ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ಜ್ವರ ಲಸಿಕಾ ಅಭಿಯಾನಕ್ಕೆ ವೈದ್ಯರ ಗೈರು

Last Updated 11 ಏಪ್ರಿಲ್ 2017, 10:22 IST
ಅಕ್ಷರ ಗಾತ್ರ

ತುಮಕೂರು: ಪಶುವೈದ್ಯ ಮತ್ತು ಪಶುಪಾಲನಾ ಇಲಾಖೆ ಪುನರ್‌ ರಚನೆ ವಿಳಂಬ ಖಂಡಿಸಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಿಬ್ಬಂದಿ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ಲಸಿಕೆ ಅಭಿಯಾನ ಬಹಿಷ್ಕರಿಸಿದ್ದಾರೆ.

ಏ.7 ರಿಂದ 29ರವರೆಗೆ ಕಾಲುಬಾಯಿ ಜ್ವರ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.  ಜಿಲ್ಲೆಯಲ್ಲಿ ಈಗಾಗಲೇ ಕಾಲು ಬಾಯಿ ಸೋಂಕು ಪತ್ತೆಯಾಗಿದೆ. ಇಂಥ ಸ್ಥಿತಿಯಲ್ಲಿ ವೈದ್ಯರ ಮುಷ್ಕರ ಹೈನುಗಾರರನ್ನು ಕಂಗೆಡಿಸಿದೆ.

‘ನಾಲ್ಕು ವರ್ಷದಿಂದ ಇಲಾಖೆ ಪುನರ್‌ ರಚನೆ ಮಾಡಿಲ್ಲ.  ಪಶುವೈದ್ಯರು, ನಿರೀಕ್ಷಕರು, ಹಿರಿಯ ನಿರೀಕ್ಷಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿಲ್ಲ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು ನಾವು ಲಸಿಕೆ ಅಭಿಯಾನದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಪಶು ಪರೀಕ್ಷಕರ ಸಂಘದ ಅಧ್ಯಕ್ಷ ಗೂಳೂರು ನಟರಾಜಯ್ಯ ತಿಳಿಸಿದರು.

‘ಮೀರಾ ಸಕ್ಸೇನಾ  ಸಮಿತಿಯು ನೀಡಿರುವ ಐದು ಪ್ರಮುಖ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು  ಸರ್ಕಾರ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು. ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿಯ ವೇತನ, ಬಡ್ತಿ ಹಾಗೂ ಕೆಲಸಗಳಿಗೆ ಸರಿ ಸಮನಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಿಬ್ಬಂದಿಗೂ ಸವಲತ್ತು ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಸಕಲ ಸೌಲಭ್ಯಗಳ ಸಹಿತ ಪಾಲಿ ಕ್ಲಿನಿಕ್‌ಗಳನ್ನು ಸ್ಥಾಪಿಸಬೇಕು. ತಾಲ್ಲೂಕು ಮಟ್ಟದಲ್ಲಿ ಸಹಾಯಕ ನಿರ್ದೇಶಕರು ಮತ್ತು ಜಿಲ್ಲಾ ಮಟ್ಟದಲ್ಲಿ ಜಂಟಿ ನಿರ್ದೇಶಕರ ಹುದ್ದೆಗಳನ್ನು ಸೃಜಿಸುವುದು, ಹೋಬಳಿ ಮಟ್ಟದ ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೊಳಿಸಬೇಕು ಎಂಬುದು ಸಮಿತಿಯ ಶಿಫಾರಸುಗಳಾಗಿವೆ’ ಎಂದರು.

ವೈದ್ಯರ ಮುಷ್ಕರದಿಂದ ಲಸಿಕೆ ಅಭಿಯಾನಕ್ಕೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರುವುದಾಗಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದರು. ಆದರೆ ಎಲ್ಲೂ ಲಸಿಕೆ ಹಾಕುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಭಯ ಆವರಿಸಿದೆ: ಫೆಬ್ರುವರಿ ತಿಂಗಳಲ್ಲೆ ಅಭಿಯಾನ ಹಮ್ಮಿಕೊಳ್ಳಬೇಕಾಗಿತ್ತು.  ಕೇಂದ್ರ ಸರ್ಕಾರದಿಂದ ಲಸಿಕೆಗಳು ಪೂರೈಕೆಯಾಗಿಲ್ಲ ಎಂಬ ಕಾರಣವೊಡ್ಡಿ  ಲಸಿಕೆ ಹಾಕಿರಲಿಲ್ಲ. ಈಗ ವೈದ್ಯರು ಮುಷ್ಕರ ಮಾಡುತ್ತಿದ್ದಾರೆ.  ಸೋಂಕು ಜಿಲ್ಲೆಯಲ್ಲಿ ಹರಡಿರುವುದರಿಂದ ಭಯ ಆವರಿಸಿದೆ ಎಂದು ರೈತ ರಾಮಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT