ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸುಗಳ ಬೆಸೆದ ಸಂಗೀತ ಕೊಂಡಿ

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಅಮೆರಿಕದ ಕಲಾವಿದ ಮನೆತನದಲ್ಲಿ ಜನಿಸಿದ ಹುಡುಗನಿಗೆ  ಚಿಕ್ಕಂದಿನಿಂದಲೂ ಸಂಗೀತದೆಡೆಗೆ ಎಲ್ಲಿಲ್ಲದ ಒಲವು. ಆಡುವ ವಯಸ್ಸಾದರೂ ತಾತನೊಂದಿಗೆ ಶ್ರದ್ಧೆಯಿಂದ ಕುಳಿತು ಪಿಯಾನೊ ಹಾಗೂ ಕ್ಲಾರಿಯೊನೆಟ್ ವಾದ್ಯಗಳ ಮೇಲೆ ಅನಾಯಾಸವಾಗಿ ಕೈಯಾಡಿಸಲು ಕಲಿತ.

ಸ್ಯಾಕ್ಸೋಫೋನ್‌ನೆಡೆಗೂ ಆತನಿಗೆ ತುಡಿತ. ಕೊನೆಗೂ ಅಪ್ಪ ಅಮ್ಮ ಹಾಕಿಕೊಟ್ಟ ದಾರಿಯಲ್ಲಿ ಕ್ಲಾರಿಯೊನಟ್‌ ವಾದ್ಯ ಕಲಿತ ಹುಡುಗ ಭಾರತೀಯ ಸಂಗೀತ ಕ್ಷೇತ್ರದಲ್ಲಿಯೂ ಬಹುದೊಡ್ಡ ಹೆಸರು ಮಾಡಿದ. ವಿಭಿನ್ನ ಸಂಗೀತ ನೀಡುತ್ತಾ, ಯುವಧ್ವನಿಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳುತ್ತಾ ಸಂಗೀತ ಪ್ರಿಯರ ಮನಸ್ಸುಗಳಿಗೆ ಲಗ್ಗೆ ಇಟ್ಟು ಸಂಚಲನವನ್ನೇ ಮೂಡಿಸಿದ ಈ ಕಲಾವಿದ ಎಂಬ್ರೋಸ್‌ ಟಕ್ಕರ್‌.

ಸದ್ಯ ಶಂಕರ್‌ ಟಕ್ಕರ್‌ ಎಂದೇ ಖ್ಯಾತಿ ಗಳಿಸಿರುವ ಈ ಯುವ ಕಲಾವಿದನದ್ದು ಸದಾ ಹೊಸತನ್ನು ಆವಿಷ್ಕರಿಸುವ ಮನಸ್ಸು. ಎಷ್ಟು ಕಲಿತರೂ ಇನ್ನಷ್ಟು ಮತ್ತಷ್ಟು ಹೊಸತನ್ನು ಕಲಿಯಬೇಕು ಎನ್ನುವ ಹುಮ್ಮಸ್ಸು.

ಶಿಲ್ಪಿಯಾದ ವಿಲಿಯಂ ಜಿ.ಟಕ್ಕರ್‌ ಹಾಗೂ ಕಲಾವಿದೆ ಪಮೇಲಾ ಕಾಮಿನಿ ಏವ್ರಿಲ್‌ ಅವರ ಮಗನಾಗಿ 1987ರಲ್ಲಿ ಜನನ. 10ನೇ ವಯಸ್ಸಿಗೆ ಕ್ಲಾರಿಯೊನೆಟ್‌ ಕಲಿಯಲಾರಂಭಿಸಿದ ಶಂಕರ್‌ ಅವರಿಗೆ ಜಾಜ್‌ ಸಂಗೀತವೂ ಅಚ್ಚುಮೆಚ್ಚು.

ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಮೋಡಿಗೊಳಗಾಗಿದ್ದ ಅವರಿಗೆ ಕ್ರಮೇಣ ತಾನು ಹೊಸತೇನನ್ನಾದರೂ ಮಾಡಬೇಕು ಎನ್ನುವ ತುಮುಲ ಹೆಚ್ಚಾಯಿತು. ಜಾಕೀರ್‌ ಹುಸೇನ್‌ ಹಾಗೂ ಜಾನ್‌ ಮೆಕ್‌ಲಾಹ್ಲಿನ್‌ ಅವರ ‘ಶಕ್ತಿ’ ಆಲ್ಬಂನ ಸಂಗೀತ ಸೌಂದರ್ಯ ಅವರ ಈ ಪ್ರೇರಣೆಗೆ ಕಾರಣವಾಯಿತು.

ಈ ದಾರಿಯಲ್ಲಿ ಹೊರಟ ಶಂಕರ್‌ ಮನಸ್ಸು ಹೊರಳಿದ್ದು ಭಾರತದತ್ತ. ಸಂಗೀತ ಶ್ರೀಮಂತಿಕೆ ಹೊಂದಿದ ಈ ದೇಶದತ್ತ ಮುಖ ಮಾಡಿದ ಅವರು ಹರಿಪ್ರಕಾಶ್‌ ಚೌರಾಸಿಯಾ ಅವರ ಶಿಷ್ಯರಾದರು. ವಿಶೇಷ ಎಂದರೆ ತಾನು ಕಲಿತಿದ್ದ ಕ್ಲಾರಿಯೊನೆಟ್‌ ವಾದ್ಯದಲ್ಲಿ ಹಿಂದೂಸ್ತಾನಿ ಸಂಗೀತ ನುಡಿಸುವುದನ್ನು ಅವರು ಇಲ್ಲಿಯೇ ಅರಗಿಸಿಕೊಂಡರು.

ಹೀಗೆ ವಿದೇಶಿ ವಾದ್ಯ ಕ್ಲಾರಿಯೊನಟ್‌ನಲ್ಲಿ ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತವನ್ನು ನುಡಿಸುವ ಶಂಕರ್‌ ಅವರು ವರ್ಲ್ಡ್‌ ಮ್ಯೂಸಿಕ್‌, ಜಾಜ್‌, ಭಾರತೀಯ ಶಾಸ್ತ್ರೀಯ ಸಂಗೀತ, ಫ್ಯೂಷನ್‌ ಸಂಗೀತ ಹಾಗೂ ಆಲ್ಟರ್‌ನೇಟಿವ್‌ ಸಂಗೀತದಲ್ಲಿ ಔನ್ನತ್ಯ ಸಾಧಿಸಿದರು.

ಮಾತಾ ಅಮೃತಾನಂದಮಯಿ ಅವರ ಭಜನಾ ತಂಡದಲ್ಲಿದ್ದು ಪ್ರಪಂಚದ ನಾನಾ ದೇಶಗಳಿಗೆ ಪ್ರಯಾಣ ಬೆಳೆಸಿದರು. ಸಂಗೀತ ಕ್ಷೇತ್ರದ ದಿಗ್ಗಜರಾದ ಜಾಕೀರ್‌ ಹುಸೇನ್‌, ಹರಿಪ್ರಕಾಶ್‌ ಚೌರಾಸಿಯಾ ಅವರಂತಹ ಮೇರು ಕಲಾವಿದರ ಜೊತೆ ಕಾರ್ಯಕ್ರಮ ನೀಡಿದರು.

2011ರಲ್ಲಿ ಅವರು ಯುಟ್ಯೂಬ್‌ ಚಾನೆಲ್‌ ‘ಶ್ರುತಿಬಾಕ್ಸ್‌’ ಆರಂಭಿಸಿದಾಗ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ವಿಭಿನ್ನ ಸಂಗೀತ ಸಂಯೋಜನೆ, ಹೊಸ ಗಾಯಕರನ್ನೊಳಗೊಂಡ ವಿಡಿಯೊಗಳು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗುತ್ತಿದ್ದಂತೆ ಯೂಟ್ಯೂಬ್‌ನಲ್ಲಿ ಕೇಳುಗರ ಸಂಖ್ಯೆ ಹೆಚ್ಚಿತು.

ಹಳೆ ಸಂಗೀತಕ್ಕೆ ಹೊಸ ರಾಗ, ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತಗಳ ಮಿಳಿತ, ವಾದ್ಯಗಳಲ್ಲಿ ಹೊಸತನ ತುಂಬಿಕೊಂಡು ಯುಟ್ಯೂಬ್‌ಗೆ ಲಗ್ಗೆ ಇಡುತ್ತಿದ್ದ ವಿಡಿಯೊಗಳು ಜನಪ್ರಿಯವಾಗಿಬಿಟ್ಟವು.

ವಿಭಿನ್ನ ಪ್ರಯತ್ನದಲ್ಲಿ ತೊಡಗಿರುವುದಷ್ಟೇ ಅಲ್ಲ 26–27ರ ವಯಸ್ಸಿಗೇ ಕ್ಲಾರಿಯೊನಟ್‌, ಪಿಯಾನೊ, ಪಕ್ಕವಾದ್ಯ, ಬಾಸ್‌, ಖಂಜಿರಾ, ತಬಲಾದಲ್ಲಿ ಪ್ರಾವೀಣ್ಯ ಸಾಧಿಸಿದ್ದನ್ನು ಕಂಡು ಸಂಗೀತಕ್ಷೇತ್ರ ಬೆರಗಾಗಿತ್ತು. ಶಂಕರ್‌ ಕೆಲವು ಹಾಡುಗಳಿಗೆ ದನಿಗೂಡಿಸಿದ್ದೂ ಇದೆ.

ಭಾರತೀಯ ಸಂಗೀತದೊಂದಿಗೆ ಪಾಶ್ಚಾತ್ಯ ಹಾಗೂ ಜಾಜ್‌ ಸಂಗೀತದ ಫ್ಯೂಷನ್‌ ಮಾಡಿ ಹೊಸ ಬಗೆಯ ಸಂಗೀತ ನೀಡುವಲ್ಲಿ ಶಂಕರ್‌ ಸಿದ್ಧಹಸ್ತರು. ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿತ ಕೆಲ ಯುವ ಗಾಯಕರು ಹಾಗೂ ವಿವಿಧ ಸಂಗೀತ ವಾದ್ಯಗಳನ್ನು ನುಡಿಸಬಲ್ಲ ಕಲಾವಿದರೇ ಹೆಚ್ಚಾಗಿ ಶಂಕರ್‌ ತಂಡದಲ್ಲಿದ್ದಾರೆ.

ಇಂಗ್ಲಿಷ್‌, ಹಿಂದಿ, ತಮಿಳು ಭಾಷೆಗಳ ಹಾಡಿಗೆ ಹೊಸರೂಪ ನೀಡುವ ಶಂಕರ್‌  ತೆಲುಗು ಫೀಚರ್‌ ಸಿನಿಮಾ ‘ಓರೆ ನ್ಯಾಬಗಂ’ ಚಿತ್ರದಲ್ಲಿ ಸಂಗೀತ ನಿರ್ದೇಶಕನಾಗಿ ದುಡಿದಿದ್ದಾರೆ. ಕೆಲಸಮಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಶಂಕರ್‌ ಅವರ ಸರಣಿ ಹಾಡುಗಳು ಬಂದಿಲ್ಲವಾದರೂ ಸಂಗೀತ ಪ್ರೇಮಿಗಳಲ್ಲಿ ಶಂಕರ್‌ ಬಗೆಗಿರುವ ಹೊಸತನದ ಕುತೂಹಲ ಕಡಿಮೆ ಆಗಿಲ್ಲ. ಅವರಿಂದ ಇನ್ಯಾವ ಹಾಡಿಗೆ ಹೊಸರೂಪು ದಕ್ಕಬಹುದು ಎನ್ನುವ ಚಿಂತನೆಯಲ್ಲೇ ಪುಳಕಗೊಳ್ಳುತ್ತಿದ್ದಾರೆ. 

ಸಂಗೀತ ಆಲಿಸಲು- www.shankartucker.com ಲಿಂಕ್ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT