ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ನೀರು ಹರಿಸಿದರೆ ಸಂಕಷ್ಟ

Last Updated 11 ಏಪ್ರಿಲ್ 2017, 9:22 IST
ಅಕ್ಷರ ಗಾತ್ರ

ಹಾಸನ: ತಳ ಕಂಡಿರುವ ಹೇಮಾವತಿ ಜಲಾಶಯದಿಂದ ಕೆಆರ್‌ಎಸ್‌ ಜಲಾಶಯಕ್ಕೆ ನೀರು ಹರಿಸಿದರೆ ನಗರದ ಜನರಿಗೆ ಕುಡಿಯುವ ನೀರಿಗೆ ತೀವ್ರ ತೊಂದರೆ ಆಗಲಿದೆ ಎಂದು ಶಾಸಕ ಎಚ್‌.ಎಸ್‌.ಪ್ರಕಾಶ್‌ ಎಚ್ಚರಿಸಿದರು.

ಪ್ರಸ್ತುತ ಜಲಾಶಯದಲ್ಲಿ 3 ಟಿಎಂಸಿ ಡೆಡ್‌ ಸ್ಟೋರೇಜ್‌  ಇದೆ. ಇದರಲ್ಲಿ 1 ಟಿಎಂಸಿ ಅಡಿಗಳಷ್ಟು ಹೂಳು ತುಂಬಿಕೊಂಡಿದೆ. ನೀರು ಬಿಟ್ಟರೆ ಜಲಚರಕ್ಕೂ ತೊಂದರೆ ಆಗಲಿದೆ.  ಆರು ಪಂಪ್‌ ಅಳವಡಿಸಿ ನೀರನ್ನು  ಪೂರೈಸಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಅಣೆಕಟ್ಟೆ ಮಧ್ಯೆ ಭಾಗಕ್ಕೂ ಹೋದರು ನೀರು ಸಿಗುವುದಿಲ್ಲ. ಬೆಂಗಳೂರು ಮಾತ್ರವಲ್ಲ ಹಾಸನ ನಗರದ ಜನರು ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ಜಿಲ್ಲೆಗೆ ಆದ್ಯತೆ ನೀಡಬೇಕು.

ಬೆಂಗಳೂರಿನಲ್ಲಿ ನಡೆದ ಜಲಾಶಯದ ಅಧಿಕಾರಿಗಳ ಸಭೆಯಲ್ಲಿ ಹೇಮಾವತಿಯಿಂದ ನೀರು ಬಿಡುವಂತೆ ಸೂಚಿಸಿದ್ದಾರೆಂಬ ಮಾಹಿತಿ ಇದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕೆಲ ದಿನಗಳ ಹಿಂದೆ ಹೇಮಾವತಿಯಿಂದ  ನೀರು ಹರಿಸಿದ್ದರಿಂದ ನೀರಿನ ಮಟ್ಟ ತೀವ್ರ ಕುಸಿದಿದೆ. ನೀರು ಬಿಡುವ ಮುನ್ನ ಕರಪತ್ರ ಹಂಚಿ ಜನರಿಗೆ ಎಚ್ಚರಿಕೆ ನೀಡಬೇಕು.  ಹೇಮಾವತಿ, ಯಗಚಿ ಹಾಗೂ ವಾಟೇಹೊಳೆ ಜಲಾಶಯ ವ್ಯಾಪ್ತಿಯಲ್ಲಿ ಯಾವುದೇ ಬೆಳೆ ಮಾಡಿಲ್ಲ. ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ನೀರು ಹರಿಸಿದರೆ ಜನರು ಏನು ಮಾಡಲು ಸಾಧ್ಯ.  ಕೆಲವು ಬಡಾವಣೆಗಳಿಗೆ 10 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು.

‘ಭಾನುವಾರ ನಡೆದ ಮಹಾವೀರ ಜಯಂತಿಯ ವೇದಿಕೆ ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ಜಿಲ್ಲಾಧಿಕಾರಿ ವಿ.ಚೈತ್ರಾ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರ ವರ್ತನೆ ಸರಿಯಲ್ಲ. ಕಾರ್ಯಕ್ರಮ ನಡೆಯುವಾಗಲೇ, ‘ಮಹಾಮಸ್ತಾಕಾಭಿಷೇಕ ಸಭೆಗೆ ಸಚಿವರೊಂದಿಗೆ ಹೋಗಬೇಕಿರುವುದರಿಂದ ಕಾರ್ಯಕ್ರಮವನ್ನು ಶಾಸಕರು ಮುಂದುವರಿಸುತ್ತಾರೆ’ ಎಂದು ಜಿಲ್ಲಾಧಿಕಾರಿ ಹೇಳಿ ಹೋದರು.  ಜನಪ್ರತಿನಿಧಿಯಾಗಿ ಹೇಗೆ ನಡೆದುಕೊಳ್ಳಬೇಕೆಂಬ ಅರಿವು ನನಗೆ ಇದೆ.  ನಾನು ಜನಸೇವಕ, ಇವರ ಆದೇಶ ಪಾಲಿಸುವ ಸೇವಕನಲ್ಲ. ಪುಣ್ಯಾತ್ಮರ ಜಯಂತಿಯಲ್ಲಿ ತಗಾದೆ ತೆಗೆಯಬಾರದು ಎಂಬ ಕಾರಣಕ್ಕೆ ಸುಮ್ಮನಾದೆ’ ಎಂದು ಅವರು ಹೇಳಿದರು.

ಜನಪ್ರತಿನಿಧಿಗಳ ಜತೆ ಅವರು ನಡೆದುಕೊಳ್ಳುವ ರೀತಿಯ ಬಗ್ಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಗಮನಕ್ಕೂ ತರಲಾಗಿದೆ ಎಂದರು.ಚೈತ್ರಾ ಅವರಿಗೆ ಆಡಳಿತದಲ್ಲಿ ಅನುಭವದ ಕೊರತೆ ಇದೆ.ಹೀಗಾಗಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯ ಜನರ ನೋವು, ನಲಿವುಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸಬೇಕು. ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಜತೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಇದು ಯಾವುದನ್ನೂ ಪಾಲಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT