ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ದುರ್ಬಳಕೆ: ತಲೆದಂಡಕ್ಕೆ ಪಟ್ಟು

ಎಎಪಿ ಸರ್ಕಾರದ ವಿರುದ್ಧ ಶುಂಗ್ಲು ವರದಿ: ಪಾಲಿಕೆ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳಿಗೆ ಅಸ್ತ್ರ
Last Updated 6 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮಹಾನಗರಪಾಲಿಕೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಎಎಪಿಗೆ ಮತ್ತೊಂದು ಹೊಡೆತ ಬಿದ್ದಿದೆ.

ಎಎಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಮಾಜಿ ಮಹಾಲೇಖಪಾಲ ವಿ.ಕೆ. ಶುಂಗ್ಲು ನೇತೃತ್ವದ ಸಮಿತಿ ಹೇಳಿದ್ದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಮತ್ತು ಬಿಜೆಪಿ ಒತ್ತಾಯಿಸಿವೆ.

‘ಕೆಸರೆರಚಾಟವೇ ಶುಂಗ್ಲು ಸಮಿತಿಯ ವರದಿಯ ಉದ್ದೇಶ’ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಹೇಳಿದ್ದಾರೆ. ವರದಿಯನ್ನು ಬಹಿರಂಗ ಮಾಡಲಾಗಿರುವ ಸಮಯದ ಬಗ್ಗೆಯೇ ಜೈನ್‌ ಪ್ರಶ್ನೆಗಳನ್ನು ಎತ್ತಿದ್ದಾರೆ. ಮಹಾನಗರಪಾಲಿಕೆ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವುದೇ ಇದರ ಉದ್ದೇಶ ಎಂದಿದ್ದಾರೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಿಜೆಪಿ ವಾಗ್ದಾಳಿಯ ನೇತೃತ್ವ ವಹಿಸಿಕೊಂಡಿದ್ದಾರೆ. ಕೇಜ್ರಿವಾಲ್‌ ನೇತೃತ್ವದ ಸರ್ಕಾರವನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿರುವ ಅವರು ‘ಉಗುಳಿ ಓಡಿ ಹೋಗುವ ಎಎಪಿ ಕಾರ್ಯತಂತ್ರ ಈ ಬಾರಿ ನಡೆಯದು’ ಎಂದು ಹೇಳಿದ್ದಾರೆ.

ಕೇಜ್ರಿವಾಲ್‌ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಕೇಜ್ರಿವಾಲ್‌ ಅವರ ಸಂಬಂಧಿ ನಿಕುಂಜ್‌ ಅಗರ್‌ವಾಲ್‌ ಅವರನ್ನು ಆರೋಗ್ಯ ಸಚಿವರ ವಿಶೇಷಾಧಿಕಾರಿಯಾಗಿ ನೇಮಿಸಲಾಗಿದೆ.  ಈ ನೇಮಕಕ್ಕೆ ಕಾರಣವೇನು ಎಂದು ನಿರ್ಮಲಾ ಪ್ರಶ್ನಿಸಿದ್ದಾರೆ. ಶುಂಗ್ಲು ಸಮಿತಿಯ ವರದಿಯಲ್ಲಿರುವ ಅಂಶಗಳಿಗೆ ಪ್ರತಿಕ್ರಿಯೆ ನೀಡುವ ಬದಲು, ಲೆಫ್ಟಿನೆಂಟ್‌ ಗವರ್ನರ್‌ ನೇಮಿಸಿದ ಸಮಿತಿಯೇ ಕಾನೂನುಬಾಹಿರ ಎಂದು ಎಎಪಿ ಹೇಳುತ್ತಿದೆ ಎಂದೂ ಅವರು ಲೇವಡಿ ಮಾಡಿದ್ದಾರೆ.

ಸ್ವಜನ ಪಕ್ಷಪಾತ: ಹಲವು ನಿರ್ಧಾರ ರದ್ದತಿಗೆ ಶಿಫಾರಸು

ದೆಹಲಿಯ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರ ಭಾರಿ ಪ್ರಮಾಣದಲ್ಲಿ ಅಧಿಕಾರ ದುರುಪಯೋಗ ನಡೆಸಿದೆ ಎಂದು ಮಾಜಿ ಮಹಾಲೇಖಪಾಲ ವಿ.ಕೆ. ಶುಂಗ್ಲು  ನೇತೃತ್ವದ ಮೂವರು ಸದಸ್ಯರ ಸಮಿತಿ  ತನ್ನ ವರದಿಯಲ್ಲಿ ಹೇಳಿದೆ.

ಎಎಪಿ ಕಚೇರಿಗೆ ನಿವೇಶನ ಮಂಜೂರು ಮಾಡಿರುವುದು, ಸಚಿವ ಸತ್ಯೇಂದ್ರ ಜೈನ್‌ ಅವರ ಮಗಳನ್ನು ದೆಹಲಿ ರಾಜ್ಯ ಆರೋಗ್ಯ ಯೋಜನೆಗೆ ಯೋಜನಾ ನಿರ್ದೇಶಕರಾಗಿ ನೇಮಕ ಮಾಡಿರುವುದು ಮತ್ತು ಎಎಪಿ ಕಾರ್ಯಕರ್ತರನ್ನು ‘ಸಲಹೆಗಾರರನ್ನಾಗಿ’ ನೇಮಕ ಮಾಡಿರುವುದು ಅಧಿಕಾರ ದುರುಪಯೋಗ ಎಂದು ಶುಂಗ್ಲು ಸಮಿತಿ ಹೇಳಿದೆ.

ಸಂವಿಧಾನದ 239 ಎಎ (ಎ) ಎ ವಿಧಿ ಅಡಿಯಲ್ಲಿ ದೆಹಲಿ ಸರ್ಕಾರದ ವ್ಯಾಪ್ತಿಗೆ ಬರುವ ಯಾವುದೇ ವಿಚಾರದಲ್ಲಿ  ನಿರ್ಧಾರ ಕೈಗೊಳ್ಳುವಾಗ ಲೆಫ್ಟಿನೆಂಟ್‌ ಗವರ್ನರ್‌ ಅವರ ಸಲಹೆ ಪಡೆಯುವ ಅಗತ್ಯ ಇಲ್ಲ ಎಂದು 2015ರಲ್ಲಿ ಕೇಜ್ರಿವಾಲ್‌ ಇಲಾಖೆಗಳಿಗೆ ನೀಡಿದ ಆದೇಶ ಕೂಡ ಅಧಿಕಾರ ದುರುಪಯೋಗ ಎಂದು ಸಮಿತಿ ತಿಳಿಸಿದೆ.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಅವರಿಗೆ ಸರ್ಕಾರಿ ವಸತಿ ನೀಡಿರುವುದನ್ನೂ ಸಮಿತಿ ಪ್ರಶ್ನಿಸಿದೆ. ಎಎಪಿ ಕಚೇರಿಗೆ ನಿವೇಶನ ನೀಡಿರುವುದನ್ನು ರದ್ದು ಮಾಡಬೇಕು ಎಂದು ಶಿಫಾರಸು ಮಾಡಿದೆ.

2015ರಲ್ಲಿ ಕೇಜ್ರಿವಾಲ್‌ ಅವರು ಆದೇಶ ಹೊರಡಿಸಿದ ನಂತರ ಸಚಿವಾಲಯ ಮಟ್ಟದಲ್ಲಿ ಕೈಗೊಂಡ ಯಾವುದೇ ನಿರ್ಧಾರಕ್ಕೆ ಲೆಫ್ಟಿನೆಂಟ್‌ ಗವರ್ನರ್‌ ಅವರ ಅನುಮತಿ ಪಡೆದುಕೊಳ್ಳಲಾಗಿಲ್ಲ ಎಂದು ಸಮಿತಿ ಹೇಳಿದೆ.

ಭ್ರಷ್ಟಾಚಾರ ತಡೆ ಘಟಕಕ್ಕೆ ಅಧಿಕಾರಿಗಳ ನೇಮಕ, ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ, ಸಚಿವರ ವಿದೇಶ ಪ್ರವಾಸಗಳೆಲ್ಲವೂ ಲೆಫ್ಟಿನೆಂಟ್‌ ಗವರ್ನರ್‌ ಅನುಮತಿ ಇಲ್ಲದೆಯೇ ನಡೆದಿದೆ ಎಂದು ವರದಿ ಹೇಳಿದೆ.

ದೆಹಲಿಯ ಹಿಂದಿನ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಈ ಸಮಿತಿಯನ್ನು ನೇಮಕ ಮಾಡಿದ್ದರು.

* ಕೇಜ್ರಿವಾಲ್‌ಗೆ ಒಂದು ಕಣದಷ್ಟಾದರೂ ಆತ್ಮಸಾಕ್ಷಿ ಇದ್ದರೆ  ತಕ್ಷಣ ರಾಜೀನಾಮೆ ನೀಡಲಿ. ಶುಂಗ್ಲು ಸಮಿತಿಯಲ್ಲಿರುವ ಅಂಶಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು.

–ಅಜಯ್‌ ಮಾಕನ್‌,  ಕಾಂಗ್ರೆಸ್‌ ಮುಖಂಡ

ದೆಹಲಿ ಸರ್ಕಾರ ಕೈಗೊಂಡ ಕ್ರಮಗಳು ಸಂವಿಧಾನದ ಉಲ್ಲಂಘನೆ. ಎಎಪಿ ಮತ್ತು  ಕೇಜ್ರಿವಾಲ್‌ ಈ ಬಗ್ಗೆ ಸ್ಪಷ್ಟೀಕರಣ ನೀಡಲೇಬೇಕು.

–ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT