ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆಗೆ ಲಕ್ಷಗಟ್ಟಲೇ ಆಸ್ತಿ ತೆರಿಗೆ ನಷ್ಟ

ಮೂಲಸೌಕರ್ಯ ಕಲ್ಪಿಸದವರಿಗೆ ಏಕೆ ಕಂದಾಯ ಕಟ್ಟಬೇಕೆಂದು ಪ್ರಶ್ನಿಸುವ ಎಪಿಎಂಸಿ, ವರ್ತಕರು
Last Updated 15 ಏಪ್ರಿಲ್ 2017, 5:11 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಆಸ್ತಿ ತೆರಿಗೆ ಪಾವತಿ ವಿಚಾರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮತ್ತು ಅಲ್ಲಿನ ವರ್ತಕರು ಹಾಗೂ ನಗರಸಭೆಗೆ ಮಧ್ಯ ನಡೆದಿರುವ ಜಟಾಪಟಿ ಇನ್ನೂ ಮುಗಿದಿಲ್ಲ. ಇದರಿಂದಾಗಿ ತನಗೆ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗುತ್ತಿದೆ ನಗರಸಭೆ ಹೇಳುತ್ತಿದೆ.

ಎಪಿಎಂಸಿ ಪ್ರಾಂಗಣ ನಗರಸಭೆಯ ವ್ಯಾಪ್ತಿಯೊಳಗಿದೆ. ಹೀಗಾಗಿ ಎಪಿಎಂಸಿ ಮತ್ತು ವರ್ತಕರು ಆಸ್ತಿ ತೆರಿಗೆ ಕಟ್ಟಲೇ ಬೇಕು ಎಂದು ನಗರಸಭೆ ಅಧಿಕಾರಿಗಳು ಪ್ರತಿಪಾದಿಸುತ್ತಾರೆ.

‘ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಚರಂಡಿ ನಿರ್ವಹಣೆ, ಸ್ವಚ್ಛತೆಯಂತಹ ಮೂಲಸೌಕರ್ಯ ಸೇವೆಯನ್ನು ಒದಗಿಸದೆ ಇರುವವರಿಗೆ ನಾವು ಏಕೆ ತೆರಿಗೆ ಕಟ್ಟಬೇಕು’ ಎಂದು ಎಪಿಎಂಸಿ ಅಧ್ಯಕ್ಷರು ಮತ್ತು ವರ್ತಕರು ಪ್ರಶ್ನಿಸುತ್ತ ಬರುತ್ತಿದ್ದಾರೆ.

ಹೀಗಾಗಿ ಮಾರುಕಟ್ಟೆ ಅಸ್ತಿತ್ವಕ್ಕೆ ಬಂದಂದಿನಿಂದ ಈವರೆಗೆ ನಗರಸಭೆಗೆ ಎಪಿಎಂಸಿಯಿಂದ ಒಂದೇ ಒಂದು ಪೈಸೆ ತೆರಿಗೆ ಸಂದಾಯವಾಗಿಲ್ಲ. ಆಸ್ತಿ ತೆರಿಗೆ ವಿಚಾರವಾಗಿ ನಗರಸಭೆಯ ಅಧಿಕಾರಿಗಳು ಎಪಿಎಂಸಿಗೆ ಅನೇಕ ಬಾರಿ ಪತ್ರಗಳನ್ನು ಬರೆದರೂ ಪ್ರಯೋಜನವಾಗಿಲ್ಲ.

‘ನಗರಸಭೆಗೆ ಎಪಿಎಂಸಿ ಒಂದರಿಂದಲೇ ಸುಮಾರು ₹ 2 ಕೋಟಿಯಷ್ಟು ತೆರಿಗೆ ಬಾಕಿ ಬರಬೇಕು. ಅದನ್ನು ವಸೂಲಿ ಮಾಡಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಸಂಪನ್ಮೂಲ ಕ್ರೋಡೀಕರಣದಲ್ಲಿ ಕಂದಾಯ ವಿಭಾಗ ಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿ ಕಂದಾಯ ಅಧಿಕಾರಿಗಳು ಆ ಬಾಕಿ ವಸೂಲಿ ಮಾಡಿದರೆ ನಗರದ ಅಭಿವೃದ್ಧಿಗೆ, ಬಡವರ ಕಲ್ಯಾಣ ಕಾರ್ಯಗಳಿಗೆ ಬಳಸಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ನಗರಸಭೆ ಸದಸ್ಯ ಎಸ್.ಎಂ.ರಫೀಕ್.

‘ಎಪಿಎಂಸಿ ಕೂಡ ಸರ್ಕಾರದ ಒಂದು ಅಂಗ. ನಾವು ನಮ್ಮದೇ ನಿಧಿಯಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಸ್ವಚ್ಛತೆ ಕಾರ್ಯ ನಿರ್ವಹಿಸುತ್ತ ಬರುತ್ತಿದ್ದೇವೆ. ಈವರೆಗೆ ನಾವು ಯಾವುದೇ ಕೆಲಸಕ್ಕೂ ನಗರಸಭೆಯನ್ನು ಅವಲಂಬಿಸಿಲ್ಲ. ನಗರಸಭೆ ನಮಗೆ ಮೂಲಸೌಕರ್ಯ ಒದಗಿಸಿಕೊಟ್ಟರೆ ತಾನೇ ನಾವು ಕಂದಾಯ ಕಟ್ಟಬೇಕಾದ್ದದ್ದು’ ಎಂದು ಪ್ರಶ್ನಿಸುತ್ತಾರೆ ಎಪಿಎಂಸಿ ಅಧ್ಯಕ್ಷ ಎಚ್‌.ವಿ.ಗೋವಿಂದಸ್ವಾಮಿ.

‘ಎಪಿಎಂಸಿ ಪ್ರಾಂಗಣಕ್ಕೆ ಕುಡಿಯುವ ನೀರು ಪೂರೈಸಿ ಎಂದು ಇತ್ತೀಚೆಗೆ ನಗರಸಭೆ ಆಯುಕ್ತರಿಗೆ ಕೇಳಿಕೊಂಡರೆ ₹ 60 ಲಕ್ಷ ತೆರಿಗೆ ಬಾಕಿ ಪಾವತಿಸಿ ನೀರು ಕೊಡುತ್ತೇವೆ ಎಂದು ಹೇಳುತ್ತಾರೆ. ನಮ್ಮಲ್ಲಿ ಹಿಂದಿನಿಂದಲೂ ತೆರಿಗೆ ಕಟ್ಟಿಕೊಂಡು ಬಂದಿಲ್ಲ. ಈಗ ಏಕೆ ನಾವು ಕೊಡಬೇಕು. ಜಿಲ್ಲಾಡಳಿತ ಭವನದಿಂದ ನಗರಸಭೆ ತೆರಿಗೆ ಸಂಗ್ರಹ ಮಾಡುತ್ತದೆಯೇ’ ಎನ್ನುವುದು ಅವರ ವಾದ.

‘ಯಾರು ಏನೇ ಹೇಳಲಿ. ತನ್ನ ವ್ಯಾಪ್ತಿಯಲ್ಲಿರುವ ಪ್ರತಿ ಆಸ್ತಿಯಿಂದ ತೆರಿಗೆ ವಸೂಲಿ ಮಾಡುವ ಹಕ್ಕು ನಗರಸಭೆಗೆ ಇದೆ. ಹೀಗಾಗಿ ಎಪಿಎಂಸಿ ಮತ್ತು ವರ್ತಕರು ತೆರಿಗೆ ಕಟ್ಟಲೇ ಬೇಕು. ಬೇಕಿದ್ದರೆ ಅವರು ಮೂಲಸೌಕರ್ಯ ಒದಗಿಸಿ ಎಂದು ಕೇಳಲಿ ಆದರೆ ತೆರಿಗೆ ಕಟ್ಟಲಾಗದು ಎಂದು ಹೇಳಿದರೆ ಒಪ್ಪಲಾಗದು. ನಗರದ ಸಮಗ್ರ ಅಭಿವೃದ್ಧಿಗೆ ಸಂಪನ್ಮೂಲ ಸಂಗ್ರಹವಾಗಬೇಕಾದರೆ ತೆರಿಗೆ ಮುಖ್ಯ ಪಾತ್ರ ವಹಿಸುತ್ತದೆ’ ಎಂದು ನಗರಸಭೆ ಸದಸ್ಯ ಕಿಸಾನ್ ಕೃಷ್ಣಪ್ಪ ಹೇಳಿದರು.

‘ಎಪಿಎಂಸಿಯಲ್ಲಿ ವರ್ತಕರಿಗೆ ಸೇರಿದ ಸುಮಾರು 150 ಮಳಿಗೆಗಳಿವೆ. ನಗರಸಭೆಯವರು ಬೇಕಿದ್ದರೆ ವರ್ತಕರಿಂದ ತೆರಿಗೆ ವಸೂಲಿ ಮಾಡಲಿ. ಅವರಿಗೆ ಮೂಲಸೌಕರ್ಯ ಒದಗಿಸಲಿ. ನಾವು ಸುಮಾರು 10 ಮಳಿಗೆಗಳಿಂದ ಬಾಡಿಗೆ ವಸೂಲಿ ಮಾಡುತ್ತಿದ್ದೇವೆ. ಅದಕ್ಕೆ ಸಂಬಂಧಿಸಿದ ತೆರಿಗೆಯನ್ನು ಬೇಕಾದರೆ ನಾವು ಕಟ್ಟುತ್ತೇವೆ’ ಎಂದು ಎಪಿಎಂಸಿ ಕಾರ್ಯದರ್ಶಿ ಸಿ.ರಾಮದಾಸ್ ತಿಳಿಸಿದರು.

‘2002–03ರ ವರೆಗೆ ₹ 13 ಲಕ್ಷ ಎಪಿಎಂಸಿಯ ಆಸ್ತಿ ತೆರಿಗೆ ಬಾಕಿ ಬರಬೇಕಿದೆ. ಜತೆಗೆ 2003ನೇ ಸಾಲಿನಿಂದ ಜಾರಿಗೆ ತಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಯೋಜನೆಯಡಿ ವರ್ತಕರು ತಮ್ಮ ಆಸ್ತಿಯ ತೆರಿಗೆಯನ್ನು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಆದರೆ ವರ್ತಕರು ಈವರೆಗೆ ಘೋಷಣೆ ಮಾಡಿಕೊಂಡಿಲ್ಲ. ಆದ್ದರಿಂದ ಶೀಘ್ರದಲ್ಲಿ ನಾವೇ ಮಾರುಕಟ್ಟೆಗೆ ಭೇಟಿ ನೀಡಿ ಆಸ್ತಿ ಅಳತೆಯ ಆಧಾರದಲ್ಲಿ ತೆರಿಗೆ ನಿಗದಿ ಮಾಡುತ್ತೇವೆ’ ಎಂದು ನಗರಸಭೆ ಆಯುಕ್ತ ಉಮಾಕಾಂತ್ ಹೇಳಿದರು.

ಸೌಲಭ್ಯ ಕೊಟ್ಟು ಕಂದಾಯ ಕೇಳಲಿ
‘ನಗರಸಭೆಯವರು ಮೊದಲು ಎಪಿಎಂಸಿಗೆ ಕುಡಿಯುವ ನೀರು ಪೂರೈಸಲಿ. ನಂತರ ಬೇಕಾದರೆ ಬೀದಿದೀಪ ಅಳವಡಿಸುವುದು, ಚರಂಡಿ ಸ್ವಚ್ಛತೆ ಮಾಡಲಿ. ಆ ಕೆಲಸವನ್ನು ಅವರು ಮಾಡುತ್ತಿಲ್ಲ. ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ವಿ.ಮಂಜುನಾಥ್ ಅವರು ಎಪಿಎಂಸಿಗೆ ಭೇಟಿ ನೀಡಿದ ವೇಳೆ 15 ದಿನಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರೂ ಅದು ಈವರೆಗೆ ಈಡೇರಿಲ್ಲ. ಇದನ್ನೆಲ್ಲ ಯಾರು ಹೇಳುತ್ತಾರೆ’ ಎಂದು ಪ್ರಶ್ನಿಸುತ್ತಾರೆ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಕೆ.ವಿ.ಶ್ರೀನಿವಾಸ್ ರೆಡ್ಡಿ.

ಎಷ್ಟು ಬಾಕಿ ಇದೆ?
ನಗರಸಭೆ ಸದಸ್ಯ ಎಸ್.ಎಂ.ರಫೀಕ್ ಎಪಿಎಂಸಿ ಮತ್ತು ವರ್ತಕರಿಂದ  ₹ 2 ಕೋಟಿ ಆಸ್ತಿ ತೆರಿಗೆ ವಸೂಲಾಗಬೇಕಿದೆ ಎನ್ನುತ್ತಾರೆ. ಇನ್ನೊಂದೆಡೆ ಎಪಿಎಂಸಿ ಅಧ್ಯಕ್ಷ ಗೋವಿಂದಸ್ವಾಮಿ ಅವರು ನಗರಸಭೆ ಆಯುಕ್ತರು ₹ 60 ಲಕ್ಷ ಬಾಕಿ ಕಟ್ಟಲು ಹೇಳಿದ್ದಾರೆ ಎಂದು ತಿಳಿಸುತ್ತಾರೆ. ನಗರಸಭೆಯ ಕಂದಾಯ ವಿಭಾಗದವರು 2002–03ರ ವರೆಗೆ ₹ 13 ಲಕ್ಷ ಬಾಕಿ ಇದೆ. 2003ರಿಂದ ಈವರೆಗೆ ಎಷ್ಟು ತೆರಿಗೆ ಬರಬೇಕಿದೆ ಎನ್ನುವ ಮಾಹಿತಿ ಕಲೆ ಹಾಕಿಲ್ಲ ಎನ್ನುತ್ತಾರೆ. ಹೀಗಾಗಿ ಒಟ್ಟಾರೆ ಎಷ್ಟು ತೆರಿಗೆ ಬಾಕಿ ಇದೆ ಎನ್ನುವ ನಿಖರ ಮಾಹಿತಿ ಲಭ್ಯವಾಗಿಲ್ಲ.

*
ನಗರಸಭೆಗೆ ಆಸ್ತಿ ತೆರಿಗೆ ನೀಡುವುದಿಲ್ಲ ಎನ್ನುವವರ ವಿರುದ್ಧ ಕರ್ನಾಟಕ ಪುರಸಭೆ ಕಾಯ್ದೆ ಅಡಿ ಕ್ರಮಕೈಗೊಳ್ಳಲು ನಮಗೆ ಅಧಿಕಾರವಿದೆ.
-ಉಮಾಕಾಂತ್,
ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT