ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಭೂಷಣ್‌ಗೆ ಗಲ್ಲು ಶಿಕ್ಷೆ ಸಹಜ ನ್ಯಾಯಕ್ಕೆ ವಿರುದ್ಧ

Last Updated 12 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಪಾಕಿಸ್ತಾನದ ಜೈಲಿನಲ್ಲಿ ಇರುವ ಭಾರತದ ನಾಗರಿಕ ಕುಲಭೂಷಣ್‌ ಜಾಧವ್‌ ಅವರನ್ನು ಗಲ್ಲಿಗೇರಿಸುವಂತೆ ಅಲ್ಲಿನ ಸೇನಾ ನ್ಯಾಯಾಲಯ ನೀಡಿದ ತೀರ್ಪು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
 
ಗಲ್ಲು ಶಿಕ್ಷೆ ಜಾರಿಗೊಳಿಸಿದರೆ ‘ಪೂರ್ವಯೋಜಿತ ಕೊಲೆ’ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ನೇರವಾಗಿಯೇ ಎಚ್ಚರಿಕೆ ನೀಡಿದೆ. ಸಂಸತ್ತಿನಲ್ಲೂ ಈ ಬಗ್ಗೆ ಬಿಸಿ ಚರ್ಚೆ ನಡೆದಿದೆ. ಆಕ್ರೋಶ ವ್ಯಕ್ತವಾಗಿದೆ.  ಈ ಪ್ರಕರಣದಲ್ಲಿ ಮುಖ್ಯವಾದ ಆಕ್ಷೇಪ ಇರುವುದು, ಸರಿಯಾದ ಕಾನೂನು ಪ್ರಕ್ರಿಯೆಯನ್ನು ಅನುಸರಿಸದೇ ಇರುವ ಬಗ್ಗೆ.

ಪಾಕಿಸ್ತಾನದಲ್ಲಿರುವ  ಭಾರತದ ರಾಜತಾಂತ್ರಿಕ ಪ್ರತಿನಿಧಿಗಳಿಗೆ ಜಾಧವ್‌ ಅವರನ್ನು ಭೇಟಿ ಮಾಡಲು ಅವಕಾಶ ಕೊಡದೇ  ಇರುವುದು, ವಕೀಲರ ಸೇವೆ ನಿರಾಕರಿಸಿರುವುದು, ನ್ಯಾಯಯುತ ವಿಚಾರಣೆ ನಡೆಸದೆ ಏಕಪಕ್ಷೀಯ ತೀರ್ಪು ನೀಡಿರುವುದು ಅದರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಯಾವುದೇ ದೇಶ ಯುದ್ಧಕೈದಿಗಳನ್ನು, ವಿದೇಶಿ ಬಂದಿಗಳನ್ನು ಹೇಗೆ ನಡೆಸಿಕೊಳ್ಳಬೇಕು  ಎನ್ನುವುದಕ್ಕೆ ಅಂತರರಾಷ್ಟ್ರೀಯ ಒಪ್ಪಂದಗಳಿವೆ. ವಿದೇಶವೊಂದರ ನಾಗರಿಕನನ್ನು ತನ್ನ ನೆಲದಲ್ಲಿ ಬಂಧಿಸಿದರೆ  ‘1963ರ ಕಾನ್ಸುಲರ್‌ ಬಾಂಧವ್ಯ ಕುರಿತ ವಿಯೆನ್ನಾ ಒಪ್ಪಂದದ’ ಪ್ರಕಾರ ಆ  ಮಾಹಿತಿಯನ್ನು ಆಯಾ ದೇಶದ ಕಾನ್ಸಲ್‌ ಅಧಿಕಾರಿಗೆ ನೀಡಬೇಕಾಗುತ್ತದೆ.
 
ಬಂಧಿತ ವ್ಯಕ್ತಿಯನ್ನು ಭೇಟಿಯಾಗಲು ಕಾನ್ಸಲ್‌ ಸಿಬ್ಬಂದಿಗೆ ಅವಕಾಶ ಕಲ್ಪಿಸಬೇಕಾಗುತ್ತದೆ. ಈ ಒಪ್ಪಂದಕ್ಕೆ ಪಾಕಿಸ್ತಾನವೂ ಸಹಿ ಹಾಕಿದೆ. ಆದರೆ ಜಾಧವ್‌ ಪ್ರಕರಣದಲ್ಲಿ ಭಾರತದ ಕೋರಿಕೆಯನ್ನು ಪಾಕಿಸ್ತಾನ ಸರ್ಕಾರ 13 ಸಲ ತಿರಸ್ಕರಿಸಿದೆ. ಕಾನೂನು, ನ್ಯಾಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ವಿಚಾರದಲ್ಲಿ ಅನುಸರಿಸಬೇಕಾದ ಕನಿಷ್ಠ ನಿಯಮಗಳನ್ನೂ ಪಾಲಿಸಿಲ್ಲ. ಹೀಗಾಗಿ ಭಾರತ ಉಗ್ರವಾಗಿ ಪ್ರತಿಕ್ರಿಯಿಸಿರುವುದರಲ್ಲಿ ಅಸಹಜವೇನೂ ಇಲ್ಲ.
 
ಜಾಧವ್‌ ಅವರನ್ನು ಸೆರೆ ಹಿಡಿದ ಕ್ಷಣದಿಂದ ಇದುವರೆಗಿನ ವಿದ್ಯಮಾನಗಳೆಲ್ಲ ಬಹಳಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುವಂತಿವೆ. ಅವರು ಇರಾನ್‌ನಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿದ್ದವರು. ಅವರನ್ನು ಅಪಹರಿಸಿ ಪಾಕ್‌ಗೆ ತಂದು ಗೂಢಚರ್ಯೆಯ ಹಣೆಪಟ್ಟಿ ಕಟ್ಟಲಾಯಿತು.

ಅವರು ಗೂಢಚಾರ ಎಂಬ ಆರೋಪ ಪುಷ್ಟೀಕರಿಸುವ ಯಾವುದೇ ಖಚಿತ ಆಧಾರ ಪಾಕಿಸ್ತಾನ ಸೇನೆಯ ಬಳಿಯೂ ಇಲ್ಲ ಅಥವಾ ಸರ್ಕಾರದ ಬಳಿಯೂ ಇಲ್ಲ. ಅಲ್ಲಿನ  ವಿದೇಶಾಂಗ ಸಚಿವ ಸರ್ತಾಜ್‌ ಅಜೀಜ್‌ ಕಳೆದ ಡಿಸೆಂಬರ್‌ನಲ್ಲಿ ತಮ್ಮ ಸಂಸತ್‌ನಲ್ಲಿಯೇ ಇದನ್ನು ಒಪ್ಪಿಕೊಂಡಿದ್ದರು. ಆದರೂ ಈಗ ದಿಢೀರನೆ ಮರಣದಂಡನೆ ವಿಧಿಸಲಾಗಿದೆ. ಇದು ಮಾನವತೆಗೇ ವಿರುದ್ಧ.
 
ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಕುಮ್ಮಕ್ಕು ಇಡೀ ಜಗತ್ತಿಗೇ ಗೊತ್ತು. ಹೀಗಾಗಿ ಭಯೋತ್ಪಾದಕರನ್ನು ಬಗ್ಗು ಬಡಿಯಲು ಏನಾದರೂ ಕ್ರಮ ತೆಗೆದುಕೊಳ್ಳಲೇಬೇಕಾದ ಒತ್ತಡ ಅದರ  ಮೇಲಿದೆ.
 
ಇಂತಹ ಸನ್ನಿವೇಶದಲ್ಲಿ ಮರಣದಂಡನೆಗೆ ಆದೇಶಿಸುವ ಮೂಲಕ ಅದು ವಿಶ್ವದ ಗಮನವನ್ನು  ಬೇರೆಡೆ ಸೆಳೆಯಲು ಮತ್ತು ತನ್ನ ಅಕೃತ್ಯಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಇದಕ್ಕೆಲ್ಲ ಅವಕಾಶ ಕೊಡಬಾರದು. ಜಾಧವ್‌ಗೆ ಅನ್ಯಾಯವಾಗಿದೆ ಎನ್ನುವುದನ್ನು ವಿಶ್ವಕ್ಕೆ ಮನದಟ್ಟು ಮಾಡಲು ನಮ್ಮ ಸರ್ಕಾರ ಲಭ್ಯವಿರುವ ಎಲ್ಲ  ಮಾರ್ಗಗಳನ್ನು ಬಳಸಿಕೊಳ್ಳಬೇಕು. 
 
ಜಾಧವ್‌ ಮರಣದಂಡನೆಗೆ ಪಾಕಿಸ್ತಾನದ ಪ್ರಮುಖ ಪ್ರತಿಪಕ್ಷ ಪಿಪಿಪಿ ವಿರೋಧ ವ್ಯಕ್ತಪಡಿಸಿರುವುದು ಗಮನಾರ್ಹ. ನೆರೆಹೊರೆಯ ದೇಶಗಳ ಜತೆ ಸೌಹಾರ್ದ ಸಂಬಂಧ ಬೇಕು ಎಂದು ಅಲ್ಲಿನ ಪ್ರಧಾನಿ ನವಾಜ್‌  ಷರೀಫ್‌ ಕೂಡ ಹೇಳಿದ್ದಾರೆ. ಗಲ್ಲು ಶಿಕ್ಷೆ ಜಾರಿ ವಿರುದ್ಧ ಮೇಲ್ಮನವಿ ಸಲ್ಲಿಸಲು ಇರುವ ಅವಕಾಶಗಳ ಬಗ್ಗೆ ಅಲ್ಲಿನ ರಕ್ಷಣಾ ಮಂತ್ರಿ ಮತ್ತು ಮಾಜಿ ಅಟಾರ್ನಿ ಜನರಲ್‌ ಒಂದಿಷ್ಟು ದಾರಿಗಳನ್ನು ತೋರಿಸಿದ್ದಾರೆ.

ಈ ವಿಚಾರದಲ್ಲಿ ಜಾಧವ್‌ಗೆ ನಮ್ಮ ಸರ್ಕಾರ ಸಹಾಯ ಮಾಡಬೇಕು. ಐದು ವರ್ಷಗಳ ಹಿಂದೆ ಇದೇ ರೀತಿ ಗೂಢಚರ್ಯೆಯ ಹಣೆಪಟ್ಟಿ ಕಟ್ಟಿ ಭಾರತದ ಸರಬ್‌ಜಿತ್‌ ಸಿಂಗ್‌ಗೆ ಪಾಕಿಸ್ತಾನದ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಆದರೆ ಆಗಿನ ಅಧ್ಯಕ್ಷರು ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದ್ದರು. ಮುಂದೆ ಸರಬ್‌ಜಿತ್‌ ಅಸುನೀಗಿದ್ದು ಜೈಲಿನಲ್ಲಿ ಸಹಕೈದಿಗಳು ನಡೆಸಿದ ಹಲ್ಲೆಯಲ್ಲಿ.
 
ಆದ್ದರಿಂದ ಸಹಜ ನ್ಯಾಯ ಪಾಲಿಸದೆ ಯಾರನ್ನೇ ಆಗಲಿ ಶಿಕ್ಷಿಸುವಂತಿಲ್ಲ ಎಂಬುದನ್ನು ಪಾಕ್‌ಗೆ ಮತ್ತೆ ನೆನಪಿಸುವ ಅಗತ್ಯವಿದೆ. ಸಂಬಂಧಗಳನ್ನು ಸುಧಾರಿಸಿಕೊಳ್ಳುವುದಕ್ಕೆ ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೇ ಹೊರತು ಅದನ್ನು ಹಾಳು ಮಾಡುವುದು ಸರಿಯಲ್ಲ ಎಂಬುದನ್ನು ಅದು ಅರ್ಥ ಮಾಡಿಕೊಳ್ಳಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT