ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ ನೆನಪಿನ ಸುಗ್ಗಿ ಸಂಭ್ರಮ

Last Updated 16 ಏಪ್ರಿಲ್ 2017, 20:06 IST
ಅಕ್ಷರ ಗಾತ್ರ

ಬೆಂಗಳೂರು: ಹಳ್ಳಿಗಾಡಿನ ಸುಗ್ಗಿಯ ಸಂಭ್ರಮ ಅಲ್ಲಿ ಮನೆಮಾಡಿತ್ತು. ಬಿಳಿ ಅಂಗಿ, ಪಂಚೆ ತೊಟ್ಟು, ಹೆಗಲ ಮೇಲೆ ವಲ್ಲಿ ಹಾಕಿಕೊಂಡು ರೈತರಂತೆ ಓಡಾಡುತ್ತಿದ್ದ ಪುರುಷರು, ಬಣ್ಣ ಬಣ್ಣದ ಸೀರೆಗಳನ್ನು ತೊಟ್ಟು ಕಂಗೊಳಿಸುತ್ತಿದ್ದ ಮಹಿಳೆಯರು.  ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದ ವೀರಗಾಸೆ, ಕಂಸಾಳೆ, ಡೊಳ್ಳುಕುಣಿತ  ಕಲಾವಿದರ ಪ್ರದರ್ಶನ.

ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಭಾನುವಾರ ಕಂಡು ಬಂದ ದೃಶ್ಯಗಳಿವು. ಪ್ರೀತಿ ಪುಸ್ತಕ ಪ್ರಕಾಶನದ ವತಿಯಿಂದ ‘ಡಾ.ರಾಜಕುಮಾರ್‌ ಜಾನಪದ ಹಬ್ಬ’ದ ಪ್ರಯುಕ್ತ ರಾಶಿ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಪೂಜೆಯಲ್ಲಿ ರಾಜ್‌ಕುಮಾರ್‌ ಅವರ ಸಹೋದರಿ ಎಸ್‌.ಪಿ.ನಾಗಮ್ಮ, ನಟ ರಾಘವೇಂದ್ರ ರಾಜ್‌ಕುಮಾರ್‌, ಎಸ್‌.ಪಿ. ವರದರಾಜ್‌ ಕುಟುಂಬದವರು ಪಾಲ್ಗೊಂಡಿದ್ದರು.

ರಾಗಿ ಹಾಗೂ ಭತ್ತದ ರಾಶಿ ಹಾಕಿ ಅದರ ಪಕ್ಕದಲ್ಲೇ ಎತ್ತಿನ ಬಂಡಿ, ಉಣ್ಣೆಯ ಕಂಬಳಿ, ಜರಡಿ, ಮೊರ, ಪೊರಕೆ, ಚಾಟಿಕೋಲು ಸೇರಿದಂತೆ ಕೃಷಿ ಚುಟುವಟಿಕೆಗಳಿಗೆ ಬಳಸುವ ಪರಿಕರಗಳನ್ನು ಇಡಲಾಗಿತ್ತು. ಅವುಗಳಿಗೆ ಮಾವಿನ ತೋರಣ ಕಟ್ಟಿ, ಹೂವು, ಅರಿಶಿಣ, ಕುಂಕುಮ ಇಟ್ಟು ರಾಶಿ ಪೂಜೆ ಮಾಡಲಾಯಿತು.

ಹೊಸಕೋಟೆಯಿಂದ ಬಂದಿದ್ದ ಮಕ್ಕಳು ಪ್ರದರ್ಶಿಸಿದ ಕಂಸಾಳೆಯು ಗಮನ ಸೆಳೆಯಿತು.

‘ನಾವು ಆರು ಮಂದಿ ಬಂದಿದ್ದೇವೆ. ಕಂಸಾಳೆಯನ್ನು ಹಲವು ದಿನಗಳಿಂದ ಅಭ್ಯಾಸ ಮಾಡುತ್ತಿದ್ದೇವೆ. ಈ ಹಬ್ಬದಲ್ಲಿ ಪ್ರದರ್ಶನ ನೀಡಿದ್ದಕ್ಕೆ ಖುಷಿಯಾಗಿದೆ’ ಎಂದು 3ನೇ ತರಗತಿಯ ವಿದ್ಯಾರ್ಥಿನಿಯರಾದ ಮಧುಶ್ರೀ ಹಾಗೂ ಬಿಂದು ಸಂತಸ ಹಂಚಿಕೊಂಡರು.

ಡೊಳ್ಳು ಕುಣಿತದ ಕಲಾವಿದ, ಬಾಗಲಕೋಟೆಯ ಬಸಪ್ಪ ಪೂಜಾರಿ ಮಾತನಾಡಿ, ‘ನಾನು ರಾಜ್‌ಕುಮಾರ್‌ ಅವರ  ಅಭಿಮಾನಿ. ಅವರ ಸಾಕಷ್ಟು ಚಿತ್ರಗಳನ್ನು ನೋಡಿದ್ದೇನೆ. ನಾನು ಕಲಾವಿದನಾಗಲು ಅವರೇ ಪ್ರೇರಣೆ’ ಎಂದರು.

ವಿಜಯನಗರದ ಹರ್ಷ ಎಂಬುವರು ರಾಜ್‌ಕುಮಾರ್‌ ಅವರ ಚಿತ್ರಗಳ ಹೆಸರು ಮತ್ತು ಬಿರುದುಗಳನ್ನು ಒಂದೇ ಉಸಿರಿನಲ್ಲಿ ಹೇಳುವ ಮೂಲಕ ಗಮನ ಸೆಳೆದರು.
ಸಭಾ ಕಾರ್ಯಕ್ರಮ ಸಹ ಗ್ರಾಮೀಣ ಸೊಗಡಿನಿಂದ ಕೂಡಿತ್ತು. ವೇದಿಕೆಯಲ್ಲಿ ಕಬ್ಬು ಹಾಗೂ ಬಾಳೆಯ ಕಂದುಗಳನ್ನು ಇಟ್ಟು ಹೂವುಗಳಿಂದ ಅಲಂಕರಿಸಲಾಗಿತ್ತು. ಗಣ್ಯರಿಗೆ ವಲ್ಲಿ ಬಟ್ಟೆ (ಟವೆಲ್‌) ನೀಡಲಾಯಿತು.

ಪುರಾಣ ಪುರುಷ ರಾಜ್‌ಕುಮಾರ್‌: ಲೇಖಕ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ‘ಎನಗಿಂತ ಕಿರಿಯರಿಲ್ಲ ಎಂಬ ವಚನಕಾರರ ಮಾತನ್ನು ಜೀವಿಸಿ ತೋರಿಸಿದವರು ರಾಜ್‌ಕುಮಾರ್‌. ಕುವೆಂಪು ಅವರು ಸಾಮಾನ್ಯ ಜನರನ್ನು ಶ್ರೀಸಾಮಾನ್ಯರು ಎಂದು ಕರೆದಹಾಗೆ, ರಾಜ್‌ಕುಮಾರ್‌ ಅವರು ಪ್ರೇಕ್ಷಕರನ್ನು ಅಭಿಮಾನಿ ದೇವರು ಎಂದು ಕರೆದರು’ ಎಂದರು.

ಸಾಹಿತಿಯಂತೆ ಯೋಚಿಸುತ್ತಿದ್ದರು: ಕೃಷ್ಣಮೂರ್ತಿ ಹನೂರು ಅವರು, ‘ದಾನ ಕೊಟ್ಟೆ ಎನ್ನುವುದು ಅಹಂಕಾರ ಆಗುತ್ತದೆ. ಅದನ್ನು ಸೇವೆ ಎನ್ನುವುದು ಸರಿಯಾದದ್ದು ಎಂದು ರಾಜ್‌ಕುಮಾರ್‌ ಹೇಳಿದ್ದರು. ಟಾಲ್‌ಸ್ಟಾಯ್‌ ಸಹ ಇದೇ ಮಾತನ್ನು ಹೇಳಿದ್ದರು. ಅವರು ಸಾಹಿತಿಗಳಂತೆ  ಚಿಂತನೆ ಮಾಡುತ್ತಿದ್ದರು ಎಂಬುದಕ್ಕೆ ಇದು ಉದಾಹರಣೆ’ ಎಂದು ತಿಳಿಸಿದರು.

‘ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ವಿದ್ಯುತ್‌, ಬಸ್‌ ಇಲ್ಲದ ಕಾಲದಲ್ಲೇ ಸರ್‌ ಎಂ.ವಿಶ್ವೇಶ್ವರಯ್ಯ, ಕುವೆಂಪು ಹಾಗೂ ರಾಜ್‌ಕುಮಾರ್‌ ಅವರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಈ ಮೂವರು ದಂತಕತೆ ಎನಿಸಿಕೊಂಡಿದ್ದರು’ ಎಂದು ನೆನಪು ಮಾಡಿಕೊಂಡರು.

**

ವನವಾಸವೆಂಬ ಪರೀಕ್ಷೆ ಗೆದ್ದ ರಾಜ್‌

‘ಮಹಾಭಾರತ, ರಾಮಾಯಣದಂತಹ ಪುರಾಣಗಳಲ್ಲಿ ಬರುವ ನಾಯಕರು ವನವಾಸ ಅನುಭವಿಸಿರುವುದನ್ನು ಕಾಣಬಹುದು. ಅದೇ ರೀತಿಯಲ್ಲಿ ರಾಜ್‌ಕುಮಾರ್‌ ಅವರೂ ವನವಾಸ ಅನುಭವಿಸಿದ್ದರು. ಆ ಮೂಲಕ ಪುಟಕ್ಕಿಟ್ಟ ಚಿನ್ನದಂತೆ ಹೊರಹೊಮ್ಮಿದ್ದರು’ ಎಂದು ಸಾಹಿತಿ ಕೆ.ಮರುಳಸಿದ್ದಪ್ಪ ಹೇಳಿದರು.

‘ರಂಗಭೂಮಿಯಿಂದ ಬಂದವರು ಉತ್ತಮ ನಟರಾಗುತ್ತಾರೆ. ಇದಕ್ಕೆ ವರನಟ ಉತ್ತಮ ಉದಾಹರಣೆ. ಆದರೆ, ರಂಗಭೂಮಿಯ ಪರಿಚಯ ಇಲ್ಲದೆ ನೇರವಾಗಿ ಬೆಳ್ಳಿತೆರೆ ಪ್ರವೇಶಿಸುವವರು ಸ್ಟಾರ್‌ಗಳಾಗುತ್ತಾರೆ. ಅವರಿಗೆ ಸಮುದಾಯದ ನಾಡಿಮಿಡಿತದ ಬಗ್ಗೆ ಗೊತ್ತಿರುವುದಿಲ್ಲ’ ಎಂದರು.‘ರಾಜ್‌ಕುಮಾರ್‌ ಅವರ ಜೀವನ ಚರಿತ್ರೆಯನ್ನು ದೊಡ್ಡಹುಲ್ಲೂರು ರುಕ್ಕೋಜಿ ಅವರು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT