ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಬೇಗೆ: ಪಾನೀಯಗಳ ಮೊರೆ

ನೆತ್ತಿ ಸುಡುವ ಬಿಸಿಲು ನೆರಳು ಬಯಸುವ ಒಡಲು
Last Updated 17 ಏಪ್ರಿಲ್ 2017, 5:08 IST
ಅಕ್ಷರ ಗಾತ್ರ
ಕಲಬುರ್ಗಿ: ನಗರದಲ್ಲಿ ಬಿಸಿಲ ಬೇಗೆಗೆ ಜನ ತತ್ತರಿಸುತ್ತಿದ್ದಾರೆ. ಬಿಸಿಲಿನ ತಾಪ ನಿವಾರಣೆಗಾಗಿ ಹಣ್ಣು, ಎಳನೀರು, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಹಣ್ಣಿನ ರಸ, ಎಳನೀರು ಹಾಗೂ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ.
 
ಮಾರ್ಚ್‌ ಆರಂಭದಲ್ಲಿಯೇ ಬಿಸಿಲು ಏರ ತೊಡಗಿದ್ದು, ಈಗ 43 ಡಿಗ್ರಿಗೆ ತಲುಪಿದೆ. ಮಳೆ ಬಾರದಿದ್ದರೆ ಸದ್ಯದಲ್ಲಿಯೇ 45 ಡಿಗ್ರಿಗೆ ತಲುಪುವ ಸಾಧ್ಯತೆ ಇದೆ. ಅಲ್ಲದೆ ಬಿಸಿ ಗಾಳಿಯೂ ಜನರನ್ನು ಹೈರಾಣ ಮಾಡುತ್ತಿದೆ. ಸಂಜೆ 7 ಗಂಟೆಯಾದರೂ ಬಿಸಿ ಗಾಳಿಯ ಕಾವು ಕಡಿಮೆಯಾಗುತ್ತಿಲ್ಲ.
 
ಇಡೀ ವಾತಾವರಣವೇ ಕೆಂಡದ ನಡುವಿನ ಸ್ಥಿತಿಗೆ ತಲುಪಿದೆ. ಬಿಸಿಲಿನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಜನತೆ ಕೂಲ್‌ ಪಾರ್ಲರ್‌ಗಳು ಮತ್ತು ರಸ್ತೆಬದಿ ಹಣ್ಣಿನ ರಸದ ಅಂಗಡಿಗಳ ಮೊರೆ ಹೋಗುತ್ತಿದ್ದಾರೆ. ಹಣ್ಣಿನ ರಸಕ್ಕೆ ಬೇಡಿಕೆ ಈ ವರ್ಷ ದುಪ್ಪಟ್ಟಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
 
ಎಳನೀರು, ಕಬ್ಬಿನರಸ, ಕಲ್ಲಂಗಡಿ, ಕರ್ಬೂಜ, ಸಪೋಟ ಹಣ್ಣಿನ ರಸಕ್ಕೂ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಏರಿಕೆಯಾಗಿದೆ. ₹25ರಿಂದ 30ಕ್ಕೆ ಒಂದು ಗ್ಲಾಸ್‌ ಹಣ್ಣಿನರಸ ಮಾರಾಟವಾಗುತ್ತಿದೆ.

‘ಬೇಸಿಗೆ ಆರಂಭದಲ್ಲಿ ₹20ರಿಂದ 25ಕ್ಕೆ ಮಾರಾಟವಾಗುತ್ತಿದ್ದ ಎಳನೀರು ದರ ಈಗ ₹30ರಿಂದ 35ರವರೆಗೂ ಹೆಚ್ಚಳವಾಗಿದೆ. ಅಲ್ಲದೆ ಎಳನೀರು ಸಾಕಷ್ಟುಸರಬರಾಜು ಆಗುತ್ತಿಲ್ಲ’ ಎನ್ನುತ್ತಾರೆ ಎಳನೀರು ವ್ಯಾಪಾರಿ ಮಹಮದ್‌ ವಾಸೀಂ.
 
‘ಜಿಲ್ಲೆಯಲ್ಲಿ ತೆಂಗಿನ ತೋಟಗಳಿಲ್ಲ. ಹಾಸನ,  ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಂದ ಎಳನೀರು ತಂದು ಮಾರಾಟ ಮಾಡಲಾಗುತ್ತಿದೆ’ ಎಂದು ಹೇಳುತ್ತಾರೆ.
 
‘ಕಬ್ಬಿನರಸ ಮಾರಾಟ ದುಪ್ಪಟ್ಟಾಗಿದೆ. ₹15ಕ್ಕೆ ಒಂದು ಗ್ಲಾಸ್‌ ಮಾರಾಟ ಮಾಡಲಾಗುತ್ತಿದೆ. ಕಬ್ಬಿನ ಹಾಲಿನೊಂದಿಗೆ ನಿಂಬೆ ಹಣ್ಣು, ಹಸಿಶುಂಠಿ, ಐಸ್‌ ಸೇರಿಸಿ ಕೊಡಲಾಗುತ್ತದೆ. ವ್ಯಾಪಾರದಲ್ಲಿ ಹೆಚ್ಚಳದಿಂದ ಲಾಭದ ಪ್ರಮಾಣವೂ ಹೆಚ್ಚಿದೆ’ ಎನ್ನುತ್ತಾರೆ ವ್ಯಾಪಾರಿ ಶರಣಪ್ಪ. 
***
ಹಣ್ಣಿನ ಬೆಲೆಯಲ್ಲಿ ಏರಿಕೆ
ಹಣ್ಣಿನ ಬೆಲೆಯಲ್ಲಿಯೂ ಏರಿಕೆ ಕಂಡಿದೆ. ಕರ್ಬೂಜ ಕೆ.ಜಿ.ಗೆ ₹60, ಕಲ್ಲಂಗಡಿ ₹20ರಿಂದ 25, ಸಪೋಟ ₹60, ದ್ರಾಕ್ಷಿ ₹80, ಕೆ.ಜಿ. ಮಾವಿನ ಹಣ್ಣನ್ನು ₹60ರಿಂದ 120ರವರೆಗೂ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ರಸ್ತೆ ಬದಿಯಲ್ಲಿ ಮೂಸಂಬಿ, ಕಿತ್ತಳೆ ಹಣ್ಣು ಮತ್ತು ನಿಂಬೆ ಹಣ್ಣಿನ ರಸ ಮಾರಾಟ ಮಾಡುವ ಹೊಸ ಅಂಗಡಿಗಳು ಸಾಕಷ್ಟು ಸಂಖ್ಯೆಯಲ್ಲಿ ಹೆಚ್ಚಾಗಿದೆ. 1 ನಿಂಬೆ ಹಣ್ಣಿನ ದರ ₹5 ಇದೆ. ಹೋಟೆಲ್‌ಗಳಲ್ಲಿ ಮಜ್ಜಿಗೆಗೆ ಬೇಡಿಕೆ ಬಂದಿದೆ.
***
ಚಹಾದ ಬೇಡಿಕೆ ಕುಂದಿಲ್ಲ!
ಚಳಿಗಾಲ ಅಥವಾ ಬೇಸಿಗೆ ಕಾಲವಾಗಲಿ ಕಲಬುರ್ಗಿಯಲ್ಲಿ ಚಹಾದ ವ್ಯಾಪಾರ ಕಡಿಮೆ ಆಗುವುದಿಲ್ಲ. ಎಂತಹ ಬಿರು ಬಿಸಿಲಿದ್ದರೂ ಇಲ್ಲಿನ ಜನ ಚಹಾ ಕುಡಿಯುವುದನ್ನು ತಪ್ಪಿಸುವುದಿಲ್ಲ ಎನ್ನುವುದು ವಿಶೇಷ. ಹಣ್ಣು ಮತ್ತು ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ ಚಹಾದ ಬೇಡಿಕೆ ಕುಸಿಯುವುದಿಲ್ಲ ಎನ್ನುತ್ತಾರೆ ಕ್ಯಾಂಟೀನ್‌ ಮಾಲೀಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT