ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 608.97 ಕೋಟಿ ಆದಾಯ ಗಳಿಕೆ

Last Updated 13 ಏಪ್ರಿಲ್ 2017, 6:07 IST
ಅಕ್ಷರ ಗಾತ್ರ

ಮೈಸೂರು: 2016–17ನೇ ಸಾಲಿನಲ್ಲಿ ಮೈಸೂರು ರೈಲ್ವೆ ವಿಭಾಗವು ಒಟ್ಟಾರೆ₹ 608.97 ಕೋಟಿ ಆದಾಯ ಗಳಿಸಿದ್ದು, ಕಳೆದ ಸಾಲಿಗಿಂತ ಶೇ 0.03 ಹೆಚ್ಚಳ ಕಂಡುಬಂದಿದೆ ಎಂದು ವಿಭಾಗದ ವ್ಯವಸ್ಥಾಪಕ ಅತುಲ್‌ ಗುಪ್ತಾ ಹೇಳಿದರು.

ನಗರದ ರೈಲ್ವೆ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ 62ನೇ ರೈಲ್ವೆ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ₹ 608.79 ಕೋಟಿ ಆದಾಯ ಸಂಗ್ರಹವಾಗಿತ್ತು. ಈ ಬಾರಿ 4,81,50,000 ಕ್ವಿಂಟಲ್‌ ಸರಕು ಸಾಗಣೆ ಮಾಡಲಾಗಿತ್ತು. ಕಳೆದ ವರ್ಷ 5,03,80,000 ಕ್ವಿಂಟಲ್‌ ಸಾಗಣೆಯಾಗಿತ್ತು. ಸರಕು ಸಾಗಣೆಯಲ್ಲಿ ಕೊಂಚ ಇಳಿಕೆಯಾಗಿದೆ. ರೈಲು ಸಂಚಾರದಲ್ಲಿ ಶೇ 97.58ರಷ್ಟು ಸಮಯಪಾಲನೆಯಾಗಿದೆ ಎಂದರು.

ಈ ವರ್ಷ 4.81 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಕಳೆದ ವರ್ಷ 4.84 ಕೋಟಿ ಸಂಚರಿಸಿದ್ದರು. ನಿಯಮ ಉಲ್ಲಂಘನೆ ಮತ್ತು ಟಿಕೆಟ್‌ರಹಿತ ಪ್ರಯಾಣ ಬಾಬ್ತಿನಲ್ಲಿ₹ 4.65 ಕೋಟಿ ಸಂಗ್ರಹವಾಗಿದೆ. ಹಿಂದಿನ ವರ್ಷ ₹ 4.86 ಕೋಟಿ ಸಂಗ್ರಹವಾಗಿತ್ತು ಎಂದು ಹೇಳಿದರು.

ಹಾಸನ– ಅರಸೀಕೆರೆ ಮಾರ್ಗದ ರೈಲುಗಳ ಸಂಚಾರ ವೇಗವನ್ನು 60 ಕಿ.ಮೀ.ನಿಂದ 80 ಕಿ.ಮೀ.ಗೆ ಹಾಗೂ ಹೊಸದುರ್ಗ ಮತ್ತು ಚಿಕ್ಕಜಾಜೂರು ಮಾರ್ಗದಲ್ಲಿ 90 ಕಿ.ಮೀ.ನಿಂದ 100 ಕಿ.ಮೀ.ಗೆ ಹೆಚ್ಚಿಸಲಾಗಿದೆ. 35 ಲೆವೆಲ್‌ ಕ್ರಾಸಿಂಗ್‌ಗಳನ್ನು (17 ಮಾನವರಹಿತ ಮತ್ತು 18 ಮಾನವಸಹಿತ ಲೆವೆಲ್‌ ಕ್ರಾಸಿಂಗ್‌) ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ವಿಭಾಗದ ಅನ್ವೇಷಣಾ ಘಟಕವು 11 ಹೊಸ ಆಲೋಚನೆಗಳನ್ನು ನೀಡಿದ್ದು, 8ನ್ನು ಅನುಷ್ಠಾನ ಗೊಳಿಸಲಾಗಿದೆ. ಸಮೀಕ್ಷೆಗೆ ಡ್ರೋಣ್‌’ ಬಳಕೆ, ಲೊಕೊಮೊಟಿವ್‌ ಕಾರ್ಯ ಸ್ಥಾನದ ಬಳಿ ಹಿಮ್ಮುಖ ವೀಕ್ಷಣೆ ಕನ್ನಡಿ ಅಳವಡಿಕೆ ಮೊದಲಾದವನ್ನು ಕಾರ್ಯ ಗತಗೊಳಿಸಲಾಗಿದೆ. ಘಟಕವು ಮಾಸಿಕ ಪತ್ರಿಕೆಯೊಂದನ್ನು ಪ್ರಕಟಿಸಿ, ಅದರಲ್ಲಿ ಚಟುವಟಿಕೆಗಳ ಮಾಹಿತಿಯನ್ನು ನೌಕರರಿಗೆ ತಲುಪಿಸುತ್ತಿದೆ. ನಗರದ ರೈಲ್ವೆ ಕಲ್ಯಾಣಮಂಟಪವನ್ನು ₹ 28 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. ಮೈಸೂರು ನಿಲ್ದಾಣದಲ್ಲಿ ಎಸ್ಕಲೇಟರ್‌, ವೈ–ಫೈ, ಸಬ್‌ ವೇ, ಲಿಫ್ಟ್‌ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಸುರಕ್ಷತೆ ಮತ್ತು ವೈದ್ಯಕೀಯ ವಿಭಾಗದಲ್ಲಿ ಅತ್ಯುತ್ತಮ ನಿರ್ವಹಣೆ ಪ್ರಶಸ್ತಿಗಳು ವಲಯಮಟ್ಟದಲ್ಲಿ ಸಂದಿವೆ. ಕಡೂರು ನಿಲ್ದಾಣಕ್ಕೆ ಅತ್ಯುತ್ತಮ ನಿಲ್ದಾಣ ಪುರಸ್ಕಾರ ಬಂದಿದೆ. ವಿಭಾಗ ವ್ಯಾಪ್ತಿಯ ನಾಲ್ವರು ಅಧಿಕಾರಿಗಳು ಮತ್ತು 22 ನೌಕರರು ಉತ್ತಮ ಸೇವಾ ಪ್ರಶಸ್ತಿಗೆ ವಲಯಮಟ್ಟದಲ್ಲಿ ಭಾಜನರಾಗಿದ್ದಾರೆ ಎಂದು ಅತುಲ್‌ ಗುಪ್ತಾ ತಿಳಿಸಿದರು.

ಅತ್ಯುತ್ತಮ ಕಚೇರಿ ನಿರ್ವಹಣೆಗೆ ‘ಆಪರೇಟಿಂಗ್‌’ ವಿಭಾಗಕ್ಕೆ ಪ್ರಥಮ ಹಾಗೂ ಎಂಜಿನಿಯರಿಂಗ್ ವಿಭಾಗಕ್ಕೆ ದ್ವಿತೀಯ ಬಹುಮಾನ ವಿತರಿಸಲಾ ಯಿತು. ನಿಟ್ಟೂರು ನಿಲ್ದಾಣಕ್ಕೆ ಅತ್ಯುತ್ತಮ ನಿಲ್ದಾಣ ಪ್ರಶಸ್ತಿ ನೀಡಲಾಯಿತು.ಉತ್ತಮ ಸೇವೆ ಸಲ್ಲಿಸಿದ ನೌಕರರಿಗೆ ನಗದು ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕ ಪಿ.ರಾಮ್‌ ಅಧ್ಯಕ್ಷತೆ ವಹಿಸಿದ್ದರು. ಸಿಬ್ಬಂದಿ ವಿಭಾಗದ ಪ್ರಶಾಂತ್‌ ಮಾಸ್ತಿಹೊಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT