ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮಲ್ಲೂ ಇರಬಹುದು ‘ಮೋಹನ’, ಎಚ್ಚರ...

Last Updated 9 ಏಪ್ರಿಲ್ 2017, 10:49 IST
ಅಕ್ಷರ ಗಾತ್ರ

ಧಾರವಾಡ ಜಿಲ್ಲೆಯ ಗ್ರಾಮವೊಂದರಲ್ಲಿ 2012ರ ಆಸುಪಾಸು ನಡೆದ ಘಟನೆಯಿದು. ಗೌಂಡಿ ಕೆಲಸ ಮಾಡುತ್ತಿದ್ದ ಕಲ್ಲಪ್ಪ ಮತ್ತು ಮಂಜವ್ವ ದಂಪತಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ರವಿವಾರ ಶಾಲೆಗೆ ರಜೆಯಾದ್ದರಿಂದ ಅವರ ಏಳು ವರ್ಷದ ಮಗಳು ಹೇಮಾ ಮನೆಯಲ್ಲಿಯೇ ಇದ್ದಳು. ಕೆಲಸ ಮುಗಿಸಿ ಮನೆಗೆ ಬಂದರೆ ದಂಪತಿಗೆ ಮಗಳು ಕಾಣಿಸಲೇ ಇಲ್ಲ. ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದವಳು ನಾಪತ್ತೆಯಾಗಿಬಿಟ್ಟಿದ್ದಳು. ಎಲ್ಲೆಡೆ ಹುಡುಕಾಡಿದರೂ ಹೇಮಾ ಸಿಗಲಿಲ್ಲ.

ಗ್ರಾಮದ ಕೆರೆಯೊಂದರ ಬಳಿ ಬಟ್ಟೆ ತೊಳೆಯುತ್ತಿದ್ದ ಇಬ್ಬರು ಯುವತಿಯರಿಗೆ ಬಾಲಕಿಯೊಬ್ಬಳು ಅತ್ತ ಕಡೆಯಿಂದ ಅಳುತ್ತ ಬರುವುದು ಕಾಣಿಸುತ್ತದೆ. ಮೈತುಂಬಾ ಗಾಯವಾಗಿ, ರಕ್ತ ಸೋರುತ್ತಿದ್ದ ಬಾಲಕಿಯನ್ನು ಕಂಡು ಕಂಗಾಲಾದ ಆ ಯುವತಿಯರು, ಆಕೆಯನ್ನು ಸಮಾಧಾನಪಡಿಸಿ ಮನೆಗೆ ಹೋಗಿ ಬಿಟ್ಟುಬರುತ್ತಾರೆ.

ತುಟಿಯಿಂದ ರಕ್ತ ವಸರುತ್ತಿದ್ದ, ಕೆನ್ನೆ, ಕುತ್ತಿಗೆಗೆ ಗಾಯಗಳಾಗಿದ್ದ, ಕೂದಲು ಕೆದರಿಹೋಗಿದ್ದ ಮಗಳು ಹೇಮಾಳನ್ನು ಕಂಡು ತಾಯಿ ದಿಗ್ಭ್ರಾಂತಳಾಗುತ್ತಾರೆ. ಆಘಾತಕ್ಕೆ ಒಳಗಾಗಿ ಅಳುತ್ತಿದ್ದ ಮಗಳನ್ನು ಸಮಾಧಾನಪಡಿಸಿ ಏನಾಯಿತೆಂದು ವಿಚಾರಿಸುತ್ತಾರೆ. ಮೋಹನ (ಹೇಮಾಳ ತಂದೆಯ ಸಹೋದರ ಸಂಬಂಧಿ) ತನ್ನನ್ನು ಕರೆದುಕೊಂಡು ಹೋಗಿ ಏನೆಲ್ಲಾ ಮಾಡಿದ ಎಂಬ ಬಗ್ಗೆ ಹೇಮಾ ಅಮ್ಮನಿಗೆ ಹೇಳುತ್ತಾಳೆ.

ಮೋಹನ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದ ಮಂಜವ್ವ ತಡ ಮಾಡದೆ ಪಟ್ಟಣಕ್ಕೆ ಹೋಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಪೊಲೀಸರು ಕೂಡಲೇ ಹೇಮಾಳನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಡುತ್ತಾರೆ. ಇತ್ತ, ‘ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) 2012  ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ದೂರನ್ನು  ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಆರಂಭಿಸುತ್ತಾರೆ.

ಅತ್ಯಾಚಾರ ಮಾಡಿದರೆ, ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲು ಮಾಡುವಂಥ ಕೆಲಸವನ್ನು ಯಾರೂ ಮಾಡಲು ಸಾಧ್ಯವಿಲ್ಲ ಎಂದುಕೊಂಡು ರಾಜಾರೋಷವಾಗಿ ಓಡಾಡಿಕೊಂಡಿದ್ದ ಮೋಹನ ಕೆಲವೇ ಗಂಟೆಗಳಲ್ಲಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾನೆ. ಧಾರವಾಡದ ವಿಶೇಷ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಿಚಾರಣಾಧೀನ ಕೈದಿಯಾಗಿ ಅವನನ್ನು ಜೈಲಿಗೆ ಕಳುಹಿಸಲಾಗುತ್ತದೆ. ಚುರುಕು ತನಿಖೆ ಕೈಗೊಂಡ ತನಿಖಾಧಿಕಾರಿ ಎಲ್ಲ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸುತ್ತಾರೆ. ಅತ್ಯಾಚಾರ ಆರೋಪದ ಪ್ರಕರಣ ಇದಾಗಿದ್ದರಿಂದ ನ್ಯಾಯಾಧೀಶರು ಇದನ್ನು ಇನ್‌ಕ್ಯಾಮೆರಾ ಪ್ರೊಸೀಡಿಂಗ್ಸ್‌  (ನ್ಯಾಯಾಧೀಶರ ಕೊಠಡಿಯಲ್ಲಿ ವಿಚಾರಣೆ) ನಡೆಸುತ್ತಾರೆ.

ಆರೋಪಿ ಮೋಹನನನ್ನು ಕೋರ್ಟ್‌ಗೆ ಹಾಜರು ಮಾಡಲಾಗುತ್ತದೆ. ತಾನು ನಿರಪರಾಧಿ ಎಂದು ನ್ಯಾಯಾಧೀಶರ ಮುಂದೆ ಗೋಗರೆದ ಮೋಹನ, ಆಸ್ತಿ ಹಂಚಿಕೆಯ ಕಾರಣದಿಂದಾಗಿ ದಾಯಾದಿಗಳು ಸುಳ್ಳು ದೂರು ದಾಖಲಿಸಿದ್ದಾರೆ ಎನ್ನುತ್ತಾನೆ. ತಾನು ಬಡವನಿದ್ದು ಈ ಪ್ರಕರಣದ ವಿಚಾರಣೆಗೆ ವಕೀಲರನ್ನು ನೇಮಿಸಿಕೊಳ್ಳಲು ಕೂಡ ತನ್ನ ಬಳಿ ಹಣವಿಲ್ಲ ಎನ್ನುತ್ತಾನೆ. ಕಾನೂನಿನ ಪ್ರಕಾರ ನ್ಯಾಯಾಧೀಶರು ‘ಕಾನೂನು ಸೇವಾ ಪ್ರಾಧಿಕಾರ’ದಿಂದ ಉಚಿತ ಕಾನೂನು ನೆರವಿನ ಅಡಿಯಲ್ಲಿ ಒಬ್ಬ ವಕೀಲರ ನೆರವನ್ನು ಮೋಹನನಿಗೆ ಒದಗಿಸುತ್ತಾರೆ.
ವಿಚಾರಣೆ ಪ್ರಾರಂಭವಾಗುತ್ತದೆ. ತಾನು ನಿರಪರಾಧಿ ಎಂದು ಪದೇಪದೇ ಮೋಹನ ಹಾಗೂ ಆತನ ಪರ ವಕೀಲರು ಹೇಳುತ್ತಿದ್ದ ಕಾರಣ, ಇದರ ಸತ್ಯಾಸತ್ಯತೆಯನ್ನು ನ್ಯಾಯಾಧೀಶರು ತಿಳಿಯಬಯಸುತ್ತಾರೆ. ಆದ್ದರಿಂದ ಹೇಮಾಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ‘ನೋಡಮ್ಮಾ, ಆ ದಿನ ಏನು ನಡೆದಿತ್ತೋ ಹಾಗೆಯೇ ಹೇಳು. ಬೇರೆಯವರು ಹೇಳಿಕೊಟ್ಟ ಹಾಗೆ ಹೇಳಬೇಡ. ಸುಳ್ಳು ಹೇಳಿದರೆ ದೇವರು ಶಿಕ್ಷೆ ಕೊಡುತ್ತಾನೆ.  ಯಾರಿಗೂ ಹೆದರಿಕೊಳ್ಳಬೇಡ, ಧೈರ್ಯವಾಗಿರು’ ಎನ್ನುತ್ತಾರೆ.

ಆಗಲೇ ಭಯದಲ್ಲಿ ನಲುಗಿಹೋಗಿದ್ದ ಹೇಮಾ, ಆ ದಿನವನ್ನು ನೆನೆದುಕೊಳ್ಳುತ್ತಾ ‘ಅಂದು ಮಧ್ಯಾಹ್ನ ನಾನು ಮನೆಯ ಅಂಗಳದಲ್ಲಿ ಆಡುತ್ತಿದ್ದೆ. ಮೋಹನ ಅಂಕಲ್‌ ನನಗೆ ಚಾಕೊಲೇಟ್‌ ಕೊಡಿಸ್ತೇನೆ ಅಂತ ಕರೆದುಕೊಂಡು ಹೋದ. ಹಳ್ಳದ ಆ ಕಡೆ ಕರೆದುಕೊಂಡು ಹೋಗಿ ತುಟಿ, ಕೆನ್ನೆ ಮತ್ತು ಎದೆಯನ್ನು ಗಟ್ಟಿಯಾಗಿ ಕಚ್ಚಿದ. ಅವನ ಬಾಯಿಯಲ್ಲಿ ಇದ್ದ ಪಾನ್‌ ಅನ್ನು ನನ್ನ ಬಾಯಿಗಿಟ್ಟು ತಿನ್ನು ಎಂದು ಬಲವಂತಮಾಡಿದ. ನನ್ನ ಪ್ಯಾಂಟನ್ನು ಕಳಚಿ ಅವನ ಬೆರಳನ್ನು ಮೂತ್ರ ಮಾಡುವ ಜಾಗದಲ್ಲಿ ತುರುಕಿ ತಿರುವಿದ. ನೋವಿನಿಂದ ಜೋರಾಗಿ ಕಿರುಚಿಕೊಂಡಾಗ ಸಿಟ್ಟಿನಿಂದ ಕುತ್ತಿಗೆ ಹಿಸುಕಿದ. ಆಮೇಲೆ ನಾನು ಇನ್ನೂ ಜೋರಾಗಿ ಕೂಗಿದೆ. ನನ್ನನ್ನು ನೂಕಿ ಓಡಿ ಹೋದ’ ಎಂದಳು.

ಮಂಜವ್ವ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು, ‘ಮೋಹನ ನನ್ನ ಗುಪ್ತಾಂಗದಲ್ಲಿ ಶಿಶ್ನವನ್ನು ತೂರಿಸಲು ಪ್ರಯತ್ನಪಟ್ಟ ಎಂದು ಮಗಳು ಹೇಮಾ ನನಗೆ ಹೇಳಿದ್ದಳು. ಆದರೆ ಘಟನೆ ವಿವರಿಸುವಾಗ ನ್ಯಾಯಾಧೀಶರ ಮುಂದೆ ಅವಳು ಈ ವಿಷಯವನ್ನು ಹೇಳಲಿಲ್ಲ’ ಎಂದು ತಿಳಿಸಿದರು.

ಆದರೆ, ಇದನ್ನು ಸಂಪೂರ್ಣ ಅಲ್ಲಗಳೆದ ಮೋಹನನ ಪರ ವಕೀಲರು ‘ಬಾಲಕಿ ಹಾಗೂ ಮಂಜವ್ವ ಹೇಳುತ್ತಿರುವುದೆಲ್ಲಾ ಸುಳ್ಳು. ಅವಳಿಗೆ ಹೀಗೆಯೇ ಹೇಳು ಎಂದು ಹೇಳಿಕೊಡಲಾಗಿದೆ. ಮೋಹನ ಅತ್ಯಾಚಾರ ಎಸಗಿದ್ದಾನೆ ಎಂಬುದಕ್ಕೆ ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿಲ್ಲ. ಹಾಗೊಂದು ವೇಳೆ ಮಂಜವ್ವ ಹೇಳಿದ್ದು ನಿಜವೇ ಆಗಿದ್ದರೆ, ಬಾಲಕಿಯ ಗುಪ್ತಾಂಗದ ಮೇಲೆ, ಅವಳ ಒಳ ಉಡುಪುಗಳ ಮೇಲೆ ಅಥವಾ ಆರೋಪಿ ಮೋಹನನ ಒಳ ಉಡುಪುಗಳ ಮೇಲೆ ವೀರ್ಯದ ಕಲೆಗಳು ಇರಬೇಕಿತ್ತು. ಆದರೆ  ಇಂಥ ಯಾವುದೇ ನಿಶಾನೆಗಳು ಇಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯ ಸ್ಪಷ್ಟವಾಗಿ ಹೇಳಿದೆ. ಅಲ್ಲದೆ, ಅತ್ಯಾಚಾರ ನಡೆದ ಬಗ್ಗೆ ಯಾವುದೇ ಅಂಶಗಳು ವೈದ್ಯಕೀಯ ವರದಿಯಿಂದ ದೃಢಪಟ್ಟಿರುವುದಿಲ್ಲ’ ಎಂದರು.

‘ಆಸ್ತಿಯ ಕಾರಣಕ್ಕೆ ನನ್ನ ಮತ್ತು ಹೇಮಾಳ ಕುಟುಂಬದೊಂದಿಗೆ ಆಗಾಗ ಜಗಳವಾಗುತ್ತಿತ್ತು. ಈ ಹಿಂದೆ ಅವಳ ತಂದೆ ಬಂದೂಕಿನಿಂದ ನನ್ನನ್ನು ಹತ್ಯೆ ಮಾಡಲು ಬಂದಿದ್ದ. ನನ್ನನ್ನು ಜೈಲಿಗೆ ಕಳುಹಿಸಿದರೆ ನಮ್ಮ ಆಸ್ತಿಯನ್ನು ಕಬಳಿಸಬಹುದು ಎಂಬ ದುರುದ್ದೇಶದಿಂದ ಇಂತಹ ಗುರುತರ ಆರೋಪವನ್ನು ನನ್ನ ಮೇಲೆ ಮಾಡಿದ್ದಾರೆ’  ಎಂದು ಮೋಹನ ಹೇಳುತ್ತಾನೆ.

ಹೇಮಾ ಅಳುತ್ತಾ ಬರುವುದನ್ನು ಕಂಡಿದ್ದ ಯುವತಿಯರಾದ ಲತಾ ಮತ್ತು ಗಿರಿಜಾ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ.  ಈ ಪ್ರಕರಣದಲ್ಲಿ ಇವರಿಬ್ಬರೇ ಪ್ರಮುಖ ಸಾಕ್ಷಿಗಳು ಎನಿಸಿಕೊಳ್ಳುತ್ತಾರೆ. ಮೊದಲಿಗೆ ಲತಾ, ‘ನಾನು ಬಟ್ಟೆ ತೊಳೆಯುತ್ತಿದ್ದ ವೇಳೆ  ಹೇಮಾಳನ್ನು ಮೋಹನ ಹಳ್ಳದ ಆಚೆಗೆ ಕರೆದುಕೊಂಡು ಹೋದ. ಸ್ವಲ್ಪ ಹೊತ್ತಿನ ನಂತರ ವಾಪಸ್‌ ಬಂದ ಆತ ನನ್ನ ಗಂಡನ ಬಟ್ಟೆಯನ್ನು ಕೊಡುವಂತೆ ಒತ್ತಾಯಿಸಿದ. ನಾನು ಪ್ರಶ್ನೆ ಮಾಡಿದಾಗ ಏನೂ ಮಾತಾಡದೆ ಸುಮ್ಮನೇ ಹೋದ. ಸ್ವಲ್ಪ ಹೊತ್ತಿನ ಬಳಿಕ ಅತ್ತ ಕಡೆಯಿಂದ ಹೇಮಾ ಅಳುತ್ತ ಬಂದಳು. ಗಂಭೀರ ಗಾಯಗಳಿಂದ ಅಳುತ್ತಿದ್ದ ಅವಳನ್ನು ಮನೆಗೆ ಕರೆದುಕೊಂಡು ಹೋದೆ’  ಎಂದು ವಿವರಿಸುತ್ತಾಳೆ. ಗಿರಿಜಾ ಕೂಡ ಲತಾಳ ಮಾತನ್ನು ಪುಷ್ಟೀಕರಿಸುತ್ತಾಳೆ.

ಬಾಲಕಿ ತಮ್ಮ ಕೊಠಡಿಯಲ್ಲಿ ನೀಡಿದ ಮಾಹಿತಿಗೂ, ಈ ಇಬ್ಬರು ಯುವತಿಯರು ನೀಡಿದ ಮಾಹಿತಿಗೂ ಸಾಮ್ಯತೆ ಇರುವುದು ನ್ಯಾಯಾಧೀಶರ ಗಮನಕ್ಕೆ ಬರುತ್ತದೆ. ಹೇಮಾಳ ತುಟಿ, ಕೆನ್ನೆ ಮತ್ತು ಎದೆಯ ಮೇಲೆ ಮಾತ್ರವಲ್ಲದೆ ಅವಳ ತೊಡೆಯ ಮೇಲೆ ಹಾಗೂ ಗುಪ್ತಾಂಗದ ಒಳಗಡೆಯೂ  ಗಾಯವಾಗಿದ್ದುದನ್ನು ವೈದ್ಯಕೀಯ ವರದಿಯಲ್ಲೂ ಸ್ಪಷ್ಟಪಡಿಸ ಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಸತ್ಯ ಎಂದು ನ್ಯಾಯಾಧೀಶರು ಅಭಿಪ್ರಾಯ ಪಡುತ್ತಾರೆ.

‘ಮೋಹನ ಬಾಲಕಿಯ ಗುಪ್ತಾಂಗದಲ್ಲಿ ತನ್ನ ಶಿಶ್ನ ತೂರಿಸಿಲ್ಲ. ಹಾಗೆ ಮಾಡಿದ್ದರೆ ಮಾತ್ರ ಅತ್ಯಾಚಾರವಾಗುತ್ತಿತ್ತು. ಅತ್ಯಾಚಾರ ನಡೆದಿದ್ದರೆ ವೀರ್ಯದ ಗುರುತು ಇರಬೇಕಿತ್ತು. ಆದ್ದರಿಂದ ಇದು ಅತ್ಯಾಚಾರ ಎನಿಸುವುದಿಲ್ಲ’ ಎಂದು ಮೋಹನನ ಪರ ವಕೀಲರ ವಾದಕ್ಕೆ ಉತ್ತರಿಸುತ್ತಾ ನ್ಯಾಯಾಧೀಶರು, ಮಕ್ಕಳಿಗಾಗಿ ಇರುವ ಪೋಕ್ಸೊ ಕಾಯ್ದೆಯಲ್ಲಿ ಇರುವ ಅಂಶಗಳ ಬಗ್ಗೆ ತಿಳಿಸುತ್ತಾರೆ. ‘ಈ ಕಾಯ್ದೆ ಅಡಿ ಅಪರಾಧಿ ಎನಿಸಬೇಕಿದ್ದರೆ, ಸಂತ್ರಸ್ತೆಯ ಗುಪ್ತಾಂಗದಲ್ಲಿ ಆರೋಪಿ ಶಿಶ್ನ ತೂರಿಸಲೇಬೇಕೆಂದು ಇಲ್ಲ. ಬದಲಿಗೆ ಆತ ತನ್ನ ದೇಹದ ಯಾವುದೇ ಭಾಗವನ್ನು ಬಾಲಕಿಯ ಗುಪ್ತಾಂಗದಲ್ಲಿ ತೂರಿಸಿದರೂ ಅದು ಅಪರಾಧವೆ. ಇಂತಹ ಲೈಂಗಿಕ ದೌರ್ಜನ್ಯ ಕೊಲೆಯಷ್ಟೇ ಗುರುತರವಾದದ್ದು’ ಎನ್ನುತ್ತಾರೆ. ‘ಆರೋಪಿ ಬಾಲಕಿಯ ಕತ್ತು ಹಿಚುಕಿ ಕೊಲೆ ಮಾಡಲು ಯತ್ನಿಸಿದ್ದು  ಕೂಡ ಗುರುತರ ಆರೋಪ’ ಎಂದೂ ಉಲ್ಲೇಖಿಸುತ್ತಾರೆ.

ಪೊಲೀಸರ ವಿಚಾರಣೆ ವೇಳೆಯಲ್ಲಿ ಮೋಹನ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಅಲ್ಲದೆ ಘಟನಾ ಸ್ಥಳದ ಪಂಚನಾಮೆ ಸಂದರ್ಭದಲ್ಲಿ ಬಾಲಕಿಯ ಪ್ಯಾಂಟ್ ಮತ್ತು ಚಡ್ಡಿ ದೊರೆತಿರುತ್ತದೆ. ಅಷ್ಟೇ ಅಲ್ಲದೆ, ಊರಿನ ಯಾವ ವ್ಯಕ್ತಿಯೂ ಮೋಹನನ ಪರವಾಗಿ ಸಾಕ್ಷಿದಾರರಾಗಲು ಒಪ್ಪಿರುವುದಿಲ್ಲ.

ಇವೆಲ್ಲಾ ತಿಳಿಯುತ್ತಿದ್ದಂತೆಯೇ, ಇನ್ನು ಶಿಕ್ಷೆ ತನಗೆ ಕಟ್ಟಿಟ್ಟ ಬುತ್ತಿ ಎಂದು ಮೋಹನನಿಗೆ ತಿಳಿಯುತ್ತದೆ. ಅದಕ್ಕೆ ಕೊನೆಯ ಅಸ್ತ್ರವಾಗಿ, ‘ನನಗಿನ್ನೂ 27 ವರ್ಷ. ಅಂಗವಿಕಲ ಮಹಿಳೆಯನ್ನು ಮದುವೆಯಾಗಿದ್ದೇನೆ. ನನ್ನ ತಾಯಿ ವಯೋವೃದ್ಧಳು. ಅವರೆಲ್ಲರ ಜೀವನ ನಿರ್ವಹಣೆಯ ಹೊಣೆ ನನ್ನ ಮೇಲಿದೆ. ಆದ್ದರಿಂದ ಈ ತಪ್ಪನ್ನು ಮನ್ನಿಸಿ ಶಿಕ್ಷೆಯಿಂದ ವಿನಾಯಿತಿ ನೀಡಿ’ ಎಂದು ಗೋಗರೆಯುತ್ತಾನೆ.

ಆಗ ನ್ಯಾಯಾಧೀಶರು, ‘ಇಂಥ ಹೇಯ ಕೃತ್ಯ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ನೀಡದೇ ಹೋದರೆ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ. ಜೊತೆಗೆ ಮಕ್ಕಳ ರಕ್ಷಣೆಗೆಂದೇ ಜಾರಿಗೊಂಡಿರುವ ಪೋಕ್ಸೊ ಕಾಯ್ದೆಯ ಉದ್ದೇಶವೇ ನಿರರ್ಥಕವಾಗುತ್ತದೆ. ಈ ದುರ್ಘಟನೆ ಕೇವಲ ದೈಹಿಕ ಹಿಂಸೆಯಲ್ಲ, ಬಾಲಕಿ ತನ್ನ ಜೀವನಪರ್ಯಂತ ಕೊರಗುವ, ಮಾನಸಿಕ ಆಘಾತಕ್ಕೆ ಒಳಗಾಗುವ ದುರಂತ ಘಟನೆ ಕೂಡ’ ಎಂದು ಅಭಿಪ್ರಾಯಪಟ್ಟು ಮೋಹನನಿಗೆ ಜೀವಾವಧಿ ಶಿಕ್ಷೆ ಮತ್ತು ಇಪ್ಪತ್ತೈದು ಸಾವಿರ ರೂಪಾಯಿ ದಂಡ ವಿಧಿಸುತ್ತಾರೆ. ಇದರ ಜೊತೆಗೆ ಹೇಮಾಳ ಕುಟುಂಬಕ್ಕೆ ಸರ್ಕಾರದ ಪರಿಹಾರ ನಿಧಿಯಿಂದ ಐವತ್ತು ಸಾವಿರ ರೂಪಾಯಿ ನೀಡುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡುತ್ತಾರೆ. ಈ ಆದೇಶವನ್ನು ಪ್ರಶ್ನಿಸಿ ಮೋಹನ ಹೈಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿ ಕೂಡ ವಜಾಗೊಳ್ಳುತ್ತದೆ.

2012ರಲ್ಲಿ ಪೋಕ್ಸೊ ಕಾಯ್ದೆ ಜಾರಿಗೆ ಬಂದ ಕೆಲವೇ ದಿನಗಳಲ್ಲಿ ಅದರಡಿ ಶಿಕ್ಷೆಯಾದ ದೇಶದ ಮೊದಲ ಪ್ರಕರಣವಿದು. ಇಂಥ ಐತಿಹಾಸಿಕ ಪ್ರಕರಣದ ವಿಚಾರಣೆ ಆಲಿಸುವ ಭಾಗ್ಯ ಕೋರ್ಟ್‌ ಅಧಿಕಾರಿಯಾಗಿ ನನಗೆ ಲಭಿಸಿತು. ಕೇವಲ ಆರು ತಿಂಗಳ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳಿಸಿ ಕೋರ್ಟ್‌ ಆದೇಶ ನೀಡಿದ್ದು ಕೂಡ ವಿಶೇಷ.

ಇಲ್ಲಿ ಕೆಲವು ವಿಷಯಗಳನ್ನು ತಿಳಿಸಲೇಬೇಕು. ಅದೇನೆಂದರೆ, ‘30 ಸಾವಿರಕ್ಕೂ ಅಧಿಕ ಮಕ್ಕಳ ಮೇಲೆ ಪ್ರತಿವರ್ಷ ಅತ್ಯಾಚಾರ ನಡೆಯುತ್ತಿದೆ. ಅವುಗಳ ಪೈಕಿ ಶೇ 15ಕ್ಕೂ ಹೆಚ್ಚು ಮನೆಯ ಮಂದಿಯಿಂದಲೇ ನಡೆಯುತ್ತಿದೆ’ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ಕಳೆದ ವರ್ಷ ಹೇಳಿದೆ. ಆದ್ದರಿಂದ ನಿಮ್ಮ ಮನೆ, ಕುಟುಂಬ, ಅಕ್ಕಪಕ್ಕದಲ್ಲೂ ಒಬ್ಬ ಮೋಹನ ಇರಬಹುದು. ಇಂಥವರ ಬಗ್ಗೆ ಎಚ್ಚರವಿರಲಿ.

ಜೊತೆಗೆ, ಈ ಪ್ರಕರಣದಲ್ಲಿ ಮಕ್ಕಳ ಮೇಲೆ ನಡೆಯುವ ಅತ್ಯಾಚಾರದ ವ್ಯಾಖ್ಯಾನದ ಬಗ್ಗೆ ನ್ಯಾಯಾಧೀಶರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಎಷ್ಟೋ ಮಂದಿಗೆ ಪೋಕ್ಸೊ ಕಾಯ್ದೆಯ ಬಗ್ಗೆ ಅರಿವೇ ಇಲ್ಲ. ಈ ಕಾಯ್ದೆಯ ಅನ್ವಯ, ಇಂಥ ಪ್ರಕರಣಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಮುಚ್ಚಿದ ಕೊಠಡಿಯಲ್ಲಿ ನಡೆಸುತ್ತದೆ. ಆದ್ದರಿಂದ ಸಂತ್ರಸ್ತ ಮಗುವಿನ ಗುರುತು ಬಹಿರಂಗಗೊಳ್ಳುವುದಿಲ್ಲ. ಆದ್ದರಿಂದ ಅತ್ಯಾಚಾರ ನಡೆದ ಸಂದರ್ಭದಲ್ಲಿ ಸಮಾಜಕ್ಕೆ ಹೆದರಿ ಅದನ್ನು ಮುಚ್ಚಿಡುವ ಬದಲು ಹೇಮಾಳ ಅಮ್ಮ ತೋರಿದಂತೆ ಧೈರ್ಯ ತೋರಿದರೆ ಮೋಹನನಂಥವರಿಗೆ ಶಿಕ್ಷೆ ಆಗುತ್ತದೆ. ಇಲ್ಲದಿದ್ದರೆ ಇಂಥವರು ಕುಕೃತ್ಯ ಎಸಗಿಯೂ ನಿರಾತಂಕವಾಗಿ ಓಡಾಡಿಕೊಂಡಿರುತ್ತಾರೆ.

(ಹೆಸರುಗಳನ್ನು ಬದಲಾಯಿಸಲಾಗಿದೆ)
ಲೇಖಕ ನ್ಯಾಯಾಂಗ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT