ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ಜ್ವರ ಮುಕ್ತ ಜಿಲ್ಲೆಗೆ ಪಣ

Last Updated 6 ಏಪ್ರಿಲ್ 2017, 11:32 IST
ಅಕ್ಷರ ಗಾತ್ರ

ಕೋಲಾರ:  ಬೇಸಿಗೆಯಲ್ಲಿ ಜಾನುವಾರು ಗಳನ್ನು ಬಾಧಿಸುವ ಕಾಲುಬಾಯಿ ಜ್ವರವನ್ನು ಸಂಪೂರ್ಣ ಹತೋಟಿಗೆ ತಂದು ಜಿಲ್ಲೆಯನ್ನು ಕಾಲುಬಾಯಿ ಜ್ವರ ಮುಕ್ತ ಜಿಲ್ಲೆಯಾಗಿ ಮಾಡಲು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಮುಂದಾಗಿದೆ.

ಜಿಲ್ಲೆಯಲ್ಲಿ ಹೈನುಗಾರಿಕೆಯೇ ಪ್ರಧಾನವಾಗಿದೆ. ಬಹುಪಾಲು ರೈತರು ಜಾನುವಾರುಗಳನ್ನು ಸಾಕಿದ್ದಾರೆ. ಹೈನೋ ದ್ಯಮವು ರೈತರಿಗೆ ಪ್ರಮುಖ ಆದಾಯ ಮೂಲವಾಗಿದೆ. ರೈತರು ಹಸು ಹಾಗೂ ಎಮ್ಮೆಗಳ ಹಾಲನ್ನು ಡೇರಿಗೆ ಹಾಕಿ ಅದರಿಂದ ಬರುವ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ದಶಕದಿಂದ ಬರ ಪರಿಸ್ಥಿತಿ ಮುಂದುವರಿದಿರುವುದರಿಂದ ರೈತರಿಗೆ ಹೈನೋದ್ಯಮವೇ ಬೆನ್ನೆಲುಬಾಗಿದೆ.

ಜಿಲ್ಲೆಯಲ್ಲಿ 2,29,036 ದನಗಳು, 45,876 ಎಮ್ಮೆಗಳು ಹಾಗೂ 4,257 ಹಂದಿಗಳು ಇವೆ. ಕಾಲುಗಳಲ್ಲಿ ಗೊರ ಸಲು ಹೊಂದಿರುವ ದನ, ಎಮ್ಮೆ ಹಾಗೂ ಹಂದಿಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಳ್ಳುತ್ತದೆ. ಜಾನುವಾರುಗಳಿಗೆ ಸಾಮಾನ್ಯವಾಗಿ ಮಾರ್ಚ್‌ ಮತ್ತು ಏಪ್ರಿಲ್‌ ಅವಧಿಯಲ್ಲಿ ಈ ರೋಗ ಬರುತ್ತದೆ.ಆದರೆ, ಈ ವರ್ಷ ಫೆಬ್ರುವರಿಯಲ್ಲೇ ಜಿಲ್ಲೆಯ ಮೂರು ತಾಲ್ಲೂಕುಗಳ ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿತ್ತು.

ಕೋಲಾರ ತಾಲ್ಲೂಕಿನ ಹಾರೋಹಳ್ಳಿ, ಶಿಳ್ಳಂಗೆರೆ, ನಂದಂಬಳ್ಳಿ ಮತ್ತು ಉರಟಿ ಅಗ್ರಹಾರ, ಮಾಲೂರು ತಾಲ್ಲೂಕಿನ ಚನಕಲ್‌ ಮತ್ತು ದೊಡ್ಡ ದೊಂಬರಪಾಳ್ಯ ಹಾಗೂ ಮುಳ ಬಾಗಿಲು ತಾಲ್ಲೂಕಿನ ಸೊನ್ನವಾಡಿ ಗ್ರಾಮ ದಲ್ಲಿನ ಹಸು, ಕರು ಹಾಗೂ ಎಮ್ಮೆ ಸೇರಿ ದಂತೆ ಒಟ್ಟು 22 ಜಾನುವಾರುಗಳಿಗೆ ಈ ರೋಗ ತಗುಲಿತ್ತು. ನಂತರ ಈ ಜಾನುವಾರುಗಳನ್ನು ಪ್ರತ್ಯೇಕಿಸಿ ಔಷಧೋಪಚಾರ ಮಾಡಿ ಕಾಯಿಲೆ ಹತೋಟಿಗೆ ತರಲಾಗಿತ್ತು.

23 ದಿನದ ಅಭಿಯಾನ: ಕಾಲುಬಾಯಿ ಜ್ವರದ ಸೋಂಕಿಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ಇಲಾಖೆಯು ಏ.7 ರಿಂದ ಜಿಲ್ಲೆಯ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಲು ಅಭಿಯಾನ ಹಮ್ಮಿ ಕೊಂಡಿದೆ. ಒಟ್ಟಾರೆ 23 ದಿನದ ಅಭಿಯಾನದಲ್ಲಿ 2,79,169 ಜಾನುವಾರುಗಳಿಗೆ ಕಾಲುಬಾಯಿ ಜ್ವರ ನಿರೋಧಕ ಲಸಿಕೆ ಹಾಕುವ ಗುರಿ ಇದೆ. ಅಭಿಯಾನಕ್ಕೆ 181 ಲಸಿಕೆದಾರರು ಮತ್ತು 24 ಮೇಲ್ವಿಚಾರಕರನ್ನು ಒಳಗೊಂಡ 24 ವಿಶೇಷ ತಂಡಗಳನ್ನು ರಚಿಸಲಾಗಿದೆ.

ಸಿಬ್ಬಂದಿ ಜಿಲ್ಲೆಯ 1,599 ಕಂದಾಯ ಗ್ರಾಮಗಳಲ್ಲಿ ಸಂಚರಿಸಿ ರೈತರ ಮನೆ ಬಾಗಿಲಲ್ಲೇ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕುತ್ತಾರೆ. ಅಭಿಯಾನಕ್ಕೆ 26 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. 3 ತಿಂಗಳ ಮೇಲಿನ ಎಲ್ಲಾ ಜಾನುವಾರು ಗಳಿಗೂ ಲಸಿಕೆ ಹಾಕಲಾಗುತ್ತದೆ.

ಕಾಯಿಲೆಯ ಲಕ್ಷಣ: ‘ಪಿಕೊರ್ನಾ’ ಎಂಬ ವೈರಸ್‌ನಿಂದ ಬರುವ ಕಾಲುಬಾಯಿ ಜ್ವರವು ಸಾಂಕ್ರಾಮಿಕ ರೋಗವಾಗಿದೆ. ಈ ಸೋಂಕಿಗೆ ತುತ್ತಾದ ಜಾನುವಾರುಗಳ ಗೊರಸಲು ಹಾಗೂ ಬಾಯಿಯ ಭಾಗದಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ಬಾಯಿಯಲ್ಲಿನ ಚಿಕ್ಕ ನೀರ್ಗುಳ್ಳೆ ಒಡೆದು, ಜಾನುವಾರುಗಳು ಜೊಲ್ಲು ಸುರಿಸುತ್ತವೆ. ಗೊರಸಲು ಭಾಗ ದಲ್ಲಿ ಹುಣ್ಣುಗಳು ಹೆಚ್ಚಾದರೆ ಜಾನುವಾರುಗಳು ಕುಂಟಲು ಆರಂಭಿಸುತ್ತವೆ. ಜತೆಗೆ ಜಾನುವಾರುಗಳಿಗೆ 106 ರಿಂದ 108 ಫ್ಯಾರನ್‌ ಹೀಟ್‌ ಜ್ವರ ಬರುತ್ತದೆ.

ಈ ರೋಗಕ್ಕೆ ತುತ್ತಾದ ಜಾನುವಾರುಗಳು ಮೇವು ತಿನ್ನುವುದಿಲ್ಲ, ಒಂದು ಜಾನುವಾರಿನಿಂದ ಮತ್ತೊಂದು ಜಾನು ವಾರಿಗೆ ಗಾಳಿ, ನೀರು, ಮೇವಿನ ಮೂಲಕ ಹರಡುತ್ತದೆ. ಸೋಂಕನ್ನು ನಿರ್ಲಕ್ಷಿಸಿದರೆ ಕಾಯಿಲೆಯು ನಾಯಿ ರೋಗಕ್ಕೆ ತಿರುಗಿ ಜಾನುವಾರುಗಳು ಸಾಯುವ ಸಾಧ್ಯತೆ ಇದೆ.

ಹಾಲು ಕಡಿಮೆ: ಕಾಲುಬಾಯಿ ಜ್ವರ ದಿಂದ ಹಸು ಮತ್ತು ಎಮ್ಮೆಗಳಲ್ಲಿ ಹಾಲು ಕಡಿಮೆಯಾಗುತ್ತದೆ. ಸೋಂಕು ನಾಯಿ ರೋಗಕ್ಕೆ ತಿರುಗಿದರೆ ಜಾನುವಾರು ಗರ್ಭ ಧರಿಸುವ ಸಾಧ್ಯತೆ ಕಡಿಮೆ. ಪದೇ ಪದೇ ಗರ್ಭಧಾರಣೆ ಮಾಡಿಸಿದರೂ ಗರ್ಭ ನಿಲ್ಲುವುದಿಲ್ಲ. ಇದರಿಂದ ಜಾನುವಾರುಗಳ ಮಾಲೀಕರು ಆರ್ಥಿಕ ವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಹಂದಿಗಳಿಗೆ ಈ ಸೋಂಕು ತಗುಲಿದರೆ ಮಾಂಸದ ಗುಣಮಟ್ಟ ಕುಸಿದು ದರ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT