ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯತ್‌ ರಾಜ್‌ ಭವಿಷ್ಯ?

Last Updated 5 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸಂವಿಧಾನದ ಆಶಯದಂತೆ, ದೇಶದ ತುಂಬೆಲ್ಲ ಪಂಚಾಯತ್‌ ರಾಜ್ ಸಂಸ್ಥೆಗಳ ಸ್ಥಾಪನೆಯಾಗಿದೆ. ಗಾಂಧಿ ಅವರ ಮೂಲ ಆಶಯವಾಗಿದ್ದ ಸ್ವರಾಜ್ಯದ ಕಲ್ಪನೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ರೂಪುಗೊಂಡಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಎಂಬ ಮೂರು ಹಂತದ ಸಂಸ್ಥೆಗಳ ಮೂಲಕ ದೇಶದ ಎಲ್ಲ ನಾಗರಿಕರು ಪಂಚಾಯತ್‌ ರಾಜ್ ವ್ಯವಸ್ಥೆಗೆ ಒಳಗಾಗಿದ್ದಾರೆ.

ಇಲ್ಲಿ ಅವರು ಎರಡು ರೀತಿಯಲ್ಲಿ ಭಾಗಿಯಾಗಿದ್ದಾರೆ. ಮೊದಲನೆಯದು ಮತದಾರರಾಗಿ ಮತ್ತು ಎರಡನೆಯದು ಫಲಾನುಭವಿಗಳಾಗಿ. ಇಷ್ಟೊಂದು ದೊಡ್ಡ ಗ್ರಾಮೀಣ ಅಭಿವೃದ್ಧಿ ವ್ಯವಸ್ಥೆ ರೂಪುಗೊಂಡಿರುವಾಗ ಸಹಜವಾಗಿಯೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪಂಚಾಯತ್ ರಾಜ್ ವ್ಯವಸ್ಥೆಯ ಮೇಲೆ ತಮ್ಮ ನಿಯಂತ್ರಣ ಇಟ್ಟುಕೊಳ್ಳಲು ಬಯಸುತ್ತವೆ. ಆ ನಿಯಂತ್ರಣ ರಾಜಕೀಯ ಮತ್ತು ಆರ್ಥಿಕ ಅನುದಾನದ ರೂಪದಲ್ಲಿ ಇರುತ್ತದೆ ಮತ್ತು ಅದು ಬಲು ಬಲವಾಗಿರುವಂಥದ್ದು. ಪಂಚಾಯತ್‌ ರಾಜ್ ಸಂಸ್ಥೆಗಳಿಗೆ ಜನರಿಂದ ಚುನಾಯಿತರಾದ ಪ್ರತಿನಿಧಿಗಳು ಬರುವರಾದರೂ, ಅವರು ಸ್ವತಂತ್ರವಾಗಿ ಯೋಚನೆ ಮಾಡುವ ಅಥವಾ ಕಾರ್ಯವೆಸಗುವ ಸ್ಥಿತಿಯಲ್ಲಿ ಇರುವುದಿಲ್ಲ!

ಪಂಚಾಯತ್‌ ರಾಜ್ ಸಂಸ್ಥೆಗಳು ಸ್ವತಂತ್ರ ವಿಕೇಂದ್ರಿತ ಘಟಕಗಳೆಂದು ತಾತ್ವಿಕವಾಗಿ ಹೇಳಲಾಗುತ್ತಿದ್ದರೂ, ಅವು ಪರೋಕ್ಷವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಜ್ಞೆ ಪಾಲಿಸುವ, ಹೇಳಿದಂತೆ ನಡೆಯುವ ಏಜೆಂಟ್‌ಗಳೇ ಆಗಿರುತ್ತವೆ. ಇದು ಅಭಿವೃದ್ಧಿ ಪರ್ವವಾಗಿರುವುದರಿಂದ ಯಾವುದೇ ಪ್ರಕಾರದ ಅಭಿವೃದ್ಧಿಯಾಗಿರಲಿ, ಅದನ್ನು ಸಾಧಿಸಲು ಹೇರಳವಾಗಿ ಹಣ ಬೇಕಾಗುತ್ತದೆ. ಆಗ ವಿತರಣೆ ಮತ್ತು ಖರ್ಚಾಗುವ ಹಣದ ಮೇಲೆ ನಿಯಂತ್ರಣ ಬಂದೇ ಬರುತ್ತದೆ. ಇಡೀ ಪಂಚಾಯತ್‌ ರಾಜ್ ವ್ಯವಸ್ಥೆ ಮೇಲೆ ಪಂಚಾಯತ್ ರಾಜ್‌ ಇಲಾಖೆಯ ನಿಯಂತ್ರಣ; ತಾಲ್ಲೂಕು ಪಂಚಾಯಿತಿಗಳ  ಮೇಲೆ ಜಿಲ್ಲಾ ಪಂಚಾಯಿತಿ ನಿಯಂತ್ರಣ; ಗ್ರಾಮ ಪಂಚಾಯಿತಿಗಳ ಮೇಲೆ ತಾಲ್ಲೂಕು ಪಂಚಾಯಿತಿ ನಿಯಂತ್ರಣ; ಈ ರೀತಿ ಮೇಲಿನಿಂದ ಕೆಳ ಹಂತದವರೆಗೆ ನಿಯಂತ್ರಣ ಇರುತ್ತದೆ. ಇಂಥ ಸ್ಥಿತಿಯಲ್ಲಿ ತಮ್ಮನ್ನು ಸರ್ವತಂತ್ರ ಸ್ವತಂತ್ರ ಎಂದು ಭಾವಿಸಿರುವ ಜನತಾ ಪ್ರತಿನಿಧಿಗಳು ಪಂಚಾಯತ್‌ ರಾಜ್ ವ್ಯವಸ್ಥೆಯಲ್ಲಿ ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡಬೇಕಾಗುತ್ತದೆ. ಏಕಕಾಲದಲ್ಲಿ ಅವರು ಸರ್ವತಂತ್ರ ಸ್ವತಂತ್ರ ವ್ಯಕ್ತಿಗಳಾಗಿಯೂ, ಇನ್ನೊಂದೆಡೆ ಪರೋಕ್ಷವಾಗಿ ಸರ್ಕಾರಿ ನೌಕರರಂತೆಯೂ ಕೆಲಸ ಮಾಡಬೇಕಾಗುತ್ತದೆ. ಆಗ ಈ ವ್ಯವಸ್ಥೆಯ  ನಿಜವಾದ ಧ್ಯೇಯೋದ್ದೇಶಗಳು ನೆರವೇರುವುದಿಲ್ಲ. ಬದಲಿಗೆ ಈ ಸಂಸ್ಥೆಗಳು ರಾಜಕೀಯ ಮೇಲಾಟದ ಮತ್ತು ಭ್ರಷ್ಟಾಚಾರದ ಸ್ಥಳಗಳಾಗಿ ಪರಿವರ್ತಿತಗೊಳ್ಳುತ್ತವೆ.

ಈ ವ್ಯವಸ್ಥೆ ದೇಶದಲ್ಲಿ ಪ್ರಾರಂಭವಾಗಿ ಆರು ದಶಕಗಳೇ ಆದವು. ಆದರೆ ಈ ಅವಧಿಯಲ್ಲಿ ಇದರ  ಗುರಿಯಾದ ಗ್ರಾಮೀಣಾಭಿವೃದ್ಧಿಗೆ ಸ್ಪಷ್ಟ ರೂಪುರೇಷೆಗಳೇ ದೊರೆತಿಲ್ಲ. ದೇಶದ ಅಭಿವೃದ್ಧಿಗಾಗಿ ಪಂಚವಾರ್ಷಿಕ ಯೋಜನೆ ಮತ್ತು ಅವುಗಳನ್ನು ತಯಾರಿಸಿ ಜಾರಿಗೆ ತರುವ ನೀತಿ ಆಯೋಗದಂಥ ವ್ಯವಸ್ಥೆ ಪಂಚಾಯತ್‌ ರಾಜ್ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ಇಲ್ಲ. ನಿರ್ದಿಷ್ಟ ಯೋಜನೆಯ ಬೆಳವಣಿಗೆಯ ರೀತಿ ಸ್ಪಷ್ಟವಾಗಿಲ್ಲದಿರುವುದರಿಂದ ಗ್ರಾಮ ಮತ್ತು ಪಟ್ಟಣಗಳು ತಮ್ಮ ಮನಸೋ ಇಚ್ಛೆ ಬೆಳೆಯುತ್ತಿವೆ. ಈ ಬೆಳವಣಿಗೆಯಲ್ಲಿ ಅವು ತಮ್ಮ ಗ್ರಾಮೀಣ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿವೆ. ಆದ್ದರಿಂದ ಪ್ರತಿಯೊಂದು ಗ್ರಾಮ, ಪಟ್ಟಣ ಮತ್ತು ನಗರವೂ ಮೂಲ ಸೌಕರ್ಯಗಳ ಅಭಾವದಿಂದ ಕೊಂಪೆಗಳಾಗುತ್ತಿವೆ. ಜನಪ್ರತಿನಿಧಿಗಳ ಉತ್ಸಾಹದ ಪಾಲುಗಾರಿಕೆಯಿಂದ ಗ್ರಾಮ ಮತ್ತು ಪಟ್ಟಣಗಳು ನಿರೀಕ್ಷಿತ ನಂದನವನ ಆಗುತ್ತಿಲ್ಲವಾದ್ದರಿಂದ ಮತ್ತು ಅವುಗಳ ಸ್ಥಿತಿ ಯಥಾಪ್ರಕಾರವೇ ಮುಂದುವರಿಯುತ್ತಿರುವುದರಿಂದ ಕೇಂದ್ರ ಸರ್ಕಾರವು ಈಗ ಸ್ಮಾರ್ಟ್‌ ಸಿಟಿ, ಸ್ಮಾರ್ಟ್‌ ವಿಲೇಜ್ ಎಂಬ ನೂತನ ಯೋಜನೆಗಳನ್ನು ಪ್ರಾರಂಭಿಸಿ ಕೋಟ್ಯಂತರ ಹಣವನ್ನು ಖರ್ಚು ಮಾಡಲು ಹೊರಟಿದೆ. ಅಭಿವೃದ್ಧಿಯ ಹೆಸರಿನಲ್ಲಿ ಹಣದ ಹೊಳೆ ಹರಿಯುತ್ತಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯು ಖಾಸಗಿ ವ್ಯಕ್ತಿ, ಚುನಾಯಿತ ಪ್ರತಿನಿಧಿಗಳು ಮತ್ತು ಪಂಚಾಯಿತಿ ಸಿಬ್ಬಂದಿಯು ವಾಮಮಾರ್ಗದಿಂದ ಹಣ ಸಂಪಾದಿಸುವುದಕ್ಕೆ ಅವಕಾಶವಾಗಿದೆ. ಆದ್ದರಿಂದಲೇ ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕೋಟ್ಯದೀಶ್ವರರಾಗಿರುವುದು. ಅಂಥವರ ಮನೆಯ ಮೇಲೆ ಲೋಕಾಯುಕ್ತರು ದಾಳಿ ಮಾಡಿ ಅಕ್ರಮ ಸಂಪತ್ತನ್ನು ವಶಪಡಿಸಿಕೊಂಡ ಉದಾಹರಣೆಗಳು ಬೇಕಾದಷ್ಟಿವೆ. ಈ ರೀತಿ ಪಂಚಾಯತ್ ರಾಜ್ ವ್ಯವಸ್ಥೆ ದೇಶಕ್ಕೆ ವರವಾಗುವುದರ ಬದಲು ಶಾಪವಾಗುತ್ತಿದೆಯೇ ಎಂದೆನಿಸುತ್ತದೆ. ಯಾರಲ್ಲಿಯೂ ತಮ್ಮ ಗ್ರಾಮ, ತಮ್ಮ ದೇಶ ಎಂಬ ಭಾವನೆಯಿಲ್ಲವಾಗಿದೆ.

ಸಾಮೂಹಿಕ ಜನಶಕ್ತಿ ಬದಲು ಧನಶಕ್ತಿ ಮತ್ತು ಯಂತ್ರಶಕ್ತಿಗಳ ಉಪಯೋಗದಿಂದ ಮಾತ್ರ ಅಭಿವೃದ್ಧಿ ಸಾಧ್ಯವೆಂಬ ಮೌಲ್ಯ ನೆಲೆಯೂರಿದೆ. ಸ್ವಪ್ರಯತ್ನದ ಸ್ಥಳವನ್ನು ಸರ್ಕಾರದ ಪ್ರಯತ್ನ ಆವರಿಸಿಕೊಂಡಿದೆ. ಆದ್ದರಿಂದ ಸರ್ಕಾರದಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಾಗುತ್ತಿದೆ; ಇಲಾಖೆಗಳು ಹೆಚ್ಚಾಗುತ್ತಿವೆ.

ರಾಜ್ಯ ಸರ್ಕಾರದ ಲಕ್ಷಾಂತರ ನೌಕರರಿಗೆ ಸಂಬಳವಾಗಿ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಖರ್ಚಾಗುತ್ತಿದೆ. ಕೇಂದ್ರ ಸರ್ಕಾರದ ನೌಕರರ ಸಮಾನಕ್ಕೆ ಇವರ ವೇತನವನ್ನು ಹೆಚ್ಚಿಸುವುದಾದರೆ ಇನ್ನೂ ಸಾವಿರಾರು ಕೋಟಿ ರೂಪಾಯಿ ಬೇಕು. ಈ ವ್ಯವಸ್ಥೆ ‘ಮೂಗಿಗಿಂತ ಮೂಗುತಿ ಭಾರ’ ಎಂಬ ಗಾದೆ ಮಾತಿನಂತೆ ಆಗಿದೆಯೆಂದೆನಿಸುತ್ತದೆ. ಇದಕ್ಕೆ ತನ್ನದೇ ಆದ ಸಂಪನ್ಮೂಲಗಳು ಇಲ್ಲದೇ ಇರುವಾಗ ಅದು ಎಲ್ಲದಕ್ಕೂ ಸರ್ಕಾರದ ಅನುದಾನವನ್ನೇ ಅವಲಂಬಿಸಿ ಉಸಿರಾಡಬೇಕಾಗುತ್ತದೆ. ಗ್ರಾಮಗಳ ಮೂಲ ಆದಾಯ ಕ್ಷೇತ್ರವಾದ ಕೃಷಿ ಕ್ಷೀಣಿಸುತ್ತಿದೆ; ಗ್ರಾಮೋದ್ಯೋಗಗಳಂತೂ ಇಲ್ಲವೇ ಇಲ್ಲ. ಗ್ರಾಮದಲ್ಲಿರುವ ಶಿಕ್ಷಣ ಸಂಸ್ಥೆಗಳು ಮತ್ತು ಇನ್ನಿತರ ಸೇವಾ ಸಂಸ್ಥೆಗಳೊಂದಿಗೆ ಪಂಚಾಯಿತಿಗಳ ಸಮನ್ವಯವೇ ಇಲ್ಲ. ಈ ಎಲ್ಲ ಕಾರಣದಿಂದ ಪಂಚಾಯತ್ ರಾಜ್ ವ್ಯವಸ್ಥೆ ಉತ್ಸಾಹವಿಲ್ಲದ, ಸಂತೋಷವಿಲ್ಲದ ಮತ್ತು ಶಾಂತಿಯಿಲ್ಲದ ಒಣ ಭೂಪ್ರದೇಶದಂತಾಗಿದೆ.

ಕೇಂದ್ರ ಸರ್ಕಾರದ ಈಗಿನ ನೇತಾರರು ಹಗಲೂ ಇರುಳೂ ಅಭಿವೃದ್ಧಿ ಮಂತ್ರವನ್ನೇ ಜಪಿಸುತ್ತಿದ್ದಾರೆ. ಸ್ವಾತಂತ್ರ್ಯ ಆಂದೋಲನದ ಮಾದರಿಯಲ್ಲಿ ಅಭಿವೃದ್ಧಿಗಾಗಿ ಎರಡನೆಯ ಆಂದೋಲನ ನಡೆಯಬೇಕೆಂದು ಪ್ರಧಾನ ಮಂತ್ರಿ ಕರೆ ಕೊಟ್ಟಿದ್ದಾರೆ. ದೇಶವನ್ನು ಆರ್ಥಿಕವಾಗಿ ಮೇಲೆತ್ತಲು, ರಕ್ಷಣಾ ವ್ಯವಸ್ಥೆಯ ಸಬಲೀಕರಣಕ್ಕಾಗಿ ಮತ್ತು ನೆರೆ ದೇಶಗಳ ಆಕ್ರಮಣಶೀಲತೆಯನ್ನು ತಡೆಯುವುದಕ್ಕಾಗಿ, ಜಗತ್ತಿನ ವಿವಿಧ ದೇಶಗಳನ್ನು ಆಹ್ವಾನಿಸಿ ಭಾರತದಲ್ಲಿ ಉದ್ಯಮ ಪ್ರಾರಂಭಿಸಲು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಆದ್ದರಿಂದ ಸ್ವದೇಶಿ ವಿಚಾರ ಮಾಯವಾಗಿದೆ. ಪರದೇಶಿ ವ್ಯಾಮೋಹ ಹೆಚ್ಚಾಗಿದೆ. ಇಂಥ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ತಲ್ಲಣಗಳ ಸುಳಿಯಲ್ಲಿ ಪಂಚಾಯತ್‌ ರಾಜ್ ಸಂಸ್ಥೆಗಳು ತಮಗೆ ಅರಿವಿಲ್ಲದೆಯೇ ಸಿಕ್ಕಿಕೊಂಡಿವೆ. ಸ್ವರಾಜ್ಯ ಮೂಲಕ ಪಂಚಾಯತ್‌ ರಾಜ್ ಮತ್ತು ಪಂಚಾಯತ್‌ ರಾಜ್ ಮೂಲಕ ಗ್ರಾಮ ಸ್ವರಾಜ್ಯ, ಗ್ರಾಮ ಸ್ವರಾಜ್ಯದ ಮೂಲಕ ಸುರಾಜ್ಯ ಎಂಬ ಗಾಂಧೀಜಿ ಕಲ್ಪನೆ ಮಣ್ಣುಗೂಡುತ್ತಿದೆ. ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಪಂಚಾಯತ್ ರಾಜ್‌ಗೆ ಭವಿಷ್ಯವಿದೆಯೇ ಎಂಬ ಪ್ರಶ್ನೆ ಭಾರತೀಯರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT