ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಭಿಮಾನದಿಂದ ಗೆಲ್ಲಿಸಿದ್ದಾರೆ– ಡಿ.ಕೆ.ಶಿವಕುಮಾರ್

Last Updated 14 ಏಪ್ರಿಲ್ 2017, 8:33 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಈ ಕ್ಷೇತ್ರದ ಮತದಾರರು ಬಿಜೆಪಿಯ ಆಮಿಷಗಳಿಗೆ ಬಲಿಯಾಗದೆ ಸ್ವಾಭಿಮಾನದಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.

ಬಿಜೆಪಿಯವರು ನಡೆಸಿರುವುದು ಜಾತಿ ರಾಜಕೀಯ. ನಮ್ಮದು ನೀತಿ ರಾಜಕೀಯ. ಹಾಗಾಗಿ ಮತದಾರರು ನಂಜನಗೂಡು ಮತ್ತು ಗುಂಡ್ಲುಪೇಟೆ ಎರಡೂ ಕಡೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದು ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಿಜೆಪಿಯವರು ಕ್ಷೇತ್ರದೆಲ್ಲೆಡೆ ಜಾತಿಯ ಹೆಸರಿನಲ್ಲಿ ರಾಜಕೀಯವನ್ನು ಮಾಡಿದರು. ಆದರೆ ನಾವು ಪಕ್ಷದ ತತ್ವ ಸಿದ್ಧಾಂತವನ್ನು ಇಟ್ಟುಕೊಂಡು ನೀತಿ ರಾಜಕೀಯವನ್ನು ಮಾಡಿದ್ದೇವೆ ಎಂದರು.

ನಮಗೆ ಮತದಾರರೇ ದೇವರು. ಅವರು ಆಶೀರ್ವಾದ ಮಾಡಿದರೆ ಮಾತ್ರ ಗೆಲುವು ಸಾಧ್ಯ. ಅದಲ್ಲದೇ ಬೇರೆ ರೀತಿಯ ವಾಮಾಮಾರ್ಗಗಳು ನಮಗೆ ಬೇಕಿಲ್ಲ. ಹಣ, ಹೆಂಡ ಇಂಥ ಸಂಸ್ಕೃತಿ ನಮ್ಮದಲ್ಲ ಇದನ್ನು ಹುಟ್ಟು ಹಾಕಿದವರೇ ಬಿಜೆಪಿಯವರು ಎಂದು ಟೀಕಿಸಿದರು.

ಉತ್ತರ ಪ್ರದೇಶದಲ್ಲಿ ಮೋದಿ ಗಾಳಿ ಕರ್ನಾಟಕದಲ್ಲಿ ಬೀಸಲು ಸಾಧ್ಯವಿಲ್ಲ. ಅದು ಏನೆಂಬುದು ಈಗ ಬಿಜೆಪಿಗೆ ಅರಿವಾಗಿದೆ ಎಂದು ವ್ಯಂಗ್ಯವಾಡಿದ ಶಿವಕುಮಾರ್, ಕ್ಷೇತ್ರ ತಮ್ಮ ಕೈಯಲ್ಲಿದೆ ಎಂಬುವಂತೆ ಬಿಜೆಪಿಯವರು ವರ್ತಿಸಿದರು. ನಮ್ಮ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ದೂರು ನೀಡಿದರು. ಇದರ ಪರಿಣಾಮವಾಗಿ ತಾವೇ ಹಣ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ ಎಂದರು.

ನೀರಾವರಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಕೇವಲ ಮೂಢನಂಬಿಕೆಯ ಬೆನ್ನತ್ತಿರುವ ಬಿ.ಎಸ್.ಯಡಿಯೂರಪ್ಪ, ಚಾಮರಾಜನಗರ ಜಿಲ್ಲೆಯನ್ನು ಕಡೆಗಣಿಸಿ, ಅಪಶಕುನ ಮತ್ತು ಅಶುಭ ಎಂದು ನಂಬಿ ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳುತ್ತಿದ್ದರು ಎಂದರು.

ಡಾ.ಗೀತಾಮಹದೇವಪ್ರಸಾದ್ ಮಾತನಾಡಿ, ಕ್ಷೇತ್ರದ ಜನತೆಗೆ ನಾನು ಋಣಿಯಾಗಿದ್ದೇನೆ. ಗೆಲ್ಲುವ ಬಗ್ಗೆ ಅಚಲವಾದ ವಿಶ್ವಾಸವಿತ್ತು. ಅದು ಭಾರಿ ಬಹುಮತ ನೀಡುವುದರೊಂದಿಗೆ ನಿರೀಕ್ಷೆಯನ್ನು ಮೀರಿದ ಗೆಲುವನ್ನು ನೀಡಿದ್ದಾರೆ ಎಂದರು.

ಸಚಿವ ಯು.ಟಿ.ಖಾದರ್, ಸಂಸದ ಡಿ.ಕೆ.ಸುರೇಶ್, ಮಾಜಿ ಸಂಸದ ಎ.ಸಿದ್ದರಾಜು, ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿ.ಪಂ.ಸದಸ್ಯ ಕೆ.ಎಸ್.ಮಹೇಶ್, ಬೊಮ್ಮಯ್ಯ, ನವೀನ್, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ.ಮುನಿರಾಜು, ಪಿ.ಬಿ.ರಾಜಶೇಖರ್ ಇತರರು ಇದ್ದರು.

*
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು  ನಮಗೆ ಬೆಂಬಲ ನೀಡಿದ್ದಾರೆ. ಅವರ ನೆರವಿನಿಂದ ಗೆಲುವು ಸಾಧ್ಯವಾಯಿತು.
-ಡಿ.ಕೆ.ಶಿವಕುಮಾರ್,
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT