ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಸಿ ಬೆಳೆಸುವ ಕೆಲಸ ಯುವಕರಿಗೆ ನೀಡಿ’

ರಾಜ್ಯ ಸರ್ಕಾರಕ್ಕೆ ಶಾಸಕ ಎಚ್‌.ಡಿ. ಕುಮಾರಸ್ವಾಮಿ ಸಲಹೆ
Last Updated 12 ಏಪ್ರಿಲ್ 2017, 8:24 IST
ಅಕ್ಷರ ಗಾತ್ರ

ರಾಮನಗರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್‌ನಲ್ಲಿ ಘೋಷಿಸಿರುವ 9 ಕೋಟಿ ಸಸಿ ನೆಡುವ ಅಭಿಯಾನದ ನಿರ್ವಹಣೆಗೆ ನಿರುದ್ಯೋಗಿ ಯುವಜನರು ಮತ್ತು ಮಹಿಳೆಯರನ್ನು ಬಳಸಿಕೊಳ್ಳಬೇಕು’ ಎಂದು ಶಾಸಕ ಎಚ್‌.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮಂಗಳವಾರ ಅಭಯ ಫೌಂಡೇಷನ್ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಪ್ರತಿ ವರ್ಷ ಕೋಟ್ಯಂತರ ಸಸಿ ನೆಟ್ಟಿದ್ದಾಗಿ ಘೋಷಿಸುತ್ತದೆ. ಆದರೆ ವಾಸ್ತವದಲ್ಲಿ ಅದರಲ್ಲಿ ಶೇ 1ರಷ್ಟೂ ಗಿಡಗಳು ಉಳಿದಿರುವುದಿಲ್ಲ. ಹೀಗಾಗಿ ಸಸಿ ನೆಡುವ ಯೋಜನೆಗೆ ಗ್ರಾಮದಲ್ಲಿನ ಯುವಜನರನ್ನು ಬಳಸಿಕೊಳ್ಳಬೇಕು. ಅವರಿಗೆ ತಿಂಗಳಿಗೆ ₹6–8 ಸಾವಿರ ವೇತನ ನಿಗದಿ ಮಾಡಬೇಕು.

ಇದರಿಂದ ವನ ಸಂಪತ್ತಿನ ಅಭಿವೃದ್ಧಿ ಜೊತೆಗೆ ನಿರುದ್ಯೋಗ, ಗುಳೆ ಮೊದಲಾದ ಸಮಸ್ಯೆಗಳು ಪರಿಹಾರವಾಗಲಿವೆ’ ಎಂದರು. ಮುಂಬರುವ ಚುನಾವಣೆ ಬಳಿಕ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಈ ಯೋಜನೆ ಕಾರ್ಯಗತಗೊಳಿಸುವುದಾಗಿ ಅವರು ಪ್ರಕಟಿಸಿದರು.

‘ರಾಜ್ಯದಲ್ಲಿನ ಎಂಜಿನಿಯರಿಂಗ್‌ ಪದವೀಧರರ ಪೈಕಿ ಶೇ 95ರಷ್ಟು ಮಂದಿ ನಿರುದ್ಯೋಗಿಗಳಾಗಿಯೇ ಉಳಿಯುತ್ತಿದ್ದಾರೆ. ಕೌಶಲ ಹೊಂದಿದ ಯುವಕರಿಗೆ ಉದ್ಯೋಗ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ’ ಎಂದು ದೂರಿದರು.

ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಜೆ.ಎಸ್ .ವೀಣಾ ಮಾತನಾಡಿ ‘ಕಾಲೇಜುಗಳಲ್ಲಿ ಪಠ್ಯದ ಜೊತೆಗೆ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಸಿಎಸ್‌ಆರ್‌ ಯೋಜನೆ ಅಡಿ ಪ್ರತಿ ಕಾಲೇಜಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಆಯೋಜಿಸಬೇಕು’ ಎಂದು ಸಲಹೆ ನೀಡಿದರು. ದೊಡ್ಡಬಳ್ಳಾಪರದ ತಪಸ್ವಿಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ಶ್ರೀ ದಿವ್ಯಾಜ್ಞಾನಾನಂದಗಿರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಅಭಯ ಫೌಂಡೇಷನ್ ಸಂಸ್ಥಾಪಕ ಡಿ.ದೇವರಾಜ್, ಕಾರ್ಯದರ್ಶಿ ಮಹೇಶ್ವರಿ ದೇಸಾಯಿ, ಬೆಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಬಿ.ಶಿವಣ್ಣ, ಕಾಲೇಜಿನ ಪ್ರಾಚಾರ್ಯರಾದ ಟಿ.ಡಿ.ಕನಕಾ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್‌ ಇತರರು ಇದ್ದರು.  ಕನ್ನಡ ವಿಭಾಗದ ಮುಖ್ಯಸ್ಥ ರಾಜಶೇಖರ್ ಸ್ವಾಗತಿಸಿದರು. ಕಾಲೇಜಿನ ಉದ್ಯೋಗ ಕೋಶದ ಅಧಿಕಾರಿ ಮೋಹನ ದಾಸ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉದ್ಯೋಗಕ್ಕಾಗಿ ಕಣ್ಣೀರಿಟ್ಟ ಮಹಿಳೆ
ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿಯೇ ಹಲವರು ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಅಳಲು ತೋಡಿಕೊಂಡರು. ‘ಕಾರ್ಮಲ್ ಶಾಲೆಯಲ್ಲಿ ಶಿಕ್ಷಕರಾಗಿದ್ದ ನನ್ನ ಪತಿ ಕನಕಪುರ ತಾಲ್ಲೂಕಿನ ದೊಡ್ಡಕಲ್ಲಸಂದ್ರ ಗ್ರಾಮದ ಹರೀಶ್ ಎಂಬುವವರು ಚಾರಣಕ್ಕೆಂದು ಸ್ನೇಹಿತರೊಂದಿಗೆ ಕುಮಾರ ಪರ್ವತಕ್ಕೆ ತೆರಳಿದ್ದಾಗ ಕಳೆದ ಮೇನಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದರು. ಇದುವರೆವಿಗೂ ಸರ್ಕಾರ ಪರಿಹಾರ ನೀಡಿಲ್ಲ’ ಎಂದು ಹರೀಶ್‌ ಪತ್ನಿ ಶ್ವೇತಾ ತಮ್ಮ ಪುಟ್ಟ ಮಗನೊಂದಿಗೆ ಕಣ್ಣೀರಿಟ್ಟರು.

‘ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಪರಿಹಾರ ಕೊಡಿಸಿ, ವಿದ್ಯಾವಂತಳಾದ ಉದ್ಯೋಗ ದೊರಕಿಸಿಕೊಡಿ’ ಎಂದು ಆಕೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಚ್‌ಡಿಕೆ ಶೀಘ್ರ ಉದ್ಯೋಗ ಕೊಡಿಸುವ ಭರವಸೆ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT