ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ಜನರಿಗೆ ಗಾಯ:ವಿಧ್ವಂಸಕ ಕೃತ್ಯ ಶಂಕೆ

ಹಳಿ ತಪ್ಪಿದ ರಾಜ್ಯ ರಾಣಿ ಎಕ್ಸ್‌ಪ್ರೆಸ್‌ ರೈಲು l ಮೂರು ಅಡಿ ಉದ್ದದಷ್ಟು ಹಳಿ ನಾಪತ್ತೆ
Last Updated 15 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಮೀರಠ್‌ನಿಂದ ಲಖನೌಗೆ ಹೊರಟಿದ್ದ ರಾಜ್ಯ ರಾಣಿ ಎಕ್ಸ್‌ಪ್ರೆಸ್‌ ರೈಲಿನ ಎಂಟು ಬೋಗಿಗಳು ಉತ್ತರಪ್ರದೇಶದ ರಾಂಪುರ ನಿಲ್ದಾಣಕ್ಕೆ ಸಮೀಪದಲ್ಲಿ ಶನಿವಾರ ಬೆಳಿಗ್ಗೆ ಹಳಿತಪ್ಪಿದ್ದರಿಂದ ಹದಿನೈದು ಜನರು ಗಾಯಗೊಂಡಿದ್ದಾರೆ.
 
ಆದರೆ, ಇಬ್ಬರು  ಮಾತ್ರ ಗಾಯಗೊಂಡಿದ್ದಾರೆ ಎಂದು ರೈಲ್ವೆ ಇಲಾಖೆ ಹೇಳಿದೆ.ಕೋಸಿ ನದಿ ಸೇತುವೆಗೆ ಸಮೀಪದ ಮುಂಡಪಾಂಡೆ ಮತ್ತು ರಾಂಪುರ ರೈಲು ನಿಲ್ದಾಣಗಳ ನಡುವೆ ಘಟನೆ ನಡೆದಿದ್ದು, ಕಳೆದ ಆರು ತಿಂಗಳಲ್ಲಿ ನಡೆದ ಐದನೇ ದುರಂತ ಇದಾಗಿದೆ.
 
ರೈಲು ಹಳಿ ತಪ್ಪಿದ್ದರಿಂದ ಇದೇ ಮಾರ್ಗದ 25ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೂ ತೊಂದರೆಯಾಯಿತು. ಪ್ರಯಾಣಿಕರಿಗೆ ಊರುಗಳಿಗೆ ತೆರಳಲು ಬಸ್ಸುಗಳ ವ್ಯವಸ್ಥೆ ಮಾಡಲಾಯಿತು ಎಂದು ಉತ್ತರ ರೈಲ್ವೆ ವಕ್ತಾರ ನೀರಜ್‌ ಶರ್ಮಾ ಅವರು ತಿಳಿಸಿದ್ದಾರೆ.
 
ಪರಿಹಾರ ಘೋಷಣೆ: ಕೇಂದ್ರ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ಗಾಯ ಗೊಂಡವರಿಗೆ  ₹ 50 ಸಾವಿರ ಪರಿಹಾರ ಘೋಷಿಸಿದ್ದಾರೆ. ಘಟನೆಯನ್ನು ತನಿಖೆಗೆ ಆದೇಶಿಸಿದ್ದು, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಚಿವರು ನೀಡಿದ್ದಾರೆ. 
 
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವವರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರೂ ₹ 50 ಸಾವಿರ ಮತ್ತು ಸಣ್ಣ ಪುಟ್ಟ ಗಾಯಗಳಾಗಿರುವವರಿಗೆ ₹ 25 ಸಾವಿರ ಪರಿಹಾರ ಘೋಷಿಸಿದ್ದಾರೆ.
 
ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿವೆ. ಪ್ರಯಾಣಿಕರು ಮತ್ತು ಅವರ ಸಂಬಂಧಿಗಳ ನಡುವಿನ ಸಂಪರ್ಕ ಕ್ಕಾಗಿ ವಿವಿಧ ರೈಲು ನಿಲ್ದಾಣಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. 
***
ಎನ್‌ಐಎ ತನಿಖೆ
‘ರೈಲು ಬೋಗಿಗಳು ಹಳಿ ತಪ್ಪಿರುವ ಸ್ಥಳದಲ್ಲಿ ಮೂರು ಅಡಿ ಉದ್ದದಷ್ಟು ಹಳಿ ನಾಪತ್ತೆಯಾಗಿದ್ದು, ದುಷ್ಕರ್ಮಿಗಳು ವಿಧ್ವಂಸಕ ಕೃತ್ಯ ಎಸಗಲು ಯೋಜಿಸಿರುವ ಸಾಧ್ಯತೆ ಇದೆ’ ಎಂದು ರಾಂಪುರ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಕೆ. ಚೌಧರಿ ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವಿಧ್ವಂಸಕ ಕೃತ್ಯದ ಬಗ್ಗೆ ಶಂಕೆ ಇರುವ ಕಾರಣ ಭಯೋತ್ಪಾದನಾ ನಿಗ್ರಹ ದಳದಿಂದ ತನಿಖೆ ನಡೆಸಲಾಗುತ್ತಿದೆ’  ಎಂದು ಮಾಹಿತಿ ನೀಡಿದರು.

‘ಪ್ರತಿ ಎರಡು ತಿಂಗಳುಗಳಿಗೊಮ್ಮೆ ಅಲ್ಟ್ರಾಸಾನಿಕ್‌ ತಂತ್ರಜ್ಞಾನದ ಮೂಲಕ ರೈಲು ಹಳಿ ತಪಾಸಣೆ ನಡೆಸಲಾಗುತ್ತದೆ. ಅಂತೆಯೇ ಕಳೆದ ಫೆಬ್ರುವರಿ 27ರಂದು ಪರೀಕ್ಷೆ ನಡೆಸಲಾಗಿತ್ತು. ಆಗ ಯಾವುದೇ ದೋಷ ಕಂಡುಬಂದಿರಲಿಲ್ಲ.
 
ರಾಜ್ಯ ರಾಣಿ ಎಕ್ಸ್‌ಪ್ರೆಸ್‌ ರೈಲಿಗೂ ಮೊದಲು ಐದು ರೈಲುಗಳು ಇದೇ ಮಾರ್ಗವಾಗಿ ಚಲಿಸಿವೆ. ತೊಂದರೆ ಇರುವ ಬಗ್ಗೆ ಸಂಬಂಧಪಟ್ಟ ವರು ಯಾರೂ ದೂರು ನೀಡಿಲ್ಲ. ಆದಕಾರಣ ವಿಧ್ವಂಸಕ ಕೃತ್ಯದ ವಿಚಾರವನ್ನು ತಳ್ಳಿ ಹಾಕುವಂತಿಲ್ಲ.  ತನಿಖೆಯ ನಂತರವೇ ಸತ್ಯಾಂಶ ಗೊತ್ತಾಗಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT