ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಲ್ಲಿ ನೀರೂರಿಸುವ ಕೋಡುಬಳೆ, ಸಿಹಿಉಂಡೆಗಳು

Last Updated 7 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೇಸಿಗೆ ರಜೆ ಶುರುವಾಗಿದೆ. ಓದು, ಹೋಂವರ್ಕ, ಪರೀಕ್ಷೆ ಎಂದೆಲ್ಲಾ ಹೈರಾಣಾಗಿ ಹೋಗಿರುವ ಮಕ್ಕಳೀಗ ತಮ್ಮ ಮನೆಯಲ್ಲೋ, ಇಲ್ಲವೇ ಅಜ್ಜಿ ಮನೆಯಲ್ಲೋ ಬೇಕಾಗಿದ್ದನ್ನು ತಿನ್ನುತ್ತ ಬಾಯಿ ಚಪ್ಪರಿಸುವ ಕಾಲವಿದು. ಹಸಿವೆ ಆಗದಿದ್ದರೂ ಏನಾದರೂ ಕುರುಂ ಕುರುಂ ಎಂದು ಮೆಲ್ಲಬೇಕು ಎನ್ನುವ ಆಸೆ  ಈ ಸಮಯದಲ್ಲಿ ಮಕ್ಕಳಿಗೆ ಸಹಜ. ಮಕ್ಕಳ ಆಸೆಯನ್ನು ಪೂರೈಸಬೇಕು ಎಂದು ನಿಮಗೆ ಎನಿಸಿದರೂ ಪದೇ ಪದೇ ತಿಂಡಿ ಮಾಡುವುದು ನಿಮಗೂ ಕಷ್ಟ ಆಗಬಹುದು. ಈಗ ಆ ಚಿಂತೆ ಬಿಡಿ. ಸುಲಭದಲ್ಲಿ ಬಗೆಬಗೆ ತಿಂಡಿ ತಯಾರಿಸಿ ಡಬ್ಬಿಯಲ್ಲಿ ತುಂಬಿಡಿ. ಬೇಕಾದಾಗ ಮಕ್ಕಳು ತಿನ್ನುತ್ತಾ ಖುಷಿಯಾಗಿರುತ್ತಾರೆ. ಅಂಥ ಕೆಲವು ತಿಂಡಿಗಳು ಇಲ್ಲಿವೆ...

ಹೆಸರುಂಡೆ
ಬೇಕಾಗುವ ಸಾಮಗ್ರಿಗಳು
ಹೆಸರುಬೇಳೆ – 2 ಕಪ್‌, ಬೆಲ್ಲ –1 ಅಚ್ಚು, ಕೊಬ್ಬರಿತುರಿ – 1 ಕಪ್‌, ಏಲಕ್ಕಿ ಪುಡಿ  – ಸ್ವಲ್ಪ
ತಯಾರಿಸುವ ವಿಧಾನ:  ಹೆಸರುಬೇಳೆಯನ್ನು ಕಮ್ಮಗೆ ಹುರಿದು, ನುಣ್ಣಗೆ ಪುಡಿ ಮಾಡಿ. ಅದಕ್ಕೆ ಕೊಬ್ಬರಿತುರಿ, ಏಲಕ್ಕಿಪುಡಿ ಸೇರಿಸಿಡಿ. ಬೆಲ್ಲ ಕರಗಲು ಬಿಡಿ, ಎಳೆ ಪಾಕ ಬಂದಾಗ ಹಿಟ್ಟಿಗೆ ಸೇರಿಸಿ, ಉಂಡೆ ಕಟ್ಟಿಡಿ.

ಗೊಜ್ಜವಲಕ್ಕಿ/ ಹುಳಿ ಅವಲಕ್ಕಿ
ಬೇಕಾಗುವ ಸಾಮಗ್ರಿಗಳು
ದಪ್ಪ ಅವಲಕ್ಕಿ –1 ಲೋಟ, ಬೆಲ್ಲ –  ನಿಂಬೆ ಗಾತ್ರ
ಉಪ್ಪು –  ರುಚಿಗೆ, ಸಾರಿನ ಪುಡಿ –2 ಚಮಚ
ಎಣ್ಣೆ  - 1 ಸೌಟು, ಕೊಬ್ಬರಿ ತುರಿ – 1 ಕಪ್‌
ಹುಣಸೆರಸ –1 ಕಪ್‌, ಅರಿಶಿಣ – 1/2 ಚಮಚ
ಕರಿಬೇವು – ಸ್ವಲ್ಪ, ಇಂಗು –  ರುಚಿಗೆ, ಉದ್ದಿನಬೇಳೆ
ಕಡ್ಲೆಬೇಳೆ – ತಲಾ 1 ಚಮಚ, ಸಾಸಿವೆ – ಒಗ್ಗರಣೆಗೆ, ಕೆಂಪು ಮೆಣಸಿನಕಾಯಿ – 2, ಕಡ್ಲೆಬೀಜ – 2 ಚಮಚ,  ಎಳ್ಳು ಪುಡಿ ಸ್ವಲ್ಪ

ತಯಾರಿಸುವ ವಿಧಾನ: ಹುಣಸೆರಸಕ್ಕೆ 1/2 ಲೋಟ ನೀರು ಹಾಕಿ, ಅದಕ್ಕೆ ಬೆಲ್ಲ, ಉಪ್ಪು, ಕರಿಬೇವು, ಸಾರಿನ ಪುಡಿ,  ಅರಿಶಿಣ 3 ಚಮಚ, ಎಣ್ಣೆ ಹಾಕಿ, 1 ಕುದಿ ಕುದಿಸಿ. ಅದು ಆರಿದ ಮೇಲೆ, ಅವಲಕ್ಕಿ ಹಾಕಿ ಕುದಿಸಿ 10 ನಿಮಿಷ ಮುಚ್ಚಿಡಿ, ನಂತರ ಕೊಬ್ಬರಿ ತುರಿ, ಹುರಿದ ಎಳ್ಳಿನ ಪುಡಿ, ಹಾಗೆ ಎಣ್ಣೆ ಹಾಕಿ ಸಾಸಿವೆ, ಇಂಗು, ಮೆಣಸಿನಕಾಯಿ, ಕಡ್ಲೆಬೀಜ, ಕಡ್ಲೆಬೇಳೆ, ಉದ್ದಿನಬೇಳೆ ಹಾಕಿ ಒಗ್ಗರಣೆ ಹಾಕಿ.

ಸಿಹಿ ಅವಲಕ್ಕಿ
ಬೇಕಾಗುವ ಸಾಮಗ್ರಿಗಳು
ಪೇಪರ್ ಅವಲಕ್ಕಿ – 2 ಕಪ್‌, ಕಾಯಿತುರಿ – 1/2 ಕಪ್‌, ಬೆಲ್ಲದ ಪುಡಿ – 1 ಕಪ್‌, ಏಲಕ್ಕಿ ಪುಡಿ – 1 ಚಮಚ, ದ್ರಾಕ್ಷಿ ಗೋಡಂಬಿ –  ಸ್ವಲ್ಪ

ತಯಾರಿಸುವ ವಿಧಾನ: ಎಲ್ಲವನ್ನೂ ಸೇರಿಸಿ ಚೆನ್ನಾಗಿ ಕಲಸಿದರೆ ಸಿಹಿ ಅವಲಕ್ಕಿ ರೆಡಿ.

ಕಡ್ಲೆಉಂಡೆ
ಬೇಕಾಗುವ ಸಾಮಗ್ರಿಗಳು
ಹುರಿಗಡ್ಲೆ – 1 ಪಾವು, ಬೆಲ್ಲ – ಎರಡಚ್ಚು ಏಲಕ್ಕಿಪುಡಿ –  ಸ್ವಲ್ಪ

ತಯಾರಿಸುವ ವಿಧಾನ: ಬೆಲ್ಲಕ್ಕೆ ತಕ್ಕಷ್ಟು ನೀರು ಹಾಕಿ, ಉಂಡೆ ಪಾಕ ಬರುವವರೆಗೂ ಕಾದು, ಏಲಕ್ಕಿ ಪುಡಿ ಹಾಕಿ, ಹುರಿಗಡ್ಲೆ ಹಾಕಿ ಕೂಡಿಸಿ, ಉಂಡೆ ಕಟ್ಟಿಡಿ. (ಕಡ್ಲೆ ಪುಡಿ ಮಾಡಿ, ಆ ಹಿಟ್ಟಿನಿಂದಲೂ ಉಂಡೆ ಕಟ್ಟಿಡಿ).

ಕೋಡುಬಳೆ
ಬೇಕಾಗುವ ಸಾಮಗ್ರಿಗಳು
ಅಕ್ಕಿಹಿಟ್ಟು – 1 ಲೋಟ, ಬ್ಯಾಡಗಿ ಮೆಣಸಿನಕಾಯಿ –8 ಉಪ್ಪು – ರುಚಿಗೆ, ಇಂಗು ರುಚಿಗೆ – ತಕ್ಕಷ್ಟು
ಓಂಕಾಳು –  ಸ್ವಲ್ಪ, ಕಾಯಿತುರಿ–  1 ಕಪ್‌
ಕರಿಯಲು –  ಎಣ್ಣೆ, ಮೈದಾ, ರವೆ (ಸಣ್ಣ) – 1 ಸೌಟು ಹುರಿಗಡ್ಲೆಹಿಟ್ಟು –  ಸ್ವಲ್ಪ

ತಯಾರಿಸುವ ವಿಧಾನ: ಅಕ್ಕಿಹಿಟ್ಟಿಗೆ ಉಪ್ಪು, ಇಂಗು, ಓಂಕಾಳು ಬೆರಸಿ. ಮೈದಾ, ರವೆ ಬೆಚ್ಚಗೆ ಹುರಿದು ಬೆರಸಿ. ಕಾಯಿತುರಿ ಮೆಣಸಿನಕಾಯಿನ್ನು  ತಿರುವಿ ಹಾಕಿ (ನೀರು ಸೇರಿಸಬೇಡಿ) ಎಲ್ಲವನ್ನು ಕಲೆಸಿ. ಒಂದು ಸೌಟು ಕಾದ ಎಣ್ಣೆಯನ್ನು ಹಿಟ್ಟಿನ ಮೇಲೆ ಹಾಕಿ (ಅದು ಚುರ್ ಅಂತ ಶಬ್ದ ಬರಲಿ) ಕಲೆಸಿಡಿ. ಸ್ವಲ್ಪ ಸ್ವಲ್ಪವನ್ನೆ ಕಲೆಸಿಕೊಂಡು, ಕೋಡುಬಳೆ ಒತ್ತಿ ಕಾದ ಎಣ್ಣೆಯಲ್ಲಿ ಕರಿಯಿರಿ.

ಅವಲಕ್ಕಿ ಪುರಿ ಉಂಡೆ
ಬೇಕಾಗುವ ಸಾಮಗ್ರಿಗಳು
ಅವಲಕ್ಕಿ ಪುರಿ – 1ಲೋಟ, ಹುರಿದ ಕಡ್ಲೆಕಾಯಿ –  1 ಕಪ್, ಕಡ್ಲೆ – 1/2 ಕಪ್‌, ಕೊಬ್ಬರಿತುರಿ – 1 ಕಪ್‌  ಅಕ್ಕಿಹಿಟ್ಟು –  ಸ್ವಲ್ಪ, ಬೆಲ್ಲ – 2 ಅಚ್ಚು.

ತಯಾರಿಸುವ ವಿಧಾನ: ಬೆಲ್ಲವನ್ನು ಪಾಕಕ್ಕೆ ಇಡಿ. ಮಿಕ್ಕೆಲ್ಲಾ ಪದಾರ್ಥಗಳನ್ನು ಕೂಡಿಸಿಡಿ. ಬೆಲ್ಲ ಉಂಡೆ ಪಾಕಕ್ಕೆ ಬಂದಾಗ, ಈ ಮಿಶ್ರಣಕ್ಕೆ ಸೇರಿಸಿ, ಉಂಡೆ ಕಟ್ಟಿ (ಕೈ ಬಿಸಿ ಎನಿಸಿದರೆ ಅಕ್ಕಿ ಹಿಟ್ಟಲ್ಲಿ ಕೈ ಅದ್ದಿ ಉಂಡೆ ಕಟ್ಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT