ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ವರ್ಷಗಳ ಬಳಿಕ ತಳ ಕಂಡ ಯಗಚಿ

Last Updated 13 ಏಪ್ರಿಲ್ 2017, 7:16 IST
ಅಕ್ಷರ ಗಾತ್ರ

ಬೇಲೂರು:  ಅರಮಲೆನಾಡು ಪ್ರದೇಶವಾಗಿರುವ ತಾಲ್ಲೂಕಿನಲ್ಲಿ ಜನ ಮೂರು ವರ್ಷಗಳ ಸತತ ಬರಗಾಲದಿಂದ ಕಂಗೆಟ್ಟಿದ್ದಾರೆ. ಜಲಾಶಯ, ಕೆರೆ, ಕಟ್ಟೆಗಳು ಒಣಗಿ ನಿಂತಿವೆ. ಕುಡಿಯುವ ನೀರಿಗಾಗಿ ಜನ, ಜಾನುವಾರುಗಳು ಪರಿತಪಿಸುತ್ತಿವೆ. ಸಮರೋಪಾದಿಯಲ್ಲಿ ಬರಪರಿಹಾರ ಕಾಮಗಾರಿ ಕೈಗೊಳ್ಳಬೇಕಾದ ತಾಲ್ಲೂಕು ಆಡಳಿತ ಮಾತ್ರ ನೆರವಿಗೆ ಧಾವಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ ಏಳು ವರ್ಷಗಳ ಅವಧಿಯಲ್ಲಿ ಎರಡು ವರ್ಷ ಮಾತ್ರ ವಾಡಿಕೆಯ ಮಳೆ ಸುರಿದಿದ್ದರೆ, ಊಳಿದ ಐದು ವರ್ಷಗಳಲ್ಲಿ  ಕಡಿಮೆ ಮಳೆಯಾಗಿದೆ. ತಾಲ್ಲೂಕಿನ ವಾಡಿಕೆ ಮಳೆ 1,172.6 ಮಿ.ಮೀ ಪೈಕಿ 490.2 ಮಿ.ಮೀ ಆಗಿದೆ  2010ರಲ್ಲಿ 1,427.8 ಮಿ.ಮೀ, 2011ರಲ್ಲಿ 1,325.3 ಮಿ.ಮೀ,  2012ರಲ್ಲಿ 768.9 ಮಿ.ಮೀ. 2013ರಲ್ಲಿ 1,164.4 ಮಿ.ಮೀ. 2014ರಲ್ಲಿ 1,088 ಮಿ.ಮೀ. ಮತ್ತು 2015ರಲ್ಲಿ 874.7 ಮಿ.ಮೀ ಮಳೆಯಾಗಿದೆ.

ಮಳೆ ಕೊರತೆಯಿಂದಾಗಿ ಬೇಲೂರಿನ ಯಗಚಿ ಜಲಾಶಯ ನಿರ್ಮಾಣಗೊಂಡ 12 ವರ್ಷಗಳ ಬಳಿಕ ಪ್ರಥಮ ಬಾರಿಗೆ ಸಂಪೂರ್ಣ ಒಣಗಿದೆ. ಇದರಿಂದಾಗಿ ಕುಡಿಯುವ ನೀರು ಪೂರೈಕೆಗೆ ತೀವ್ರ ಅಡ್ಡಿಯುಂಟಾಗಿದೆ.ತಾಲ್ಲೂಕಿನಲ್ಲಿ ಕಾಫಿ, ಮೆಣಸು, ಭತ್ತ, ರಾಗಿ, ಮುಸುಕಿನ ಜೋಳ, ಎಣ್ಣೆಕಾಳು, ಕಬ್ಬು, ಮತ್ತು ದ್ವಿದಳ ಧಾನ್ಯಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಮಳೆ ಕೊರತೆಯಿಂದಾಗಿ ಕಾಳುಮೆಣಸು ಹಾಗೂ ಕಾಫಿ ಗಿಡಗಳು ಒಣಗಿವೆ. ಇದು ಕಾಫಿ ಬೆಳೆಗಾರರ ಆದಾಯದ ಮೇಲೆ ತೀವ್ರ ಪರಿಣಾಮ ಬೀರಿದೆ.

ಮುಂಗಾರು ಹಂಗಾಮಿನಲ್ಲಿ 27,227 ಹೆಕ್ಟೇರ್‌ನಲ್ಲಿ ಬಿತ್ತನೆ  ಗುರಿ ಹೊಂದಲಾಗಿತ್ತು. ಈ ಪೈಕಿ 20,879 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತಾದರೂ ಮಳೆ ಕೊರತೆಯಿಂದಾಗಿ 20,135 ಹೆಕ್ಟೇರ್‌ ಬೆಳೆ ನಾಶಗೊಂಡಿದೆ. ಹಿಂಗಾರು ಹಂಗಾಮಿನಲ್ಲಿ 4,500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತಾದರೂ 87 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ.

ತಾಲ್ಲೂಕಿನ 16 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರು ಪೂರೈಕೆಗೆ 25 ಖಾಸಗಿ ಕೊಳವೆ ಬಾವಿಗಳನ್ನು ವಶಪಡಿಸಿಕೊಂಡು, ಮಾಲೀಕರಿಗೆ ಬಾಡಿಗೆ ನೀಡಲಾಗುತ್ತಿದೆ.‘ಕುಡಿಯುವ ನೀರು, ಮೇವು ಖರೀದಿಗಾಗಿ ಸರ್ಕಾರ ಈವರೆಗೆ  ತಾಲ್ಲೂಕಿಗೆ ₹ 1.25 ಕೋಟಿ ಹಣ ಬಿಡುಗಡೆ ಮಾಡಿದೆ. ಬೇಲೂರು, ಹಗರೆ, ಹಳೇಬೀಡು, ಅಡಗೂರು, ಅರೇಹಳ್ಳಿ, ಬಿಕ್ಕೋಡುಗಳಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 286 ಟನ್‌ ಮೇವನ್ನು ಖರೀದಿಸಿ ರೈತರಿಗೆ ವಿತರಣೆ ಮಾಡಲಾಗಿದೆ’ ಎಂದು ತಹಶೀಲ್ದಾರ್‌ ಬಿ.ಎಸ್‌.ಪುಟ್ಟಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಎಂಬ ಬೇಡಿಕೆಗೆ ಸರ್ಕಾರದಿಂದ ಇಲ್ಲಿಯವರೆಗೆ ಸ್ಪಂದನೆ ದೊರಕಿಲ್ಲ. ಇದರಿಂದಾಗಿ ರೈತರು ದನ, ಕರುಗಳನ್ನು ಸಾಕಲಾರದೆ ಕಟುಕರಿಗೆ ಮಾರಾಟ ಮಾಡುತ್ತಿದ್ದಾರೆ. ಈವರೆಗೆ ಎಲ್ಲಿಯೂ ಬರ ಪರಿಹಾರ ಕಾಮಗಾರಿಗೆ ಹಣ ಬಿಡುಗಡೆ ಮಾಡಿಲ್ಲ. ಕಾಮಗಾರಿಯೂ ನಡೆಯುತ್ತಿಲ್ಲ. ಇದರಿಂದಾಗಿ ಜನರಿಗೆ ಕೂಲಿ ದೊರೆಯದೆ ಸಂಕಷ್ಟ ಎದುರಿಸುತ್ತಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT