ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ: ಜಂಟಿ ಸಮೀಕ್ಷೆ ನಡೆಸಲು ಆದೇಶ

Last Updated 16 ಏಪ್ರಿಲ್ 2017, 7:37 IST
ಅಕ್ಷರ ಗಾತ್ರ

ಹರಪನಹಳ್ಳಿ:  ‘ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಕ್ಕೆ ಮಂಜೂರಾಗಿರುವ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಖಾಸಗಿ ಕಂಪೆನಿಗಳು ಪವನ ವಿದ್ಯುತ್‌ ಯಂತ್ರಗಳನ್ನು ಅಳವಡಿಸಿರುವ ದೂರು ಇದೆ. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಈ ಜಮೀನಿನ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ಸೂಚಿಸಿದರು.

ತಾಲ್ಲೂಕಿನ ಕಾಮಭಟ್ರಹಳ್ಳಿ ಮತ್ತು ಅಡವಿಹಳ್ಳಿ ಗ್ರಾಮದ ಅರಣ್ಯ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.‘ಸರ್ಜಾನ್‌ ರಿಯಾಲಿಟಿಸ್‌ ಎಂಬ ಕಂಪೆನಿಗೆ ತಾಲ್ಲೂಕಿನಲ್ಲಿ ಪವನ ವಿದ್ಯುತ್‌ ಯಂತ್ರಗಳನ್ನು ಎರಡು ವರ್ಷಗಳ ಅವಧಿಯಲ್ಲಿ ಅಳವಡಿಸಲು ಸರ್ಕಾರ ಪರವಾನಗಿ ನೀಡಿತ್ತು.

492/ಎಪಿ 1, 492/ಬಿಪಿ1 ಮತ್ತು 379/ಎಪಿ3 ಮೂರು ಸರ್ವೆ ನಂಬರಿನಲ್ಲಿ ಒಟ್ಟು 115.8 ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸರ್ಕಾರ ಮಂಜೂರು ಮಾಡಿದ ಜಮೀನು, ಹೆಚ್ಚುವರಿ ಸರ್ಕಾರಿ ಜಮೀನು ಮತ್ತು ಗೋಮಾಳ ಆಕ್ರಮಿಸಿಕೊಂಡು ಯಂತ್ರಗಳನ್ನು ಅಳವಡಿಸಲಾಗಿದೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಅಧ್ಯಕ್ಷ ಎಚ್‌.ಎಂ.ಮಹೇಶ್ವರ ಸ್ವಾಮಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಸ್ಥಳ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಲೋಕಾಯುಕ್ತರು,  ‘ಜಮೀನು ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಪೋಡಿ ಮಾಡಿ ಕೊಡಬೇಕು. ಜಮೀನಿನಲ್ಲಿ ಕೃಷಿ ಚಟು ವಟಿಕೆ ನಡೆಸಿರುವ ಕುರಿತು ಮಾಹಿತಿ ನೀಡಬೇಕು. ಒಂದು ಪವನ ವಿದ್ಯುತ್ ಯಂತ್ರ ಅಳವಡಿಸಲು ಬೇಕಾಗುವ ಜಮೀನು ಎಷ್ಟು? ಎಷ್ಟು ಯಂತ್ರಗಳನ್ನು ಅಳವಡಿಸಲಾಗಿದೆ. ನಿಗದಿತ ಅವಧಿ ಯಲ್ಲಿ ಯೋಜನೆಯನ್ನು ಮುಗಿಸಲು ಏಕೆ ಸಾಧ್ಯವಾಗಿಲ್ಲ? ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದರು.

‘ಪ್ರತಿ ಗ್ರಾಮಕ್ಕೆ ಗೋಮಾಳ ನಿಗದಿ ಪಡಿಸಲು ಸೂಚಿಸಿದ್ದೇನೆ. ಕಂಪೆನಿಗೆ ಮಂಜೂರು ಮಾಡಿದ ಜಮೀನಿಗೆ ಗಡಿ ನಿಗದಿಪಡಿಸಬೇಕು. ಯೋಜನೆ ಮಂಜೂರು ಮಾಡಲು ಆರಂಭದಿಂದ ಇದುವರೆಗೆ ಕಂಪೆನಿಯೊಂದಿಗೆ ನಡೆಸಿರುವ ಪತ್ರ ವ್ಯವಹಾರಗಳ ಕಡತ ಗಳನ್ನು ಸಲ್ಲಿಸುವಂತೆಯೂ ಆದೇಶಿಸಲಾ ಗಿದೆ’ ಎಂದು ಅವರು ವಿವರಿಸಿದರು.

ಅಕ್ರಮ ಒಳ ಚರಂಡಿ:  ‘ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಹರಪನಹಳ್ಳಿ ಪಟ್ಟಣದ ಹಿರೆಕೆರೆ ಅಂಗಳದಲ್ಲಿ ಕೊಳವೆ ಅಳವ ಡಿಸಿ ಅವೈಜ್ಞಾನಿಕವಾಗಿ ಚೇಂಬರ್‌ ನಿರ್ಮಿಸಿದೆ. ಒಳಚರಂಡಿ ನೀರು ಕೆರೆಗೆ ಸೇರುವ ಸಾಧ್ಯತೆ ಇರುವುದರಿಂದ ಕೂಡಲೇ ಕೊಳವೆಗಳನ್ನು ತೆರವುಗೊಳಿ ಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ದೂರು ನೀಡಿದ್ದರು. ಸ್ಥಳ ಪರಿಶೀಲಿಸಿದಾಗ ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸಿರುವುದು ಕಂಡು ಬಂದಿದೆ’ ಎಂದು ಅವರು ಹೇಳಿದರು. ಉಪ ಲೋಕಾಯುಕ್ತ ತಂಡದ ಅಧಿ ಕಾರಿ ಜಯಪ್ರಕಾಶ್‌, ಉಪ ವಿಭಾಗಾಧಿ ಕಾರಿ ಟಿ.ವಿ.ಪ್ರಕಾಶ್‌, ತಹಶೀಲ್ದಾರ್‌ ಕೆ.ಗುರುಬಸವರಾಜ್‌, ಬೆಸ್ಕಾಂ ಎಂಜಿನಿ ಯರ್‌ ಎಸ್‌.ಭೀಮಪ್ಪ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಎಚ್‌.ಎಸ್‌.ಸತೀಶ್‌ ಅರ ವಿಂದ್‌, ಚಂದ್ರಶೇಖರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT