ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭ

ಅಂಬೇಡ್ಕರ್– ಜಗಜೀವನರಾಂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಟಿ.ಬಿ.ಜಯಚಂದ್ರ
Last Updated 15 ಏಪ್ರಿಲ್ 2017, 4:58 IST
ಅಕ್ಷರ ಗಾತ್ರ

ತುಮಕೂರು: ‘ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಜಿಲ್ಲೆಯಲ್ಲಿ 25 ವಸತಿ ಶಾಲೆಗಳನ್ನು ಹೋಬಳಿ ಮಟ್ಟದಲ್ಲಿ ಸರ್ಕಾರ ಪ್ರಾರಂಭಿಸಲಿದೆ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ ಹಾಗೂ ಡಾ.ಬಾಬು ಜಗಜೀವನರಾಮ್ ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಅಂಬೇಡ್ಕರ್‌ ಹೆಸರಿನ 100 ವಸತಿ ಶಾಲೆಗಳು ಪ್ರಾರಂಭವಾಗಲಿವೆ’ ಎಂದು ಹೇಳಿದರು. ‘ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಪಾದಿಸಿದ ಸರ್ವರಿಗೂ ಸಮಬಾಳು, ಸಮಪಾಲು ಆಶಯ ಸಂಪೂರ್ಣ ಸಾಕಾರಗೊಂಡಿಲ್ಲ. ಸಮಪಾಲು ಎಲ್ಲರಿಗೂ ಸಿಕ್ಕಿಲ್ಲ’ ಎಂದು ಹೇಳಿದರು.

‘ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರು ದೇಶ ಕಂಡ ಮಹಾನ್ ನಾಯಕರು. ಅವರ ಸ್ಮರಣೆಗಾಗಿ ನಗರದಲ್ಲಿ ಅಂದಾಜು ₹ 15 ಕೋಟಿ ಮೊತ್ತದಲ್ಲಿ ಜಗಜೀವನರಾಂ ಭವನ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಹೇಳಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ‘ಡಾ.ಅಂಬೇಡ್ಕರ್ ಅವರ ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜದಲ್ಲಿ ಸಮಾನತೆ ಇರಬೇಕು ಎಂಬ ಅವರ ಕನಸನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನನಸು ಮಾಡಬೇಕು’ ಎಂದು ನುಡಿದರು.

‘ಈ ದೇಶ ಕಂಡ ಮತ್ತೊಬ್ಬ ಮಹಾನ್ ನಾಯಕ ಡಾ.ಬಾಬು ಜಗಜೀವನರಾಂ. ದೇಶ ಆಹಾರ ಸ್ವಾವಲಂಬನೆ ಸಾಧಿಸಲು ಅವರೇ ಕಾರಣರಾಗಿದ್ದಾರೆ’ ಎಂದು ವಿವರಿಸಿದರು.

ಅಂಬೇಡ್ಕರ್ ಬಗ್ಗೆ ಉಪನ್ಯಾಸ ನೀಡಿದ ವಿಮರ್ಶಕ ಡಾ.ರವಿಕುಮಾರ್ ನೀಹ,‘ಅಂಬೇಡ್ಕರ್ ಅವರು ಕೇವಲ ದಲಿತರ, ದಮನಿತ ಸಮುದಾಯದ ನಾಯಕರಲ್ಲ. ಅವರು ವಿಶ್ವಮಾನವರಾಗಿದ್ದಾರೆ. ಆದರೆ, ಅವರ ವ್ಯಕ್ತಿತ್ವವನ್ನು ಸಂಕುಚಿತ ಅರ್ಥದಲ್ಲಿ ಕಟ್ಟಿಕೊಡಲಾಗಿದೆ. ಮಹಾತ್ಮ ಗಾಂಧೀಜಿಯವರಿಗಿಂತ ಅಂಬೇಡ್ಕರ್ ಅವರು ಮಹಾನ್ ಅಹಿಂಸಾವಾದಿಯಾಗಿದ್ದರು’ ಎಂದರು.

ಡಾ.ಬಾಬು.ಜಗಜೀವನರಾಂ ಅವರ ಬಗ್ಗೆ ಉಪನ್ಯಾಸ ನೀಡಿದ ಮೈಸೂರು ಮಹಾರಾಜ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್.ತಿಮ್ಮರಾಯಪ್ಪ, ‘ಕೃಷಿ, ಕಾರ್ಮಿಕ, ಸಂಪರ್ಕ, ಸಾರಿಗೆ– ಹೀಗೆ ಅನೇಕ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ ಜಗಜೀವನರಾಮ್‌ ಅವರು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ’ ಎಂದರು.

‘ಮೈಸೂರು ವಿಶ್ವವಿದ್ಯಾಲಯವು  ಜಗಜೀವನರಾಮ್ ಅವರ ಜೀವನ ಕುರಿತು 12 ಸಂಪುಟಗಳನ್ನು ಪ್ರಕಟಿಸಿದೆ.  ಜಗಜೀವನರಾಂ ಅವರ 2500ಕ್ಕೂ ಹೆಚ್ಚು ಭಾಷಣಗಳನ್ನು ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸುತ್ತಿದೆ’ ಎಂದು ತಿಳಿಸಿದರು.

ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಸ್.ಲೋಕೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಂ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಹರಳಯ್ಯಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ,ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಉಪವಿಭಾಗಾಧಿಕಾರಿ ತಬುಸಮ್ ಜಹೇರಾ ವೇದಿಕೆಯಲ್ಲಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಜಿ.ಪಿ.ದೇವರಾಜ್ ಸ್ವಾಗತಿಸಿದರು.

ಪೂಜೆ ಪುನಸ್ಕಾರ ಮಾಡುವುದು ಬಿಡಿ
‘ಅಂಬೇಡ್ಕರ್ ಅವರ ಜನ್ಮದಿನಾಚರಣೆ ದಿನ ಸಂಘಟಕರು ಪೂಜೆ, ಪುನಸ್ಕಾರ ಮಾಡುವುದು ಬಿಡಬೇಕು. ಈ ವೇದಿಕೆಯಲ್ಲಿ ಗಣೇಶನ ಹಾಡು ಹಾಕಿ, ಚಿತ್ರ ತೋರಿಸುವುದರಲ್ಲಿ ಅರ್ಥವಿಲ್ಲ. ಅಂಬೇಡ್ಕರ್ ಅವರ ಚಿಂತನೆ ಜನಮನ ಮುಟ್ಟಿಸುವ ಪ್ರಯತ್ನ ಮಾಡಬೇಕು’ ಎಂದು ರವಿಕುಮಾರ್ ನೀಹ ತಿಳಿಸಿದರು.

ಕಾರ್ಯಕ್ರಮ ಉದ್ಘಾಟನೆ ಬಳಿಕ ಸಾಗರ ನೃತ್ಯ ತಂಡ ಗಣೇಶನ ಹಾಡಿನೊಂದಿಗೆ ನೃತ್ಯ ಪ್ರದರ್ಶನ ಮಾಡಿದ್ದು, ಹಾಗೆಯೇ ಅತಿಥಿಗಳು ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದ್ದನ್ನು ಮೊದಲೇ ಕಂಡಿದ್ದ ರವಿಕುಮಾರ್ ಬಳಿಕ ತಮ್ಮ ಭಾಷಣದಲ್ಲಿ ಅದನ್ನು ಖಂಡಿಸಿದರು.

ಭಾವಚಿತ್ರಗಳ ಅದ್ಧೂರಿ ಮೆರವಣಿಗೆ
ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಾ.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರ ಭಾವಚಿತ್ರ ಮೆರವಣಿಗೆಗೆ ಶಾಸಕ ರಫೀಕ್ ಅಹಮ್ಮದ್ ಚಾಲನೆ ನೀಡಿದರು.

ಮೆರವಣಿಗೆಯು ಎಂ.ಜಿ.ರಸ್ತೆ, ಟೌನ್ ಹಾಲ್ ವೃತ್ತ, ಅಶೋಕ ರಸ್ತೆ ಮಾರ್ಗವಾಗಿ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರ ತಲುಪಿತು. ಗೊಂಬೆ ಕುಣಿತ ಮತ್ತು ವಾದ್ಯ ಕಲಾ ತಂಡಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT