ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಬರಕ್ಕೆ ತತ್ತರಿಸಿದ ಸಕ್ಕರೆ ಜಿಲ್ಲೆ

ಅಣೆಕಟ್ಟೆ, ಕೆರೆಗಳು ಖಾಲಿ.. ಖಾಲಿ..
Last Updated 14 ಏಪ್ರಿಲ್ 2017, 7:01 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯನ್ನು ಬರ ಎಡಬಿಡದೇ ಕಾಡುತ್ತಿದೆ. ಇತ್ತೀಚಿನ ಐದು ವರ್ಷಗಳಲ್ಲಿ ಜಿಲ್ಲೆಯ ಜೀವನಾಡಿ ಕೆಆರ್ಎಸ್ ಅಣೆಕಟ್ಟೆ ಒಂದೇ ಒಂದು ಬಾರಿ ಭರ್ತಿಯಾಗಿದೆ. ಜಿಲ್ಲೆಯ ಏಳೂ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ.

ಜಿಲ್ಲೆಯಲ್ಲಿ ಎರಡನೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇರುವ ಕೊಳವೆಬಾವಿಗಳೂ ಬತ್ತಿ ಹೋಗುತ್ತಿವೆ. ಕೆರೆಗಳಲ್ಲಿಯೂ ನೀರಿಲ್ಲದಂತಾಗಿದೆ. ಕುಡಿಯುವ ನೀರಿಗೂ ಪರದಾಡುವಂತಾಗಿದೆ.

ರೈತರ ಆತ್ಮಹತ್ಯೆ: ಜಿಲ್ಲೆಯಲ್ಲಿ ರೈತರು ಸಾಲಬಾಧೆ ತಾಳದೇ ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದಾರೆ. 2015 ರಲ್ಲಿ 121 ರೈತರು, 2016ರ ಫೆಬ್ರುವರಿ ಅಂತ್ಯದವರೆಗೆ 51 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಬರದಿಂದ ತತ್ತರಿಸಿರುವ ರೈತರು ಸಾಲಬಾಧೆ ತಾಳದೇ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಕಳೆದ ವರ್ಷ ಆರಂಭವಾಗಿದ್ದ ಆತ್ಮಹತ್ಯೆ ಪ್ರಕರಣಗಳು ಈ ವರ್ಷವೂ ಮುಂದುವರಿದಿರುವುದು ದುರಂತ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಳಿಗೆ ಪರಹಾರ ನೀಡಲಾಗುತ್ತಿದೆಯೇ ಹೊರತು ಆತ್ಮಹತ್ಯೆ ತಡೆಯಲು ಅವಶ್ಯಕ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ರೈತ ಸಂಘದವರ ದೂರು.

ನೀರಿನ ಕೊರೆಯಿಂದಾಗಿ 2015ರಲ್ಲಿ ಒಂದೇ ಬೆಳೆ ಬೆಳೆಯಲಾಗಿತ್ತು. ಈ ಬಾರಿಯೂ ಒಂದೇ ಬೆಳೆ ಬೆಳೆಯುವಷ್ಟೇ ನೀರಿತ್ತು. ಬೇಸಿಗೆಯ ಭತ್ತದ ಬೆಳೆ ಬೆಳೆಯಲಾಗುತ್ತಿಲ್ಲ. ಹಾಗಾಗಿ, ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿಲ್ಲ: ಜೀಲ್ಲೆಯ ಜೀವನಾಡಿಯಾಗಿರುವ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿಲ್ಲ. ಅಣೆಕಟ್ಟೆಯ ನೀರಿನ ಮಟ್ಟವು 74.80 ಅಡಿಗೆ ಕುಸಿದಿದೆ. ಕೇವಲ 8.6 ಟಿಎಂಸಿ ಅಡಿಯಷ್ಟು ನೀರಿದ್ದು, ಕುಡಿಯುವ ಬಳಸಿಕೊಳ್ಳಲಷ್ಟೇ ನೀರಿದೆ.

ಜೂನ್‌ನಲ್ಲಿ ಉತ್ತಮ ಮಳೆಯಾಗಿ ಅಣೆಕಟ್ಟೆಗೆ ನೀರು ಹರಿದು ಬಂದರೆ 2017ರ ಡಿಸೆಂಬರ್‌ನಲ್ಲಿ ಭತ್ತದಿಂದ ರೈತರು ಆದಾಯ ಕಾಣಬಹುದಾಗಿದೆ. ಅದೇ  ಕಬ್ಬು ಬೆಳೆಯುವವರಿಗೆ 2018ರ ಜುಲೈನಲ್ಲಿ ಆದಾಯ ಕಾಣಬಹುದಾಗಿದೆ. ಅಲ್ಲಿಯವರೆಗೆ ಜೀವನ ನಿರ್ಹಣೆಯ ಮಾರ್ಗವನ್ನು ಸರ್ಕಾರ ತೋರಬೇಕಿದೆ.

ಕುಸಿದ ಅಂತರ್ಜಲ: ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟದಲ್ಲಿ ಕುಸಿತವಾಗುತ್ತಿದೆ. ಮೊದಲು 200 ರಿಂದ 300 ಅಡಿಗೆ ಸಿಗುತ್ತಿದ್ದ ನೀರು ಈಗ ಒಂದು ಸಾವಿರ ಅಡಿ ದಾಟಿದರೂ ಸಿಗುತ್ತಿಲ್ಲ. ‘ಫೇಲ್‌’ ಆಗುತ್ತಿರುವ ಕೊಳವೆಬಾವಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಖಾಲಿಯಾದ ಕೆರೆಗಳು: ಜಿಲ್ಲೆಯ ಬಹುತೇಕ ಕೆರೆಗಳು ಖಾಲಿ, ಖಾಲಿಯಾಗಿವೆ. ಕೆಆರ್‌ಎಸ್‌ ಹಾಗೂ ಹೇಮಾವತಿ ಅಚ್ಚುಕಟ್ಟು ಪ್ರದೇಶದ ಕೆರೆಗಳೂ ಖಾಲಿಯಾಗಿವೆ. ಕೆರೆಗಳ ಭರ್ತಿ ಮಾಡಲು ನೀಡಬೇಕಾದಷ್ಟು ಆದ್ಯತೆ ನೀಡದಿರುವುದರಿಂದ ಜಾನುವಾರು ಗಳೂ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಗುಳೆ ಹೊರಟ ಜನ: ಜಮೀನಿನಲ್ಲಿ ಮಾಡಲು ಕೆಲಸವಿಲ್ಲದ್ದರಿಂದ ಜಿಲ್ಲೆಯ ರೈತರು, ಕೂಲಿ ಕಾರ್ಮಿಕರು ದುಡಿಯಲು ಗುಳೆ ಹೊರಟಿದ್ದಾರೆ.

ಬೆಳೆ ನಷ್ಟ: ಮಳೆ ಬಾರದ್ದರಿಂದಾಗಿ ಬೆಳೆದು ನಿಂತ ಕಣ್ಮುಂದೆಯೇ ಒಣಗಿ ಹೋಗಿದೆ. 70 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಒಣಗಿದ್ದು, ₹ 120 ಕೋಟಿ ನಷ್ಟವಾಗಿದೆ.

ಗುಳೆ ಹೊರಟ ಜನ: ಕೆ.ಆರ್‌. ಪೇಟೆ, ನಾಗಮಂಗಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದ ಗುಳೆ ಹೋಗುವ ಜನರ ಪ್ರಮಾಣ ಈ ಬಾರಿ ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿಯೂ ಕಾಣ ಸಿಗುತ್ತದೆ.

ಬೆಂಗಳೂರು, ಮುಂಬೈ, ಮಂಗಳೂರು, ಮೈಸೂರು ಮುಂತಾದೆಡೆ ಕಟ್ಟಡ ನಿರ್ಮಾಣದ ಕಾಮಗಾರಿಗಳಲ್ಲಿ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ. ಮನೆ ಹಾಗೂ ಮನೆಯಲ್ಲಿರುವ ಒಂದೆರಡು ಜಾನುವಾರಗಳನ್ನು ನೋಡಿಕೊಳ್ಳಲು ಮನೆಮುಂದೆ ಹಿರಿಯನ್ನು ಬಿಟ್ಟು ಹೋಗುತ್ತಿದ್ದಾರೆ. ಗ್ರಾಮಗಳು ಈಗ ವೃದ್ಧಾಶ್ರಮಗಳಂತೆ ಕಾಣುತ್ತಿವೆ.

ಶೇ 90ರಷ್ಟು ನೀರಾವರಿ
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಹಸಿರು ಕಾಣುವುದರಿಂದ ಬಹುತೇಕರು ಜಿಲ್ಲೆ ಸಂಪೂರ್ಣವಾಗಿ ನೀರಾವರಿ ಹೊಂದಿದೆ ಎಂದುಕೊಂಡಿದ್ದಾರೆ.

ಜಿಲ್ಲೆಯ ಒಟ್ಟು ಪ್ರದೇಶದಲ್ಲಿ ಶೇ 49 ರಷ್ಟು ಮಾತ್ರ ನೀರಾವರಿ ಹೊಂದಿದೆ. ಉಳಿದದ್ದು ಈಗಲೂ ಒಣಭೂಮಿಯೇ ಆಗಿದೆ. ಕೆ.ಆರ್‌. ಪೇಟೆ, ಮಳವಳ್ಳಿ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ನೀರಾವರಿ ಪ್ರದೇಶ ಕಡಿಮೆ ಇದ್ದು, ಆ ಜನರ ಬವಣೆ ಹೇಳತೀರದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT