ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ವಿಮಾನ ಮಾದರಿಗಳು

ಅಖಿಲ ಭಾರತ ಮಟ್ಟದ ಏರೋ ಚಾಂಪಿಯನ್‌ಶಿಪ್; ಕೌಶಲ ಪ್ರದರ್ಶನ
Last Updated 15 ಏಪ್ರಿಲ್ 2017, 4:51 IST
ಅಕ್ಷರ ಗಾತ್ರ

ತುಮಕೂರು: ‘ವೈಮಾನಿಕ ತಾಂತ್ರಿಕತೆ ಬಗ್ಗೆ ಹೆಚ್ಚಿನ ಜ್ಞಾನ ಕಲ್ಪಿಸುವ ಇಂತಹ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಜ್ಞಾನ ಮತ್ತು ಕುಶಲತೆ ಪ್ರದರ್ಶಿಸುವುದರಿಂದ ವಿಮಾನ ಉದ್ಯಮ (ಏರೋಸ್ಪೇಸ್ ಇಂಡಸ್ಟ್ರೀಸ್‌) ಸೇರಿ ಪ್ರಸಿದ್ಧ ಕೈಗಾರಿಕೆಗಳಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಸಿದ್ದಗಂಗಾಮಠದ ಅಧ್ಯಕ್ಷ ಸಿದ್ದಲಿಂಗಸ್ವಾಮೀಜಿ ಹೇಳಿದರು.

ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಎಸ್ಐಟಿ) ಬೆಂಗಳೂರಿನ ಎಸ್ಎಇ ಇಂಡಿಯಾ ಏರೋಸ್ಪೇಸ್ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ  ಅಖಿಲ ಭಾರತ ಮಟ್ಟದ ಏರೋ ಚಾಂಪಿಯನ್‌ಶಿಪ್ ‘ಮನೋವೇಗಂ–2017’ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

‘ಸೋಲು ಗೆಲುವಿನ ಬಗ್ಗೆ ವಿದ್ಯಾರ್ಥಿಗಳು ಲೆಕ್ಕಾಚಾರ ಮಾಡಬಾರದು. ಗೆಲ್ಲುವುದಕ್ಕೆ ಪ್ರಯತ್ನ ಪಡಬೇಕು. ಈ ರೀತಿಯ ಪ್ರದರ್ಶನ ಇಲ್ಲಿ ಆಯೋಜಿಸಿರುವುದು  ಪ್ರಶಂಸನೀಯ’ ಎಂದು ನುಡಿದರು.

ಮನೋವೇಗಂ ಸಂಚಾಲಕ ದಾಮೋದರನ್ ಸುಬ್ರಹ್ಮಣ್ಯ ಮಾತನಾಡಿ, ‘ಮನೋವೇಗಂ ಸ್ಪರ್ಧೆಯು ಯಾವುದೇ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗಿಂತ ಕಡಿಮೆ ಇಲ್ಲ. ವಿದ್ಯಾರ್ಥಿಗಳಲ್ಲಿನ ತಾಂತ್ರಿಕ ಕುಶಲತೆ ಪ್ರೋತ್ಸಾಹಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ’ ಎಂದು ತಿಳಿಸಿದರು.

ಬೆಂಗಳೂರಿನ ಎಸ್ಎಇ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಜೆ.ಮುನಿರತ್ನಂ ಮಾತನಾಡಿ, ‘ಮಹಾನಗರಗಳಲ್ಲಿ ಇಂತಹ ಪ್ರದರ್ಶನಗಳನ್ನು ಸಂಸ್ಥೆ ಆಯೋಜಿಸುತ್ತದೆ. ಆದರೆ, ಮಹಾನಗರದ ಹೊರಗಡೆ ಕಾಲೇಜುಗಳಲ್ಲಿ ಈ ರೀತಿ ಪ್ರದರ್ಶನ ಆಯೋಜನೆಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕೆ ಸಹಕಾರಿಯಾಗುತ್ತದೆ. ಹೀಗಾಗಿ ಇಲ್ಲ ಪ್ರದರ್ಶನ ಆಯೋಜಿಸಲಾಗಿದೆ’ ಎಂದು ಹೇಳಿದರು.

ಎಸ್ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ಮಾತನಾಡಿ, ‘ಎಚ್ಎಎಲ್ ಮತ್ತು ಇಸ್ರೊ ಸಂಸ್ಥೆಗಳು ತುಮಕೂರು ನಗರಕ್ಕೆ ಆಗಮಿಸುತ್ತಿವೆ. ಇದರಿಂದ ಇಲ್ಲಿ ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಲಭಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು. ಎಸ್ಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಶಿವಕುಮಾರಯ್ಯ, ಹಿಂದ್ ಹೈ ವ್ಯಾಕ್ಯೂಮ್ ಕಂಪೆನಿ ವ್ಯವಸ್ಥಾಪಕ ಪ್ರಶಾಂತ್ ಶಾಖಮುರಿ ಇದ್ದರು.

ತಾಂತ್ರಿಕ ಕೌಶಲ ಪ್ರದರ್ಶನ
‘ಈ ಪ್ರದರ್ಶನದಲ್ಲಿ ದೇಶದ ವಿವಿಧ ರಾಜ್ಯಗಳ ಅನೇಕ ಕಾಲೇಜುಗಳ 29 ತಂಡಗಳು ಭಾಗವಹಿಸಿವೆ. ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ತಾಂತ್ರಿಕ ಜ್ಞಾನ, ಕುಶಲತೆ ಪ್ರದರ್ಶನಕ್ಕೆ ಇಂತಹ ಅವಕಾಶ ಸಿಗುವುದು ಕಡಿಮೆ. ಇದರಲ್ಲಿ ವಿಜೇತರಾದವರಿಗೆ ಒಟ್ಟು ₹ 2 ಲಕ್ಷ ಬಹುಮಾನ ಲಭಿಸಲಿದೆ. ಆಯ್ದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಸಹ ನೀಡಲಾಗುತ್ತದೆ’ ಎಂದು ಜೆ.ಮುನಿರತ್ನಂ  ತಿಳಿಸಿದರು.

ಆಕರ್ಷಕ ಪ್ರದರ್ಶನ
ಎಸ್ಐಟಿ ಮೈದಾನದಲ್ಲಿ ನಡೆದ ವಿದ್ಯಾರ್ಥಿಗಳು ತಯಾರಿಸಿದ ವಿಮಾನ ಮಾದರಿ ಪ್ರದರ್ಶನ ಸಾಕಷ್ಟು ಆಕರ್ಷಕವಾಗಿತ್ತು. ಸ್ಪರ್ಧಿಗಳಲ್ಲಿ ಪೈಪೋಟಿಯ ಉತ್ಸಾಹ ಕಂಡು ಬಂದಿತು.

ಈ ಪ್ರದರ್ಶನ ವೀಕ್ಷಿಸಲು ಕಣ್ಣಲ್ಲಿ ಕಣ್ಣಿಟ್ಟು ನಿಂತಿದ್ದ ತಜ್ಞರು, ಕಾಲೇಜಿನ ಪ್ರಾಧ್ಯಾಪಕರು, ಸಾರ್ವಜನಿಕರು, ಮಕ್ಕಳಲ್ಲಿ ಕುತೂಹಲ ತುಂಬಿತ್ತು. ಒಂದಕ್ಕಿಂತ ಒಂದು ಭಿನ್ನ ವಿಭಿನ್ನವಾಗಿ ಪ್ರದರ್ಶನಗೊಂಡಿದ್ದು  ವಿಶೇಷವಾಗಿತ್ತು. ಮಕ್ಕಳಿಗೆ ಮೋಜು ತಂದರೆ ತಜ್ಞರು, ಅಧ್ಯಾಪಕರು ವಿದ್ಯಾರ್ಥಿಗಳ ಪ್ರತಿಭೆ ಕಂಡು ಚಪ್ಪಾಳೆ ತಟ್ಟಿದರು.

*
ಈ ಪ್ರದರ್ಶನಕ್ಕೆ ಬರಲು ಎರಡು ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದೇವೆ. ‘ನೈಟ್ ಹಾಕ್’ ಎಂಬ ವಿಮಾನ ಮಾದರಿಯನ್ನು ಇಲ್ಲಿ ಪ್ರದರ್ಶಿಸಿದ್ದೇನೆ.
-ಸಂಜನಾ, ವಿದ್ಯಾರ್ಥಿನಿ, ಜೆಎಸ್‌ಎಸ್ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT