ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಢನಂಬಿಕೆ ಬಿಡಲು ಸಲಹೆ

ಅಂಬೇಡ್ಕರ್ ಜಯಂತಿಯಲ್ಲಿ ಬೈಲೂರು ಸ್ವಾಮೀಜಿ
Last Updated 14 ಏಪ್ರಿಲ್ 2017, 9:15 IST
ಅಕ್ಷರ ಗಾತ್ರ

ಬಸವಕಲ್ಯಾಣ: ಮೂಢನಂಬಿಕೆ, ಕಂದಾಚಾರ ಬಿಟ್ಟರೆ ದಲಿತರ ಅಭಿವೃದ್ಧಿ ಸಾಧ್ಯ ಎಂದು ಬೈಲೂರು ನಿಜಗುಣಪ್ರಭು ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ರಾಜೇಶ್ವರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಗುರುವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಡಾ.ಅಂಬೇಡ್ಕರ್ ದೊಡ್ಡ ವ್ಯಕ್ತಿಯಾಗಿ ಸುಮ್ಮನೆ ರೂಪುಗೊಳ್ಳಲಿಲ್ಲ. ಅನೇಕ ಕಷ್ಟನಷ್ಟಗಳನ್ನು ಅನುಭವಿಸಿದರು. ಕಠಿಣ ಪರಿಶ್ರಮ ಮಾಡಿ ಅಧ್ಯಯನ ಕೈಗೊಂಡರು. ದಲಿತರ ಹಕ್ಕುಗಳಿಗಾಗಿ ಮತ್ತು ಅಸ್ಪೃಶ್ಯತೆ ನಿವಾರಣೆಗಾಗಿ ಸತತವಾಗಿ ಹೋರಾಡಿದರು. ಜನರು ಜಾಗೃತರಾಗಿ ಅವರ ಸಂದೇಶದಂತೆ ನಡೆಯಬೇಕು ಎಂದರು.

ದೇಶವನ್ನು ಕಟ್ಟಿ ಬೆಳೆಸಿದವರು ದಲಿತರು. ಅವರು ಬಹುಸಂಖ್ಯೆಯಲ್ಲಿದ್ದಾರೆ. ಆದರೂ ಮೋಸದ, ತಂತ್ರಗಾರಿಕೆ ರಾಜಕೀಯದಿಂದ ಅನ್ಯಾಯ ಆಗುತ್ತಿದೆ. ದುಶ್ಚಟ, ದುರ್ಗುಣಗಳನ್ನು ಬಿಡಬೇಕು. ಅನ್ಯ ದೇವರನ್ನು ಪೂಜಿಸದೆ ಅಂಬೇಡ್ಕರ್ ಮತ್ತು ಬುದ್ಧನನ್ನು ಮಾತ್ರ ಪೂಜಿಸಬೇಕು. ಬಸವಣ್ಣನವರು ಸಮಾನತೆಗಾಗಿ ಪ್ರಯತ್ನಿಸಿದರು. ಡಾ. ಅಂಬೇಡ್ಕರ್ ತಲೆ ಎತ್ತಿ ಬದುಕುವಂತೆ ಮಾಡಿದರು ಎಂದು ಹೇಳಿದರು.

ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ಡಾ.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಹಕ್ಕು ಮತ್ತು ಕರ್ತವ್ಯ ನೀಡಿದ್ದಾರೆ. ದೇಶದ ಉನ್ನತಿಯಲ್ಲಿ ಅವರ ಪಾತ್ರ ಬಹುಮುಖ್ಯವಾದದ್ದು. ರಾಜೇಶ್ವರದ ರಾಷ್ಟ್ರೀಯ ಹೆದ್ದಾರಿ ಸಮೀಪ ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಖರೀದಿಸಲಾಗಿದೆ.

ಹೋಬಳಿ ಕೇಂದ್ರವಾದ ಇಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಗುಂಡುರೆಡ್ಡಿ, ಧನರಾಜ ರಂಜೇರಿ ಮಾತನಾಡಿದರು.

ದಲಿತ ಮುಖಂಡ ಮಾರುತಿ ಬೌದ್ಧೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಣ್ಣ ಪಾಟೀಲ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ವಾಮನ ಮೈಲಸಗೆ, ತಾಲ್ಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ಅಂತಪ್ಪನಳ್ಳಿ, ಬೌದ್ಧ ವಿಹಾರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಾಲೆ, ಉತ್ಸವ ಸಮಿತಿ ಅಧ್ಯಕ್ಷ ರಾಹುಲ ರಂಜೇರಿ, ರಾಜಕುಮಾರ ಮೂಲಗೆ, ಅಂಬಣ್ಣ ಘಾಂಗ್ರೆ, ದೀಪಕಕುಮಾರ ಪೊಸ್ತಾರ, ಧೂಳಪ್ಪ ಪೊಸ್ತಾರ್, ಕರಬಸಪ್ಪ ಪೊಸ್ತಾರ, ಸುಭಾಷ ನಾಗರಕಟ್ಟೆ, ಅಶೋಕ ಅಂತಪ್ಪಮಳ್ಳೆ ಉಪಸ್ಥಿತರಿದ್ದರು.

*
ಡಾ.ಬಿ.ಆರ್.ಅಂಬೇಡ್ಕರ್  ಒಂದು ಸಮುದಾಯಕ್ಕೆ ಸೀಮಿತರಲ್ಲ. ಎಲ್ಲರೂ ಅವರು ತೋರಿದ ಮಾರ್ಗದಲ್ಲಿ ಸಾಗಬೇಕು. ಸಂದೇಶದ ಪಾಲನೆಯಾಗಬೇಕು.
-ರಾಜಶೇಖರ ಪಾಟೀಲ,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT