ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ಒಡಲು ಖಾಲಿ; ಗದ್ದೆಯತ್ತ ಮೊಸಳೆ!

Last Updated 15 ಏಪ್ರಿಲ್ 2017, 7:55 IST
ಅಕ್ಷರ ಗಾತ್ರ

ಬಾಗಲಕೋಟೆ:  ಜಿಲ್ಲೆಯಲ್ಲಿ ಒಂದೆಡೆ ಬರಿದಾದ ನದಿಯ ಒಡಲು, ಇನ್ನೊಂದೆಡೆ ಬಿರು ಬಿಸಿಲ ಝಳದಿಂದ ಕಂಗೆಟ್ಟ ಮೊಸಳೆಗಳು ತಂಪು ಅರಸಿ ಆಸುಪಾಸಿನ ಕಬ್ಬಿನ ಗದ್ದೆಗಳಿಗೆ ಬರುತ್ತಿವೆ. ಇದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಿಂದ ಹೊರಗೆ ಬಂದು ಕಬ್ಬಿನ ಗದ್ದೆಗಳಲ್ಲಿ ಆಶ್ರಯ ಪಡೆದಿದ್ದ 10 ಮೊಸಳೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಒಂದೂವರೆ ತಿಂಗಳಲ್ಲಿ ರಕ್ಷಿಸಿದ್ದಾರೆ.

ಕಳೆದ 13 ದಿನಗಳಲ್ಲಿ ಬೀಳಗಿ ತಾಲ್ಲೂಕಿನಲ್ಲಿಯೇ ನಾಲ್ಕು ಮೊಸಳೆಗಳು ಸೆರೆಸಿಕ್ಕಿವೆ. ಏಪ್ರಿಲ್‌ 2 ಹಾಗೂ 7ರಂದು ಹಳೇ ಟಕ್ಕಳಕಿ ಬಳಿ ಕೃಷ್ಣಾ               ನದಿಯಲ್ಲಿ ನೀರು ಖಾಲಿಯಾದ ಕಾರಣ ಕಬ್ಬಿನ ಗದ್ದೆಗೆ ಬಂದಿದ್ದ ಎರಡು ಮೊಸಳೆಗಳನ್ನು ವಲಯ ಅರಣ್ಯಾಧಿಕಾರಿ ಹನುಮಂತ ಡೋಣಿ ನೇತೃತ್ವದ ಸಿಬ್ಬಂದಿ ರಕ್ಷಿಸಿದ್ದಾರೆ. ಟಕ್ಕಳಕಿಯ ಮುದುಕಪ್ಪ ಮನಗೂಳಿ ಎಂಬುವವರ ಗದ್ದೆಗೆ ಬಳಿ ಈ ಮೊಸಳೆ ಬಂದಿದ್ದವು.

ಇದೇ 11ರಂದು ಕುಂದರಗಿಯಲ್ಲಿ ಘಟಪ್ರಭಾ ನದಿಯಿಂದ ಗದ್ದೆಯತ್ತ ಬಂದಿದ್ದ 9 ಅಡಿ ಉದ್ದ 300 ಕೆ.ಜಿ ತೂಕದ ಬೃಹತ್‌ ಗಾತ್ರದ ಮೊಸಳೆ ಸೆರೆ ಸಿಕ್ಕಿದೆ. ಗುರುವಾರ ಶಿರಗುಪ್ಪಿ ಬಳಿ ಮತ್ತೊಂದು ಮೊಸಳೆ ಹಿಡಿಯಲಾಗಿದೆ.

ಮುಧೋಳ ತಾಲ್ಲೂಕು ಬುದ್ನಿಯಲ್ಲಿ ಒಂದು, ಜಾಲಿಬೇರು ಗ್ರಾಮದ ಬಳಿ ಎರಡು ಹಾಗೂ ರೂಗಿಯ ಜಮೀನೊಂ ದರಲ್ಲಿ ಆಶ್ರಯ ಪಡೆದಿದ್ದ ಮೊಸಳೆ ಯೊಂದನ್ನು ಕಳೆದ ಒಂದೂವರೆ ತಿಂಗ ಳಲ್ಲಿ ರಕ್ಷಿಸಿ ಆಲಮಟ್ಟಿ  ಜಲಾಶಯದ ಹಿನ್ನೀರಿಗೆ ಬಿಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದರು.

ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲು ಹಾಗೂ ನಂದಿಕೇಶ್ವರ ಬಳಿ ಎರಡು ಮೊಸಳೆಗಳನ್ನು ರಕ್ಷಿಸಲಾಗಿದೆ. ನಂದಿ ಕೇಶ್ವರ ಬಳಿ ಮೊಸಳೆ ರೈತ ರೊಬ್ಬರ ಮೇಲೆ ದಾಳಿಮಾಡಿದ್ದು, ಕಾಲಿಗೆ ಗಾಯವಾಗಿದ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು  ಆರ್‌ಎಫ್‌ಒ ಆರ್‌.ಎಸ್‌. ಪ್ಯಾಟಿಗೌಡ್ರ ಹೇಳಿದರು.

ನದಿ ಪಾತ್ರದಲ್ಲಿ ಇಲ್ಲವೇ ಆಸುಪಾಸಿನಲ್ಲಿ ಬಿಲ ತೋಡಿಕೊಂಡು ಮೊಸಳೆಗಳು ಅದರೊಳಗೆ ತಿಂಗಳು ಗಟ್ಟಲೇ ಆಹಾರ ಸೇವಿಸದೇ ಇದ್ದು ಬಿಡುತ್ತವೆ. ಆದರೆ ಅಲ್ಲಿ ತೇವಾಂಶ ಇರಬೇಕು. ಶೀತರಕ್ತ ಹೊಂದಿರುವ ಮೊಸಳೆಗಳಿಗೆ ನೀರಿನ ಸಾಂಗತ್ಯ ಅತ್ಯಗತ್ಯ. ಈ ಬಾರಿ ನದಿ ಪಾತ್ರ ಗಳು ಸಂಪೂರ್ಣ ಬರಿ ದಾಗಿದ್ದು, ಒಣ ಗಿವೆ. ಹಸಿ ನೆಲ  ನೀರು ಹುಡುಕಿ ಕೊಂಡು ಕಬ್ಬಿನ ಗದ್ದೆಗಳತ್ತ ಬರುತ್ತಿವೆ ಎಂದು ಬೀಳಗಿ ವಲಯ ಅರಣ್ಯಾಧಿಕಾರಿ ಹನುಮಂತ ಡೋಣಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT