ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯ ರಾಜಕಾರಣದ ಅಸೀಮ ಪ್ರತಿಪಾದಕ

Last Updated 16 ಏಪ್ರಿಲ್ 2017, 10:07 IST
ಅಕ್ಷರ ಗಾತ್ರ

ಕಳೆದ ಬುಧವಾರ (ಏ.12) ನಸುಕಿನ ವೇಳೆಯಲ್ಲಿ ಜಕ್ಕಲಿ ಗ್ರಾಮದ ತಮ್ಮ ಮನೆ ‘ಪರಾಶಕ್ತಿ’ಯಲ್ಲಿ ನಿಧನರಾದ ರೋಣ ತಾಲ್ಲೂಕಿನ ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ (75) ಸರಳ ಸಜ್ಜನಿಕೆಯ ಸಾಕಾರ­ಮೂರ್ತಿಯಾ­ಗಿದ್ದರು. ಕರ್ನಾಟಕ ರಾಜ್ಯ ಏಕೀಕ­ರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ ಅವರ ಸುಪುತ್ರರಾಗಿದ್ದ 'ಜ್ಞಾನದೇವ' 'ಮುತ್ತಣ್ಣ' ಎಂದು ಆಪ್ತ ವಲಯದಲ್ಲಿ ಜನಪ್ರಿಯರಾಗಿದ್ದರು.

ಸಂಶೋಧಕ ಡಾ, ಎಂ.ಎಂ. ಕಲ­ಬುರ್ಗಿ, ಸಾಹಿತಿ ಡಾ. ಎಸ್.ಎಂ. ವೃಷ­­ಭೇಂದ್ರ­ಸ್ವಾಮಿ, ಕವಿ ಚೆನ್ನವೀರ ಕಣವಿ ಅವರ ಸಹಪಾಠಿಗಳಾಗಿದ್ದ ದೊಡ್ಡ­ಮೇಟಿ ಅವರು ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’ ವಾರ­ಪತ್ರಿಕೆ­ಯಲ್ಲಿ ಉಪಸಂಪಾದಕ­ರಾಗಿ ಕೆಲಸ ಮಾಡಿದ್ದರು. ಅವಧೂತ ಪರಂಪರೆಯ ಸಾಹಿತಿ ಸತ್ಯಕಾಮ ಅವರೊಂದಿಗೆ  ಒಡ­­ನಾಟ ಹೊಂದಿದ್ದ  ಅಪರೂಪದ ರಾಜಕಾರಣಿಯಾಗಿದ್ದರು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರಿಗೆ ಸರ್ಕಾರ ನೀಡಿದ್ದ ಗೌರವ ಧನ, ಪ್ರಯಾಣ ಭತ್ಯೆ   ನಗ­ದನ್ನು ಸರ್ಕಾರಕ್ಕೆ ಹಿಂದಿ­ರುಗಿಸುತ್ತ, ‘ಕನ್ನಡದ ಕೆಲಸಕ್ಕೆ ಕೂಲಿ ಪಡೆಯ­ಬೇಕೆ?’ ಎಂದು ಪತ್ರ ಬರೆದಿದ್ದರು.

1972ರ ಫೆ.21 ರಂದು ಹುಬ್ಬಳ್ಳಿ­ಯ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಅಂದಾ­ನಪ್ಪ­ನವರು ನಿಧನರಾದ ನಂತರ ಜ್ಞಾನದೇವ ಅವರನ್ನು ಸಾರ್ವಜನಿಕ ಜೀವನಕ್ಕೆ ಎಳೆದು ತರುವ ಪ್ರಯತ್ನಗಳು ಚಾಲನೆ ಪಡೆದುಕೊಂಡವು. ಬೆಳ­ಗಾವಿ­ಯ ಲಿಂಗರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಅವರು ಅಲ್ಲಿಯೇ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿತ್ತು. ಆದರೆ ರೋಣ ತಾಲ್ಲೂಕಿನ ಜನರ ಒತ್ತಾಯದಿಂದ ರಾಜಕೀಯ ಪ್ರವೇಶಿಸಬೇಕಾ­ಯಿತು. ಜನತಾ ಪಕ್ಷದ ಅಭ್ಯರ್ಥಿಯಾಗಿ 1983 ಮತ್ತು 1985ರಲ್ಲಿ ವಿಧಾನಸಭೆಗೆ ಎರಡು ಬಾರಿ ಚುನಾಯಿತರಾದರು.

 ರಾಮಕೃಷ್ಣ ಹೆಗಡೆ ಮಂತ್ರಿ ಪದವಿ ಸ್ವೀಕರಿಸುವಂತೆ ದೊಡ್ಡ­ಮೇಟಿ ಅವರನ್ನು ಎರಡು ಬಾರಿ ಕೋರಿ­ಕೊಂಡರೂ ಅದನ್ನು ನಯವಾಗಿ ತಿರಸ್ಕರಿಸಿದ್ದರು ಎಂಬುದನ್ನು ಇಂದಿನ ಪೀಳಿಗೆ ನಂಬಲಿಕ್ಕಿಲ್ಲ. ಉತ್ತಮ ಸಂಸ­ದೀಯ ಪಟುವಾಗಿದ್ದ ದೊಡ್ಡ­ಮೇಟಿ ಅವರು ವಿಧಾನ ಸಭೆಯಲ್ಲಿ ಮಾತನಾಡಲು ನಿಂತರೆ ಮುಖ್ಯಮಂತ್ರಿ ಆದಿಯಾಗಿ ವಿರೋಧ ಪಕ್ಷದ ನಾಯ­ಕರೂ ಗಮನವಿಟ್ಟು ಕೇಳಿಸಿ­ಕೊಳ್ಳು­ತ್ತಿದ್ದರು ಎಂಬುದು ಸದನದ ದಾಖಲೆಗಳಲ್ಲಿ ಅನುರಣಿಸುತ್ತಿದೆ.

ಮೊದಲ ಬಾರಿಗೆ ಅವರು ಶಾಸಕ­ರಾದಾಗ ರಾಜ್ಯದ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಅಧಿಕಾ­ರಿ­ಗಳನ್ನು ವರ್ಗಾಯಿಸುವ ನಿರ್ಧಾರ­ವನ್ನು ಸರ್ಕಾರ ಕೈಗೊಂಡಿತು. ಆಗ ರೋಣದ ತಹಶೀಲ್ದಾರ್‌ ಆಗಿದ್ದ ಚೆನ್ನ­ಮಲ್ಲಯ್ಯ ಮರಡಿ ಅವರು ಪ್ರಾಮಾಣಿಕ ಅಧಿಕಾರಿಗಳೆಂದು ಜನಾ­ನುರಾಗಿಗ­ಳಾಗಿದ್ದರು. ಅವರ ನಿವಾಸಕ್ಕೆ ನೇರವಾಗಿ ಹೋಗಿದ್ದ ಶಾಸಕ ದೊಡ್ಡ­ಮೇಟಿ ಅವರು ‘ನಮ್ಮ ಸರ್ಕಾರದ ನೀತಿಯಂತೆ ನಿಮ್ಮನ್ನು ವರ್ಗಾಯಿ­ಸಲಾಗುತ್ತದೆ ಎಂದು ತಿಳಿದು ಬಂದಿದೆ.  ಆದರೆ ಜನರು ನಿಮ್ಮ ಸೇವೆಯನ್ನು ಅಪೇಕ್ಷಿಸು­ತ್ತಿದ್ದಾರೆ, ನೀವು ಇಚ್ಛೆ ಪಟ್ಟರೆ ಇಲ್ಲಿಯೇ ನಿಮ್ಮನ್ನು ಮುಂದುವರಿ­ಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆ­ಯು­ತ್ತೇನೆ. ನನ್ನ ಹೆಸರು ಹೇಳಿ ಯಾರೇ ಬಂದ­ರೂ ಕಾನೂನು ಬದ್ಧವ­ಲ್ಲದ ಕೆಲಸ ಮಾಡಿಕೊಡಬೇಡಿ’ ಎಂದು ಹೇಳಿ­ದ್ದನ್ನು ಧಾರವಾಡದಲ್ಲಿ ನೆಲೆಸಿ­ರುವ ನಿವೃತ್ತ ಅಧಿಕಾರಿ ಮರಡಿ ನೆನಪಿ­ಸಿಕೊಳ್ಳುತ್ತಾರೆ.

ಈಚೆಗೆ ಜಕ್ಕಲಿಯ ತಮ್ಮ ನಿವಾಸ­ದಲ್ಲಿ  ಮಾತ­ನಾಡಿದ್ದ ದೊಡ್ಡ­ಮೇಟಿ ಅವ­ರು ‘ಹೆಗಡೆ ಅವರ ಚರಿಶ್ಮಾ (ವರ್ಚ­ಸ್ಸು) ಮತ್ತು ದೇವೇ­ಗೌಡರ ಸಂಘಟನೆ, ಎಂ.ಪಿ. ಪ್ರಕಾಶ, ಪಿ.ಜಿ.­ಆರ್. ಸಿಂಧ್ಯಾ, ನಾಗೇಗೌಡ, ಭೈರೇ­ಗೌಡ ಮುಂತಾದವರ ಚುರು­ಕುತನದ ಜೊತೆಗೆ ರೈತ ಚಳವಳಿ, ದಲಿತ ಚಳವಳಿ ಕಾವು ಮೇಳೈಸಿದ್ದರಿಂದ ಹಾಗೂ ಎಸ್. ನಿಜಲಿಂಗಪ್ಪನವರ ಮಾರ್ಗ­­ದರ್ಶನ ದೊರೆತದ್ದರಿಂದ 1980ರ ದಶಕದಲ್ಲಿ ಪರ್ಯಾಯ ರಾಜಕಾರಣದ ಪ್ರಯೋಗ  ಉಂಟಾಗಿತ್ತು. ಜನತಾ ಪಕ್ಷದ ನೇಗಿಲು ಹೊತ್ತ ರೈತನ ಚಿಹ್ನೆ ಇತರ ಪಕ್ಷಗಳ ಚಿಹ್ನೆಗಳಿಗಿಂತ ಜನರನ್ನು ಸೆಳೆದಿತ್ತು. ನಂತರ  ಪಕ್ಷದ ಒಡಕಿ­ನಿಂ­ದಾಗಿ ಮತ­ದಾ­ರರು ಇಟ್ಟಿದ್ದ ವಿಶ್ವಾ­ಸಕ್ಕೆ ದ್ರೋಹ ಉಂಟಾಯಿತು' ಎಂದು ಅಂದಿನ ರಾಜಕಾರಣವನ್ನು ವಿಶ್ಲೇಷಿಸಿದ್ದರು.

ರಾಜಕೀಯ ಗುಂಪುಗಾರಿಕೆ ನಡೆಸಲು ಮುಖಂಡರು ಏರ್ಪಡಿಸು­ತ್ತಿದ್ದ ಭೋಜನ ಕೂಟಗಳಿಗೆ ತಾವು ಹೋಗುತ್ತಿರಲಿಲ್ಲ. ಇದರಿಂದ ದೊಡ್ಡ ಗೌಡರು ನನ್ನನ್ನು ಹೆಗಡೆ ಅವರ ಕಡೆ­ಯವನೆಂದು ಅನುಮಾನಿಸುತ್ತ ಏನು ಗುರು? ಎಂದು ಆಗಾಗ ಮಾತನಾಡಿ­ಸುತ್ತಿದ್ದರು. ಪಂಚಾಯತ್ ರಾಜ್ ಮಸೂದೆ­ ರೂಪಿಸುವಾಗ ಶಾಸಕರ ಅಧಿಕಾರಕ್ಕೆ ಕುತ್ತು ಬರುತ್ತದೆ ಎಂದು ಮುಖ್ಯಮಂತ್ರಿಗಳಿಗೆ  ಮನವಿ ಸಲ್ಲಿಸಲು ಕೆಲವು ಶಾಸಕರು ನನ್ನನ್ನು ಕರೆದಿದ್ದರು. ‘ಜನರ ಅಧಿಕಾರವನ್ನು ಜನರಿಗೆ ನೀಡಿ­ದರೆ ನಮಗೇನು ನಷ್ಟ?’ ಎಂದು ಅವ­ರನ್ನು ಪ್ರಶ್ನಿಸಿದ್ದೆ. ‘ಚುನಾವಣೆಯಲ್ಲಿ ಗೆಲ್ಲಲು ನಮ್ಮ ಸಹಾಯ ನಿಮಗೆ ಬೇಕಿ­ಲ್ಲವೆ, ನಮ್ಮ ಮುಖ ನೋಡಿ ಜನರು ನಿಮ್ಮ­ನ್ನು ಗೆಲ್ಲಿಸಿದ್ದಾರೆ’ ಎಂದು ಗೌಡರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಮುಖಂಡರು ಹೇಳಿದ್ದರು. ಇದಕ್ಕೆ ‘ಏಕೆ, ನಮಗೆ ಸ್ವಂತ ವ್ಯಕ್ತಿತ್ವವಿಲ್ಲವೆ? ನನ್ನ ಕ್ಷೇತ್ರದ ಜನರು ಹೆಗಡೆ ಅಥವಾ ಗೌಡರ ಮುಖಗಳಿಗಿಂತ ನನ್ನ ಮುಖ ನೋಡಿ ಮತ ನೀಡಿದ್ದಾರೆ’ ಎಂದು ಉತ್ತರಿ­ಸಿದ್ದುದನ್ನು ತಮ್ಮ ನೆನಪಿನ ಬುತ್ತಿಯಿಂದ ಹಂಚಿಕೊಂಡರು.

ಪತ್ನಿ ಕುಸುಮಾದೇವಿ ಅವರು ಕಟ್ಟಿ­ಕೊ­ಡುತ್ತಿದ್ದ ಬಿಳಿ ಜೋಳದ ರೊಟ್ಟಿ, ಗುರೆಳ್ಳು ಚಟ್ನಿ ಪುಡಿ ಬುತ್ತಿ ಕಟ್ಟಿಕೊಂಡು ವಿಧಾನಸಭೆ ಅಧಿವೇಶನಕ್ಕೆ ಹಾಜ­ರಾಗಲು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿ­ಸುತ್ತಿದ್ದುದನ್ನು ನೋಡಿರುವ ಜಕ್ಕಲಿಯ ಗ್ರಾಮಸ್ಥರು ಅವರ ಸರಳತೆಯನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. 1990ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋತ  ಸಂದರ್ಭದಲ್ಲಿ ವಾರಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ನಿರ್ಗಮಿತ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ‘ಚುನಾ­ವಣೆ­ಯಲ್ಲಿ ಜನತಾ ಪರಿವಾರದ ವಿರುದ್ಧ ಬೀಸಿದ ಅಲೆಯಲ್ಲಿ ನಮ್ಮ ಘಟಾನು­ಘಟಿಗಳು ಸೋಲಬೇಕಾ­ಯಿತು. ಆದರೆ ಯಾವ ಕಾಲಕ್ಕೂ, ಯಾರಿಂ­ದಲೂ ಏನ­ನ್ನೂ ಬಯಸದ ದೊಡ್ಡಮೇಟಿ ಅವರು ಸೋತದ್ದು  ನೋವು ಉಂಟು­ಮಾಡಿದೆ' ಎಂದು ವಿಷಾದಿಸಿದ್ದರು.

ರಾಜಕೀಯ ನಿವೃತ್ತಿ ಪಡೆಯುವಾಗ ದೊಡ್ಡಮೇಟಿ ಅವರ ಸಹೋದರನ ಪುತ್ರ ರವೀಂದ್ರನಾಥ ಅವರಿಗೆ ಅವ­ಕಾಶ ಕೊಡಿಸಬೇಕೆಂದು ಅಭಿಮಾನಿ­ಗಳು ಆಗ್ರಹಿಸಿದ್ದರು. ಆದರೆ ರಾಜ­ಕೀ­ಯ ಅಧಿಕಾರ ವಂಶ­­ಪಾ­ರಂಪ­ರ್ಯದ ಬಳುವಳಿ ಆಗಬಾರದು ಎಂದು ಜನರಿಗೆ ತಿಳಿ ಹೇಳಿ ಸೂಡಿ ಗ್ರಾಮದ ಶ್ರೀಶೈಲಪ್ಪ ಬಿದರೂರರಿಗೆ ಅವಕಾಶ ಕೊಡಿಸಿದ್ದರು. ಗೆದ್ದು ಶಾಸಕರಾದ ಮೇಲೆ ಬಿದರೂರ ನಿಷ್ಠರಾಗಿ ಉಳಿ­ಯದಿದ್ದರೂ ಆ ಕುರಿತು ಯಾವುದೆ ಬೇಸರ ವ್ಯಕ್ತಪಡಿಸದಿದ್ದುದು ದೊಡ್ಡ­ಮೇಟಿ ಅವರ  ಗುಣಕ್ಕೆ ಸಾಕ್ಷಿಯಾಗಿದೆ. ರಾಜಕೀಯ ವ್ಯವಸ್ಥೆಯಲ್ಲಿ ಮೌಲ್ಯ  ಕಣ್ಮರೆಯಾಗುತ್ತಿರುವ ವರ್ತಮಾನದಲ್ಲಿ ದೊಡ್ಡಮೇಟಿ ಅವರ ಪ್ರಾಮಾಣಿಕತೆ ಮತ್ತು  ಆದರ್ಶ ಅನುಕರಣೀಯವಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT