ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ, ಮಗು ಮತ್ತು ಮುಂಗಡಪತ್ರ

ಲಿಂಗ ಸೂಕ್ಷ್ಮ ಮುಂಗಡಪತ್ರದ ಬಗ್ಗೆ ಹಲವು ವರ್ಷಗಳಿಂದ ಚರ್ಚೆಯಾಗುತ್ತಿದ್ದರೂ ಇನ್ನೂ ಸ್ಪಷ್ಟತೆಯೇ ಬಂದಿಲ್ಲ
Last Updated 10 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಕಳೆದ ವರ್ಷಾಂತ್ಯದಲ್ಲಿ ಪ್ರಧಾನ ಮಂತ್ರಿ ದೇಶವನ್ನುದ್ದೇಶಿಸಿ ಮಾತನಾಡಿ, ದೇಶದ ಎಲ್ಲಾ ಗರ್ಭಿಣಿ, ಬಾಣಂತಿಯರಿಗೆ ಇನ್ನು ಮುಂದೆ ₹ 6,000 ಮಾತೃತ್ವ ಭತ್ಯೆಯನ್ನು ನೀಡಲಾಗುವುದು ಎಂದು ಘೋಷಿಸಿದರು. ಭರ್ಜರಿ ಚಪ್ಪಾಳೆಯ ಸುರಿಮಳೆಯಲ್ಲಿ ಬಹುಜನರಿಗೆ ಇದು ಮೂರು ವರ್ಷಗಳ ಹಿಂದೆ ಜಾರಿಯಾಗಬೇಕಿದ್ದ, ಆಹಾರ ಭದ್ರತಾ ಕಾಯ್ದೆಯಲ್ಲಿ ಅಡಕವಾಗಿದ್ದ ಅಂಶ ಎನ್ನುವುದು ಮರೆತುಹೋಯಿತು.  

ಆಹಾರ ಭದ್ರತಾ ಯೋಜನೆಯ ಪ್ರಕಾರ ಸಿಗಬೇಕಿದ್ದ ಈ ಸೌಲಭ್ಯವನ್ನು ಲಕ್ಷಾಂತರ ಗರ್ಭಿಣಿಯರು, ಬಾಣಂತಿಯರಿಗೆ ನಿರಾಕರಿಸುತ್ತಿರುವುದೇಕೆ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನೆ ಮಾಡಿದಾಗ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2015- 16ರಲ್ಲಿ 53 ಜಿಲ್ಲೆಗಳಿಗೆ, ಮರುವರ್ಷ 200 ಜಿಲ್ಲೆಗಳಿಗೆ, ಅದರ ಮರುವರ್ಷ ಇಡೀ ದೇಶಕ್ಕೆ ಈ ಯೋಜನೆಯನ್ನು ವಿಸ್ತರಿಸುವುದಾಗಿ ಅಫಿಡವಿಟ್ ಸಲ್ಲಿಸಿತ್ತು.
 
ಆದರೆ ಅದಕ್ಕಾಗಿ ಇಟ್ಟಿರುವ ಬಜೆಟ್ ಆದರೂ ಎಷ್ಟು? ಒಂದು ಮಗುವಿಗೆ ₹ 6,000ದಂತೆ ದೇಶದೆಲ್ಲೆಡೆ ಬಡ ತಾಯಂದಿರಿಗೆ ಮಾತೃತ್ವ ಸಹಯೋಗಿನಿ ಯೋಜನೆಯನ್ನು ಮುಟ್ಟಿಸಬೇಕೆಂದರೆ ಕನಿಷ್ಠ ₹ 15,000 ಕೋಟಿಯಾದರೂ ಬೇಕು. ಆದರೆ ಇಟ್ಟಿರುವ ಹಣ ಕೇವಲ ₹ 400 ಕೋಟಿ. 
 
ಗರ್ಭಿಣಿಯಿರಲಿ, ಬಾಣಂತಿಯಿರಲಿ, ನಿತ್ಯ ದುಡಿದೇ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಅನಿವಾರ್ಯ ಇರುವ ಬಡ ಕೂಲಿಕಾರ ಹೆಣ್ಣು ಮಕ್ಕಳಿಗೆ ಆರು ತಿಂಗಳ ಮಟ್ಟಿಗಾದರೂ ಸರ್ಕಾರದ ಭತ್ಯೆಯ ಸುರಕ್ಷತೆ ಇದ್ದರೆ ಬದುಕಿಕೊಳ್ಳುತ್ತಾರೆ. ಹೆರಿಗೆಯ ಸಂದರ್ಭದಲ್ಲಿ ತಾಯಿಮರಣ, ಶಿಶುಮರಣ ಹಾಗೂ ಕಡಿಮೆ ತೂಕದ ಮಕ್ಕಳ ಜನನವನ್ನು ತಪ್ಪಿಸಬೇಕೆಂದರೆ ಸರ್ಕಾರ ಕೈಗೊಳ್ಳಲೇಬೇಕಾದ, ಲೆಕ್ಕಾಚಾರ ಹಾಕಬಾರದ ಖರ್ಚಿನ ಕ್ರಮವಿದು.
 
ಆದರೆ ಲೆಕ್ಕಾಚಾರ ಹಾಕುತ್ತಲೇ ಮೂರು ವರ್ಷಗಳನ್ನು ದಾಟಿಸಿ, ದೊಡ್ಡ ಪ್ರಮಾಣದಲ್ಲಿ ತಾಯಂದಿರಿಗೆ ವಂಚಿಸಿದೆ. ತಾಯ್ತನದ ಭತ್ಯೆಯನ್ನು ನೀಡುವ ಮೂಲಕ ತಾಯಿಯನ್ನು ಒಬ್ಬ ಕಾರ್ಮಿಕಳೆಂದು ಸರ್ಕಾರ ಗುರುತಿಸಬೇಕಾದ ಅಗತ್ಯ ಇದೆ. ಕನಿಷ್ಠ  ಆರು ತಿಂಗಳ ಕಾಲ ಸಂಪೂರ್ಣ ತಾಯಿ ಹಾಲು, ತಾಯಿಗೆ ವಿಶ್ರಾಂತಿ, ಮಗುವಿಗೆ ಅವಶ್ಯಕ ಪೋಷಣೆ ದೊರೆಯಬೇಕೆಂದರೆ ತಿಂಗಳಿಗೆ ₹ 1,000 ಮಾತ್ರವಲ್ಲ, ಇನ್ನೂ ಹೆಚ್ಚಿನ ಸೌಕರ್ಯಗಳು ಆ ತಾಯಿಗೆ ಬೇಕು. ಸಂಬಳ ಸಹಿತದ ರಜ, ತಾಯ್ತನದ ಭತ್ಯೆ, ಮಗು ಪಾಲನೆಯ ಆಹಾರ ಇವೆಲ್ಲವೂ ಸಾರ್ವತ್ರಿಕವಾಗಿ ಎಲ್ಲ ತಾಯಂದಿರಿಗೂ ಸಿಗಬೇಕಾದ ಅವಶ್ಯಕತೆ ಇದೆ.
 
ಆದರೆ ₹ 6,000ವನ್ನು ಘೋಷಿಸಿದ ಕೇಂದ್ರ ಸರ್ಕಾರ  ಈಗ ಬಜೆಟ್ಟಿನಲ್ಲಿ ಕಡಿಮೆ ಹಣ ಇಡುವ ಮೂಲಕ ಮತ್ತು ‘ಮೊದಲ ಮಗುವಿಗೆ ಮಾತ್ರ’, ‘ಮೊದಲ ಮೂರು ತಿಂಗಳ ಒಳಗೆ ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ’ ಎಂದೆಲ್ಲ ನಿಯಮಗಳನ್ನು ಹಾಕಿ, ಅತ್ಯಂತ ಅವಶ್ಯಕತೆ ಇರುವಂಥವರನ್ನು ಯೋಜನೆಯ ಹೊರಗಿಡುವ ಪ್ರಯತ್ನ ಮಾಡುತ್ತಿದೆ. ಗುರಿ–ಗುಂಪು ಮಾಡಿದಾಗೆಲ್ಲ ಅವಶ್ಯಕತೆ ಇರುವವರು ಹೊರಗೆ ಉಳಿದೇ ಬಿಡುತ್ತಾರೆ.
 
ತಾಯಿಯ ಕಾಳಜಿಯ ಇನ್ನೊಂದು ಅತಿಮುಖ್ಯ ಕ್ಷೇತ್ರ ಮನೆ ಮಂದಿಯ ಆಹಾರದ್ದು.  ಪ್ರತಿ ಕುಟುಂಬಕ್ಕೆ ಪಡಿತರ ಐದು ಕೆ.ಜಿ ಇದ್ದುದನ್ನು ಏಳು ಕೆ.ಜಿಗೆ ಏರಿಸುವ ಸಂಕಲ್ಪ ಮಾಡಿರುವುದು ಸ್ವಾಗತಾರ್ಹ. ರಾಜ್ಯ ಮುಂಗಡಪತ್ರದಲ್ಲಿ ಇದನ್ನು ಘೋಷಿಸಲಾಗಿದೆ. ಮುಖ್ಯಮಂತ್ರಿ ಹಿಂದೊಮ್ಮೆ ಮಾತನಾಡುವಾಗ ಎಂಟು ಕೆ.ಜಿ ಕೊಡುತ್ತೇವೆಂದಿದ್ದರು. ಆದರೆ ಅದು ಮತ್ತೇಕೆ ಏಳಕ್ಕೆ ಇಳಿಯಿತೋ ಗೊತ್ತಿಲ್ಲ.
 
ನೇರ ನಗದು ವರ್ಗಾವಣೆಯತ್ತ ದಾಪುಗಾಲನ್ನಿಡಲು ಹೊರಟಿದ್ದ ಸರ್ಕಾರ ಬಲು ಎಚ್ಚರಿಕೆಯಿಂದ ಕಾಲನ್ನು ಹಿಂತೆಗೆದುಕೊಂಡಿದ್ದಂತೂ ಸ್ಪಷ್ಟ. ಮುಂಬರುವ ಚುನಾವಣೆಯೂ ಕಾರಣವಿರಬಹುದು ಅಥವಾ ನೇರ ನಗದಿನ ಪ್ರಯೋಗ ಕುರಿತ ಅಧ್ಯಯನದ ವರದಿಯೂ ಕಾರಣವಿರಬಹುದು.

ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ದಾದ್ರಾ ಮತ್ತು ನಗರ ಹವೇಲಿ, ಚಂಡಿಗಡಗಳಲ್ಲಿ 2015ರಿಂದಲೇ ಪಡಿತರದಲ್ಲಿ ಕಾಳಿನ ಬದಲಿಗೆ ಕಾಸು ಕೊಡುವ ಪ್ರಯೋಗ ನಡೆಯುತ್ತಿದೆ. ಒಂದು ವರ್ಷದ ನಂತರ ನೀತಿ ಆಯೋಗದ ವಿನಂತಿಯ ಮೇರೆಗೆ ನಡೆದ ಅಧ್ಯಯನದ ಪ್ರಕಾರ, ಜನರಿಗೆ ಆಹಾರದ ಬದಲು ಹಣ ಕೊಡುವ ಪ್ರಯೋಗ ವ್ಯರ್ಥವಾದುದು ಎಂಬ ಅಂಶ ಬೆಳಕಿಗೆ ಬಂದಿದೆ. 
 
ಈ ಅಧ್ಯಯನವನ್ನು ಮಾಡಿದ್ದು ಅಮೆರಿಕದ ಮಸಾಚುಸೆಟ್ಸ್‌ ವಿಶ್ವವಿದ್ಯಾಲಯದ ಒಂದು ಅಧ್ಯಯನ ಪೀಠ. ಅಲ್ಲಿನ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್ ಅಂಡ್ ರಿಸರ್ಚ್ ಸಂಸ್ಥೆಗೆ ನಮ್ಮ ಕ್ಯಾಶ್ ಟ್ರಾನ್ಸ್‌ಫರ್ ಪ್ರಯೋಗದ ಅಧ್ಯಯನ ಮಾಡಲು ಕೇಳಿಕೊಳ್ಳಲಾಗಿತ್ತು.

ನಮ್ಮಲ್ಲೇ ಯೋಗ್ಯ ಅಧ್ಯಯನಕಾರರು ಸರ್ಕಾರಕ್ಕೆ ಸಿಗಲಿಲ್ಲವೇ, ವಿದೇಶದವರಿಗೆ ಕೊಡಬೇಕಾಯ್ತೇ ಎಂಬ ಪ್ರಶ್ನೆಯನ್ನು ಬದಿಗಿಟ್ಟು ಅವರ ಅಧ್ಯಯನದ ಫಲಿತಾಂಶವನ್ನು ನೋಡಿದರೆ, ಈ ಒಂದು ವರ್ಷದ ನಂತರವೂ  ಚಂಡಿಗಡ ಅಥವಾ ಪುದುಚೇರಿಯಲ್ಲಿ ಶೇ 60ರಷ್ಟು ಕುಟುಂಬಗಳು ಈ ವ್ಯವಸ್ಥೆ ತಮಗೆ ಬೇಡವೆಂದು ಹೇಳುತ್ತಿವೆ.
 
ಈ ಒಂದು ವರ್ಷದಲ್ಲಿ ಒಟ್ಟು 1.05 ಕೋಟಿ  ರೂಪಾಯಿಯನ್ನು ವರ್ಗಾವಣೆ ಮಾಡಿರುವುದಾಗಿ ಸರ್ಕಾರ ಹೇಳಿಕೊಂಡರೆ, ಅದರಲ್ಲಿ 42.42 ಲಕ್ಷ ರೂಪಾಯಿ ಎಲ್ಲಿ ಹೋಯಿತೆಂಬುದೇ ಗೊತ್ತಾಗುತ್ತಿಲ್ಲವಂತೆ. ಚೆನ್ನಾಗಿ ಶಹರೀಕರಣಗೊಂಡಿರುವ, ಅಕ್ಷರಸ್ಥರು ಸಾಕಷ್ಟು ಸಂಖ್ಯೆಯಲ್ಲಿರುವ ಮತ್ತು ನೇರವಾಗಿ ಕೇಂದ್ರದ್ದೇ ಆಡಳಿತವಿರುವ ಅತಿ ಚಿಕ್ಕ ಪ್ರದೇಶದಲ್ಲೂ ಹತ್ತಿರ ಹತ್ತಿರ ಅರ್ಧದಷ್ಟು ಪ್ರಮಾಣದ ದುಡ್ಡು ಎಲ್ಲಿ ಹೋಯಿತೆಂಬುದೇ ಗೊತ್ತಿಲ್ಲವೆಂದರೆ ಅರ್ಥವೇನು? ಅಲ್ಲಿಯೂ ನೇರ ನಗದು ವರ್ಗಾವಣೆ ಸಮರ್ಪಕವಾಗಿ ಜಾರಿಯಾಗಲಿಲ್ಲವೆಂದರೆ ಇನ್ನೆಲ್ಲಿ ಆಗಲು ಸಾಧ್ಯ?
 
‘ಬಿಸಿನೆಸ್ ಸ್ಟ್ಯಾಂಡರ್ಡ್‌’ನಲ್ಲಿ ಬಂದಿರುವ ವರದಿಯ ಪ್ರಕಾರ, 2015ರ ಸೆಪ್ಟೆಂಬರ್‌ನಿಂದ 2016ರ ಮೇವರೆಗೆ ನೀಡಿರುವ ಪಡಿತರದಲ್ಲಿ ಅರ್ಧದಷ್ಟು ಕುಟುಂಬಗಳಿಗೆ ಏನೂ ಸಿಕ್ಕಿಲ್ಲ ಅಥವಾ ಕಡಿಮೆ ತಲುಪಿದೆ. ಶೇ 40ರಷ್ಟು ಕುಟುಂಬಗಳಿಗೆ ಹಾಕಿದ ಹಣವು ತಲುಪಿತೋ ಇಲ್ಲವೋ, ಎಲ್ಲಿಗೆ ಹೋಯಿತು ಎಂಬುದೇ ಪತ್ತೆಯಾಗುತ್ತಿಲ್ಲವಂತೆ.
 
ಸುಮಾರು ಶೇ 16ರಷ್ಟು ಜನರಿಗೆ ಬರಬೇಕಾದ ಪ್ರಮಾಣದ ಹಣ ಬಂದಿಲ್ಲ, ಇನ್ನು ಸುಮಾರು ಶೇ 17ರಷ್ಟು ಜನರಿಗೆ ಇನ್ನೂವರೆಗೆ ಚಿಕ್ಕಾಸು ಕೂಡ ತಲುಪಿಲ್ಲ. ಒಂದಷ್ಟು ಕುಟುಂಬಗಳಿಗೆ ಜಾಸ್ತಿ ಹಣ ಕೂಡ ಸಂದಾಯವಾಗಿದೆಯಂತೆ! ಪುದುಚೇರಿಯಲ್ಲಿ ಕಾರ್ಯಕ್ರಮವನ್ನು ಆರಂಭಿಸಿದ ಎರಡು ತಿಂಗಳಿಗೆ ಅದೆಷ್ಟು ಪ್ರತಿರೋಧ ಬಂತೆಂದರೆ, ಕೂಡಲೇ ಸರ್ಕಾರವು  ಹಣವನ್ನು ಅವರವರ ಖಾತೆಗಳಿಗೆ ಹಾಕುವುದರ ಜೊತೆಗೆ 10 ಕೆ.ಜಿ ಅಕ್ಕಿಯನ್ನೂ ಕೊಡತೊಡಗಿದ ನಂತರವೇ ಜನ ಸುಮ್ಮನಾಗಿದ್ದಾರೆ.
 
ಇದೋ, ಮತ್ತಾವುದೋ ಕಾರಣಕ್ಕೆ ಸದ್ಯಕ್ಕಂತೂ ರಾಜ್ಯ ಸರ್ಕಾರವು ನೇರ ನಗದಿನ ಬಗ್ಗೆ ಮಾತನಾಡುತ್ತಿಲ್ಲ. ಹಾಗೆಂದು ಆ ದಿಕ್ಕಿನಲ್ಲಿ ಅದು ಮುಖ ಮಾಡಿಲ್ಲವೆಂದು ನಾವು ನಿಶ್ಚಿಂತೆಯಿಂದಿದ್ದರೆ ತಪ್ಪಾದೀತು. ನೇರ ನಗದಿನ ಇನ್ನೊಂದು ಮುಖವಾದ ಕೂಪನ್ ವ್ಯವಸ್ಥೆ ಸಾಕಷ್ಟು ವಿರೋಧದ ನಡುವೆಯೂ ನಮ್ಮಲ್ಲಿ ಜಾರಿಯಾಗಿದ್ದನ್ನು ಸರ್ಕಾರ  ಹಿಂತೆಗೆದುಕೊಂಡಿಲ್ಲ. ಕೂಪನ್ ಕೊಡುವ ವಿಚಾರ ಇನ್ನಾವ ರಾಜ್ಯದಲ್ಲೂ ಇನ್ನೂ ಬಂದಿಲ್ಲ.
 
ವಿಧಾನಸೌಧದಲ್ಲಿ ಕೂಪನ್ ಪದ್ಧತಿಯನ್ನು ಉದ್ಘಾಟಿಸುತ್ತಲೇ ಮುಖ್ಯಮಂತ್ರಿ, ಒಬ್ಬರಿಗೆ ಎಂಟು ಕೆ.ಜಿ ಆಹಾರ ಕೊಡಲು ಸರ್ಕಾರ ಬದ್ಧವಾಗಿದೆ ಎಂದು ಭಾಷಣ ಮಾಡುತ್ತಾರೆ. ದಪ್ಪ ಅಕ್ಷರಗಳಲ್ಲಿ ಅಚ್ಚಾದ ಮಂತ್ರಿಗಳ ಮಾತಿನ ಮಧ್ಯೆ, ಅವರೇನನ್ನು ಉದ್ಘಾಟಿಸಲು ಬಂದಿದ್ದರು ಎಂಬುದು ಮರೆಯಾಗಿ ಹೋಗುತ್ತದೆ. ಮಾತಿಗಿಂತ ಕೃತಿ ಕಾಯಮ್ಮಾಗುವುದು ಆಹಾರ ಮಂತ್ರಿಗಳ ಮಾತುಗಳ ಮೂಲಕ ಸ್ಪಷ್ಟವಾಗಿದೆ.
 
ಅವರು ಮಾತ್ರ ಹೋದೆಡೆಯಲ್ಲೆಲ್ಲ, ಪಡಿತರದ ಬದಲಿಗೆ ಕೂಪನ್ ಕೊಡುವ ವಿಚಾರವನ್ನೇ ಮಾತನಾಡುತ್ತಿದ್ದಾರೆ. ಕೂಪನ್ ತೆಗೆದುಕೊಂಡು ಜನ ತಮಗೆ ಬೇಕಾದ ಅಂಗಡಿಯಲ್ಲಿ ಹೋಗಿ ಅಕ್ಕಿ, ಗೋಧಿ ಖರೀದಿ ಮಾಡಬೇಕು ಎಂದು ಹೇಳುತ್ತಾರೆ. ಕೂಪನ್ ಬಗ್ಗೆ ಈಗಾಗಲೇ ಈ ಅಂಕಣದಲ್ಲಿ ಬರೆದಾಗಿದೆ. ಹೆಬ್ಬೆರಳಿನ ಗುರುತು, ಆಧಾರ್‌ ಲಿಂಕ್ ಇಲ್ಲದೆಯೇ ಯಾರಿಗೂ ಕೂಪನ್ ಸಿಗುವುದಿಲ್ಲ ಎನ್ನುವುದು ಒಂದು ಮಾತು.
 
ಎರಡನೆಯದೆಂದರೆ, ತನ್ನ ಜವಾಬ್ದಾರಿಯನ್ನು ಖಾಸಗಿ ಅಂಗಡಿಗಳಿಗೆ ಬಲು ಹುಷಾರಿತನದಿಂದ ದಾಟಿಸುವ ಜಾಣ್ಮೆ ಕೂಡ ಇದರಲ್ಲಿದೆ. ಸುಪ್ರೀಂ ಕೋರ್ಟ್‌  ಆಜ್ಞೆಯ ಉಲ್ಲಂಘನೆ ಮಾಡಿ ಆಧಾರ್‌ ಅನ್ನು ಎಲ್ಲರಿಗೂ ಕಡ್ಡಾಯ ಮಾಡುವ ಗುರಿಯೂ, ಖಾಸಗಿಗೆ ತನ್ನ ಜವಾಬ್ದಾರಿಯನ್ನು ದಾಟಿಸುವ ಗುರಿಯೂ ಈ ಒಂದೇ ಕಲ್ಲಿಗಿದೆ. 
 
ಇಂದು ಎಲ್ಲೆಲ್ಲಿಯೂ, ಎಲ್ಲದಕ್ಕೂ ಆಧಾರ್ ಕಡ್ಡಾಯದ ಮಾತು. ಸರ್ಕಾರವು  ಮಧ್ಯಾಹ್ನದ ಬಿಸಿಯೂಟಕ್ಕೆ, ಅಂಗನವಾಡಿ ಆಹಾರಕ್ಕೆ ಆಧಾರ್‌ ಕಡ್ಡಾಯ ಎಂದು ಘೋಷಿಸಿತು. ಆಧಾರ್‌ ಜೋಡಣೆ ಆಗದ ಮಕ್ಕಳ ಹೆಸರಲ್ಲಿ ಈಗ ರೇಷನ್ ಬರುತ್ತಿಲ್ಲ. ಅಪ್ಪ ಅಮ್ಮಂದಿರಿಗೆ ಬರುತ್ತಿರುವ ರೇಷನ್ ಮಕ್ಕಳಿಗೆ ಇಲ್ಲ! ಆಧಾರ್ ಜೋಡಣೆ ಆಗಲಿಲ್ಲವೆಂದು ಅತ್ತ ಶಾಲೆಯಲ್ಲಿ ಬಿಸಿಯೂಟವೂ ಸಿಗದ, ಇತ್ತ ಮನೆಯಲ್ಲಿ ರೇಷನ್ನೂ ಸಿಗದ ಮಗುವನ್ನು ಕಲ್ಪಿಸಿಕೊಳ್ಳಿ (ರೇಷನ್ ಕೊಟ್ಟಿಲ್ಲವೆಂಬ ಕಾರಣಕ್ಕೆ ಯಾವ ತಾಯಿಯೂ ತನ್ನ ಊಟ ಕಡಿಮೆ ಮಾಡಿಕೊಂಡಾದರೂ ಮಗುವಿಗೆ ಊಟಕ್ಕಿಕ್ಕದೆ ಹೋಗುವುದಿಲ್ಲ, ಅದು ಬೇರೆ ಮಾತು). ಸುಪ್ರೀಂ ಕೋರ್ಟಿನ ಆಜ್ಞೆಯ ಉಲ್ಲಂಘನೆಯನ್ನು ಪ್ರಶ್ನಿಸಿ ದೆಹಲಿಯಲ್ಲಾಗಲೇ ಸಂಘಟನೆಗಳು ನ್ಯಾಯಾಲಯದ ಮೊರೆ ಹೊಕ್ಕಿವೆ.
 
ಮುಂಗಡಪತ್ರ ಮಂಡನೆಯಾಗುವ ಪೂರ್ವದಲ್ಲಿ ಎಂದಿನಂತೆ ಈ ವರ್ಷ ಕೂಡ ಅದು ಲಿಂಗ ಸಂವೇದಿ, ಲಿಂಗ ಸೂಕ್ಷ್ಮತೆಯುಳ್ಳ ಬಜೆಟ್ ಆಗಬಹುದೇ ಎಂಬ ನಿರೀಕ್ಷೆ, ಚರ್ಚೆಗಳು. ಹಲವು ವರ್ಷಗಳಿಂದಲೂ ಲಿಂಗ ಸೂಕ್ಷ್ಮ ಮುಂಗಡಪತ್ರದ ಬಗ್ಗೆ ಚರ್ಚೆ ಆಗುತ್ತಿದ್ದರೂ ಇನ್ನೂವರೆಗೆ ಅದರ ಬಗ್ಗೆ ಸ್ಪಷ್ಟತೆಯೇ ಬಂದಿಲ್ಲ.

ಮಹಿಳೆಯರಿಗೆಂದು ಒಂದಷ್ಟು ಯೋಜನೆಗಳನ್ನು ತೆಗೆದಿರಿಸಿದರೆ ಅದು ಲಿಂಗ ಸೂಕ್ಷ್ಮ ಬಜೆಟ್ ಆಗುತ್ತದೆ ಎಂದು ಬಹುಜನರ ಕಲ್ಪನೆ. ಅಧಿಕಾರಿಗಳಲ್ಲಂತೂ ಇದು ಹೆಪ್ಪುಗಟ್ಟಿದ ವಿಚಾರ. ಬಹುಶಃ ಮತ್ತೆ ಮತ್ತೆ ಆ ಚರ್ಚೆಯನ್ನು ಮುನ್ನೆಲೆಗೆ ತಂದರೆ ಜನಮನದಲ್ಲಿ ಹೆಚ್ಚು ಸ್ಪಷ್ಟತೆ ಬರಬಹುದೇನೊ. ಲಿಂಗ ಸಂವೇದಿ, ಪರಿಸರ ಸೂಕ್ಷ್ಮ ಮತ್ತು ಬಲಹೀನರ ಸೂಕ್ಷ್ಮ ಬಜೆಟ್ ನಮ್ಮದಾಗಬೇಕೆನ್ನುವ ಕನಸು ಇನ್ನೂ ಕನಸೇ ಆಗಿರುವುದಂತೂ ಸುಳ್ಳಲ್ಲ.
****
ಮುಂಗಡಪತ್ರ ಮಂಡನೆಯಾಗುವ ಪೂರ್ವದಲ್ಲಿ ಎಂದಿನಂತೆ ಈ ವರ್ಷ ಕೂಡ ಅದು ಲಿಂಗ ಸಂವೇದಿ, ಲಿಂಗ ಸೂಕ್ಷ್ಮತೆಯುಳ್ಳ ಬಜೆಟ್ ಆಗಬಹುದೇ ಎಂಬ ನಿರೀಕ್ಷೆ, ಚರ್ಚೆಗಳು. ಹಲವು ವರ್ಷಗಳಿಂದಲೂ ಲಿಂಗ ಸೂಕ್ಷ್ಮ ಮುಂಗಡಪತ್ರದ ಬಗ್ಗೆ ಚರ್ಚೆ ಆಗುತ್ತಿದ್ದರೂ ಇನ್ನೂವರೆಗೆ ಅದರ ಬಗ್ಗೆ ಸ್ಪಷ್ಟತೆಯೇ ಬಂದಿಲ್ಲ. ಮಹಿಳೆಯರಿಗೆಂದು ಒಂದಷ್ಟು ಯೋಜನೆಗಳನ್ನು ತೆಗೆದಿರಿಸಿದರೆ ಅದು ಲಿಂಗ ಸೂಕ್ಷ್ಮ ಬಜೆಟ್ ಆಗುತ್ತದೆ ಎಂಬುದು ಬಹುಜನರ ಕಲ್ಪನೆ. ಅಧಿಕಾರಿಗಳಲ್ಲಂತೂ ಇದು ಹೆಪ್ಪುಗಟ್ಟಿದ ವಿಚಾರ. ಬಹುಶಃ ಮತ್ತೆ ಮತ್ತೆ ಆ ಚರ್ಚೆಯನ್ನು ಮುನ್ನೆಲೆಗೆ ತಂದರೆ ಜನಮನದಲ್ಲಿ ಹೆಚ್ಚು ಸ್ಪಷ್ಟತೆ ಬರಬಹುದೇನೊ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT