ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನಷ್ಟೇ ‘ಚುರುಕು’ ಫ್ಯಾನ್, ಕೂಲರ್‌ ವಹಿವಾಟು

ನಗರದಲ್ಲಿ ತಂಪುಕಾರಕಗಳ ವ್ಯಾಪಾರ ಬಲು ಜೋರು, ವರ್ಷಕ್ಕಿಂತ ವರ್ಷಕ್ಕೆ ಮಾರಾಟ ಹೆಚ್ಚಳ
Last Updated 10 ಏಪ್ರಿಲ್ 2017, 4:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೇಸಿಗೆಯ ಬಿಸಿಲಿನ ತಾಪ ದಿನೇ ದಿನೇ ತನ್ನ ಪ್ರತಾಪ ತೋರುತ್ತಿದೆ. ಧಗೆ ತಾಳಲಾರದ ಜನರು ಮನೆ, ಮೈಮನಗಳನ್ನು ತಂಪಾಗಿಸಿಕೊಳ್ಳಲು ಹೆಚ್ಚೆಚ್ಚು ಫ್ಯಾನ್‌, ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ತಂಪುಕಾರಕಗಳ ವಹಿವಾಟು ಚುರುಕು ಪಡೆದುಕೊಂಡಿದೆ.

ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಳ್ಳುವ ವರುಣನ ಸಿಂಚನ ಕೂಡ ಉರಿ ಬಿಸಿಲ ತಾಪ ತಣಿಸಲು ಸಾಧ್ಯವಾಗದ ಕಾರಣ ಜನರು ಮನೆ, ಕಚೇರಿಯೊಳಗಿನ ಸೆಕೆ ನಿವಾರಿಸಿಕೊಳ್ಳಲು ತಂಪುಕಾರಕ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ.

ನಗರದಲ್ಲಿ  ಫೆಬ್ರುವರಿಯಿಂದಲೇ ಫ್ಯಾನ್‌, ಕೂಲರ್‌ಗಳ ಜತೆಗೆ ರೆಫ್ರಿಜರೇಟರ್‌ಗಳ ಮಾರಾಟ ವೃದ್ಧಿಯಾಗುತ್ತಲೇ ಇದೆ. ಬೇಸಿಗೆ ಋತುಮಾನದ ಈ ವಹಿವಾಟನ್ನು ಸದುಪಯೋಗಪಡಿಸಿಕೊಳ್ಳಲು ವರ್ತಕರು ಪೈಪೋಟಿಯಲ್ಲಿ ವಹಿವಾಟು ನಡೆಸುತ್ತಿದ್ದಾರೆ.

‘ಸಾಮಾನ್ಯ ದಿನಗಳಲ್ಲಿ ಕೂಲರ್‌ ಮಾರಾಟವಾಗುವುದೇ ಅಪರೂಪ. ಸೀಲಿಂಗ್‌ ಫ್ಯಾನ್‌ಗಳನ್ನು ಹೊರತುಪಡಿಸಿದಂತೆ ಇತರೆ ಫ್ಯಾನ್‌ಗಳು ಒಂದೋ ಎರಡೋ ಮಾರಾಟವಾಗುತ್ತಿರುತ್ತವೆ. ಆದರೆ ಸದ್ಯ ವಹಿವಾಟು ಚೆನ್ನಾಗಿದೆ. ಇದೊಂದು ತಿಂಗಳು ವ್ಯಾಪಾರ ಉತ್ತಮವಾಗಿ ನಡೆಯುತ್ತದೆ’ ಎಂದು ಬಿ.ಬಿ.ರಸ್ತೆಯಲ್ಲಿರುವ ಶ್ರೀಬಾಲಾಜಿ ಎಂಟರ್‌ಪ್ರೈಸಸ್ ಮಾಲೀಕ ಅಶೋಕ್‌ ಕುಮಾರ್.

‘ಕಳೆದ ವರ್ಷಕ್ಕಿಂತ ಬಿಸಿಲು ಸ್ವಲ್ಪ ಕಡಿಮೆ ಇದೆಯಾದರೂ ಫ್ಯಾನ್‌, ಕೂಲರ್‌ಗಳ ವಹಿವಾಟು ಮಾತ್ರ ಚೆನ್ನಾಗಿದೆ. ಸಾಮಾನ್ಯ ದಿನಗಳಲ್ಲಿ ತಿಂಗಳಿಗೆ ಒಂದೆರಡು ಕೂಲರ್‌ ಮಾರಾಟವಾಗುತ್ತವೆ. ಇದೀಗ ದಿನಕ್ಕೆ ಸುಮಾರು 10 ಕೂಲರ್‌ಗಳು, 15 ಫ್ಯಾನ್‌ಗಳು ಮಾರಾಟವಾಗುತ್ತವೆ’ ಎಂದು ಇ–ಸಿಟಿ ಎಲೆಕ್ಟ್ರಾನಿಕ್ಸ್ ಮಳಿಗೆಯ ಮಾರಾಟ ಪ್ರತಿನಿಧಿ ರಾಮಚಂದ್ರ ಹೇಳಿದರು.

‘ನಮ್ಮಲ್ಲಿ ಸ್ಟ್ಯಾಂಡ್‌ ಅಳವಡಿಸಿದ ಫ್ಯಾನ್‌ಗಳು ಕನಿಷ್ಠ ₹2,000 ಬೆಲೆಯಲ್ಲಿ ದೊರೆಯುತ್ತವೆ. ಇನ್ನು ಕೂಲರ್‌ಗಳಿಗೆ ₹3,000 ದಿಂದ ₹10 ಸಾವಿರದವರೆಗೆ ಬೆಲೆ ಇದೆ. ಕೆಳ ಮಧ್ಯಮ ವರ್ಗದವರು ಫ್ಯಾನ್‌ ಕೇಳುತ್ತಾರೆ. ಮಧ್ಯಮ ವರ್ಗದವರು ಕಡಿಮೆ ಬಜೆಟ್‌ನಲ್ಲಿರುವ ಕೂಲರ್‌ ಕೇಳುತ್ತಾರೆ. ಶ್ರೀಮಂತರು ವಿವಿಧ ಬ್ರಾಂಡ್‌ಗಳ ಕೂಲರ್‌ ಖರೀದಿಸುತ್ತಾರೆ’ ಎಂದರು.

‘ಕೆಲ ವರ್ಷಗಳ ಹಿಂದೆ ಕೂಲರ್‌ ಬೆಲೆ ಕನಿಷ್ಠ ₹8,000–₹9,000 ಆಸುಪಾಸಿನಲ್ಲಿ ಇರುತ್ತಿತ್ತು. ಇದೀಗ ₹3,000ಕ್ಕೂ ಕೂಲರ್‌ಗಳು ದೊರೆಯುತ್ತಿರುವ ಕಾರಣ ವರ್ಷದಿಂದ ವರ್ಷಕ್ಕೆ ಕೂಲರ್‌ಗಳ ಮಾರಾಟ ಹೆಚ್ಚಳವಾಗುತ್ತಿದೆ’ ಎಂದು ಅವರು ಹೇಳಿದರು.

‘ಮಾಮೂಲಿ ದಿನಗಳಲ್ಲಿ ಕೂಲರ್‌, ಫ್ಯಾನ್‌ ವ್ಯಾಪಾರ ಅಷ್ಟಾಗಿ ಇರುವುದಿಲ್ಲ. ಈ ಸೀಸನ್‌ನಲ್ಲಿ ದಿನಾಲೂ 10 ರಿಂದ 12 ಕೂಲರ್‌ ಮಾರಾಟ ಮಾಡುತ್ತೇವೆ. ಫ್ಯಾನ್‌ಗಳ ಬೇಡಿಕೆ ಕೂಡಾ ತುಂಬಾ ಚೆನ್ನಾಗಿದೆ. ನಮ್ಮಲ್ಲಿ ಹೊಸ ನಮೂನೆಯ ಮಿನಿ ಕೂಲರ್ ಕೂಡ ಲಭ್ಯವಿದೆ. ಸದ್ಯ ವ್ಯಾಪಾರ ಮಾತ್ರ ಉತ್ತಮವಾಗಿದೆ’ ಎಂದು ಬಿ.ಬಿ.ರಸ್ತೆಯ ದಾಸ್ ಎಲೆಕ್ಟ್ರಾನಿಕ್ಸ್ ಮಾಲೀಕ ಅನಿಲ್ ಸಂತಸ ವ್ಯಕ್ತಪಡಿಸಿದರು.

ನಗರದ ಎಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ ಬ್ರಾಂಡೆಡ್ ಉಪಕರಣಗಳಷ್ಟೇ ಅಲ್ಲದೆ ಸ್ಥಳೀಯ ತಯಾರಿಕೆಯ ಸರಕುಗಳು ಕೂಡ ಬಿರುಸಿನಿಂದ ಬಿಕರಿಯಾಗುತ್ತಿವೆ. ಇದೀಗ ನಗರದ ಪ್ರತಿಯೊಂದು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ವರ್ತಕರು ಫ್ಯಾನ್‌, ಕೂಲರ್‌ಗಳ ಮಾರಾಟದತ್ತಲೇ ಚಿತ್ತ ನೆಟ್ಟಿದ್ದಾರೆ.

‘ಮನೆಗೆ ಶೀಟಿನ ಚಾವಣಿ ಇರುವ ಕಾರಣ ಮನೆಯಲ್ಲಿ ವಿಪರೀತ ಸೆಕೆ. ಬಾಗಿಲು ಮುಚ್ಚಿ ಮಲಗಲು ಸಾಧ್ಯವಾಗುತ್ತಿಲ್ಲ. ಮಕ್ಕಳು ಚಡಪಟಿಕೆ ನೋಡಲಾಗದೆ ಕಡಿಮೆ ಬಜೆಟ್‌ನ ಕೂಲರ್‌ ತೆಗೆದುಕೊಳ್ಳಲು ನಿರ್ಧರಿಸಿ ಖರೀದಿಸಲು ಬಂದಿರುವೆ’ ಎಂದು ಬಾಪೂಜಿ ನಗರ ನಿವಾಸಿ ಬಾಪು ತಿಳಿಸಿದರು.

‘ಮನೆಯಲ್ಲಿ ಸಿಲಿಂಗ್‌ ಫ್ಯಾನ್‌ ಇದೆ. ಆದರೂ ಅದರ ಗಾಳಿ ಕೆಲ ಹೊತ್ತು ಕಳೆದಂತೆ ಬಿಸಿಯಾಗುತ್ತದೆ. ಜತೆಗೆ ಬೇಕಾದ ಕಡೆಗಳಲ್ಲಿ ಅದನ್ನು ಉಪಯೋಗಿಸಿಕೊಳ್ಳಲು ಆಗುವುದಿಲ್ಲ. ಬಿಸಿಲಿನ ಧಗೆಯೋ ತಾಳಲಾಗುತ್ತಿಲ್ಲ. ಆದ್ದರಿಂದ ಸ್ಟ್ಯಾಂಡಿಂಗ್ ಫ್ಯಾನ್‌ ಖರೀದಿಸಲು ಬಂದೆ’ ಎಂದು ಎಚ್‌.ಎಸ್.ಗಾರ್ಡನ್‌ ನಿವಾಸಿ ಅವಿನಾಶ್ ಹೇಳಿದರು.

*
ನಿತ್ಯ 15 ಸ್ಟ್ಯಾಂಡಿಂಗ್ ಫ್ಯಾನ್‌ಗಳು, 2–3 ಕೂಲರ್‌ಗಳು ಮಾರಾಟವಾಗುತ್ತಿವೆ. ಟೇಬಲ್‌ ಫ್ಯಾನ್‌ಗೂ ಬೇಡಿಕೆ ಇದೆ. ಹೊಸ ನಮೂನೆಯ ಟವರ್ ಫ್ಯಾನ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.
-ಅಶೋಕ್‌ ಕುಮಾರ್, ಶ್ರೀಬಾಲಾಜಿ ಎಂಟರ್‌ಪ್ರೈಸಸ್ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT