ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಕ್ಕೆ ಬೆಂಕಿ– ದಟ್ಟ ಹೊಗೆಯಿಂದ ಸಮಸ್ಯೆ

Last Updated 8 ಏಪ್ರಿಲ್ 2017, 6:20 IST
ಅಕ್ಷರ ಗಾತ್ರ

ವಿಜಯಪುರ:  ಪುರಸಭೆಯವರು ಸಮರ್ಪಕವಾಗಿ ಕಸ ವಿಲೇವಾರಿ ಮಾಡದೆ ಇರುವುದರ ಪರಿಣಾಮವಾಗಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ರಾಶಿಯಾಗಿ ಬಿದ್ದಿರುವ ಕಸದ ರಾಶಿಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಉಂಟಾಗುತ್ತಿರುವ ದಟ್ಟವಾದ ಹೊಗೆಯಿಂದಾಗಿ ನೆಮ್ಮದಿಯಿಂದ ಮನೆಗಳಲ್ಲಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲವೆಂದು ನಾಗರಿಕರು ಆರೋಪಿಸಿದ್ದಾರೆ.

ಪಟ್ಟಣದ ದೇವನಹಳ್ಳಿ ರಸ್ತೆಯಲ್ಲಿ ಪುರಸಭೆ ಕಾರ್ಯಾಲಯದ ಪಕ್ಕದಲ್ಲೆ ಇರುವ ಜಿ.ಕೆ.ಬಿ.ಎಂ.ಎಸ್ ಶಾಲೆಯ ಸಮೀಪದಲ್ಲಿಟ್ಟಿರುವ ಕಸದ ತೊಟ್ಟಿಯಿಂದ ಕಸವನ್ನು ತೆಗೆದಿಲ್ಲವಾದ್ದರಿಂದ ಕಸದ ತೊಟ್ಟಿಗೆ ಬೆಂಕಿ ಹಚ್ಚಿದ್ದಾರೆ. ಪ್ರವಾಸಿಮಂದಿರದ ಮುಂಭಾಗದಲ್ಲಿನ ಕಸದ ತೊಟ್ಟಿಗೂ ಬೆಂಕಿ ಹಚ್ಚಿದ್ದಾರೆ.  ಮೇಲೂರು ರಸ್ತೆಯಲ್ಲಿರುವ ದೊಡ್ಡಮೋರಿಯ ಬಳಿಯಲ್ಲಿ ಬಿದ್ದಿರುವ ಕಸದ ರಾಶಿಯಿಂದಾಗಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೇ ದುರ್ವಾಸನೆ ಬೀರುತ್ತಿದೆ ಎಂದು ಜನರು ದೂರಿದ್ದಾರೆ.

ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡಲು ಭೂಮಿಯನ್ನು ಮಂಜೂರು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಶಾಸಕರು, ಸೇರಿದಂತೆ ಎಲ್ಲರಿಗೂ ಮನವಿ ಮಾಡಲಾಗಿದೆ. ಹೋಬಳಿಯ ಇರಿಗೇನಹಳ್ಳಿಯ ಬಳಿಯಲ್ಲಿ ಕಸವಿಲೇವಾರಿ ಘಟಕ ಸ್ಥಾಪನೆಗೆ ಭೂಮಿ ಗುರುತಿಸಲಾಗಿತ್ತು. ಆದರೆ, ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದರಿಂದ ಸಾಧ್ಯವಾಗಿಲ್ಲ. ಪುರಸಭೆಗಳ ವ್ಯಾಪ್ತಿಗಳಲ್ಲಿ ಆಯಾ ವಾರ್ಡುಗಳಲ್ಲೇ ಕಸ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಂಗಡಣೆ ಮಾಡಿಕೊಂಡು ಗೊಬ್ಬರವನ್ನಾಗಿ ಪರಿವರ್ತನೆ ಮಾಡುವಂತೆ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಕೆಲವು ವಾರ್ಡುಗಳಲ್ಲಿ ಕಸವನ್ನು ವಿಂಗಡಣೆ ಮಾಡಿ ಗೊಬ್ಬರವನ್ನಾಗಿ ತಯಾರು ಮಾಡಲು ಪ್ರಯತ್ನಿಸಿದ್ದರಾದರೂ ಇದುವರೆಗೂ ಸಫಲವಾಗಲಿಲ್ಲ. ಪುರಸಭೆಯಿಂದ ಮಾಯಾ ಆಂಗ್ಲಶಾಲೆಯ ಸಮೀಪದಲ್ಲಿ ಕಸವಿಲೇವಾರಿ ಘಟಕವನ್ನು ಸ್ಥಾಪನೆ ಮಾಡಿ ಉದ್ಘಾಟನೆಯನ್ನು ಮಾಡಲಾಗಿದೆ. ಆದರೂ ಇದುವರೆಗೂ ಅದು ಕಾರ್ಯಾರಂಭ ಮಾಡಿಲ್ಲ. ಇದರಿಂದ ಪಟ್ಟಣದ ಜನತೆ ಇನ್ನಿಲ್ಲದಷ್ಟು ಸಂಕಷ್ಟ ಅನುಭವಿಸುವಂತಾಗಿದೆ ಎಂಬ ಆಕ್ಷೇಪ ಸ್ಥಳೀಯರದು.

ಬೆಂಗಳೂರಿನಿಂದ ಒಂದು ತಂಡ ಕಾರುಗಳಲ್ಲಿ ಉದ್ಯಮಿಗಳಂತೆ ಗ್ರಾಮಾಂತರ  ಭಾಗಕ್ಕೆ ಬಂದು ಲಾರಿಗಳು ಬಂದು ಹೋಗಲು ಅನುಕೂಲಕರವಾದ ರಸ್ತೆ ಇರುವ ಪಾಳುಬಾವಿಗಳನ್ನು ಗುರ್ತಿಸಿಕೊಂಡು ಹೋಗುತ್ತಿದೆ.  ಮಧ್ಯರಾತ್ರಿ ಬೆಂಗಳೂರಿನಿಂದ ಟಿಪ್ಪರ್ ಗಳಲ್ಲಿ ಕಸವನ್ನು ತಂದು ಬಾವಿಗಳಿಗೆ ಸುರಿದು ಹೋಗುತ್ತಿದ್ದಾರೆ. ಪ್ಲಾಸ್ಟಿಕ್ ಹಾಗೂ ಇತರ ರಾಸಾಯನಿಕ ವಸ್ತುಗಳನ್ನು ಬಾವಿಗಳಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಅಂತರ್ಜಲದ ಮಟ್ಟ ಕುಸಿದಿರುವ ಈ ಭಾಗದಲ್ಲಿ ಮಳೆ ಬಂದರೆ ಬಾವಿಗಳಲ್ಲಿ ಇಂಗುವಂತಹ ನೀರಿನಲ್ಲಿ ಕೊಳೆಯುವ ಕಸದಲ್ಲಿನ ವಿಷಕಾರಕ ವಸ್ತುಗಳು ಭೂಮಿಗೆ ಸೇರಲಿದೆ. ಜೊತೆಗೆ ವಾತಾವರಣ ಹದಗೆಡಲಿದೆ ಎಂದು ನಾಗರಿಕರಾದ ಅಶೋಕ್ ಕುಮಾರ್, ವಾಸುದೇವಮೂರ್ತಿ, ವೇಣುಗೋಪಾಲ್, ಹರೀಶ್ ಕುಮಾರ್, ತಿರುಮಲೇಶ್ ಮುಂತಾದವರು ಆರೋಪಿಸಿದ್ದಾರೆ.

**

ಕಸವಿಲೇವಾರಿ ಘಟಕ ಸ್ಥಾಪನೆಗೆ ಗುರುತಿಸಿದ ಭೂಮಿಯ ರೈತರು ನ್ಯಾಯಾಲಯದ ಮೊರೆ ಹೋಗಿದ್ದು, ಭೂ ಮಂಜೂರಾತಿ ಸಿಕ್ಕಿಲ್ಲ. ಕೆಲವೆಡೆ ವೈಜ್ಞಾನಿಕ ಕಸ ವಿಂಗಡಣೆ ಮಾಡಲಾಗುತ್ತಿದೆ
-ಕೆ.ಜಿ.ಅಮರನಾಥ, ಮುಖ್ಯಾಧಿಕಾರಿ ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT