ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಕೊರತೆಯಿಂದ ಕಾಳು ಕಟ್ಟದ ಭತ್ತ

ನಾರಾಯಣಪುರ ಅಣೆಕಟ್ಟೆ ನೀರಿನ ಮಟ್ಟ ಕುಸಿತ
Last Updated 14 ಏಪ್ರಿಲ್ 2017, 9:25 IST
ಅಕ್ಷರ ಗಾತ್ರ

ಲಿಂಗಸುಗೂರು: ರಾಯಚೂರು ಜಿಲ್ಲೆಯ ರೈತರ ಜೀವನಾಡಿ ನಾರಾಯಣಪುರ ಅಣೆಕಟ್ಟೆಯಿಂದ ರೈತರ ಜಮೀನಿಗೆ ಸಮರ್ಪಕ ನೀರು ಹರಿಸದೆ ಹೋಗಿದ್ದರಿಂದ ಬೆಳೆದು ನಿಂತಿದ್ದ ಭತ್ತದ ಬೆಳೆ ನೀರಿನ ಕೊರತೆಯಿಂದಕಾಳು ಕಟ್ಟದೆ ಒಣಗಿ ನಿಂತಿದೆ. ಇದರಿಂದ ರೈತರು ಅಪಾರ ನಷ್ಟಕ್ಕೆ ಒಳಗಾಗಿದ್ದಾರೆ.

ಪ್ರತಿ ವರ್ಷ ನೀರಾವರಿ ಸಲಹಾ ಸಮಿತಿ ನಿರ್ಣಯಿಸಿದ ದಿನಾಂಕಕ್ಕೆ ಹೆಚ್ಚುವರಿ 15ರಿಂದ 20 ದಿನ ಕಾಲುವೆಗೆ ನೀರು ಹರಿಸುತ್ತ ಬರಲಾಗಿತ್ತು. ಅದನ್ನೆ ನಂಬಿದ್ದ ಜಿಲ್ಲೆಯ ಲಿಂಗಸುಗೂರು, ದೇವದುರ್ಗ, ರಾಯಚೂರು ತಾಲ್ಲೂಕು ರೈತರು ಲಕ್ಷಾಂತರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಸೇರಿದಂತೆ ಇತರೆ ಬೆಳೆ ನಾಟಿ ಮಾಡಿಕೊಂಡಿದ್ದರು. ಮಾರ್ಚ್‌ ಅಂತ್ಯಕ್ಕೆ ನೀರು ಸ್ಥಗಿತಗೊಳಿಸಿದ್ದರಿಂದ ಕಾಳು ಕಟ್ಟುವ ಹಂತದಲ್ಲಿ ಬೆಳೆಗಳು ಒಣಗುತ್ತಿವೆ.

ನಾರಾಯಣಪುರ ಬಲದಂಡೆ ನಾಲೆ, ರಾಂಪುರ ಏತ ನೀರಾವರಿ ಯೋಜನೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಕ್ಕೆ ಹೆಚ್ಚುವರಿಯಾಗಿ ಹತ್ತು ದಿನ ನೀರು ಹರಿಸುವಂತೆ ಕಳೆದ ಒಂದು ವಾರದಿಂದ ರೈತರು ಹೋರಾಟ ನಡೆಸುತ್ತ ಬಂದರೂ ಕೂಡ ಜನಪ್ರತಿನಿಧಿಗಳು, ಅಧಿಕಾರಿಗಳ ರಾಜಕೀಯ ಚದುರಂಗದಾಟದಲ್ಲಿ ಬೆಳೆದು ನಿಂತ ಕೋಟ್ಯಂತರ ಮೌಲ್ಯದ ಬೆಳೆ ಹಾಳಾಗಿ ರೈತರನ್ನು ಕಂಗಾಲಾಗುವಂತೆ ಮಾಡಿದೆ.

ಜಮೀನು ಹದಗೊಳಿಸಲು, ಭತ್ತದ ನಾಟಿ, ರಸಗೊಬ್ಬರ ಬಳಕೆ ಇತ್ಯಾದಿಯಾಗಿ ಎಕರೆಗೆ ₹20 ಸಾವಿರ ಖರ್ಚು ಮಾಡಿದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ರೈತರ ಹೋರಾಟಕ್ಕೆ ಸ್ಪಂದನೆ ಸಿಗದೆ ಹೋದಾಗ ಜಾನುವಾರುಗಳನ್ನು ಬಿಟ್ಟು ಮೇಯಿಸುತ್ತಿರುವುದು ಜಿಲ್ಲೆಯಲ್ಲಿ ಕಂಡು ಬರುತ್ತಿದೆ. ಇಂತಹ ಸಂಕಷ್ಟ ಸಮಯದಲ್ಲಿ ಸಹಾಯಕ್ಕೆ ಬರದ ಸರ್ಕಾರಕ್ಕೆ ರೈತರು ಹಿಡಿಶಾಪ ಹಾಕುತ್ತಿದ್ದಾರೆ.

‘ಶಿವನಗೌಡ ನಾಯಕ ನೇತೃತ್ವದಲ್ಲಿ ರೈತ ಮುಖಂಡರು ಹೋರಾಟ ನಡೆಸಿದಾಗ ಯಾವುದೇ ಸ್ಪಂದನೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಒಂದು ಹಂತದಲ್ಲಿ ಸಂಸದ ಬಿ.ವಿ. ನಾಯಕ, ಶಾಸಕರಾದ ಮಾನಪ್ಪ ವಜ್ಜಲ, ಅಣೆಕಟ್ಟೆಗೆ ಭೇಟಿ ನೀಡಿ ಮುಖ್ಯಮಂತ್ರಿಗಳ ಮನವೊಲಿಸುವ ಭರವಸೆ ಹುಸಿಯಾಯಿತು. ಬೆಳೆ ನಷ್ಟದ ಸಮೀಕ್ಷೆ ಮಾಡುವಂತೆ ಒತ್ತಾಯಿಸಿದರೂ ಸ್ಪಂದಿಸುತ್ತಿಲ್ಲ’ ಎಂದು ಶರಣಪ್ಪ ಮಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

‘ನಾರಾಯಣಪುರ ಅಣೆಕಟ್ಟೆ ಕ್ರೆಸ್ಟ್‌ ಗೇಟ್‌ ಎತ್ತಿದರೂ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಜಲಾಶಯ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಹೆಚ್ಚುವರಿ ಕ್ರೆಸ್ಟ್‌ಗೇಟ್‌ಗಳ ಮೂಲಕ 1 ಟಿಎಂಸಿ ನೀರನ್ನು ನದಿ ಮೂಲಕ ಆರ್‌ಟಿಪಿಎಸ್‌ಗೆ ಬಿಟ್ಟಿರುವುದು ರೈತರ ಬಗ್ಗೆ ಮಲತಾಯಿ ಧೋರಣೆ ಅನಿಸರಿಸಿದ್ದು ಸಾಕ್ಷಿಕರಿಸಿದೆ’ ಎಂದು ರೈತ ಸಂಘದ ಹಿರಿಯ ಮುಖಂದ ಅಮರಣ್ಣ ಗುಡಿಹಾಳ ಆರೋಪಿಸಿದರು.

‘ಜಲಾನಯನ ಪ್ರದೇಶದ 152 ಹಳ್ಳಿ ಮತ್ತು ಕೆಲ ಪಟ್ಟಣಗಳ ಕುಡಿವ ನೀರಿಗೆ ಈಗಿರುವ ನೀರು ಬಳಕೆ ಮಾಡಲೇಬೇಕು. ಮೇಲ್ಭಾಗದಿಂದ ಹೆಚ್ಚುವರಿ ನೀರು ಬರದ ಹೊರತು ಕಾಲುವೆಗೆ ನೀರು ಹರಿಸಲು ಸಾಧ್ಯವಿಲ್ಲ.

ಕೆಳಭಾಗದ ಆರ್‌ಟಿಪಿಎಸ್‌ಗೆ ಮಾತ್ರ ನದಿ ತೂಬುಗಳಿಂದ ಅವಶ್ಯಕತೆ ಆಧರಿಸಿ ನೀರು ಹರಸಬಹುದಾಗಿದೆ’ ಎಂದು ಮುಖ್ಯ ಎಂಜಿನಿಯರ್‌ (ಪ್ರಭಾರಿ) ಈರಣ್ಣ ನಗನೂರು ಮಾಹಿತಿ ನೀಡಿದ್ದನ್ನು ಸ್ಮರಿಸಬಹುದಾಗಿದೆ.
-ಬಿ.ಎ. ನಂದಿಕೋಲಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT