ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕದಿಂದ ಬದುಕಿಗೆ ಅರ್ಥ, ಸಿನಿಮಾದಿಂದ ಅನ್ನ...

Last Updated 5 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

l ರಂಗಭೂಮಿ ಅಂದರೆ ನಿಮ್ಮ ಪಾಲಿಗೆ ಏನು?
ಪದವಿ ಮುಗಿಯುವವರೆಗೆ ನನಗೆ ರಂಗಭೂಮಿಯೆಂದರೆ ಅಷ್ಟಕ್ಕಷ್ಟೆ. ಓದು ಮುಗಿಸಿ ಕೆಲಸಕ್ಕೆ ಸೇರಿಕೊಂಡ ಕೆಲವು ತಿಂಗಳಲ್ಲೇ ಉದ್ಯೋಗದ ಮೇಲಿನ ಆಸಕ್ತಿ ಕಳೆದುಕೊಂಡೆ. ಆಗ ಏನಾದರೂ ಮಾಡಬೇಕು ಎಂದು ಆಲೋಚಿಸಿದಾಗ ಮನಸ್ಸು ನಟನೆಯತ್ತ ವಾಲಿತು.

ಕೆಲಸಕ್ಕೆ ಗುಡ್‌ಬೈ ಹೇಳಿದವನೇ ಅಭಿನಯ ತರಬೇತಿ ಶಾಲೆಗಳಿಗೆ ಅಲೆದೆ. ನಾಟಕಗಳನ್ನು ನೋಡತೊಡಗಿದೆ. ರಂಗಶಿಬಿರಗಳಲ್ಲಿ ಭಾಗವಹಿಸತೊಡಗಿದೆ. ಆರು ತಿಂಗಳು ನಟನೆ ಕಲಿತರೆ, ಆಮೇಲೆ ಅವಕಾಶಗಳ ಮಹಾಪೂರ ಹರಿದುಬರುತ್ತದೆ ಅಂದುಕೊಂಡಿದ್ದೆ. ವಾಸ್ತವ ಬೇರೆಯೇ ಇತ್ತು.

ನಟನೆ ಕಾಲಮಿತಿಯಲ್ಲಿ ಸಿದ್ಧಿಸುವುದಿಲ್ಲ ಎಂದು ಅರಿವಾಯಿತು.ನಂತರ ಹಲವು ರಂಗತಂಡಗಳ ಜತೆ ಕೆಲಸ ಮಾಡತೊಡಗಿದೆ. ಬೀದಿನಾಟಕ ಸೇರಿದಂತೆ, ಹೊಟ್ಟೆ ತುಂಬಿಸಿಕೊಳ್ಳಲು ಸೆಟ್‌ ಹಾಕುವ ಕೆಲಸವನ್ನೂ ಮಾಡಿದ್ದರ ಫಲವಾಗಿ ಇಂದು ಕಲಾವಿದನಾದೆ. ನಾನಿಂದು ನಟನಾಗಿ ಗುರುತಿಸಿಕೊಂಡಿರುವುದರ ಹಿಂದೆ ಹಲವರ ಶ್ರಮವಿದೆ. ಹೀಗೆ ರಂಗಭೂಮಿಯಲ್ಲಿ ನಿಜ ಬದುಕಿನ ಅರ್ಥ ಕಂಡುಕೊಂಡೆ.

l  ಕ್ರೀಡೆಯಲ್ಲಿ ತುಂಬಾ ಜಾಣರಾಗಿದ್ದಿರಂತಲ್ಲ?
ಶಾಲಾ ಕಾಲೇಜು ದಿನಗಳಲ್ಲಿ ನನಗೆ ಕ್ರೀಡೆಯಲ್ಲಿ ತುಂಬಾ ಆಸಕ್ತಿ. ಎಲ್ಲಾ ಆಟಗಳನ್ನು ಆಡುತ್ತಿದ್ದೆ. ಕ್ರಿಕೆಟ್‌ ತುಂಬಾ ಇಷ್ಟ. ಯಾವಾಗಲೂ ಗ್ರೌಂಡ್‌ನಲ್ಲೇ ಇರುತ್ತಿದ್ದೆ. ಕುದುರೆ ಸವಾರಿ ಕೂಡ ಕಲಿತೆ.

l ಸಿನಿಮಾಯಾನ ಎಲ್ಲಿಂದ ಶುರುವಾಯಿತು?
ಒಮ್ಮೆ ಸ್ನೇಹಿತನೊಬ್ಬ ಕರೆ ಮಾಡಿ, ‘ಜೇಕಬ್ ವರ್ಗೀಸ್ ನಿರ್ದೇಶಿಸುತ್ತಿರುವ ‘ಸವಾರಿ’ ಸಿನಿಮಾದಲ್ಲಿ ಚಿಕ್ಕದೊಂದು ನೆಗೆಟಿವ್ ರೋಲ್ ಇದೆ ಮಾಡ್ತೀಯಾ?’ ಅಂದ. ಸರಿ ಎಂದು ಹೋದೆ. ನಿರ್ದೇಶಕರು ಡೈಲಾಗ್ ಶೀಟ್‌ ಕೊಟ್ಟು, ದೃಶ್ಯ ಚಿತ್ರೀಕರಿಸಿಕೊಂಡರು. ಎಲ್ಲ ಮುಗಿದ ಬಳಿಕ ಜೇಕಬ್ ಸರ್ ಹತ್ತಿರ ಕರೆದು, ‘ನಿಮ್ಮ ಆ್ಯಕ್ಟಿಂಗ್ ಚೆನ್ನಾಗಿದೆ. ಧ್ವನಿ ಡಬ್ ಮಾಡುವಂತಿಲ್ಲ. ವಾಯ್ಸ್ ಮಾಡ್ಯುಲೇಷನ್ ಮಾಡಿಕೊಳ್ಳಿ’ ಎಂದು ಸಲಹೆ ನೀಡಿ, ಮೂರು ಸಾವಿರ ಸಂಭಾವನೆ ಕೊಟ್ಟರು.

ನಂತರ, ರಂಗಶಂಕರದಲ್ಲಿ ಬಂದಿದ್ದ ಚೇತನ್ ದಾತಾರ್, ರಾಜೇಂದ್ರ ಕಾರಂತ್ ಸೇರಿದಂತೆ ನಾನು ಗುರುತಿಸಿಕೊಂಡಿದ್ದ ತಂಡದಲ್ಲಿದ್ದ ರಂಗಕರ್ಮಿಗಳು ನನ್ನ ನಟನೆಯನ್ನು ತಿದ್ದಿ ತೀಡಿದರು. ಆಗಿನಿಂದ ಧ್ವನಿಯ ಬಗ್ಗೆ ಹೆಚ್ಚು ಆಸ್ಥೆ ವಹಿಸಿ ಬೇಸ್ ವಾಯ್ಸ್ ಮಾಡಿಕೊಂಡೆ. ಸಿನಿಮಾದಲ್ಲಿ ಖಳರ ಗುಂಪಿನಲ್ಲಿರುವ ಪಾತ್ರಗಳು ಆಗಾಗ ಸಿಗತೊಡಗಿದವು. ‘ಭಜರಂಗಿ’ ಚಿತ್ರದ ಪಾತ್ರ ಸಿಗುವುದಕ್ಕೂ ಮುಂಚೆ ‘ಮತ್ತೆ ಮುಂಗಾರು’, ‘ಶಿವ’, ‘ಸಡಗರ’, ‘ನರಸಿಂಹ’, ‘ಗೂಗ್ಲಿ’ ಸೇರಿದಂತೆ 12 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೆ.

l  ‘ಭಜರಂಗಿ’ಗೆ ಆಯ್ಕೆಯಾಗಿದ್ದು ಹೇಗೆ?
ಕೈಲಾಸಂ ಅವರ ‘ಪೋಲಿ ಕಿಟ್ಟಿ’ ನಾಟಕ ಮಾಡಲು ತಯಾರಿ ನಡೆಸುತ್ತಿದ್ದೆವು. ಪಾತ್ರಕ್ಕಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದೆ. ನಮ್ಮ ತಂಡದಲ್ಲಿದ್ದ ಸ್ನೇಹಿತ, ನಿರ್ದೇಶಕ ಹರ್ಷ ಅವರೊಂದಿಗೆ ಕೆಲಸ ಮಾಡಿದ್ದ. ನಾಟಕದ ಪ್ರದರ್ಶನಕ್ಕೆ ಅವರನ್ನೂ ಆಹ್ವಾನಿಸಿದ್ದ. ಅವರು ನನ್ನ ಅಭಿನಯ ಮೆಚ್ಚಿ ಚಿತ್ರದಲ್ಲಿ ಅವಕಾಶ ನೀಡುವ ಭರವಸೆ ನೀಡಿದರು.

‘ಭಜರಂಗಿ’ ಪ್ರಾಜೆಕ್ಟ್ ಆರಂಭವಾದಾಗ ನನ್ನನ್ನು ಕರೆದು, ‘ಎರಡು ನಿಮಿಷದ ಖಳನ ಪಾತ್ರವಿದೆ ಮಾಡ್ತೀಯಾ?’ ಎಂದರು. ಖಂಡಿತಾ ಸರ್ ಎಂದೆ. ಆಗವರು, ‘ನೀನು ತಲೆ ಬೋಳಿಸಬೇಕು. ಆಗಲ್ಲಾಂದ್ರೆ ಬೇರೆಯವ್ರು ರೆಡಿ ಇದ್ದಾರೆ. ಯೋಚಿಸಿ ಹೇಳು’ ಎಂದರು. ‘ನೋಡುವುದೇನಿಲ್ಲ, ಮಾಡ್ತೀನಿ’ ಎಂದೆ. ‘ಕೆಲವು ತಿಂಗಳಲ್ಲಿ ಪ್ರಾಜೆಕ್ಟ್ ಶುರುವಾಗುತ್ತೆ, ಅಷ್ಟರೊಳಗೆ ಸ್ವಲ್ಪ ಬಾಡಿ ಬಿಲ್ಡ್ ಮಾಡಿಕೊ’ ಎಂದರು.

ಶೂಟಿಂಗ್ ಆರಂಭಕ್ಕೂ ಮುಂಚೆ ಟೆಸ್ಟ್ ಶೂಟ್ ಮಾಡಿದರು. ಮೇಕಪ್‌ನಲ್ಲಿ ನನ್ನ ಅಭಿನಯ ಮತ್ತು ಮ್ಯಾನರಿಸಂ ಮೆಚ್ಚಿಕೊಂಡ ಅವರು, ಎರಡು ನಿಮಿಷವಿದ್ದ ಪಾತ್ರವನ್ನು ಮತ್ತಷ್ಟು ಹಿಗ್ಗಿಸಿದರು. ‘ರಕ್ತಾಕ್ಷ’ ಪಾತ್ರದ ಮೂಲಕ ನನ್ನ ಹೆಸರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ನಂತರ ‘ಜೈ ಮಾರುತಿ 800’ನಲ್ಲೂ ವಿಭಿನ್ನ ಖಳನ ಪಾತ್ರ ಕೊಟ್ಟು ಬೆನ್ನು ತಟ್ಟಿದರು. 

l  ನಿಮ್ಮ ಹುರಿಗಟ್ಟಿದ ದೇಹದ ಗುಟ್ಟೇನು?
ಆಟೋಟದಿಂದ ದೇಹ ಗಟ್ಟಿಯಾಯಿತು. ರಂಗಭೂಮಿಯಲ್ಲಿ ಸಕ್ರಿಯನಾದಾಗ ಅದು ಮತ್ತಷ್ಟು ಹೆಚ್ಚಾಯಿತು. ಜಿಮ್‌ನಲ್ಲಿ ತರಬೇತುದಾರನಾಗಿಯೂ ಕೆಲಸ ಮಾಡಿದ್ದೇನೆ. ನನ್ನ ಈ ಎತ್ತರ ಮತ್ತು ಮೈಕಟ್ಟಿನಿಂದಾಗಿಯೇ ಸಿನಿಮಾದಲ್ಲಿ ಖಳರ ಗುಂಪಿನ ಮಧ್ಯೆ ನಾನೂ ನಿಲ್ಲುವ ಅವಕಾಶ ಸಿಕ್ಕಿದ್ದು. 

l  ಎಂತಹ ಪಾತ್ರಗಳ ನಿರೀಕ್ಷೆಯಲ್ಲಿದ್ದೀರಿ?
ಭಿನ್ನವಾಗಿರುವ ಪಾತ್ರಗಳೆಂದರೆ ನನಗಿಷ್ಟ. ‘ಭಜರಂಗಿ’ ನಂತರ ‘ರಥಾವರ’, ‘ಜೈ ಮಾರುತಿ 800’ ಹಾಗೂ ‘ಜಾಗ್ವಾರ್’ ಚಿತ್ರದ ಪಾತ್ರಗಳಲ್ಲಿ ಅಂತಹದ್ದೊಂದು ವಿಭಿನ್ನತೆ ಇದೆ. ಹಿಂದಿಯಲ್ಲಿ ನವಾಜುದ್ದೀನ್ ಸಿದ್ದಿಕಿ ಅವರು ನಿರ್ವಹಿಸುವ ಪಾತ್ರಗಳಲ್ಲಿರುವ ವೈವಿಧ್ಯ, ನನಗೆ ಸಿಗುವ ಪಾತ್ರಗಳಲ್ಲೂ ಇರಬೇಕೆಂದು ಬಯಸುತ್ತೇನೆ. ಅಂತಹ ಪಾತ್ರಗಳು ಸಿಕ್ಕರೆ, ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಂಡು ನಟಿಸಲು ಸಿದ್ಧ.

l  ನಾಯಕನಟನಾಗುವ ಆಸೆ ಇಲ್ಲವೆ?
ನಾಯಕನಟನಾಗುವ ಅವಕಾಶಗಳು ಬಂದಿದ್ದವು. ಆದರೆ, ನಯವಾಗಿಯೇ ಅವುಗಳನ್ನು ತಿರಸ್ಕರಿಸಿದೆ. ಯಾಕೆಂದರೆ, ನನ್ನನ್ನು ಬೆಳೆಸುವಂತಹ ಸ್ವಭಾವ ಆ ಪಾತ್ರಗಳಿಗಿರಲಿಲ್ಲ. ಸಣ್ಣ ಪಾತ್ರವಾದರೂ ಅದಕ್ಕೊಂದು ಪ್ರಾಮುಖ್ಯ ಇರಬೇಕು. ಜನರ ಮನಸ್ಸಿನಲ್ಲಿ ಉಳಿಯಬೇಕು. 

lಸದ್ಯ ಯಾವ ಸಿನಿಮಾಗಳಲ್ಲಿ ನಟಿಸುತ್ತಿದ್ದೀರಿ?
‘ರಾಜ್‌ ವಿಷ್ಣು’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದೇನೆ. ‘ರಾಜ್‌ ವಿಷ್ಣು’ ಚಿತ್ರದಲ್ಲಿ ಮುಖ್ಯ ಖಳನ ಪಾತ್ರ. ನಿರ್ದೇಶಕರು ಅತ್ಯಂತ ಭಿನ್ನವಾಗಿ ಪಾತ್ರ ಕಟ್ಟಿದ್ದಾರೆ. ಶಾಂತ ಸ್ವಭಾವದ ಖಳನ ಪಾತ್ರ ಅದು. ಕನ್ನಡದ ಮಟ್ಟಿಗೆ ಅದೊಂದು ಹೊಸ ಪ್ರಯೋಗ ಅನಿಸುತ್ತದೆ. ಉಳಿದಂತೆ ಮೂರ್ನಾಲ್ಕು ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿದ್ದೇನೆ.

lರಂಗಭೂಮಿ, ಸಿನಿಮಾ ನಿಮ್ಮ ಬದುಕಿಗೆ ತಂದ ಬದಲಾವಣೆ?
ರಂಗಭೂಮಿ ಬದುಕಿನ ಅರ್ಥ ಕಲಿಸಿಕೊಟ್ಟರೆ, ಸಿನಿಮಾ ಅನ್ನ ಕೊಡುತ್ತಿದೆ. ಅವೆರಡೂ ನನ್ನ ಬದುಕಿನ ಅವಿಭಾಜ್ಯ ಅಂಗಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT