ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಾವರಿ ಸೌಲಭ್ಯಕ್ಕಾಗಿ ಒಗ್ಗಟ್ಟಾಗಿ’

Last Updated 16 ಏಪ್ರಿಲ್ 2017, 10:29 IST
ಅಕ್ಷರ ಗಾತ್ರ

ಬೈಲಹೊಂಗಲ: ‘ನಾವು ಆಶ್ರಯ ಮನೆ, ಪಡಿತರ ಚೀಟಿಗಾಗಿ ಹೋರಾಟ ಮಾಡದೆ ಬೈಲಹೊಂಗಲ ಮತಕ್ಷೇತ್ರವನ್ನು ಸಂಪೂರ್ಣವಾಗಿ ನೀರಾವರಿ ಸೌಲಭ್ಯಕ್ಕೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಪಕ್ಷಾತೀತ, ಜಾತ್ಯಾತೀತವಾಗಿ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರು ಕೈ ಜೋಡಿಸಬೇಕು. ಬೈಲಹೊಂಗಲ ಭಾಗದ ರಾಜಕೀಯ ಧುರೀಣರಲ್ಲಿ ನನ್ನ ಮನವಿ ಇದು’ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕರೆ ನೀಡಿದರು.

ಪಟ್ಟಣದ ಪುರಸಭೆಗೆ ರಾಜ್ಯ ಸರ್ಕಾರದಿಂದ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾದ ₹ 7.50 ಕೋಟಿ ಅನುದಾನದ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.‘ಅಭಿವೃದ್ಧಿ ಕೆಲಸಗಳಿಗೆ ಪ್ರತಿಯೊಬ್ಬ ರಾಜಕಾರಣಿ ಪಕ್ಷಾತೀತವಾಗಿ ಕೆಲಸ ಮಾಡಿದರೆ ಬೈಲಹೊಂಗಲ ಮತಕ್ಷೇತ್ರ ರಾಜ್ಯದಲ್ಲಿ ಮುಂಚೂಣಿ ಮಾದರಿ ಕ್ಷೇತ್ರವಾಗಿ ಹೊರಹೊಮ್ಮುತ್ತದೆ. ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಂಡು ಜನರ ಹಿತ ಕಾಪಾಡಬೇಕು. ಪಟ್ಟಣದ ಪುರಸಭೆ ಸ್ವಚ್ಛತೆಯಲ್ಲಿ ಒಳ್ಳೆಯ ಹೆಸರಿದೆ. ಹೃದಯ ಭಾಗದಲ್ಲಿ ಅದ್ಭುತ ಕೆರೆ ಇದ್ದು, ಅದನ್ನು ಸಂರಕ್ಷಣೆ ಮಾಡಲೇಬೇಕು. ಕೆರೆ ಬಗ್ಗೆ ಪುರಸಭೆಯವರು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದರೆ ಸರ್ಕಾರ ಮತ್ತು ವೈಯಕ್ತಿಕವಾಗಿ ಕೆರೆಯನ್ನು ಸಮಗ್ರ ಅಭಿವೃದ್ಧಿಪಡಿಸಲಾಗುವುದು’ ಎಂದರು.

‘ನಾನು ಮೊದಲ ಬಾರಿ ಶಾಸಕನಾದಾಗ ಆಗಿನ ಮುಖ್ಯಮಂತ್ರಿ ಎಸ್.ಎಂ,ಕೃಷ್ಣ, ಎಚ್.ಕೆ. ಪಾಟೀಲರ ಬೆನ್ನು ಹತ್ತಿ ಗೋಕಾಕ ಭಾಗದಲ್ಲಿ ನೀರಾವರಿ ಸೌಲಭ್ಯ ಮಾಡಿರುವೆ. ನೀರಾವರಿ ಇದ್ದರೆ ಎಲ್ಲ ಒಳ್ಳೆಯದಾಗುತ್ತದೆ. ಭೂಮಿಗೆ ನೀರು ಬಂದರೆ ಫಲವತ್ತತೆ ಹೆಚ್ಚಾಗುತ್ತದೆ. ರೈತರು, ನಾಡಿನ ಜನರು ಆರ್ಥಿಕವಾಗಿ ಸಬಲರಾಗುತ್ತಾರೆ. ಜನರು ಸರ್ಕಾರದ ಮುಂದೆ ಬಂದು ನಿಲ್ಲುವುದು ತಪ್ಪುತ್ತದೆ. ಈ ಒಂದು ದೃಷ್ಟಿಯಿಂದ ಬೈಲಹೊಂಗಲ ಭಾಗದ ರಾಜಕಾರಣಿಗಳು ನೀರಾವರಿ ಸೌಲಭ್ಯಕ್ಕೆ ಒತ್ತು ನೀಡಬೇಕು. ಒಕ್ಕಟ್ಟಿನ ಮುಂದೆ ಯಾವುದು ದೊಡ್ಡದಲ್ಲ. ನೀರು ಬರುವುದು ಕಾಂಗ್ರೆಸ್, ಬಿಜೆಪಿಯಿಂದ ಅಲ್ಲ. ಎಲ್ಲರೂ ಸೇರಿ ಪ್ರಯತ್ನ ಮಾಡಿದರೆ ಒಳ್ಳೆಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ’ ಎಂದರು.

ಶಾಸಕ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಯಾವುದೇ ಸರ್ಕಾರ, ಜನಪ್ರತಿನಿಧಿಗಳಿರಲಿ ಅಭಿವೃದ್ಧಿ ಕೆಲಸ ಮಾಡಲೇಬೇಕು. ಎಲ್ಲರು ಕೂಡಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಮಾಡಿದರೆ ಜನರು ಮೆಚ್ಚುತ್ತಾರೆ’ ಎಂದರು.ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ವಿಧಾನಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಅರ್ಹ  ಫಲಾನುಭವಿಗಳಿಗೆ ಸಾಮಗ್ರಿ ವಿತರಿಸಲಾಯಿತು. ಪುರಸಭೆ ಆಡಳಿತ ಮಂಡಳಿ ಎಲ್ಲ ಸದಸ್ಯರು, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ವೇದಿಕೆಯಲ್ಲಿ ಇದ್ದರು. ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ಸ್ವಾಗತಿಸಿದರು. ಶಿಕ್ಷಕಿ ಅಂಗಡಿ ನಿರೂಪಿಸಿದರು. ಆರ್.ಎಸ್.ಹಿಟ್ಟಣಗಿ ವಂದಿಸಿದರು. ನೂರಾರು ಸಾರ್ವಜನಿಕರು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT