ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನಿರ್ಮಾಣದಲ್ಲೇ ‘ಜಲ ಸ್ವಾವಲಂಬನೆ’

Last Updated 17 ಏಪ್ರಿಲ್ 2017, 5:35 IST
ಅಕ್ಷರ ಗಾತ್ರ

ಹಾವೇರಿ: ‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಎಂಬುದು ಹಳೇ ಗಾದೆ. ಈಗ ಎಲ್ಲೆಡೆ, ‘ಕೋಟಿ ರೂಪಾಯಿ ಮನೆ ಇದ್ದರೂ, ಕೊಡ ನೀರಿಗೆ ತತ್ವಾರ’ ಎಂಬ ಮಾತು. ಸರ್ಕಾರವೂ ಮನೆಯ ನೀಲನಕ್ಷೆಗೆ ಒಪ್ಪಿಗೆ ನೀಡುವಾಗ ಇಂಗುಗುಂಡಿ ಕಡ್ಡಾಯ ಮಾಡಿದೆ. ಆದರೂ, ಪಾಲಿಸುವವರು ಮಾತ್ರ ವಿರಳ.

ಇಲ್ಲೊಬ್ಬರು ತಮ್ಮ ಮನೆ ನಿರ್ಮಾಣದಲ್ಲಿಯೇ ಜಲ ಸ್ವಾವಲಂಬನೆಗೆ ಪಣ ತೊಟ್ಟಿದ್ದಾರೆ. ನಗರದ ಶಿವಶಕ್ತಿ ಪ್ಯಾಲೇಸ್‌ ಹಿಂಭಾಗದ ವಿದ್ಯಾನಗರ ಪಶ್ಚಿಮ ಬಡಾವಣೆಯಲ್ಲಿ ಮನೆ ನಿರ್ಮಿಸುತ್ತಿರುವ ಓಂ ಶ್ರೀ ಸಾಯಿ ಬಾಲಾಜಿ ಕ್ರೆಡಿಟ್‌ ಸೌಹಾರ್ದ ನಿಯಮಿತದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಧರ ರಾಮನಗೌಡ ಪಾಟೀಲ್.  

ಹಾವೇರಿಯಲ್ಲಿ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದ ಅವರಿಗೆ ನೀರಿನ ಸಮಸ್ಯೆಯ ಅರಿವಾಗಿದೆ.  ಹೀಗಾಗಿ ಹೊಸ ಮನೆಯ ನಿರ್ಮಾಣದಲ್ಲಿ ನೀರಿನ ಸುಸ್ಥಿರತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮನೆಯ ಮುಂಬಾಗಿಲ ಬಳಿಯಲ್ಲೇ ಇರುವ ಕೊಳವೆಬಾವಿಗೆ ಇಂಗುಗುಂಡಿ ನಿರ್ಮಿಸಿದ್ದಾರೆ. ಮನೆಯ ಪಂಚಾಂಗದಲ್ಲೇ ನೀರಿಂಗಿಸುವ ಮೂಲಕ ಭವಿಷ್ಯದ ನೀರಿನ ಸಮಸ್ಯೆ ನೀಗಿಸಲು ಟೊಂಕ ಕಟ್ಟಿದ್ದಾರೆ. 

ಹೀಗಿದೆ ಇಂಗುಗುಂಡಿ: ಮನೆಯ ಎದುರಿನ ದ್ವಾರದ ಬಳಿ (ಸಿಟ್‌ ಔಟ್)ಯೇ 12 ಅಡಿಯ ಇಂಗುಗುಂಡಿಯನ್ನು ಇಟ್ಟಿಗೆಯಿಂದ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಇಟ್ಟಿಗೆಗಳ ನಡುವೆ ನೀರು ಇಂಗಲೂ ಅವಕಾಶ ಮಾಡಿದ್ದಾರೆ. ಬಳಿಕ ಗುಂಡಿಗೆ  ಬೆಣಚುಕಲ್ಲು, ಉಸುಕು, ಇದ್ದಿಲಿನ ಪದರಗಳು ಹಾಗೂ ಜಾಲರಿ ಹಾಕಿ ನೀರಿಂಗಿಸಲು ಸಿದ್ಧತೆ ಮಾಡುತ್ತಿದ್ದಾರೆ.

‘ಮನೆ ಕಾಮಗಾರಿ ಪೂರ್ಣಗೊಳ್ಳುವಾಗ ಇಂಗುಗುಂಡಿಯೂ ಸಿದ್ಧಗೊಳ್ಳಲಿದೆ’ ಎನ್ನುತ್ತಾರೆ ಶ್ರೀಧರ ಪಾಟೀಲ್.ಸುಮಾರು 1,500 ಚದರ ಅಡಿಯ ಈ ಮನೆಯ ಮೇಲ್ಚಾವಣಿಯ ನೀರೆಲ್ಲ ಒಂದೆಡೆ ಹರಿದು ಬಂದು ಇಂಗುಗುಂಡಿ ಸೇರಲು ಪೈಪ್‌ಲೈನ್‌ ಅಳವಡಿಸಿದ್ದಾರೆ. ಮಳೆಗಾಲದ ಆರಂಭಿಕ ಕೊಳೆ ನೀರು  ಹೊರಹಹೋಗಲು ‘ಔಟ್‌ಲೆಟ್’ ನೀಡಿದ್ದಾರೆ. ಅನಂತರ ನೀರೆಲ್ಲ ಜಾಲರಿ ಮೂಲಕ ಸೋಸಿ ಇಂಗುಗುಂಡಿಗೆ ಸೇರಲಿದೆ. ತಮ್ಮ ನಿವೇಶನದಲ್ಲಿ ಬೀಳುವ ಹನಿ ನೀರೂ ಹರಿದು ಇಂಗುಗುಂಡಿಗೆ ಬರುವಂತೆ ಮಾಡಿದ್ದಾರೆ. 
ಭಾರಿ ಮಳೆಯಾದರೆ, ನೀರು ಹೆಚ್ಚಾಗಬಹುದು. ಅದಕ್ಕಾಗಿ ಸಮೀಪದಲ್ಲಿ ಐದು ಸಾವಿರ ಲೀಟರ್ ಸಾಮರ್ಥ್ಯದ ಸಂಪು (ತೊಟ್ಟಿ) ನಿರ್ಮಿಸಿದ್ದಾರೆ. ಮಳೆ ನೀರನ್ನು ಸಂಪಿಗೆ ಬಿಡಲು ವಾಲ್ವ್‌ ಇಟ್ಟಿದ್ದಾರೆ.

‘ಒಂದೆರಡು ಮಳೆಯಾದ ಬಳಿಕ, ಮೇಲ್ಚಾವಣಿಯಿಂದ ಬರುವ ನೀರನ್ನು ನೇರವಾಗಿ ಸಂಪಿಗೆ ಬಿಡಲಾಗುವುದು. ಇದರಿಂದ ಮಳೆಗಾಲದಲ್ಲಿ ನಗರಸಭೆಯ 24X7 ನೀರನ್ನು ಅವಲಂಬಿಸಬೇಕಾಗಿಲ್ಲ. ಇದರಿಂದ ನೀರಿನ ‘ಬಿಲ್’ ಉಳಿತಾಯ ಆಗಲಿದೆ.‘ಮಳೆಗಾಲದಲ್ಲಿ ಸಂಪಿನ ನೀರು ಬಳಸಬಹುದು. ಹೆಚ್ಚುವರಿ ನೀರು ಇಂಗುವ ಮೂಲಕ ಅಂತರ್ಜಲ ಹೆಚ್ಚುತ್ತದೆ. ಕೊಳವೆಬಾವಿ ಬತ್ತುವುದಿಲ್ಲ. ನೀರಿನ ಸಂಪೂರ್ಣ ಸ್ವಾವಲಂಬನೆ ಸಾಧ್ಯ’ ಎನ್ನುತ್ತಾರೆ ಅವರು.

‘ಕೆಲವರು ಲಕ್ಷಗಟ್ಟಲೆ ಖರ್ಚು ಮಾಡಿ ಮನೆ ನಿರ್ಮಿಸುತ್ತಾರೆ. ಆದರೆ, ಕೊಡ ನೀರಿಗಾಗಿ ಅಲೆದಾಡುತ್ತಾರೆ.   ಬದಲಾಗಿ ಇಂಗುಗುಂಡಿ ನಿರ್ಮಿಸಿಕೊಂಡರೆ, ಟ್ಯಾಂಕರ್ ನೀರಿಗೆ ಹಣ, ನಗರಸಭೆ ಜೊತೆ ಜಗಳದ ಪ್ರಮೇಯವೇ ಬರುವುದಿಲ್ಲ’ ಎನ್ನುತ್ತಾರೆ ಅವರು.‘ಮೇಲ್ಚಾವಣಿ (ಟೆರೇಸ್)ಯ ನಿರ್ಮಾಣ ಹಂತದಲ್ಲೇ  ಆರು ಇಂಚು ಇಳಿಜಾರು ಮಾಡಲಾಗಿದೆ. ಮನೆಯ ಸುತ್ತಲೂ ಇದೇ ರೀತಿ ಮಾಡಲಾಗಿದೆ. ಹನಿ ನೀರೂ ವ್ಯರ್ಥವಾಗದು’ ಎನ್ನುತ್ತಾರೆ ಅವರು.

‘ಸಂಪ್ರದಾಯ ಹಾಗೂ ವಾಸ್ತುಪ್ರಕಾರವೂ ಮನೆಯ ಆವರಣದಲ್ಲಿ ನೀರಿಗೆ ಪ್ರಾಮುಖ್ಯತೆ ಇದೆ. ಹಿಂದೆ ಬಾವಿ ನಿರ್ಮಿಸುತ್ತಿದ್ದರು. ಈಗ ಇಂಗುಗುಂಡಿ ಮೂಲಕ ವಾಸ್ತು, ನಂಬಿಕೆ, ಜಲ ಸ್ವಾವಲಂಬನೆ ಹಾಗೂ ನೆಮ್ಮದಿ   ಕಾಣಬಹುದು’ ಎನ್ನುತ್ತಾರೆ ಶ್ರೀಧರ ಪಾಟೀಲ್. ಸದ್ಯ ನಿರ್ಮಾಣ ಹಂತದಲ್ಲಿರುವ ಮನೆಯನ್ನು ನೀವೂ ನೋಡಬಹುದು. ಹೆಚ್ಚಿನ ಮಾಹಿತಿಗೆ (94499 25357) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT