ತಂಗಿಯ ಗಂಡ ನಾನೇ’ ಎಂದು ಛೇಡಿಸಿದ ಸ್ನೇಹಿತನನ್ನು ಹತ್ಯೆಗೈದು ಶವವನ್ನು ಮೋರಿಗೆ ಎಸೆದಿದ್ದ ಪ್ರತಾಪ್ (21) ಹಾಗೂ ಆತನ ಸ್ನೇಹಿತ ಮಾದೇಶ್ (22) ಎಂಬುವರು ಕೆಂಗೇರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಿಬಿಎಂಪಿ ಪೌರಕಾರ್ಮಿಕ ಪುಟ್ಟಸ್ವಾಮಿ (36) ಕೊಲೆಯಾದವರು. ಉತ್ತರಹಳ್ಳಿ ಮುಖ್ಯರಸ್ತೆಯ ಶ್ರೀನಿವಾಸನಗರ ಕಾಲೊನಿಯ ಅವರು, ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದರು. ಮಾರ್ಚ್ 30ರ ರಾತ್ರಿ ಎದೆಗೆ ಗುದ್ದಿ ಅವರನ್ನು ಕೊಲೆ ಮಾಡಿದ್ದ ಆರೋಪಿಗಳು, ಶವವನ್ನು ಓಂಕಾರ ಆಶ್ರಮದ ಹಿಂಭಾಗದ ಮೋರಿಯಲ್ಲಿ ಎಸೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪುಟ್ಟಸ್ವಾಮಿ ಅವರಿಗೆ ಪ್ರತಾಪ್ ಬಾಲ್ಯದಿಂದಲೂ ಗೊತ್ತಿತ್ತು. ಈ ನಡುವೆ ಕಾಲೇಜು ತೊರೆದ ಆತ, ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ವಚ್ಛತಾ ಕೆಲಸಕ್ಕೆ ಸೇರಿಕೊಂಡ. ಕ್ರಮೇಣ ಒಟ್ಟಿಗೇ ಬಾರ್‌ಗೆ ಹೋಗುವಷ್ಟರ ಮಟ್ಟಿಗೆ ಅವರಿಬ್ಬರ ನಡುವೆ ಆತ್ಮೀಯತೆ ಬೆಳೆಯಿತು.

ಈ ಮಧ್ಯೆ ಪುಟ್ಟಸ್ವಾಮಿ, ಪ್ರತಾಪ್‌ನ ತಂಗಿಯ ಮೇಲೆ ಕಣ್ಣು ಹಾಕಿದ್ದರು. ‘ನಿನ್ನ ತಂಗಿಯನ್ನು ನನಗೆ ಕೊಟ್ಟು ಮದುವೆ ಮಾಡು. ಇಲ್ಲದಿದ್ದರೆ, ಅಪಹರಿಸಿಕೊಂಡು ಹೋಗಿ ವಿವಾಹವಾಗುತ್ತೇನೆ’ ಎಂದು ಹೇಳಿದ್ದರು. ಎಲ್ಲರೆದುರು ಹೀಗೆ ಮಾತನಾಡಿದ್ದರಿಂದ ಕುಪಿತಗೊಂಡ ಪ್ರತಾಪ್, ಅವರ ಜತೆ ಬಾರ್‌ನಲ್ಲಿ ಗಲಾಟೆ ಮಾಡಿದ್ದ. ನೌಕರರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಣ್ಣಗಾಗಿತ್ತು.

ಯುಗಾದಿ ಹಬ್ಬದ ದಿನ (ಮಾರ್ಚ್ 28) ಪುಟ್ಟಸ್ವಾಮಿ ಮನೆ ಸಮೀಪದ ಬೇಕರಿಯೊಂದರಲ್ಲಿ ಟೀ ಕುಡಿಯುತ್ತಿದ್ದರು. ಆಗ ಅಲ್ಲೇ ನಡೆದು ಹೋಗುತ್ತಿದ್ದ ಪ್ರತಾಪ್‌ನನ್ನು ಕೂಗಿದ ಅವರು, ‘ನಿನ್ನ ತಂಗಿಯ ಗಂಡ ನಾನೇ’ ಎಂದಿದ್ದರು. ಇದು ಆತನನ್ನು ಮತ್ತಷ್ಟು ಕೆರಳಿಸಿತ್ತು. ಸ್ನೇಹಿತ ಮಾದೇಶ್ ಜತೆ ಸೇರಿಕೊಂಡು ಅವರ ಹತ್ಯೆಗೆ ಸಂಚು ರೂಪಿಸಿದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕುಡಿಸಿ ಕೊಂದರು: ‘ಮಾರ್ಚ್ 29ರ ರಾತ್ರಿ ಪುಟ್ಟಸ್ವಾಮಿ ಅವರನ್ನು ರಾಜಕಾಲುವೆ ಬಳಿ ಕರೆದುಕೊಂಡು ಹೋದ ಆರೋಪಿಗಳು, ಅಲ್ಲಿ ಅವರಿಗೆ ಕಂಠಪೂರ್ತಿ ಕುಡಿಸಿದ್ದರು. ನಂತರ ಪ್ರತಾಪ್, ಮುಷ್ಠಿಯಿಂದ ಎದೆಗೆ ಬಲವಾಗಿ ಗುದ್ದಿದ್ದ. ರಕ್ತ ಕಕ್ಕಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಳಿಕ ಶವವನ್ನು ಮೋರಿಗೆ ಎಸೆದು ಪರಾರಿಯಾಗಿದ್ದರು’ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

‘ರಾತ್ರಿ ಕಳೆದರೂ ಪತಿ ಮನೆಗೆ ಬಾರದ ಕಾರಣ ಮೃತರ ಪತ್ನಿ ಮಾರ್ಚ್ 30ರಂದು ಕೆಂಗೇರಿ ಠಾಣೆಗೆ ದೂರು ಕೊಟ್ಟಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡು, ಪುಟ್ಟಸ್ವಾಮಿ ಅವರ ಪತ್ತೆ ಕಾರ್ಯ ಆರಂಭಿಸಿದೆವು. ಮರುದಿನ ರಾಜಕಾಲುವೆ ಬಳಿ ಅವರ ಚಪ್ಪಲಿಗಳನ್ನು ಕಂಡ ಸಿಬ್ಬಂದಿ, ಸುತ್ತಮುತ್ತ ಹುಡುಕಾಟ ನಡೆಸಿದಾಗ ಮೋರಿಯಲ್ಲಿ ಶವ ಸಿಕ್ಕಿತು.’

‘ಇದೇ ವೇಳೆ ಪ್ರತಾಪ್ ಸಹ ಮನೆ ಬಿಟ್ಟು ಹೋಗಿದ್ದರಿಂದ ಆತನ ಮೇಲೆ ಅನುಮಾನ ವ್ಯಕ್ತವಾಯಿತು. ಅಲ್ಲದೇ, ಅವರಿಬ್ಬರೂ ‘ಪಾರ್ಟಿ ಗೆಳೆಯರು’ ಎಂಬುದು ಸ್ಥಳೀಯರ ವಿಚಾರಣೆಯಿಂದ ತಿಳಿಯಿತು. ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ನಂಜನಗೂಡಿನಲ್ಲಿ ಆತನನ್ನು ವಶಕ್ಕೆ ಪಡೆದವು. ವಿಚಾರಣೆ ವೇಳೆ ಸಿಕ್ಕ ಮಾಹಿತಿಯಿಂದ ಮಾದೇಶ್‌ನನ್ನೂ ಬಂಧಿಸಿದೆವು’ ಎಂದು ಮಾಹಿತಿ ನೀಡಿದರು.

ಮುಖ್ಯಾಂಶಗಳು

* ಕಂಠಪೂರ್ತಿ ಕುಡಿಸಿ ಎದೆಗೆ ಗುದ್ದಿದ್ದ ಹಂತಕರು
* ತಂಗಿ ಹೆಸರಿನಲ್ಲಿ ಛೇಡಿಸುತ್ತಿದ್ದಕ್ಕೆ ಕೃತ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT