ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಆಲೂ ಸಬ್ಸಿಡಿ ದರ ₹12ಕ್ಕೆ ಏರಿಕೆ

ರೈತ ಮುಖಂಡರು, ವರ್ತಕರ ಸಭೆಯಲ್ಲಿ ಸಚಿವ ಮಂಜು ಘೋಷಣೆ
Last Updated 14 ಏಪ್ರಿಲ್ 2017, 8:45 IST
ಅಕ್ಷರ ಗಾತ್ರ

ಹಾಸನ: ಪ್ರಸಕ್ತ ವರ್ಷ ದೃಢೀಕೃತ ಬಿತ್ತನೆ ಆಲೂಗೆಡ್ಡೆಗೆ ಸರ್ಕಾರ ನಿಗದಿಪಡಿಸಿದ ಸಬ್ಸಿಡಿ ದರವನ್ನು ಪ್ರತಿ ಕೆ.ಜಿ.ಗೆ ₹ 10 ರಿಂದ 12ಕ್ಕೆ  ಏರಿಸಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಅನುಕೂಲ ಪಡೆಯಬೇಕು ಎಂದು ಸಚಿವ ಎ.ಮಂಜು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದೃಢೀಕೃತ ಬಿತ್ತನೆ ಬೀಜ ವಿತರಣೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು, ರೈತ ಮುಖಂಡರು, ವರ್ತಕರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ರೈತರ ಹಿತ ಕಾಯುವುದೇ ಸರ್ಕಾರದ ಉದ್ದೇಶವಾಗಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ.

ಕಳೆದ ವರ್ಷ ಪ್ರತಿ ಕ್ವಿಂಟಲ್‌ ದೃಢೀಕೃತ ಆಲೂಗೆಡ್ಡೆ ಬೀಜಕ್ಕೆ ₹ 10 ನಂತೆ ಸಬ್ಸಿಡಿ ನೀಡಲಾಗಿತ್ತು. ಈ ವರ್ಷ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ರೈತರಿಗೆ ನೆರವಾಗಲು ಸಬ್ಸಿಡಿ ದರ ಹೆಚ್ಚಿಸಲಾಗಿದೆ ಎಂದು ನುಡಿದರು.

ಈಗಾಗಲೇ ರೈತರಿಂದ ಪ್ರತಿ ಕೆ.ಜಿ.ಗೆ ₹ 2ರಂತೆ  ಸ್ವೀಕರಿಸಿ ಮುಂಗಡ ಕಾಯ್ದಿರಿಸಲಾಗಿದೆ. ರೈತ ಪ್ರತಿನಿಧಿಗಳನ್ನೇ ಪಂಜಾಬ್‌ನ ಆಲೂಗೆಡ್ಡೆ ಬೆಳೆ ಪ್ರದೇಶಗಳಿಗೆ ಕಳುಹಿಸಿ ಅಲ್ಲಿಯ ಮಾರುಕಟ್ಟೆ ವ್ಯವಸ್ಥೆಗಳ ಬಗ್ಗೆ  ಪರಿಚಯಿಸಲಾಗಿದೆ. ಹಾಗಾಗಿ ವಾಸ್ತವಾಂಶಗಳು ಗೊತ್ತಿದೆ.

ದೃಢೀಕೃತ ಬಿತ್ತನೆ ಬೀಜ ಬೇಸಾಯಕ್ಕೆಂದೇ ಉತ್ಪಾದನೆ ಮಾಡುವಂತಹ ಆಲೂಗೆಡ್ಡೆಯಾಗಿದೆ. ಆದ ಕಾರಣ ಅದಕ್ಕೆ ಹೆಚ್ಚಿನ ಬೆಲೆಯನ್ನು ನಿಗದಿಪಡಿಸುತ್ತಿದ್ದಾರೆ. ಆದರೆ ಇದಕ್ಕೆ ಸರ್ಕಾರ ಸಬ್ಸಿಡಿ ಹಣ ನೀಡುತ್ತಿರುವುದರಿಂದ ರೈತರಿಗೆ ಹೊರೆಯಾಗಲಾರದು ಎಂದು ಹೇಳಿದರು.

ಬಿತ್ತನೆ ಬೀಜ ಬಳಸಿ ಬೇಸಾಯ ಮಾಡುವ ರೈತರಿಗೆ ಬೆಳೆ ವಿಮೆ ನೀಡಲಾಗುವುದು. ಜಿಲ್ಲೆಯ ವರ್ತಕರೇ ದೃಢೀಕೃತ ಬಿತ್ತನೆ ಬೀಜ ಪೂರೈಸಿದಲ್ಲಿ ಅವರಿಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲು ಅವಕಾಶವಿದೆ. ಒಟ್ಟಾರೆ ಜಿಲ್ಲೆಯ ರೈತರ ಹಿತ ಸಂರಕ್ಷಣೆಯಾಗಬೇಕು ಎಂದು  ಹೇಳಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು ದೃಢೀಕೃತ ಬಿತ್ತನೆ ಬೇಸಾಯದ ಅನುಕೂಲ, ಅನಾನುಕೂಲಗಳ ಬಗ್ಗೆ ಚರ್ಚಿಸಿದರು. ತಾವೂ ಕೂಡ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಜಲಂಧರ್‌ಗೆ ಹೋಗಿ ಬಂದಿದ್ದು ಅಲ್ಲಿನ ಮರುಕಟ್ಟೆಯ ನೈಜ ಚಿತ್ರಣ ದೊರೆತಿದೆ.

ಬೆಲೆ ಒಂದಿಷ್ಟು ಕಡಿಮೆಯಾದರೆ ಉತ್ತಮ ಜೊತೆಗೆ ಶೈತ್ಯಾಗಾರದಲ್ಲಿ ಇರಿಸಿರುವ ಆಲೂಗೆಡ್ಡೆ ಬಿತ್ತನೆ ಬೀಜವನ್ನು ಎ.ಪಿ.ಎಂ.ಸಿ. ಮಾರುಕಟ್ಟೆಗೆ ತಂದು ವಿತರಣೆ ಮಾಡುವ ಬದಲು ರೈತರ ಜಮೀನುಗಳಿಗೇ ಅವರ ಅನುಕೂಲಕ್ಕೆ ತಕ್ಕಂತೆ ಪೂರೈಕೆ ಮಾಡಿದರೆ ಸೂಕ್ತ ಎಂದರು.

ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಗೊಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶಕೀಲ್ ಅಹಮದ್, ಉಪನಿರ್ದೇಶಕ ಸಂಜಯ್, ರೈತ ಮುಖಂಡರಾದ ಲಕ್ಷ್ಮಿನಾರಾಯಣ್, ಸುರೇಶ್ ಬಾಬು, ಈರುಳ್ಳಿಸಿದ್ದಪ್ಪ, ಕೃಷ್ಣೇಗೌಡ, ಶಂಕರ್, ಸತ್ತಿಗೌಡ,  ವರ್ತಕರರಾದ ಸಿದ್ದಪ್ಪ ಅಭಿಪ್ರಾಯಗಳನ್ನು ತಿಳಿಸಿದರು.

10 ಸಾವಿರ ಫಲಾನುಭವಿಗಳಿಗೆ ಪ್ಯಾಕೇಜ್‌
2016–17ನೇ ಸಾಲಿನಲ್ಲಿ 10 ಸಾವಿರ ಫಲಾನುಭವಿಗಳಿಗೆ ಆಲೂಗೆಡ್ಡೆ ಬೆಳೆ ವಿಶೇಷ ಪ್ಯಾಕೇಜ್ ಸೌಲಭ್ಯ ನೀಡಲಾಗಿದ್ದು, ಇದಕ್ಕಾಗಿ ₹ 25.75 ಕೋಟಿ  ಖರ್ಚು ಮಾಡಲಾಗಿದೆ. ಅದೇ ರೀತಿ ದೃಢೀಕೃತ ಆಲೂಗೆಡ್ಡೆ ಬೀಜ ಖರೀದಿಗೆ ಪ್ರತಿ ಕೆ.ಜಿ.ಗೆ ₹ 10ರಂತೆ ಸಹಾಯಧನ ವತರಣೆಗೆ ₹ 2.35 ಕೋಟಿ  ಒದಗಿಸಲಾಗಿತ್ತು.

ಒಟ್ಟಾರೆ ಆಲೂಗೆಡ್ಡೆ ಬೆಳೆ ನೆರವಿಗಾಗಿ ರಾಜ್ಯ ಸರ್ಕಾರ ₹ 5.10 ಕೋಟಿ ಖರ್ಚು ಮಾಡಿದೆ. ಈ ವರ್ಷ ಈಗಾಗಲೇ 3,08,693  ಕ್ವಿಂಟಲ್‌  ಆಲೂಗೆಡ್ಡೆ  ಬಿತ್ತನೆ ಬೀಜವನ್ನು ತರಿಸಿ ಶೈತ್ಯಾಗಾರದಲ್ಲಿ  ಇರಿಸಲಾಗಿದೆ ಎಂದು ಸಚಿವ ಮಂಜು ಮಾಹಿತಿ ನೀಡಿದರು.

*
ಹಾಸನ ನಗರದಲ್ಲಿ ಆಲೂಗೆಡ್ಡೆಗೆ ಸೀಮಿತವಾದ ಮಾರುಕಟ್ಟೆ ಪ್ರಾಂಗಣ ನಿರ್ಮಿಸಲು ಪ್ರಯತ್ನಿಸಲಾಗುವುದು.
-ಎ.ಮಂಜು,
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT