ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಗ್ರಾಮ ಮೂರೇ ಕಾಮಗಾರಿ

Last Updated 3 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮೂರು ಗ್ರಾಮ, ಮೂರು ವರ್ಷ, ಮೂರು ಕಾಮಗಾರಿ. ಈ ಮೂರೇ ಪದಗಳು ಸಂಸದ ಜಿ.ಎಂ.ಸಿದ್ದೇಶ್ವರ ಅವರ ‘ಆದರ್ಶ ಗ್ರಾಮ’ದ ಅಭಿವೃದ್ಧಿಯ ಕಥೆ ಹೇಳುತ್ತವೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಮುಸ್ಟೂರು, ಮೂಡಲಮಾಚಿಕೆರೆ, ಸಿದ್ದಿಹಳ್ಳಿ, ಈ ಮೂರು ಗ್ರಾಮಗಳು ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿವೆ. ಮುಸ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಮೂರೂ ಗ್ರಾಮಗಳಿವೆ.

ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ರೂಪಿಸಿದ ‘ಸಂಸದ ಆದರ್ಶ ಗ್ರಾಮ ಯೋಜನೆ’ಯಡಿ ಐದು ವರ್ಷಗಳಲ್ಲಿ ಪ್ರತಿಯೊಬ್ಬ ಸಂಸದ ಕನಿಷ್ಠ ಮೂರು ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಸಮಗ್ರವಾಗಿ ಅಭಿವೃದ್ಧಿ­ಪಡಿಸಬೇಕು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಾಗಿತ್ತು. ಗ್ರಾಮೀಣ ಅಭಿವೃದ್ಧಿಯ ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು 2014ರಲ್ಲಿ ಅಧಿಕಾರಕ್ಕೆ ಬಂದ ಹೊಸದರಲ್ಲಿ ಮೋದಿ ಘೋಷಿಸಿದ್ದರು. ವಿಶೇಷ ಎಂದರೆ, ಯೋಜನೆ ಅನುಷ್ಠಾನಕ್ಕೆ ಯಾವುದೇ ವಿಶೇಷ ಅನುದಾನ ಇಲ್ಲ. ಸಂಸದರ ಅನುದಾನವೂ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಬಳಸಿಕೊಂಡು ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು.

2016ರ ಅಂತ್ಯದ ಒಳಗೆ ಒಂದು ಗ್ರಾಮದ ಅಭಿವೃದ್ಧಿಯಾಗಬೇಕು ಎಂಬುದು ಪ್ರಧಾನಿ ಮೋದಿ ಅವರ ಗಡುವಾಗಿತ್ತು. 2014ರ ನವೆಂಬರ್ 17ರಂದು ಮುಸ್ಟೂರು ಗ್ರಾಮ ಪಂಚಾಯ್ತಿಯಲ್ಲಿ ಈ ಯೋಜನೆಗೆ ಸಿದ್ದೇಶ್ವರ ಚಾಲನೆ ನೀಡಿದ್ದರು.

ಜಿಲ್ಲೆಯಲ್ಲಿ ಈ ಯೋಜನೆ ಆರಂಭವಾಗಿ ಮೂರು ವರ್ಷ ಸಮೀಪಿಸುತ್ತಿದೆ. ಸಂಸದರ ನಿಧಿಯಿಂದ ಕುಡಿಯುವ ನೀರಿಗೆ ₹ 19.5 ಲಕ್ಷ, ಕಾಂಕ್ರೀಟ್ ರಸ್ತೆಗೆ ₹ 2.87 ಕೋಟಿ, ಸಿದ್ದಿಹಳ್ಳಿಯಲ್ಲಿ ಬೀದಿದೀಪ ಅಳವಡಿಕೆಗೆ ₹1.25 ಕೋಟಿ ಅನುದಾನ ನೀಡಲಾಗಿದೆ. ಆದರೆ ಇಷ್ಟು ವರ್ಷಗಳ ಅವಧಿಯಲ್ಲಿ ಆದ  ಕಾಮಗಾರಿಗಳು ಕೇವಲ ಮೂರು. ಅದೂ ಸಂಸದರ ಅನುದಾನದಲ್ಲಿ; ಶುದ್ಧ ಕುಡಿಯುವ ನೀರಿನ ಮೂರು ಘಟಕಗಳು, ಕಾಂಕ್ರೀಟ್ ರಸ್ತೆ ಹಾಗೂ ಸೋಲಾರ್‌ ಬೀದಿದೀಪ ಅಳವಡಿಕೆ. ಮೂರು ಗ್ರಾಮಗಳಲ್ಲಿ ತಲಾ ಒಂದೊಂದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಮುಸ್ಟೂರಿನಲ್ಲಿ ಎರಡು ಕಿ.ಮೀ. ಉದ್ದದ ಸಿಮೆಂಟ್ ರಸ್ತೆಯಾಗಿದೆ. ಸಿದ್ದಿಹಳ್ಳಿಯಲ್ಲಿ 1,800 ಮೀಟರ್ ಬ್ರಿಕ್ಸ್ ಅಳವಡಿಕೆ ಕಾಮಗಾರಿ ನಡೆದಿದೆ. ಸಿದ್ದಿಹಳ್ಳಿಯಲ್ಲಿ ಸೋಲಾರ್ ಆಧಾರಿತ ಬೀದಿದೀಪ ಅಳವಡಿಸಲಾಗಿದೆ.

(ಸಿದ್ದಿಹಳ್ಳಿಯಲ್ಲಿ 1,800 ಮೀಟರ್ ರಸ್ತೆಗೆ ಬ್ರಿಕ್ಸ್ ಅಳವಡಿಕೆ)

ಆಗಬೇಕಾದ ಕೆಲಸಗಳು

ಮಳೆಯಾಶ್ರಿತ ಕೃಷಿ, ಪರಿಶಿಷ್ಟ ಜಾತಿ ಮತ್ತು ವರ್ಗ ಹಾಗೂ ಹಿಂದುಳಿದವರೇ ಹೆಚ್ಚಾಗಿ ವಾಸಿಸುತ್ತಿರುವ ಈ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದು. ಸಿಗುವ ಒಂದಿಷ್ಟು ನೀರಿನಲ್ಲೂ ಫ್ಲೋರೈಡ್‌ ಅಂಶವೇ ಹೆಚ್ಚು.

ಈ ಯೋಜನೆಯಡಿ ಗ್ರಾಮಕ್ಕೊಂದು ತಲಾ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಅವುಗಳಿಗೆ ಜನರ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಇರುವ ಒಂದು ಓವರ್‌ಹೆಡ್‌ ಟ್ಯಾಂಕ್‌ ಸಾಕಾಗುತ್ತಿಲ್ಲ. ಗ್ರಾಮದ ಕೆಲವು ರಸ್ತೆಗಳಿಗೆ ಚರಂಡಿಗಳೇ ಇಲ್ಲ. ಇನ್ನೂ ಕೆಲವು ರಸ್ತೆಗಳಿಗೆ ಚರಂಡಿ ವ್ಯವಸ್ಥೆ ಇದ್ದರೂ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕೊಳಚೆ ನೀರು ಸಂಗ್ರಹಗೊಂಡಿರುವುದರಿಂದ ಮೂರೂ ಊರುಗಳಲ್ಲಿ ಸೊಳ್ಳೆಕಾಟ ವಿಪರೀತ. ಚಿಕುನ್ ಗುನ್ಯಾ ಸಾಮಾನ್ಯ ಕಾಯಿಲೆಯಾಗಿದ್ದು, ಚಳಿಗಾಲದ ವೇಳೆ ಇಡೀ ಊರಿಗೆ ಊರೇ ಆಸ್ಪತ್ರೆ ಸೇರುವುದು ಮಾಮೂಲಿ.

(ಮೂಡಲಮಾಚಿಕೆರೆಯಲ್ಲಿ ಅಳವಡಿಸಿದ ಸೋಲಾರ್ ದೀಪ)

ಬಹಳಷ್ಟು ಮನೆಗಳಿಗೆ ಇನ್ನೂ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದ ಭಾಗ್ಯ ಸಿಕ್ಕಿಲ್ಲ. ಬೆಸ್ಕಾಂಗೆ ಅರ್ಜಿ ಕೊಟ್ಟರೆ ಕಂಬ ಇಲ್ಲ ಎಂದು ಉತ್ತರಿಸುತ್ತಾರೆ ಎಂಬ ಅಳಲು ಸಿದ್ದಿಹಳ್ಳಿಯ ರಾಮಚಂದ್ರ ಅವರದ್ದು. ನಿವೇಶನಗಳ ಕೊರತೆ ಇನ್ನೊಂದು ದೊಡ್ಡ ಸಮಸ್ಯೆ. ನಿವೇಶನರಹಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಶೇ 68ರಷ್ಟು ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇದೆ.

ಜೀವನಮಟ್ಟ ಸುಧಾರಣೆ
ಭೌತಿಕ ಕಾಮಗಾರಿಗಳ ಜತೆಗೆ ಜನರ ಜೀವನ ಮಟ್ಟ ಸುಧಾರಿಸುವ ಬಹಳಷ್ಟು ಕಾರ್ಯಕ್ರಮಗಳನ್ನೂ ಈ ಮೂರೂ ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಸುಮಾರು 50 ರೈತರಿಗೆ ಎರೆಹುಳು ತೊಟ್ಟಿ ನಿರ್ಮಿಸಿಕೊಡಲಾಗಿದೆ. ವಯಸ್ಕರ ಶಿಕ್ಷಣ ಯೋಜನೆಯಡಿ ಗ್ರಾಮದ ಹಿರಿಯರಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ. ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಅಷ್ಟೂ ಜನರಿಗೆ ಆಧಾರ್ ಕಾರ್ಡ್ ಮಾಡಿಸಲಾಗಿದೆ. ಅರ್ಹ ಎಲ್ಲಾ ಅಂಗವಿಕಲರಿಗೆ ಮಾಸಾಶನ ನೀಡಲಾಗುತ್ತಿದೆ ಎನ್ನುತ್ತಾರೆ ಮುಸ್ಟೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಎ.ಎಸ್‌.ಶಿವಕುಮಾರ್.

(ಎ.ಎಸ್‌.ಶಿವಕುಮಾರ್)

ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 62 ಬೀದಿದೀಪ ಅಳವಡಿಸಲಾಗಿದೆ. ಮುಸ್ಟೂರಿಗೆ 32, ಮೂಡಲಮಾಚಿಕೆರೆಗೆ 13 ಹಾಗೂ ಸಿದ್ದಿಹಳ್ಳಿಯಲ್ಲಿ 15. ಒಂದು ಓವರ್‌ಹೆಡ್‌ ಟ್ಯಾಂಕ್‌ ಇದ್ದು, ಇನ್ನೊಂದು ನಿರ್ಮಿಸಲು ಈಗಾಗಲೇ ಟೆಂಡರ್‌ ಆಗಿದೆ. ಅದಕ್ಕೆ ₹26 ಲಕ್ಷ ಮೀಸಲಿಡಲಾಗಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗ ಸರಾಸರಿ ಪ್ರತಿ ದಿವಸ 178 ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ನೀಡಲಾಗುತ್ತಿದೆ. ಕೃಷಿ, ತೋಟಗಾರಿಕೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ರಾಜ್‌ ಎಂಜಿನಿಯರಿಂಗ್ ವಿಭಾಗ, ಬೆಸ್ಕಾಂ, ಪಶುಪಾಲನಾ ಇಲಾಖೆಗಳು ಸಾಕಷ್ಟು ಕಾಮಗಾರಿಗಳನ್ನು ಕೈಗೊಂಡಿವೆ.

ಇದರೊಂದಿಗೆ ಗ್ರಾಮ ಪಂಚಾಯಿತಿ ವತಿಯಿಂದ ತೆಗೆದುಕೊಂಡ ಕಾಮಗಾರಿಗಳು ಸಾಕಷ್ಟಿವೆ. 14ನೇ ಹಣಕಾಸು ಆಯೋಗದ ಶಿಫಾರಸಿನ ಅನುದಾನ ₹3.50ಲಕ್ಷ, 13ನೇ ಹಣಕಾಸು ಯೋಜನೆಯಿಂದ ₹1.64 ಲಕ್ಷ, ಬಿಆರ್‌ಜಿಎಫ್‌ ಅನುದಾನ ₹5 ಲಕ್ಷ, ಎಂಜಿಎನ್‌ಆರ್‌ಇಜಿಎ ಯೋಜನೆ ಅನುದಾನ ₹ 18 ಲಕ್ಷ, ಸ್ವಚ್ಛ ಭಾರತ್ ಮಿಷನ್ ಯೋಜನೆ ಅನುದಾನ ₹3.55 ಲಕ್ಷ, ಇಂದಿರಾ ಆವಾಸ್‌ ಯೋಜನೆ ₹23.56 ಲಕ್ಷ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡುತ್ತಾರೆ ಪಿಡಿಒ. ಗ್ರಾಮಗಳ ಅಭಿವೃದ್ಧಿ ಆಗದೇ ಇರುವುದಕ್ಕೆ ರಾಜ್ಯ ಸರ್ಕಾರದ ಉಪೇಕ್ಷೆಯೇ ಕಾರಣ ಎನ್ನುವುದು ಜಿ.ಎಂ.ಸಿದ್ದೇಶ್ವರ ಅವರ ಆಕ್ಷೇಪ.

(ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಸಂಸದರ ಆದರ್ಶ ಗ್ರಾಮ ಮೂಡಲಮಾಚಿಕೆರೆಯಲ್ಲಿ ಉದ್ಯೋಗ ಖಾತ್ರಿ ಕೆಲಸದಲ್ಲಿ ನಿರತರಾದ ಕೂಲಿ ಕಾರ್ಮಿಕರು)

ಇನ್ನೊಂದೆಡೆ, ಒಂದು ಗ್ರಾಮದ ಬದಲಿಗೆ ಮೂರು ಗ್ರಾಮಗಳಿರುವ ಮುಸ್ಟೂರು ಗ್ರಾಮ ಪಂಚಾಯ್ತಿಯನ್ನು ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆ ಮಾಡಿಕೊಂಡಿರುವುದಕ್ಕೆ ಜಿಲ್ಲಾ ಪಂಚಾಯ್ತಿ ಹಿರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಒಂದನ್ನೇ ಆಯ್ಕೆ ಮಾಡಿಕೊಂಡಿದ್ದರೆ ಇಷ್ಟರ ಒಳಗೆ ಕನಿಷ್ಠ ಒಂದು ಗ್ರಾಮವಾದರೂ ಸಮಗ್ರ ಅಭಿವೃದ್ಧಿ ಕಾಣುತ್ತಿತ್ತು ಎಂಬ ಅಭಿಪ್ರಾಯ ಅವರದ್ದು.

‘ಗ್ರಾಮದಲ್ಲಿ ಭಾರೀ ಬದಲಾವಣೆ ಆಗುತ್ತದೆ ಎಂದುಕೊಂಡಿದ್ದೆವು. ಆದರೆ, ಮಹತ್ತರ ಕೆಲಸಗಳೇನೂ ಆಗಿಲ್ಲ. ನಮಗೇನು ಬೇಕು, ಶುದ್ಧ ಕುಡಿಯುವ ನೀರು, ಚರಂಡಿ, ಬಸ್‌ ಸೌಲಭ್ಯ ಅಷ್ಟೇ. ಇವುಗಳನ್ನೇ ಪೂರೈಸದಿದ್ದರೆ ಆದರ್ಶ ಗ್ರಾಮವಾಗಿ ಪ್ರಯೋಜನವೇನು?’ ಎಂಬ ಪ್ರಶ್ನೆ ಮುಸ್ಟೂರು ಹಿರಿಯ ಗ್ರಾಮಸ್ಥ ಪಿ.ಟಿ.ತಿಪ್ಪೇಸ್ವಾಮಿ ಅವರದ್ದು.

‘ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಆದರೆ, ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ದಿನದ 24 ಗಂಟೆಯೂ ವೈದ್ಯರ ಸೇವೆ ಲಭ್ಯ ಇರುವಂತೆ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸುತ್ತಾರೆ ಬೋರೇಶ್.

**

‘ಸಂಸದರ ನಿಧಿಯಿಂದ ಇದುವರೆಗೂ ₹ 5 ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದೇನೆ. ಯೋಜನೆಗೆ ಯಾವುದೇ ನಿರ್ದಿಷ್ಟ ಅನುದಾನ ಇರುವುದಿಲ್ಲ. ಗ್ರಾಮಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕಾಳಜಿ ವಹಿಸಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಉಳಿದ ಗ್ರಾಮಗಳಂತೆ ಇದನ್ನು ಪರಿಗಣಿಸಬಾರದು’.

-ಸಂಸದ ಜಿ.ಎಂ.ಸಿದ್ದೇಶ್ವರ

**

ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಕಾಮಗಾರಿಗಳ ಅನುಷ್ಠಾನ ಸಿದ್ದಿಹಳ್ಳಿ ಹಾಗೂ ಮುಸ್ಟೂರಿನಲ್ಲಿ ಶೇ 75ರಷ್ಟು ಪ್ರಗತಿ ಸಾಧಿಸಲಾಗಿದೆ. ಮೂಡಲಮಾಚಿಕೆರೆಯಲ್ಲಿ ಶೇ 40ರಷ್ಟು ಪ್ರಗತಿಯಾಗಿದೆ.
–ಬಿ.ಲಕ್ಷ್ಮಿಪತಿ, ಕಾರ್ಯಾನುಷ್ಠಾನಾಧಿಕಾರಿ, ಆದರ್ಶ ಗ್ರಾಮ

**

ಚರಂಡಿ ಸ್ವಚ್ಛತೆ, ಬೋರ್‌ವೆಲ್‌ಗೆ ಇಂಗುಗುಂಡಿ ನಿರ್ಮಾಣ, ಮನೆ ನಿರ್ಮಾಣ ಕಾಮಗಾರಿಗಳಿಗೆ ವಿವಿಧ ಯೋಜನೆಯಡಿ ಅನುದಾನ ಮೀಸಲಿಡಲಾಗಿದೆ. ಆದರೆ, ಯಾವ ಕಾಮಗಾರಿಗಳೂ ಆರಂಭಗೊಂಡಿಲ್ಲ.

–ಬೋರೇಶ್, ಗ್ರಾಮಸ್ಥ, ಮುಸ್ಟೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT