ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖಾನುಭೂತಿಗೆ ತಡೆಯಾದೀತೆ...

Last Updated 7 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಭಾರತೀಯರು ಲೈಂಗಿಕ ಸಮಸ್ಯೆಗಳನ್ನು ಚರ್ಚಿಸುವ ವಿಷಯದಲ್ಲಿ ಹಿಂಜರಿಕೆಯ ಮನೋಭಾವದವರು. ತಮ್ಮ ಲೈಂಗಿಕ ಜೀವನದ ಹಿನ್ನೆಲೆ ಹಾಗೂ ತಾವು ಅನುಭವಿಸುತ್ತಿರುವ ಲೈಂಗಿಕ ಸಮಸ್ಯೆಗಳ ಕುರಿತು ವೈದ್ಯರ ಬಳಿ ಹೇಳಿಕೊಳ್ಳಲೂ ಹಿಂದೇಟು ಹಾಕುತ್ತಾರೆ.
ಇತ್ತೀಚೆಗೆ ನನಗೆ ಬಂದಿದ್ದ ಪ್ರಶ್ನೆಯೊಂದು ಹೀಗಿತ್ತು...

‘ನನಗೆ ಮದುವೆಯಾಗಿ ಮೂರು ವರ್ಷವಾಗಿದೆ. ಆದರೆ ಇತ್ತೀಚೆಗೆ ನನ್ನ ಪತಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ತೋರುತ್ತಿಲ್ಲ. ಆರೋಗ್ಯಕರ ಲೈಂಗಿಕ ಜೀವನವನ್ನು ಮತ್ತೆ ಅನುಭವಿಸುವ ದಾರಿ ಯಾವುದು? ನನ್ನ ಪತಿಗೆ ಈ ಸಮಸ್ಯೆ ಕುರಿತು ಚರ್ಚಿಸಲು ಹಿಂಜರಿಕೆಯಿರಬಹುದೇ?’

ಇಂಥ ಲೈಂಗಿಕ ಸಮಸ್ಯೆಗಳು ದಾಂಪತ್ಯ ಜೀವನದ ಸುಖವನ್ನು ಕಸಿದುಕೊಳ್ಳುವ ಮಟ್ಟಕ್ಕೂ ಹೋಗಬಹುದು. ಆದ್ದರಿಂದ ಅವುಗಳ ಕುರಿತು ತಿಳಿದುಕೊಳ್ಳಲೇಬೇಕಾದ ಅಗತ್ಯವಿದೆ.

ನಿಮಿರು ದೌರ್ಬಲ್ಯ ಅಂಥ ಲೈಂಗಿಕ ಸಮಸ್ಯೆಗಳಲ್ಲಿ ಒಂದು. ಪುರುಷರಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಅಗತ್ಯವಿರುವ ಶಿಶ್ನದ ನಿಮಿರುವಿಕೆ ಸಾಧ್ಯವಾಗದಿದ್ದಲ್ಲಿ ಅದು ನಿಮಿರು ದೌರ್ಬಲ್ಯ ಎನಿಸಿಕೊಳ್ಳುತ್ತದೆ. ಇದು ಎಷ್ಟೋ ಪುರುಷರ ಸಮಸ್ಯೆ.

ಆದರೆ ಸಮಸ್ಯೆಯನ್ನು ಸಮಸ್ಯೆ ಎಂದುಕೊಂಡು ಕೂರದೆ ಅದನ್ನು ನಿವಾರಿಸಿಕೊಳ್ಳುವ ದಾರಿಗಳೆಡೆಗೂ ಯೋಚಿಸಬೇಕು. ಅದೇ ರೀತಿ ನಿಮಿರು ದೌರ್ಬಲ್ಯಕ್ಕೆ ನಿಖರ ಕಾರಣವನ್ನು ತಿಳಿದುಕೊಂಡರೆ ಅದರ ಪರಿಹಾರವೂ ಸುಲಭಸಾಧ್ಯವಾಗುತ್ತದೆ. ಮೊದಲು ಈ ಸಮಸ್ಯೆಗೆ ಕಾರಣವಾಗಬಹುದಾದ ಕೆಲವು ಅಂಶಗಳ ಕುರಿತು ತಿಳಿಯೋಣ...

ಖಿನ್ನತೆ ಹಾಗೂ ಲೈಂಗಿಕತೆ ಮೇಲಿನ ಪರಿಣಾಮ: ಮೆದುಳು ಕಾಮಪ್ರಚೋದಕವಾಗಿಯೂ ಕೆಲಸ ಮಾಡುತ್ತದೆ. ಲೈಂಗಿಕ ಆಸಕ್ತಿ, ಉತ್ಸಾಹ ಆರಂಭಗೊಳ್ಳುವುದು ಅಲ್ಲೇ. ಆದರೆ ಖಿನ್ನತೆ, ಈ ಆಸೆಗೆ ಅಡ್ಡವಾಗುತ್ತದೆ. ಇದು ನಿಮಿರುವಿಕೆಗೆ ತೊಡಕಾಗುತ್ತದೆ. ವಿಪರ್ಯಾಸವೆಂದರೆ, ಖಿನ್ನತೆ ನಿವಾರಣೆಗೆ ಸೇವಿಸುವ ಹಲವು ಔಷಧಗಳೂ ಲೈಂಗಿಕ ಆಸಕ್ತಿಯನ್ನು ನಿಗ್ರಹಿಸುವ ಕೆಲ ಅಂಶಗಳನ್ನು ಹೊಂದಿರುತ್ತವೆ. ಈ ಔಷಧಗಳು ನಿಮಿರುವಿಕೆ ಪ್ರಕ್ರಿಯೆ ಕ್ಲಿಷ್ಟಕರವಾಗುವಂತೆ ಮಾಡುತ್ತವೆ. ಒಟ್ಟಾರೆ  ಲೈಂಗಿಕ ಅನುಭವದ ಮೇಲೆ ಪರಿಣಾಮ  ಬೀರುತ್ತವೆ.

ಮದ್ಯಪಾನದಿಂದ ಆಸಕ್ತಿ ಹೆಚ್ಚುವುದೇ?: ಮದ್ಯಪಾನ ಮಾಡಿದರೆ ಲೈಂಗಿಕ ಆಸಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಕೆಲವರಲ್ಲಿದೆ. ಆದರೆ ಅತಿಯಾದ ಮದ್ಯಪಾನ ಲೈಂಗಿಕ ಸುಖ ಅನುಭವಿಸದೇ ಇರುವಂತೆಯೂ ಮಾಡಬಹುದು. ಮಿತಿ ಮೀರಿದ ಕುಡಿತ ನಿಮಿರುವಿಕೆಗೆ ತೊಂದರೆ ಮಾಡುತ್ತದೆ. ಆದರೆ ಇದು ತಾತ್ಕಾಲಿಕವಷ್ಟೆ. ವಾರದಲ್ಲಿ ಎರಡು ದಿನ ಮಿತವಾಗಿ  ಮದ್ಯ ಸೇವಿಸಿದರೆ, ಹೃದಯ ಸಮಸ್ಯೆಯ ಅಪಾಯಗಳನ್ನು ದೂರವಿರಿಸುತ್ತದೆ. ಪರೋಕ್ಷವಾಗಿ ಇದು ನಿಮಿರುವಿಕೆಗೆ ಸಹಕಾರಿಯಾಗುತ್ತದೆ.

ಔಷಧಗಳು ಹಾಗೂ ಸಮಸ್ಯೆಯ ಆಳ: ಕೆಲವು ಔಷಧಗಳು ಲೈಂಗಿಕ ಸುಖದ ಮೇಲೆ ಅಡ್ಡಪರಿಣಾಮ ಬೀರಬಹುದು. ಕೆಲ ಸಾಮಾನ್ಯ ಔಷಧಗಳು, ಅಂದರೆ, ರಕ್ತದೊತ್ತಡ, ನೋವು ನಿವಾರಕ, ಖಿನ್ನತೆ ನಿವಾರಕ ಔಷಧಗಳು ನಿಮಿರು ದೌರ್ಬಲ್ಯಕ್ಕೆ ಕಾರಣವಾಗುತ್ತವೆ. ಆಂಫೆಟಮೈನ್‌ಗಳು, ಕೊಕೇನ್ ಇವೆಲ್ಲ ಪುರುಷರಲ್ಲಿ ಲೈಂಗಿಕ ಸಮಸ್ಯೆಗಳು ತಲೆದೋರಲು ಹಾದಿಮಾಡಿಕೊಡುತ್ತವೆ. ಹಾಗೆಂದು ಔಷಧ ಸೇವನೆಯನ್ನೇ ನಿಲ್ಲಿಸಿಬಿಡಬೇಕೆಂದಲ್ಲ. ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಚರ್ಚಿಸಿ ಮುಂದುವರೆದರೆ ಒಳಿತು.

ಒತ್ತಡ ಹಾಗೂ ಪರಿಹಾರದ ಹಾದಿ: ನೌಕರಿಯಲ್ಲಿ, ಮನೆಯಲ್ಲಿ ಸಾಕಷ್ಟು ಜವಾಬ್ದಾರಿಗಳು ತಲೆಯ ಮೇಲಿದ್ದಾಗ ಲೈಂಗಿಕ ಜೀವನದಲ್ಲಿ  ಸಹಜವಾಗೇ ಆಸಕ್ತಿ ಕಡಿಮೆಯಾಗುತ್ತದೆ. ಒತ್ತಡ ಎನ್ನುವುದು ದೇಹದ ವಿವಿಧ ಅಂಗಗಳ ಮೇಲೆ ತನ್ನ ಪಾರುಪತ್ಯ  ಸಾಧಿಸಬಲ್ಲದು. ಇದು ಜನನಾಂಗಕ್ಕೂ ಹೊರತಲ್ಲ. ಆದರೆ ಪರಿಣಾಮಗಳಿಗೆ ಪರಿಹಾರವೂ ಇದ್ದೇ ಇರುತ್ತದೆ. ಒತ್ತಡಕ್ಕೆ ಜೀವನಶೈಲಿಯ ಬದಲಾವಣೆ ಸೂಕ್ತ ಮದ್ದು. ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ದೆ, ಆರೋಗ್ಯಕರ ಆಹಾರ ಸೇವನೆ ಇವೆಲ್ಲವೂ ಉತ್ತಮ ಜೀವನಶೈಲಿ ರೂಪಿಸಿ ವಿಶ್ರಾಂತ ಮನಸ್ಥಿತಿ ಮತ್ತು ಆರೋಗ್ಯಕರ ಜೀವನ ನೀಡಬಲ್ಲದು. ಇದು ಲೈಂಗಿಕ ಜೀವನ ಸಮತೋಲನವಾಗಿರುವಂತೆ  ನೋಡಿಕೊಳ್ಳುತ್ತದೆ.

ಕೋಪ ಮಾಡಿಕೊಳ್ಳುವ ಮುನ್ನ: ಕೋಪದಿಂದ ಮನಸ್ಸು ಹಾಗೂ ದೇಹ ಎರಡೂ ಪರಿಣಾಮ ಎದುರಿಸುತ್ತವೆ. ಅದರಲ್ಲೂ, ವ್ಯಕ್ತಪಡಿಸದ ಕೋಪ ಅಥವಾ ಸೂಕ್ತ ರೀತಿ ವ್ಯಕ್ತಪಡಿಸದ ಕೋಪ ಲೈಂಗಿಕ ಕ್ರಿಯೆಯ ಸಮಯದಲ್ಲೂ ವ್ಯಕ್ತವಾಗಬಲ್ಲದು.


ಆತಂಕ ಸಮಸ್ಯೆಯ ಮತ್ತೊಂದು ರೂಪ: ಲೈಂಗಿಕ ಅತೃಪ್ತಿಯ ಬಗ್ಗೆ ಚಿಂತೆ, ಆತಂಕಕ್ಕೆ ಒಳಗಾಗುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಬಹುದು. ನಿಮ್ಮ ಜೀವನದ ಇನ್ನಿತರ ಆತಂಕಗಳೂ ಲೈಂಗಿಕ ಸುಖದ ಅಪೇಕ್ಷೆಯನ್ನು ಕರಗಿಸಬಹುದು. ಭಯ, ಖಿನ್ನತೆ, ಒತ್ತಡ, ಆತಂಕದಂಥ ಅಂಶಗಳು ಅನ್ಯೋನ್ಯತೆಗೆ ವಿರುದ್ಧ ದಿಕ್ಕಿನವು. ಪುಟ್ಟ ಪುಟ್ಟ ಸಮಸ್ಯೆಗಳೇ ದೊಡ್ಡದಾಗಿ, ಲೈಂಗಿಕ ಜೀವನ ಹಾಗೂ ಸಂಬಂಧದಲ್ಲಿ ದೊಡ್ಡ ಬಿರುಕು ಸಾಧ್ಯವಾಗುತ್ತದೆ.

ನಡು ವಯಸ್ಸಿನ ತೂಕದ ಸಮಸ್ಯೆ: ವಯಸ್ಸು ಮುಂದೋಡುತ್ತಿದ್ದಂತೆ ದೇಹದ ತೂಕವೂ ಹೆಚ್ಚುವುದು ಹಲವು ಪುರುಷರ ಸಮಸ್ಯೆ. ಅಧಿಕ ಬೊಜ್ಜು ನಿಮ್ಮಲ್ಲಿನ ಲೈಂಗಿಕ ಉತ್ಸಾಹಕ್ಕೂ ಹೊರೆಯಾಗಬಲ್ಲದು. ಉತ್ಸಾಹದ ಮಾತಷ್ಟೇ ಅಲ್ಲ, ಸ್ಥೂಲಕಾಯ, ಪುರುಷರಲ್ಲಿನ ಲೈಂಗಿಕ ಹಾರ್ಮೋನು ‘ಟೆಸ್ಟೊಸ್ಟೆರಾನ್’ ಮಟ್ಟವನ್ನು ತಗ್ಗಿಸುತ್ತದೆ. ಟೆಸ್ಟೊಸ್ಟೆರೋನ್ ಮಟ್ಟ ಕಡಿಮೆಯಾದರೆ ನಿಮಿರುವಿಕೆ ಸಾಮರ್ಥ್ಯವೂ ಕುಗ್ಗುತ್ತದೆ. ಸ್ಥೂಲಕಾಯದವರಿಗೆ ಅತಿಯಾದ ರಕ್ತದೊತ್ತಡ ಹಾಗೂ ರಕ್ತನಾಳದ ಬಿಗಿಯಾಗುವಿಕೆ ಸಮಸ್ಯೆ ಎದುರಾಗುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಲನ ಆಗುವುದನ್ನು ತಡೆದಿ ನಿಮಿರು ದೌರ್ಬಲ್ಯ ಉಂಟಾಗುತ್ತದೆ.

ಕಾಮಾಸಕ್ತಿಯ ಕೊರತೆ: ನಿಮಿರು ದೌರ್ಬಲ್ಯಕ್ಕೂ ಕಾಮಾಸಕ್ತಿಯ ಕೊರತೆಗೂ ವ್ಯತ್ಯಾಸವಿದೆ. ಆದರೆ ನಿಮಿರುವಿಕೆಯನ್ನು ನಿಗ್ರಹಿಸುವ ಅಂಶಗಳೇ ಲೈಂಗಿಕ ಆಸಕ್ತಿಯನ್ನು ಕಡಿಮೆಗೊಳಿಸಲೂ ಕಾರಣವಾಗಿರಬಲ್ಲವು.  ಒತ್ತಡ, ಆತಂಕ ಹಾಗೂ ಕೆಲವು ಔಷಧಗಳು ಲೈಂಗಿಕ ಆಸಕ್ತಿಯನ್ನು ಕುಂದಿಸುತ್ತವೆ.

ಲೈಂಗಿಕ ಆರೋಗ್ಯ: ಆರೋಗ್ಯ ಸಮಸ್ಯೆಗಳು ಲೈಂಗಿಕ ಕ್ರಿಯೆಗೆ ಸಹಕಾರಿಯಾಗುವ ನರ, ಸ್ನಾಯು ಅಥವಾ ರಕ್ತ ಸಂಚಲನದ ಮೇಲೆ ಪ್ರಭಾವ ಬೀರಬಲ್ಲವು. ಮಧುಮೇಹ, ರಕ್ತದ ಏರೊತ್ತಡ, ರಕ್ತನಾಳಗಳ ಬಿಗಿಯಾಗುವಿಕೆ, ಬೆನ್ನು ಹುರಿ ಸಮಸ್ಯೆಗಳು ನಿಮಿರುವಿಕೆ ತಡೆಯಬಲ್ಲ ಇನ್ನಿತರ ಕಾರಣಗಳು. ವೃಷಣ ಅಥವಾ ಮೂತ್ರಕೋಶ ಶಸ್ತ್ರಚಿಕಿತ್ಸೆಗಳೂ, ನಿಮಿರುವಿಕೆಗೆ ಅಗತ್ಯವಿರುವ ನರ ಹಾಗೂ ರಕ್ತನಾಳಗಳಿಗೆ ತಡೆಯಾಗಬಲ್ಲವು.


ನಿಮಿರು ದೌರ್ಬಲ್ಯ ನೀಗುವುದು ಹೇಗೆ: ವೈದ್ಯರ ಬಳಿ ಲೈಂಗಿಕ ಜೀವನದ ಬಗ್ಗೆ ಚರ್ಚಿಸುವುದಕ್ಕೆ ಹಿಂದೇಟು ಹಾಕದೇ  ಮುಕ್ತವಾಗಿ ಚರ್ಚಿಸಿ ಅವಶ್ಯಕ ಚಿಕಿತ್ಸೆ ಪಡೆಯುವುದು ಸೂಕ್ತ.  ಗೊಂದಲ, ಸಮಸ್ಯೆಗೆ ಮೂಲ ಕಾರಣ ತಿಳಿದುಕೊಳ್ಳುವುದು ಎಲ್ಲ ರೀತಿಯಿಂದಲೂ ಒಳ್ಳೆಯದೇ ಅಲ್ಲವೇ?
ಅದರೊಂದಿಗೆ ಜೀವನಶೈಲಿಯಲ್ಲೂ ಬದಲಾವಣೆ ಅವಶ್ಯಕ. ಧೂಮಪಾನ ತ್ಯಜಿಸುವುದು, ತೂಕ ಕಡಿಮೆ ಮಾಡಿಕೊಳ್ಳುವುದು ಅದರಲ್ಲಿ ಪ್ರಮುಖವಾದವು. ಜೀವನಶೈಲಿಯೊಂದಿಗೆ ಕೆಲವು ಔಷಧಗಳು, ಹಾರ್ಮೋನು ಚಿಕಿತ್ಸೆ, ಕೌನ್ಸೆಲಿಂಗ್‌ನಂಥ ಇನ್ನಿತರ ಚಿಕಿತ್ಸೆಗಳ ಆಯ್ಕೆಯೂ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT