ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆನ್‌ಲೈನ್ ವ್ಯವಸ್ಥೆ’ಯತ್ತ ಜಿಲ್ಲಾ ಆಸ್ಪತ್ರೆ ಚಿತ್ತ

Last Updated 17 ಏಪ್ರಿಲ್ 2017, 4:39 IST
ಅಕ್ಷರ ಗಾತ್ರ
ಚಿತ್ರದುರ್ಗ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ. 50 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿದೆ. ನವಜಾತ ಶಿಶುಗಳ ವಿಶೇಷ ಆರೈಕೆ ಘಟಕ ಉದ್ಘಾಟನೆ ಆಗಿದೆ. ಇವೆಲ್ಲದರ ಜತೆಗೆ ಜಿಲ್ಲಾ ಆಸ್ಪತ್ರೆ ಇನ್ನು ಮುಂದೆ ‘ಇ-ಆಸ್ಪತ್ರೆ’ಯಾಗಲು ಹೆಜ್ಜೆ ಹಾಕುತ್ತಿದೆ.
 
ಇಲ್ಲಿಯವರೆಗೂ ಜಿಲ್ಲಾ ಆಸ್ಪತ್ರೆಗೆ ಬರುವ ಹೊರ ರೋಗಿಗಳು ಚೀಟಿ ಬರೆಸಬೇಕಿತ್ತು. ಒಳರೋಗಿಗಳ ಮಾಹಿತಿಯನ್ನು ನೋಂದಣಿ ಪುಸ್ತಕದಲ್ಲಿ ದಾಖಲಿಸಲಾಗುತ್ತಿತ್ತು. ರೋಗಿಗಳ ಚಿಕಿತ್ಸೆ ಇತಿಹಾಸ ತಿಳಿಯಲು ಆ ಪುಸ್ತಕಗಳನ್ನು ಪರಿಶೀಲಿಸಬೇ­ಕಿತ್ತು. 
 
ಈಗ ರೋಗಿಗಳ ಮಾಹಿತಿಯನ್ನು ಗಣಕೀಕೃತಗೊಳಿಸುತ್ತಿರುವುದರಿಂದ, ಇನ್ನು ಆ ತಾಪತ್ರಯ ಇಲ್ಲವಾಗಲಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಪ್ರತಿ ಹೊರ ರೋಗಿಯ ಎಲ್ಲ ಮಾಹಿತಿಯನ್ನೂ ಆನ್‌ಲೈನ್‌ನಲ್ಲಿ ದಾಖಲಿಸಲಾ­ಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ದಿನಕ್ಕೆ ಅಂದಾಜು 1,500 ಹೊರರೋಗಿಗಳು ದಾಖಲಾಗುತ್ತಿದ್ದು, ಈಗ ಎರಡು ಕೌಂಟರ್‌ಗಳನ್ನು ತೆರೆಯಲಾಗಿದೆ. ಇಬ್ಬರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
 
ಹೀಗಿದೆ ಆನ್‌ಲೈನ್ ಪ್ರಕ್ರಿಯೆ: ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ವ್ಯಕ್ತಿಗಳ ಹೆಸರು, ವಿಳಾಸ, ವಯಸ್ಸು ಇತ್ಯಾದಿ ಮಾಹಿತಿಯನ್ನು ‘ಇ-ಆಸ್ಪತ್ರೆ’ ತಂತ್ರಾಂಶಕ್ಕೆ ಎಂಟ್ರಿ ಮಾಡಿ ರಶೀದಿ ನೀಡಲಾಗುತ್ತದೆ.
 
ಆ ರಶೀದಿಯಲ್ಲಿ  ರೋಗಿಗೆ ನೀಡಿರುವ ವಿಶಿಷ್ಟ ಸಂಖ್ಯೆ ಮತ್ತು ಬಾರ್ ಕೋಡ್ ಮುದ್ರಿತವಾಗಿರುತ್ತದೆ. ಆ ಬಾರ್ ಕೋಡ್ ಸ್ಕ್ಯಾನ್ ಮಾಡಿದರೆ, ರೋಗಿಯ ಸಂಪೂರ್ಣ ವಿವರಣೆ ಒಂದು ಕ್ಷಣದಲ್ಲಿ ಲಭ್ಯವಾಗುತ್ತದೆ ಎಂದು ಕಂಪ್ಯೂಟರ್ ಆಪರೇಟರ್ ಸುಮಾ, ಇ-ಆಸ್ಪತ್ರೆ ಪ್ರಕ್ರಿಯೆ ವಿವರಣೆ ನೀಡುತ್ತಾರೆ.
 
‘ನಮ್ಮ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಯ ವಿವರಣೆಯನ್ನು ರಾಜ್ಯದ ಯಾವುದೇ ಇ-ಆಸ್ಪತ್ರೆ ಸೌಲಭ್ಯ ಹೊಂದಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆಯಬಹುದು.

ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಮಟ್ಟದ ಆಸ್ಪತ್ರೆಗಳಿಗೆ ರೋಗಿಗಳನ್ನು ಶಿಫಾರಸು ಮಾಡುವಾಗ, ರೋಗ ಮತ್ತು ಚಿಕಿತ್ಸೆಯ ಮಾಹಿತಿ ಹಂಚಿಕೆ ಸುಲಭವಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೆ.ಜಗದೀಶ್. 
 
ಪಾರದರ್ಶಕತೆ, ಗುಣಮಟ್ಟದ ಚಿಕಿತ್ಸೆ: ‘ಇ- ಆಸ್ಪತ್ರೆ’ಯಿಂದಾಗಿ ರೋಗಿಗಳ ಮಾಹಿತಿ ಗಣಕೀಕೃತವಾಗುತ್ತದೆ. ಇದರಿಂದ ಎಲ್ಲ ವೈದ್ಯರಿಗೂ ನಿಖರವಾಗಿ ರೋಗಿಗಳ ಮಾಹಿತಿ ಲಭ್ಯವಾಗು­ತ್ತದೆ. ಬಾರ್‌ಕೋಡ್ ಇರುವುದರಿಂದ ರೋಗಿಗಳು ಮರು ತಪಾಸಣೆಗೆ ಬಂದಾಗ, ವೈದ್ಯರಿಗೆ ಚಿಕಿತ್ಸೆ ನೀಡಲು ಸಹಾಯವಾಗು­ತ್ತದೆ.
 
ಆನ್‌ಲೈನ್ ವ್ಯವಸ್ಥೆ ನಿಖರ ಮಾಹಿತಿ ಜತೆಗೆ ಪಾರದರ್ಶಕ ಕಾರ್ಯನಿರ್ವಹಣೆ ನೆರವಾಗುತ್ತದೆ. ವೈದ್ಯರು ಮತ್ತು ಸಿಬ್ಬಂದಿ ಮೇಲಿನ ಒತ್ತಡ ತಗ್ಗುತ್ತದೆ. ಸುಳ್ಳು ವೈದ್ಯಕೀಯ ಪ್ರಮಾಣ ಪತ್ರಪಡೆಯಲು ಸಾಧ್ಯವೇ ಇಲ್ಲ. ಶುಲ್ಕ ಹಣದಲ್ಲಿ ವ್ಯತ್ಯಾಸದಂತಹ ಪ್ರಕರಣಗಳಿಗೂ ಕಡಿವಾಣ ಬೀಳುತ್ತದೆ ಎನ್ನುತ್ತಾರೆ ಸಿಬ್ಬಂದಿ.
***
ದಾಖಲಾತಿಗೆ ಏನು ಬೇಕು?
ರೋಗಿಯ ಹೆಸರು, ತಂದೆ ಹೆಸರು, ವಿಳಾಸ, ವಯಸ್ಸು, ಶಿಕ್ಷಣ, ಧರ್ಮ, ಜಾತಿ, ಯಾವ ರೀತಿ ಚಿಕಿತ್ಸೆ ಬೇಕೆಂಬ ಮಾಹಿತಿ ಒಳಗೊಂಡಂತೆ 10ರಿಂದ 15 ಅಂಶಗಳ ಮಾಹಿತಿಯೊಂದಿಗೆ ಒಪಿಡಿ ಕೌಂಟರ್‌ಗೆ ಬರಬೇಕು. ಚೀಟಿ ಬರೆಯುವುದಕ್ಕಿಂತ ಗಣಕೀಕೃತ ಮಾಹಿತಿ ದಾಖಲೆ ತುಸು ವಿಳಂಬವಾಗುತ್ತದೆ. ಆದರೆ, ಭವಿಷ್ಯದ ದೃಷ್ಟಿಯಿಂದ ಇದು ಉತ್ತಮ ವಿಧಾನ.

‘ಆಸ್ಪತ್ರೆ ಸೌಲಭ್ಯಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು. ಹಾಗೆಯೇ ಆ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಸಿಬ್ಬಂದಿಯನ್ನೂ ಕೊಡಬೇಕು. ಇಲ್ಲದಿದ್ದರೆ ಕೌಂಟರ್ ಎದುರು ನಿಂತು ರೋಗಿಗಳ ಕಡೆಯುವರು ಜಗಳಮಾಡುತ್ತಾರೆ’ ಎಂದು ಆಸ್ಪತ್ರೆ ಸಿಬ್ಬಂದಿ ಅನುಭವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.
****
ಸದ್ಯಕ್ಕೆ ಒಪಿಡಿಯಲ್ಲಿ ಆನ್‌ಲೈನ್ ವ್ಯವಸ್ಥೆ ಇದೆ. ಎಂಸಿಎಚ್, ಒಳರೋಗಿಗಳ ವಿಭಾಗಗಳಿಗೂ ವಿಸ್ತರಿಸಿ, ಪೂರ್ಣ ಗಣಕೀಕೃತಗೊಳಿಸಲಾಗುತ್ತದೆ.
ಡಾ. ಕೆ.ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT