ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬನೆಯ ಹಾದಿಹಿಡಿದ ಅಲೆಮಾರಿಗಳು

ಅಲೆಮಾರಿಗಳ ಬದುಕಿನಲ್ಲಿ ಮೂಡಿದ ಆಶಾಕಿರಣ
Last Updated 17 ಏಪ್ರಿಲ್ 2017, 6:21 IST
ಅಕ್ಷರ ಗಾತ್ರ
ಯಾದಗಿರಿ: ನಗರದ ಬೀದಿ, ಬಸ್‌ ನಿಲ್ದಾಣ, ಮಾರುಕಟ್ಟೆ, ರಸ್ತೆಗಳಲ್ಲಿ ಅವರು ಭಿಕ್ಷೆ ಬೇಡುತ್ತಿದ್ದರು. ಭಿಕ್ಷೆ ಬದುಕಿನ ಭಾಗವಾಗಿ ಹೋಗಿದ್ದರಿಂದ ಸಮಾಜದ ನಿಂದನೆಗೆ ಅವರು ಕಿವಿಗೊಡಲಿಲ್ಲ. ಅವಹೇಳನ, ಅವಮಾನಕ್ಕೆ ಅಂಜಿದರೆ ಹೊಟ್ಟೆಹೊರೆಯಲು ಸಾಧ್ಯವೇ? ಎಂಬ ಪ್ರಶ್ನೆ ಅವರದ್ದು.
 
ನಗರದ ಹೊಸಳ್ಳಿ ರಸ್ತೆ, ಮಾತಾಮಾಣಿಕೇಶ್ವರಿ, ಗ್ರಾಮೀಣ ಪೊಲೀಸ್ ಠಾಣೆ ರಸ್ತೆಪಕ್ಕದ ಬೀದಿಗಳಲ್ಲಿ ನೆಲೆನಿಂತಿರುವ ಇಂಥವರು ಈಗ ಭಿಕ್ಷಾಟನೆ ಬಿಟ್ಟು ಸ್ವಾಭಿಮಾನದ ಬದುಕಿನತ್ತ ಹೆಜ್ಜೆ ಹಾಕಿದ್ದಾರೆ! ಅವರಿಗೆ ಸ್ವಾಭಿಮಾನದ ಹಾದಿ ಹಿಡಿಸಿದವರು ಆಂಜನೇಯ!
 
ಅಲೆಮಾರಿ ಬುಡುಗಜಂಗಮರ ಸಮುದಾಯದ ಯುವಕ ಆಂಜನೇಯ ಬರೀ 2ನೇ ತರಗತಿ ಓದಿದ್ದಾರೆ. ಮೂಲ ರಾಯಚೂರು. 1990ರಲ್ಲಿ ಯಾದಗಿರಿ ನಗರಕ್ಕೆ ವಲಸೆ ಬಂದು ನೆಲೆಸಿದ್ದಾರೆ. ನಗರದಲ್ಲಿ ತಮ್ಮ ಜನಾಂಗದ ಜನರು ನಿತ್ಯ ಭಿಕ್ಷಾಟನೆ ಮಾಡಿ ಹೊಟ್ಟೆ ಹೊರೆಯುವುದು, ಜನರಿಂದ ಸಾಕಷ್ಟು ನಿಂದನೆ, ದೌರ್ಜನ್ಯಕ್ಕೆ ಒಳಗಾಗುವುದನ್ನು ಚಿಕ್ಕಂದಿನಿಂದಲೂ ನೋಡುತ್ತಲೇ ಬೆಳೆದಿದ್ದಾರೆ.

ಅಲೆಮಾರಿ ಜನರನ್ನು ಹೇಗಾದರೂ ಮಾಡಿ ಭಿಕ್ಷಾಟನೆ ಬಿಡಿಸಿ ಸ್ವಾವಲಂಬಿ ಬದುಕಿಗೆ ಹಚ್ಚಬೇಕು ಅನಿಸುತ್ತಿತ್ತು. ಮೊದಮೊದಲು ರಾಯಚೂರು ಹಾಗೂ ಕಲಬುರ್ಗಿ ನಗರಗಳಿಂದ ಲಾರಿಗಳಲ್ಲಿ ಪ್ಲಾಸ್ಟಿಕ್‌ ಕೊಡಗಳನ್ನು ತಂದು ಅವುಗಳನ್ನು ಗ್ರಾಮಗಳಲ್ಲಿ ಮಾರಿಕೊಂಡು ಬರಲು ಸೂಚಿಸಿದರು.
 
ಒಂದು ಕೊಡಕ್ಕೆ ಕನಿಷ್ಠ ₹ 10 ಲಾಭ ಸಿಗುತ್ತದೆ. ಆರಂಭದಲ್ಲಿ ಜನರಿಂದ ಆಸಕ್ತಿ ಕಂಡುಬರಲಿಲ್ಲ. ಆ ನಂತರ ದಿನವೊಂದಕ್ಕೆ ₹300ರಿಂದ ₹500ರವರೆಗೆ ಲಾಭ ಸಿಕ್ಕಿದ್ದರಿಂದ ಜನರಿಂದ ಬೇಡಿಕೆ ಹೆಚ್ಚಿತು. ಜನರ ಬೇಡಿಕೆ ಈಡೇರಿಸಲು ನನ್ನಿಂದ ಆಗಲಿಲ್ಲ. ಆಗ ಹೊಳೆದದ್ದೇ ಕೊಡ ಉತ್ಪಾದಿಸುವ ಸಣ್ಣ ಕೈಗಾರಿಕೆ ಎನ್ನುತ್ತಾರೆ ಆಂಜನೇಯ.
 
ಆಂಜನೇಯ ಕೊಡ ಉತ್ಪಾದಿಸುವ ಸಣ್ಣ ಕೈಗಾರಿಕೆಯನ್ನು ನಗರದ ಗಂಜ್ ಹಿಂಭಾಗದಲ್ಲಿ ಆರಂಭಿಸಿದ್ದಾರೆ. ಕಾರ್ಖಾನೆಯ ಇರುವ ಬಯಲಿನಲ್ಲಿಯೇ 30ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ವಾಸಿಸುತ್ತಿವೆ. ನಸುಕಿನಲ್ಲಿಯೇ ಪ್ರತಿಯೊಂದು ಕುಟುಂಬದ ದಂಪತಿ ಸುಮಾರು 50 ಕೊಡಗಳನ್ನು ತೆಗೆದುಕೊಂಡ ಮಾರಾಟಕ್ಕೆ ಹೊರಡುತ್ತಾರೆ.
 
ಬಿಸಿಲು ಬಲಿಯುವ ಮುನ್ನ ಗುಡಿಸಲು ಸೇರುತ್ತಾರೆ. ಕೊಡ ಮಾರಿ ತಂದ ಹಣದಲ್ಲಿ ಲಾಭಾಂಶ ತೆಗೆದುಕೊಂಡು ಕೊಡಕ್ಕೆ ₹ 20ರಂತೆ ಒಟ್ಟು ಕೊಡಗಳ ಮೊತ್ತವನ್ನು ಆಂಜನೇಯ ಪಡೆದುಕೊಳ್ಳುತ್ತಾರೆ. ಇದೇ ರೀತಿಯಲ್ಲಿ ನಗರದಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ಈ ಉಪಜೀವನದಿಂದ ಬದುಕು ಸಾಗಿಸುತ್ತಿದ್ದಾರೆ ಎಂದು ಎನ್ನುತ್ತಾರೆ ಆಂಜನೇಯ.
 
‘ಕೆಲವೊಮ್ಮೆ ಬೇಡಿಕೆ ತಕ್ಕಷ್ಟು ಕೊಡಗಳನ್ನು ಎಲ್ಲಾ ಕಾಲದಲ್ಲೂ ಪೂರೈಕೆ ಮಾಡಲು ಆಗುವುದಿಲ್ಲ. ನುರಿತ ಕೂಲಿಕಾರ್ಮಿಕರ ಕೊರತೆ, ಕಚ್ಚಾ ಸಾಮಗ್ರಿ ಕೊರತೆ ವೈಯಕ್ತಿ ಕೆಲಸಕಾರ್ಯಗಳಿದ್ದಾಗ ಇಂತಹ ಸಮಸ್ಯೆ ಉಂಟಾಗುತ್ತದೆ. ಆದರೆ, ಆ ಸಂದರ್ಭದಲ್ಲಿ ಜನರು ಮತ್ತೆ ಭಿಕ್ಷಾಟನೆಯ ಹಾದಿ ಹಿಡಿಯಬಾರದು ಅಂತಲೇ ಅವರಿಗೆ ಬಳೆ, ಪಿನ್, ಪೀಪಿ, ಬಾಚಣಿಕೆ, ಕಾಡಿಗೆ, ರಿಬ್ಬನ್‌, ಪ್ಲಾಸ್ಟಿಕ್ ಚಿಕ್ಕಪುಟ್ಟ ಸಾಮಾನುಗಳನ್ನು ಮಾರಾಟಕ್ಕೆ ಹಚ್ಚಿದ್ದೇನೆ.
 
ಅವುಗಳನ್ನು ಹೋಲ್‌ಸೇಲ್‌ ಅಂಗಡಿಗಳಿಂದ ನಾನೇ ತಂದು ರಿಯಾಯ್ತಿ ದರದಲ್ಲಿ ನೀಡುತ್ತೇನೆ. ಅವರಿಂದ ನನಗೂ ಸ್ವಲ್ಪ ಲಾಭ ಇದೆ. ಕೊಡ ಉತ್ಪಾದನೆಯಲ್ಲೂ ಲಾಭ ಇದೆ. ನನ್ನ ಬದುಕಿನೊಂದಿಗೆ ನನ್ನ ಸಮುದಾಯದ ಜನರ ಬದುಕನ್ನೂ ಸುಸ್ಥಿರ ಸ್ವಾವಲಂಬಿ ದಿಕ್ಕಿನತ್ತ ಕರೆದೊಯ್ಯಬೇಕೆಂಬ ಛಲದಿಂದ ಶ್ರಮಿಸುತ್ತಿದ್ದೇನೆ’ ಎಂದು ಅಂಜನೇಯ ಹೇಳುತ್ತಾರೆ.
***
124 ನಿವೇಶನ ಹಂಚಿಕೆ
ಅಲೆಮಾರಿಗಳು ಈಗ ಸಂಘಟಿತರಾಗಿ ದ್ದಾರೆ. ಹಾಗಾಗಿ, ಅವರಿಗೊಂದು ಧ್ವನಿ ಬಂದಿದೆ. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ಬುಡುಗ ಜಂಗಮ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದಿದೆ. ಉತ್ಸಾಹಿ ಯುವಕ ಆಂಜನೇಯ ಅವರನ್ನೇ ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.

ಸಂಘ ಸಂಘಟಿತವಾದ ಮೇಲೆ ಶಾಶ್ವತ ಸೂರಿಗಾಗಿ ನೂರಾರು ಬಾರಿ ಜಿಲ್ಲಾಡಳಿತ ಮತ್ತು ಸರ್ಕಾರ ವಿರುದ್ಧ  ಹೋರಾಟ ನಡೆಸಿದ್ದಾರೆ. ಇವರ ಹೋರಾಟಕ್ಕೆ ಮಣಿದಿರುವ ಸರ್ಕಾರ ಎಂ.ಹೊಸಳ್ಳಿ ಗ್ರಾಮದ ಬಳಿ 124 ಮಂದಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿದೆ. ಅಲೆಮಾರಿಗಳು ಶಾಶ್ವತ ಸೂರು ನಿರ್ಮಿಸಿಕೊಳ್ಳುವ ಜಾಗದಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಸರ್ಕಾರ ಈಚೆಗೆ ₹4 ಕೋಟಿ ಅನುದಾನ ನೀಡಿದೆ.

****
100 ಮಂದಿಗೆ ಶಿಕ್ಷಣ
ಎಷ್ಟೇ ಒತ್ತಡ ಹಾಕಿದರೂ ಅಲೆಮಾರಿಗಳು ಮಕ್ಕಳನ್ನು ಭಿಕ್ಷಾಟನೆಗೆ ಕಳುಹಿಸುತ್ತಿದ್ದರು. ಆದರೆ, ಸಂಘದಿಂದ ಜಾಗೃತಿ ಕಾರ್ಯಕ್ರಮ ನಡೆಸಿ ಖಾಸಗಿ, ಸರ್ಕಾರಿ ಶಾಲೆಗಳಿಗೆ ಒಟ್ಟು 100 ಮಕ್ಕಳನ್ನು ಶಿಕ್ಷಣ ಪಡೆಯುವಂತೆ ಕಳುಹಿಸಲಾಗುತ್ತಿದೆ. ಮಕ್ಕಳು ವಿದ್ಯಾವಂತರಾಗುತ್ತಿರುವುದು ಈಗ ಪೋಷಕರಲ್ಲೂ ಸಂತಸ ಮೂಡಿಸಿದೆ.

ಶಾಲೆಗೆ ಬೇಡ ಅಂದಿದ್ದವರೂ ಈಗ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಲು ಮುಂದೆ ಬರುತ್ತಿದ್ದಾರೆ ಎಂದು ಅಲೆಮಾರಿಗಳ ಬಗ್ಗೆ ವಿಶೇಷ ಪಿಎಚ್.ಡಿ ಅಧ್ಯಯನ ಮಾಡಿರುವ ಉಪನ್ಯಾಸಕ ಎಸ್‌.ಎಸ್‌.ನಾಯಕ ಹೇಳುತ್ತಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT