ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರಿಗೆ ಹೋಂವರ್ಕ್!

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಇದೀಗ ಮಕ್ಕಳಿಗೆ ರಜೆ! ಈ ಬೇಸಿಗೆಯಲ್ಲಿ ಪೋಷಕರು ಏಕೆ ಕೆಲವು ವಿಶಿಷ್ಟ ಮನೆಗೆಲಸ ಮಾಡಬಾರದು? ಬದಲಾವಣೆಯೇ ಬದುಕಿನ ಜೀವಾಳವಾಗುತ್ತಿರುವ ಈ ಹೊತ್ತಿನಲ್ಲಿ ಮುಂದಿನ ಜನಾಂಗವಾಗಲಿರುವ ನಮ್ಮ ಕೂಸುಗಳ ನಾಳೆಗಳನ್ನು ಕುರಿತಾಗಿ ಕೆಲವು ಮನೆಗೆಲಸ ಮಾಡುವುದು ಯುಕ್ತ. ಪ್ರಸ್ತುತ ‘ದೊಡ್ಡವರ’ ಈ ಜಗತ್ತಿನಲ್ಲಿ ನಾವು ಅನೇಕ ಹುಳುಕುಗಳನ್ನು ಕಾಣುತ್ತಿದ್ದೇವೆ. ಕಂಡು ಮರುಗುತ್ತಿದ್ದೇವೆ.

ಹೇಸುವುದೂ ಉಂಟು! ಹಾಗಿದ್ದಲ್ಲಿ, ಮುಂದೆ ನಮ್ಮ ಮಕ್ಕಳು ಪ್ರೌಢರಾದಾಗ ಎಂತಹ ಜಗತ್ತಿನಲ್ಲಿ ಅವರು ಬದುಕಬಹುದು? ಒಮ್ಮೆ ಯೋಚಿಸಬೇಕು. ಅವರ ‘ಆ’ ಜಗತ್ತು ಸುಂದರವಾಗಿರಬೇಕಾದರೆ ‘ಇಂದು’ ನಾವು ಅದಕ್ಕೆ ತಕ್ಕಂಥ ಅಸ್ತಿಭಾರ ಹಾಕಬೇಕು. ನಮ್ಮ ಜಗತ್ತಿನ ಲೋಪದೋಷಗಳನ್ನು ಹಾಗೂ ಅದನ್ನು ಉಂಟುಮಾಡುತ್ತಿರುವ ನಮ್ಮ ಅನಿವಾರ್ಯ ಪರಿಸ್ಥಿತಿಗಳನ್ನು ಅರ್ಥೈಸಿಕೊಂಡರೆ ಪರಿಹಾರ ಅಷ್ಟು ಕಷ್ಟವಲ್ಲ – ನಮ್ಮ ಈಗೋವನ್ನು ಅದೆಷ್ಟೋ ದೂರ ಬಿಟ್ಟುಬಂದರೆ! ಪ್ರಯತ್ನ ಮಾಡೋಣ!

ಇಂದು ನಮಗೆ ಸಮಾಜದಲ್ಲಿ ಕಾಣುತ್ತಿರುವ ದೋಷಗಳಲ್ಲಿ ಪ್ರಮುಖವಾದವು ಅನುಕಂಪರಾಹಿತ್ಯ, ಅಸಹನೆ ಮತ್ತು ಹಣದ ವ್ಯಾಮೋಹ. ಇದು ಇತ್ತೀಚಿನ ಬೆಳೆವಣಿಗೆ. ಅಂದರೆ, ಸುಮಾರು ಮೂರು ಅಥವಾ ನಾಲ್ಕು ದಶಕಗಳಲ್ಲಿ ನಮ್ಮ ಜಗತ್ತು ಕಂಡ ಪರಿವರ್ತನೆ. ಇದಕ್ಕೂ ಹಿಂದೆ ಸಮಾಜ ದೋಷರಹಿತವಾಗಿತ್ತು ಎಂದು ಇದರರ್ಥವಲ್ಲ.

ದೋಷವೇ ಇರದ ಸಮಾಜ ಅಸಾಧ್ಯ – ಹಿಂದು, ಇಂದು, ಮುಂದೆಂದೂ! ಅಂದರೆ, ಈಗ ಆಗಬೇಕಾಗಿರುವುದೇನು? ಒಂದು ಸಹ್ಯಪ್ರಪಂಚದ ನಿರ್ಮಾಣ. ಅಂತಹ ಸಹ್ಯಜಗತ್ತು ಹಿಂದೆ ಇತ್ತು (ಅಪವಾದಗಳನ್ನು ಹೊರತುಪಡಿಸಿ). ಅದು ಇಂದೂ ಸಾಧ್ಯ. ಇದಕ್ಕಾಗಿ ಪೋಷಕರು ಮನಸಾ ತೊಡಗಿಸಿಕೊಳ್ಳಬೇಕು. ಚಿಂತನಶೀಲರಾಗಬೇಕು.

‘ಇಂದಿನ ಧಾವಂತದ ಜಗತ್ತಿನಲ್ಲಿ ನಮ್ಮ ಕೆಲಸಕ್ಕೆ ಸಮಯವಿಲ್ಲ, ಇನ್ನು ಮಕ್ಕಳಿಗೆಲ್ಲಿಂದ ತರೋಣ’ ಎಂಬುದು ಪೋಷಕರ ಘೋಷವಾಕ್ಯ! ಆದರೆ, ಅತೀ ಮುಖ್ಯವಾದ ‘ನಮ್ಮ ಕೆಲಸಗಳಲ್ಲಿ’ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ತೋರುವುದೂ ಒಂದಾಗಿದೆ, ಒಂದಾಗಿಸಿಕೊಳ್ಳಬೇಕು.

ನಮ್ಮ ಮಕ್ಕಳಿಗೆ ಸಾಮಾನ್ಯವಾಗಿ ಇಂದು ಕಾಣುವ ಜಗತ್ತು ‘ಹಣವೇ ಸರ್ವಸ್ವ’ ಎನಿಸುವ, ಕೊರಳಿರಿಯುವ ಸ್ಪರ್ಧೆಯ ಲೋಕ. ಇದರ ಜೊತೆ ಜೊತೆಗೆ ಬೇರೆ ಒಂದು ಜಗತ್ತಿದೆ, ಆದರ್ಶಗಳ ಬದುಕಿದೆ ಮತ್ತು ಅದು ಈ ಬರಡು ಬದುಕಿಗಿಂತ ಮೌಲ್ಯಯುತವಾದದ್ದು, ಶಕ್ತಿಯುತವಾದದ್ದು ಹಾಗೂ ಶಾಂತಿ–ನೆಮ್ಮದಿಯನ್ನು ತಂದುಕೊಡುವಂತಹದ್ದು ಎಂಬುದನ್ನು ಅವರಿಗೆ ತೋರಿಸಿಕೊಡಬೇಕು.

ಇದು ಹೇಗೆ? ಪರಿಹಾರ ಹಲವು ವಿಧಾನಗಳ ಸಮ್ಮಿಳಿತ ಪರಿಣಾಮವಾಗಿರುತ್ತದೆ. ಇದನ್ನು ಪೋಷಕರು ರೂಢಿಸಿಕೊಳ್ಳ ಬೇಕು. ಮೊದಲನೆಯದಾಗಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳ ಬೇಕು. ಇದು ಇಲ್ಲದಿದ್ದರೂ ಮಕ್ಕಳಿಗಾಗಿ ಬೆಳಸಿಕೊಳ್ಳಲೇಬೇಕು.

ಮಾನವನು ರೂಢಿಸಿಕೊಂಡಿರುವ ಅತಿ ಕೆಟ್ಟ ಚಟವೆಂದರೆ ಪುಸ್ತಕ ಓದದೇ ಇರುವುದು. ಯಾವುದೇ ಭಾಷೆಯದ್ದಾಗಲಿ – ಒಳ್ಳೆಯ ಪುಸ್ತಕಗಳನ್ನು, ಅದರಲ್ಲಿಯೂ ಆತ್ಮಕತೆಗಳನ್ನು ಓದಬೇಕು. ಮಕ್ಕಳಿಗೆ ಹೇಳಬೇಕು. ಇದು ಬದುಕು ಹೇಗೆಲ್ಲಾ ಇರಬಹುದು ಎಂಬುದನ್ನು ತೋರಿಸುತ್ತದೆ,

ಅವರಿಗೆ. ಕೆಲವು ಉದಾಹರಣೆಗಳನ್ನು ನೋಡಿ: ಕುಂ. ವೀರಭದ್ರಪ್ಪ ಅವರ ಆತ್ಮಕತೆ ‘ಗಾಂಧೀಕ್ಲಾಸ್‍’ನಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನದ ಅತಿದೊಡ್ಡ ಆಸೆ ಎಂದರೆ – ‘ಒಂದಿನನಾರ ಹೊಟ್ಟೆತುಂಬ ಊಟಮಾಡಬೇಕು’ ಎನ್ನುವ ವಾಕ್ಯ, ಡಾ ನಾಗಲೋಟಿಮಠರ ಆತ್ಮಕತೆ ‘ಬಿಚ್ಚಿದ ಜೋಳಿಗೆ’ಯಲ್ಲಿ ಬರುವ – ಅವರು ಮುಂಬೈನ ಫುಟ್‌ಪಾತ್ ಮೇಲೆ ಮಲಗಿ ರಾತ್ರಿಗಳನ್ನು ಕಳೆಯಬೇಕಾದ ಪ್ರಸಂಗ, ದಿನಗಟ್ಟಲೆ ಉಪವಾಸವಿರಬೇಕಾಗಿ ಬಂದ ಪ್ರಸಂಗ.

ಇಂಥವು ಸಾಮಾನ್ಯವಾಗಿ ನಮ್ಮ ಮಕ್ಕಳು ನೋಡದ ಜೀವನದ ಮಗ್ಗುಲನ್ನು ತೋರಿಸುತ್ತವೆ. ಹಾಗೆಯೇ ಸ್ಯಾಮ್ ಪಿತ್ರೋಡ ಅವರ ‘ಭಾರತದ ಬೆಸುಗೆ’ (ಕನ್ನಡ ಅನುವಾದ) ಅನೇಕ ಆದರ್ಶಗಳನ್ನು, ಕೆಲಸ ಮಾಡುವ ರೀತಿಯನ್ನು ತಿಳಿಸುತ್ತದೆ.

ಗಾಂಧೀ, ಅಂಬೇಡ್ಕರ್ ಅವರಂತಹ ಮಹಾತ್ಮರ ಆತ್ಮಕತೆಗಳು, ಭಾಷಣಗಳ ಸಂಗ್ರಹ ಮತ್ತೊಂದು ಜಗತ್ತನ್ನು ತೆರೆದಿಡುತ್ತದೆ. ಈ ಕಾರ್ಯವನ್ನು ನಾವು ನಮ್ಮ ಮಕ್ಕಳಿಗಾಗಿ ಮಾಡಬೇಕು. ಇದರ ಜೊತೆಜೊತೆಗೆ ಅವರು ಕಷ್ಟಪಟ್ಟು ಓದಲಿ, ಬೇಕಾದ್ದನ್ನು ಸಾಧಿಸಲಿ. ಆದರೆ, ಸಮಾಜದ ಒಂದು ಋಣ ನಮ್ಮ ಮೇಲಿದೆ. ಅದನ್ನು ತೀರಿಸಬೇಕಾದ ಕರ್ತವ್ಯವೂ ನಮಗಿದೆ ಎಂಬುದು ಅವರಲ್ಲಿ ಮೂಡಬೇಕು.

ತಂದೆತಾಯಿಗಳಲ್ಲದ ಪೋಷಕರಾದಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿ ಬರುತ್ತದೆ. ಆ ಮಗುವಿಗೆ ತನ್ನ ಪರಿಸ್ಥಿತಿ ನೋವುಂಟು ಮಾಡದಂತೆ ನೋಡಿಕೊಳ್ಳುವುದೂ ಪೋಷಕರ ಜವಾಬ್ದಾರಿಯೇ. ಈ ಹಿನ್ನೆಲೆಯ ಕೆಲವು ಮಕ್ಕಳು ಮಾನಸಿಕವಾಗಿ ಗಟ್ಟಿ ಇರುತ್ತಾರಾದರೂ, ಖಿನ್ನತೆಯಲ್ಲಿ ಇಡೀ ಜೀವನ ಕಳೆದುಕೊಳ್ಳವವರ ಸಂಖ್ಯೆ ಕಡಿಮೆಯೇನಿಲ್ಲ. ಆದ್ದರಿಂದ, ಇದು ಕೇವಲ ಸಹಾಯ ಮಾಡುವ ಔದಾರ್ಯದ ಪ್ರಶ್ನೆಯಲ್ಲ – ಒಂದು ಸುಂದರ ಭವಿಷ್ಯವನ್ನು ನಿರ್ಮಿಸುವ ಕರ್ತವ್ಯ.



ಕಲಿಕೆ ಎಂಬುದೊಂದು ನಿರಂತರ ಪ್ರಕ್ರಿಯೆ. ಇದಕ್ಕೆ ವಯಸ್ಸಿನ ಹಂಗಿಲ್ಲ. ಹಾಗೆಯೇ, ಪ್ರತಿ ಗಳಿಗೆಯೂ, ಘಟನೆಯೂ ಏನಾದರೊಂದನ್ನು ಕಲಿಸುತ್ತಲೇ ಇರುತ್ತದೆ. ಇದನ್ನು ಗಮನಿಸಲು ಮಕ್ಕಳಿಗೆ ತಿಳಿಹೇಳಬೇಕು. ಮ್ಯೂಸಿಯಂಗಳಲ್ಲಿ ಪ್ರದರ್ಶಿಕೆಗಳನ್ನು ಹಾಳು ಮಾಡುವುದು, ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಗೋಳಾಡಿಸುವುದು – ಇಂಥವನ್ನು ನೋಡಿಯೂ ಮಕ್ಕಳಿಗೆ ತಿಳಿಹೇಳದವರು ಎಂತಹ ಪೋಷಕರು! ನಡತೆಯ ಕಲಿಕೆ ಎಲ್ಲ ಕಡೆಗಳಲ್ಲಿಯೂ ಸಾಗಬೇಕು.

ಇನ್ನು ಹಿರಿಯರಾದ ನಮ್ಮ ನಡವಳಿಕೆ, ಇದೇ ಮುಖ್ಯ. ಮಕ್ಕಳು ನಮ್ಮನ್ನು ಅನುಕರಿಸುತ್ತವೆ. ಆದ್ದರಿಂದ ನಾವೊಂದು ಅನುಕರಣೀಯ ಜೀವನವನ್ನು ನಡೆಸಬೇಕು. ಕೆಲವರು ‘ಹಣಕ್ಕೆ ಬೆಲೆ ಕೊಡಬಾರದು’ ಎನ್ನುತ್ತಾರೆ. ಮತ್ತೆ ಕೆಲವರು ‘ಹಣವಿಲ್ಲದೆ ಬದುಕಲಾಗುತ್ತದೆಯೇ?’ ಎಂದು ಕೇಳುತ್ತಾರೆ. ಆದರೆ, ವಾಸ್ತವಾಂಶವೇನು? ಹಣಕ್ಕೆ ಅದಕ್ಕಿರುವ ಮೌಲ್ಯ ಇದ್ದೇ ಇರುತ್ತದೆ. ಆ ಬೆಲೆಯನ್ನು ನಾವದಕ್ಕೆ ಕೊಟ್ಟೇ ತೀರಬೇಕು.

ಹೆಚ್ಚೂಬೇಡ, ಕಡಿಮೆಯೂ ಬೇಡ. ಹಣಕ್ಕಿರುವ ಬೆಲೆ ಮತ್ತು ಶಕ್ತಿ – ಇವನ್ನು ಮಕ್ಕಳಿಗೆ ಮನಗಾಣಿಸಬೇಕು. ನನ್ನಲ್ಲಿರುವ ಹೆಚ್ಚುವರಿ ಹಣ, ಹಣವಿಲ್ಲದ ಒಬ್ಬ ಬಡವ್ಯಕ್ತಿಯ ಚಿಕಿತ್ಸೆಗೋ ಮತ್ತೊಂದು ಅವಶ್ಯಕತೆಗೋ ಆಗಬಹುದಲ್ಲವೇ? ಅದನ್ನು ಜಾಣ್ಮೆಯಿಂದ ಮಾಡುವುದನ್ನು ಕಲಿಸಬೇಕು. ಕೊಡುವುದರಲ್ಲಿನ ಸಂತಸವನ್ನು ಮಕ್ಕಳಿಗೆ ತೋರಿಸಬೇಕು.

ಮಕ್ಕಳು ಬೆಳೆಯುತ್ತಿರುವಂತೆಯೇ, ನಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭವಾಗಬೇಕು! ಅವರಿಗಾಗಿ, ಅರ್ಥಾತ್‍ ಮುಂದಿನ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳ ವಯಸ್ಸಿಗನುಗುಣವಾಗಿ ಅವರ ಮಟ್ಟದ ಸಾಹಿತ್ಯವನ್ನು ಓದಿ, ಅವರಿಂದ ಓದಿಸಬೇಕು. ಸಣ್ಣಮಕ್ಕಳ ಭಾವಕೋಶ ಸಮೃದ್ಧವಾಗುವುದು ಬಹಳ ಮುಖ್ಯ. ಇದಕ್ಕಾಗಿ ಕತೆ ಹೇಳುವುದು ಮುಖ್ಯ. ಆದರೆ, ಇಂದು ಕತೆ ಹೇಳುವವರು ಯಾರು?

ಕತೆಗಳನ್ನು ನಮ್ಮದಾಗಿಸಿಕೊಳ್ಳಲು ಈಗ ದಾರಿಗಳು ಸಾಕಷ್ಟಿವೆ. ಕತೆ ಹೇಳುವ ಅಡಕತಟ್ಟೆ, ಜಾಲತಾಣಗಳು ಮಾತ್ರವಲ್ಲದೆ, ಆ್ಯಪ್‌ಗಳೂ ಲಭ್ಯವಿವೆ. ಅವುಗಳನ್ನು ಬಳಸಿಕೊಳ್ಳಬಹುದು. ಮಕ್ಕಳು ಬೆಳೆದಂತೆಯೇ ಅವರ ಗೆಳೆಯರಾಗುವ ಪ್ರಕ್ರಿಯೆ ಬೆಳೆಯುತ್ತಾ ಹೋಗಬೇಕು.

ವಯಸ್ಸಿನ ಅಂತರ ತಲೆಮಾರುಗಳ ಅಂತರವಾಗಲು ಬಿಡಬಾರದು. ಇದಕ್ಕಾಗಿ ಹಿರಿಯರು ಅವಶ್ಯವಾದಲ್ಲಿ ಕಂಪ್ಯೂಟರ್ ಇತ್ಯಾದಿ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಹಾಗೆಯೇ, ದಿನಗಳೆದಂತೆ ಕೆಲವು ಬದಲಾವಣೆಗಳನ್ನು ಸ್ವೀಕರಿಸಬೇಕು. ಆದರೆ, ಆ ಕುರಿತು ಮುಕ್ತವಾಗಿ ಮಕ್ಕಳೊಂದಿಗೆ ಚರ್ಚಿಸುವಷ್ಟು ಸಲಿಗೆ, ಸ್ನೇಹ ಗಳಿಸಿಕೊಂಡಿರಬೇಕು.

ಮಗ/ಮಗಳು ಏನನ್ನೇ ಆಗಲಿ ಮನೆಯಲ್ಲಿ ಹೇಳುವಂತಹ ವಾತಾವರಣ ಅಪ್ರಯತ್ನಪೂರ್ವಕವಾಗಿ ಸೃಷ್ಟಿಯಾಗಿರಬೇಕು. ಇದು ನಿರಂತರ ಪ್ರಯತ್ನ, ಪ್ರೀತಿಯಿಂದ ಮಾತ್ರ ಸಾಧ್ಯ. ಪ್ರೀತಿಯೆಂಬುದೊಂದು ಪ್ರಚಂಡ ಶಕ್ತಿ. ಅದನ್ನು ಯುಕ್ತವಾಗಿ ಬಳಸಿಕೊಳ್ಳಬೇಕು. ಮಕ್ಕಳು ಅಕಸ್ಮಾತ್ ಹಾದಿತಪ್ಪಿದರೂ ‘ಮತ್ತೆ ಬದುಕಿಗೆ ಪಯಣ’ ಸಾಧ್ಯವಾಗುವುದು ಈ ಪ್ರೀತಿಯಿಂದಲೇ. ಜಗತ್ತಿನ ಎಲ್ಲ ಅಣುಬಾಂಬುಗಳಿಗಿಂತ ಶಕ್ತಿಶಾಲಿ ಅಸ್ತ್ರ ಪ್ರೀತಿ. ನಮ್ಮ ಮಕ್ಕಳೂ ಮಕ್ಕಳೇ, ಇತರರ ಮಕ್ಕಳೂ ನಮ್ಮ ಮಕ್ಕಳೆ.

ಇನ್ನೊಂದು ಮಹತ್ವದ ವಿಷಯ, ಸಾಮಾನ್ಯವಾಗಿ ಮನೆಗಳಲ್ಲಿ ಮಕ್ಕಳಿಗೂ ಪೋಷಕರಿಗೂ ಮನಸ್ತಾಪ ತರುವುದೆಂದರೆ, ಮಕ್ಕಳ ಓದಿನ ಆಯ್ಕೆ. ಇಂದು ಮಕ್ಕಳು ಬುದ್ಧಿವಂತರಿದ್ದಾರೆ, ಅವರಿಗೆ ಹೊರಜಗತ್ತಿನ ಹೆಚ್ಚು ಸಂಪರ್ಕವಿದೆ. ಅವರ ಮುಂದೆ ಅಸಂಖ್ಯ ಆಯ್ಕೆಗಳಿವೆ. ಹೀಗಿರುವಾಗ ಹಟ ಹಿಡಿಯುವ ಬದಲು, ಅವರ ಆಯ್ಕೆಯ ಕುರಿತಾಗಿ ಸಕಾರಾತ್ಮಕ, ಸತಾರ್ಕಿಕ ಚರ್ಚೆ ನಡೆಸುವುದು ಒಳ್ಳೆಯದು. ತೀರ್ಮಾನ ಅವರೇ ತೆಗೆದುಕೊಳ್ಳಲಿ.

ಅವರಿಗೆ ಆ ತೀರ್ಮಾನದಲ್ಲಿನ ಜವಾಬ್ದಾರಿಯನ್ನು ಹೇಳಿರಿ. ಐನ್‌ಸ್ಟೈನ್‍ ಒಂದು ಮಾತು ಹೇಳಿದ್ದಾರೆ: ‘ನನ್ನ ಮಕ್ಕಳೇ ಅದರೂ ಅವರ ಬದುಕನ್ನು ಎಡಿಟ್‍ ಮಾಡುವ ಹಕ್ಕು ನನಗಿಲ್ಲ’. ತೀರ್ಮಾನ ಈ ಚೌಕಟ್ಟಿನಲ್ಲಿ ನಡೆಯಬೇಕು.

ಒಟ್ಟಾರೆ ಇದು ಚಿಂತನಶೀಲತೆಯ ಪ್ರಶ್ನೆ. ನಾವು ಅರಿತು, ಮಕ್ಕಳಿಗೂ ಅರಿವು ಮೂಡಿಸುವ ಪವಿತ್ರ ಕಾರ್ಯ. ಇದು ಕೇವಲ ಶಾಲೆಕಾಲೇಜುಗಳಲ್ಲಿ ಸಾಧ್ಯವಿಲ್ಲ. ಮನೆ ಕಲಿಸದ ಶಿಸ್ತನ್ನು ಶಾಲೆ ಎಂದಿಗೂ ಕಲಿಸಲಾರದು. ಈ ಅರಿವು ಪೋಷಕರಾದ ನಮ್ಮಲ್ಲಿ ಬರುವುದು ಬಹಳ ಮುಖ್ಯ. ಈ ಹಾದಿಯಲ್ಲಿ ನಾವೆಷ್ಟು ಸಾಗಿದ್ದೇವೆ ಎಂಬ ಚಿಂತನೆ ನಡೆಸುವ ಹಾಗೂ ಮುನ್ನಡೆಯುವ ‘ಮನೆಗೆಲಸ’ವನ್ನು ನಾವೆಲ್ಲ ಮಾಡಬೇಕಿದೆ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT